ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಲಿಪ ನಾರಾಯಣ ಭಾಗವತ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ

Last Updated 17 ಫೆಬ್ರುವರಿ 2023, 10:21 IST
ಅಕ್ಷರ ಗಾತ್ರ

ನವದೆಹಲಿ: ತೆಂಕು ತಿಟ್ಟಿನ ಹೆಸರಾಂತ ಭಾಗವತ ಬಲಿಪ ನಾರಾಯಣ ಭಾಗವತ (85) ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಯಕ್ಷಗಾನಕ್ಕೆ ನಿಮ್ಮ ಕೊಡುಗೆಯನ್ನು ಮುಂದಿನ ಪೀಳಿಗೆ ನೆನಪಿಸಿಕೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ.

ಕಾಸರಗೋಡು ಜಿಲ್ಲೆಯ ಪಡ್ರೆ ಗ್ರಾಮದಲ್ಲಿ 1938ರ ಮಾರ್ಚ್ 13ರಂದು ಜನಿಸಿದ್ದ ಬಲಿಪ ನಾರಾಯಣ ಭಾಗವತರು ಬಲಿಪ ಮಾಧವ ಭಟ್ ಮತ್ತು ತಾಯಿ ಸರಸ್ವತಿ ದಂಪತಿಯ ಪುತ್ರ. ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ತಾಲ್ಲೂಕಿನ ಮಾರೂರು ನೂಯಿಯಲ್ಲಿ ವಾಸವಿದ್ದರು.

‘ಬಲಿಪ ನಾರಾಯಣ ಭಾಗವತರು ಸಾಂಸ್ಕೃತಿಕ ಲೋಕದಲ್ಲಿ ಛಾಪು ಮೂಡಿಸಿದ್ದಾರೆ. ಯಕ್ಷಗಾನ ಹಿನ್ನೆಲೆ ಗಾಯನಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಅವರ ಕೊಡುಗೆಗಳನ್ನು ಮುಂದಿನ ಪೀಳಿಗೆಗಳು ಸ್ಮರಿಸಲಿವೆ. ಅವರ ನಿಧನದಿಂದ ಅತ್ಯಂತ ನೋವಾಗಿದೆ. ಓಂ ಶಾಂತಿ’ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಅಪಾರ ಅಭಿಮಾನಿಗಳನ್ನು ಹೊಂದಿದ್ದ ಅವರು, ತಮ್ಮ ಅಭಿಮಾನಿಗಳು 'ಬಲಿಪ ಶೈಲಿ' ಎಂದು ಕರೆಯುವ ವಿಶಿಷ್ಟವಾದ ಹಾಡುಗಾರಿಕೆಯನ್ನು ಕರಗತ ಮಾಡಿಕೊಂಡಿದ್ದರು. 30ಕ್ಕೂ ಹೆಚ್ಚು ಯಕ್ಷಗಾನ 'ಪ್ರಸಂಗ'ಗಳನ್ನು ಬರೆದಿದ್ದಾರೆ.

ತೆಂಕು ತಿಟ್ಟು ಯಕ್ಷ ರಂಗದ ಭೀಷ್ಮ ಎಂದೇ ಖ್ಯಾತವಾಗಿರುವ ಬಲಿಪರು ತೆಂಕುತಿಟ್ಟಿನ ಹಿರಿಯ ಭಾಗವತರು. 13ನೇ ವಯಸ್ಸಿಗೆ ಯಕ್ಷಗಾನ ರಂಗವನ್ನು ಪ್ರವೇಶಿಸಿದ್ದರು. ಕಟೀಲು ದುರ್ಗಾಪರಮೇಶ್ವರಿ ಯಕ್ಷಗಾನ ಮೇಳದಲ್ಲಿ ಭಾಗವತರಾಗಿ ಸೇವೆ ಸಲ್ಲಿಸಿದ್ದಾರೆ. 60 ವರ್ಷಗಳಿಗೂ ಹೆಚ್ಚು ಕಾಲ ಯಕ್ಷಗಾನ ಕಲಾ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಯಕ್ಷಗಾನದ ಹಲವಾರು ಪ್ರಸಂಗಗಳನ್ನು ರಚಿಸಿದ್ದಾರೆ. ಯಕ್ಷಗಾನದ ಹಾಡುಗಳ ಅನೇಕ ಕೃತಿಗಳನ್ನೂ ರಚಿಸಿದ್ದಾರೆ. ಯಕ್ಷಗಾನದ ಪ್ರಸಂಗಗಳ ಪದ್ಯಗಳು ಅವರಿಗೆ ಕಂಠಪಾಠವಾಗಿದ್ದವು. ಅನಗತ್ಯ ಆಲಾಪನೆಗಳಿಲ್ಲದೇ, ರಾಗ ವಿಸ್ತಾರ ಮಾಡದೇ ಯಕ್ಷಗಾನ ಪ್ರಸಂಗದ ಛಂದಸ್ಸಯ ಹಾಗೂ ತಾಳಕ್ಕೆ ಪೂರಕವಾಗಿ ಶುದ್ಧ ಯಕ್ಷಗಾನೀಯ ಶೈಲಿಯಲ್ಲಿ ಹಾಡುತ್ತಿದ್ದರು.

ಬಲಿಪ ಅವರ ಅಜ್ಜ ಬಲಿಪ ನಾರಾಯಣ ಭಾಗವತರೂ ಯಕ್ಷಗಾನದ ಹೆಸರಾಂತ ಭಾಗವತರಾಗಿದ್ದು, ಬಲಿಪ ಶೈಲಿಯ ಹಾಡುಗಾರಿಕೆಯನ್ನು ‌ಹುಟ್ಟು ಹಾಕಿದ್ದರು. ಆ ಪರಂಪರೆಯನ್ನು ಮೊಮ್ಮಗನೂ ಮುಂದುವರಿಸಿದ್ದರು. ಬಲಿಪ ನಾರಾಯಣ ಭಾಗವತರ ಅವರ ಇಬ್ಬರು ಪುತ್ರರಾದ ಶಿವಶಂಕರ ಬಲಿಪ ಮತ್ತು ಪ್ರಸಾದ ಬಲಿಪ ಅವರೂ ಭಾಗವತರಾಗಿ ಈ ಶೈಲಿಯನ್ನು ಮುಂದುವರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT