ಭೂಸ್ವಾಧೀನಕ್ಕೆ ಮುನ್ನ ಪರಿಸರದ ಅಧ್ಯಯನ

ಬುಧವಾರ, ಜೂನ್ 19, 2019
25 °C
ವಿಮಾನ ನಿಲ್ದಾಣ ಸಂಪರ್ಕಕ್ಕೆ ನಾಲ್ಕು ಪಥದ ರಸ್ತೆ: ಕೆಎಆರ್‌ಡಿಸಿಎಲ್‌ಗೆ ಭೂ ಸಂತ್ರಸ್ತರ ಪಟ್ಟು

ಭೂಸ್ವಾಧೀನಕ್ಕೆ ಮುನ್ನ ಪರಿಸರದ ಅಧ್ಯಯನ

Published:
Updated:

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಕ್ಕೆ ತಲಾ ನಾಲ್ಕು ಪಥಗಳ ನಾಲ್ಕು ಕಾರಿಡಾರ್‌ ನಿರ್ಮಾಣ ಮಾಡುವ ಮುನ್ನ ಪರಿಸರದ ಮೇಲಿನ ಪರಿಣಾಮಗಳ ಅಧ್ಯಯನ (ಇಐಎ) ನಡೆಸಲೇಬೇಕು ಎಂದು ಈ ಯೋಜನೆಯಿಂದ ಭೂಮಿ ಕಳೆದುಕೊಳ್ಳುವ ಭೂಮಾಲೀಕರು ಪಟ್ಟು ಹಿಡಿದಿದ್ದಾರೆ.

ವಿಮಾನ ನಿಲ್ದಾಣಕ್ಕೆ ಯಾವುದೇ ಅಡೆತಡೆಯಿಲ್ಲದೆ ತಲುಪಲು ಸಾಧ್ಯವಾಗುವಂತೆ 155 ಕಿ.ಮೀ ಉದ್ದದ ನಾಲ್ಕು ಪಥಗಳ ನಾಲ್ಕು ಕಾರಿಡಾರ್‌ಗಳ ನಿರ್ಮಾಣಕ್ಕೆ ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ (ಕೆಆರ್‌ಡಿಸಿಎಲ್‌) ಮುಂದಾಗಿದೆ. ಹೊಸಕೋಟೆಯಿಂದ ವಿಮಾನನಿಲ್ದಾಣದವರೆಗೆ 22 ಕಿ.ಮೀ. ಉದ್ದದ ರಸ್ತೆ ನಿರ್ಮಿಸಲು ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿದೆ.

ಭೂಸ್ವಾಧೀನದ ಪ್ರಕ್ರಿಯೆಗೆ ನಿಗಮ ಅನುಸರಿಸಿದ ಮಾದರಿಯನ್ನು ವಿರೋಧಿಸಿ ಭೂಮಾಲೀಕರು ಆಕ್ಷೇಪಣೆ ಸಲ್ಲಿಸಿದ್ದಾರೆ. ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನು ಭೇಟಿ ಮಾಡಿರುವ ಅವರು, ‘ಭೂಸ್ವಾಧೀನ ಪ್ರಕ್ರಿಯೆಯ ಲೋಪಗಳನ್ನು ಸರಿಪಡಿಸಿ’ ಎಂದು ಆಗ್ರಹಿಸಿದ್ದಾರೆ. ಒಂದು ವೇಳೆ, ತಪ್ಪು ಸರಿಪಡಿಸದಿದ್ದರೆ ಭೂಸ್ವಾಧೀನಕ್ಕೆ ಅವಕಾಶ ನೀಡುವುದಿಲ್ಲ ಎಂದೂ ಎಚ್ಚರಿಸಿದ್ದಾರೆ.

‘2013ರ ಭೂಸ್ವಾಧೀನ ಕಾಯ್ದೆ ಪ್ರಕಾರ, ಪ್ರಾಥಮಿಕ ಸ್ಥಳ ತನಿಖೆ, ಯೋಜನೆಯಿಂದಾಗುವ ಸಾಮಾಜಿಕ ಪರಿಣಾಮಗಳ ಅಧ್ಯಯನ ನಡೆಸಬೇಕು. ಆ ವರದಿಯನ್ನು ತಜ್ಞರ ತಂಡದಿಂದ ಮೌಲ್ಯಮಾಪನ ಮಾಡಿಸಬೇಕು. ಭೂಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸುವ ಮುನ್ನವೇ ಈ ಎಲ್ಲ ಕಾರ್ಯಗಳು ಪೂರ್ಣಗೊಂಡಿರಬೇಕು. ಆದರೆ, ನಿಗಮವು ಈ ಪ್ರಕ್ರಿಯೆಗಳನ್ನು ನಡೆಸಿಲ್ಲ. ಇದು ಕಾನೂನು‌ಬಾಹಿರ’ ಎಂದು ರೈತರ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಿ.ಆರ್‌.ಪದ್ಮನಾಭ ಹೇಳಿದರು.

‘2013ರ ಭೂಸ್ವಾಧೀನ ಕಾಯ್ದೆ ಪ್ರಕಾರ ಭೂ ಕಳೆದುಕೊಳ್ಳುವವರಿಗೆ ಪರಿಹಾರ ನೀಡಲಾಗುವುದು ಎಂದು ನಿಗಮ ಹೇಳಿದೆ. ಆದರೆ, ಈ ಕಾಯ್ದೆ ಪರಿಹಾರ ನೀಡುವುದಕ್ಕಷ್ಟೇ ಸೀಮಿತ ಅಲ್ಲ. ಕಾಯ್ದೆಯ ಉಳಿದ ಅಂಶಗಳನ್ನು ಗಾಳಿಗೆ ತೂರಿ ಭೂಸ್ವಾಧೀನ ಪ್ರಕ್ರಿಯೆ ನಡೆಸಲಾಗುತ್ತಿದೆ’ ಎಂದು ಅವರು ಆರೋಪಿಸಿದರು.

‘ಭೂದಾಖಲೆಗಳನ್ನು ಸಮಕಾಲೀನಗೊಳಿಸಿದ ನಂತರವಷ್ಟೇ ಅಧಿಸೂಚನೆ ಹೊರಡಿಸಬೇಕು. ಆದರೆ, ಈ ಕಾರ್ಯ ನಡೆಸದೆ, ಸದ್ಯ ಲಭ್ಯವಿರುವ ದಾಖಲಾತಿಗಳ ಮೇಲೆ ಅಧಿಸೂಚನೆ ಹೊರಡಿಸಲಾಗಿದೆ. ಹಲವಾರು ಭೂಮಾಲೀಕರಿಗೆ ಭೂಸ್ವಾಧೀನ ಪ್ರಕ್ರಿಯೆ ಬಗ್ಗೆ ತಿಳಿವಳಿಕೆ ಇಲ್ಲ. ಹೀಗಾಗಿ, ಕಾಲಮಿತಿಯೊಳಗೆ ಅಹವಾಲು ಸಲ್ಲಿಸಲು ಸಾಧ್ಯವಿಲ್ಲ. ಇದಕ್ಕಾಗಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಿ ತಹಶೀಲ್ದಾರ್‌ಗಳ ಕಚೇರಿಯಿಂದ ಸಾಗುವಳಿ ಚೀಟಿ, ಪಹಣಿ, ಮ್ಯುಟೇಷನ್‌ ದಾಖಲೆಗಳನ್ನು ತರಿಸಿಕೊಂಡು ಪರಿಶೀಲನೆ ನಡೆಸಬೇಕು. ಭೂದಾಖಲೆಗಳ ಅಪ್‌ಡೇಟ್‌ ಮಾಡಿಯೇ ಪ್ರಕ್ರಿಯೆ ನಡೆಸಬೇಕು’ ಎಂದು ರೈತ ಎಸ್‌.ಮಂಜುನಾಥ್‌ ಆಗ್ರಹಿಸಿದರು.

‘ಸ್ವಾಧೀನಪಡಿಸಿಕೊಳ್ಳುವ ಭೂಮಿ ಖಾಸಗಿ ಸ್ವತ್ತೇ ಅಥವಾ ಸರ್ಕಾರಿ ಜಮೀನೇ ಎಂಬ ಕನಿಷ್ಠ ಮಾಹಿತಿ ಇಲ್ಲದೆ ಭೂಸ್ವಾಧೀನ ಮಾಡಲು ಮುಂದಾಗಿರುವುದು ವಿಪರ್ಯಾಸ. ಜಮೀನಿನ ಭೂ ಒಡೆತನ ಖಾತರಿಪಡಿಸಿಕೊಂಡು ಪ್ರಕ್ರಿಯೆ ನಡೆಸಬೇಕು’ ಎಂದು ಅವರು ಒತ್ತಾಯಿಸಿದರು.

‘ರಸ್ತೆಗಳ ನಿರ್ಮಾಣಕ್ಕೆ ನಮ್ಮ ವಿರೋಧ ಇಲ್ಲ. ಆದರೆ, ಮನಸ್ಸಿಗೆ ಬಂದಂತೆ ಮಾಹಿತಿಗಳನ್ನು ಮುಚ್ಚಿಟ್ಟು ಯೋಜನೆ ಅನುಷ್ಠಾನಕ್ಕೆ ನಮ್ಮ ವಿರೋಧ ಇದೆ’ ಎಂದು ಪಿ.ಶೀನಪ್ಪ ಹೇಳಿದರು.

‘ಪರಿಸರ ಅಧ್ಯಯನ ಅನಗತ್ಯ’
‘ಈಗಿರುವ ರಸ್ತೆಗಳನ್ನು ವಿಸ್ತರಣೆ ಮಾಡಲಾಗುತ್ತಿದೆಯೇ ಹೊರತು ಇದು ಹೊಸ ಯೋಜನೆ ಏನಲ್ಲ. ಹಾಗಾಗಿ ಈ ಯೊಜನೆ ಅನುಷ್ಠಾನಕ್ಕೆ ಮುನ್ನ ಪರಿಸರದ ಮೇಲಿನ ಪರಿಣಾಮಗಳ ಅಧ್ಯಯನ ನಡೆಸಬೇಕಿಲ್ಲ’ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಬಿ.ಎಸ್.ಶಿವಕುಮಾರ್ ಸ್ಪಷ್ಟಪಡಿಸಿದರು.

‘ಭೂಮಿ ಕಳೆದುಕೊಳ್ಳುವವರಿಗೆ ಕೆಲವು ಗೊಂದಲಗಳಿದ್ದವು. ಅವುಗಳನ್ನು ಬಗೆಹರಿಸಲಾಗಿದೆ.ಇನ್ನೂ ಗೊಂದಲಗಳಿದ್ದರೆ, ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್‌ ಅವರಿಗೆ ಪತ್ರ ಬರೆದು ಸಮಸ್ಯೆ ಬಗೆಹರಿಸುತ್ತೇವೆ’ ಎಂದು ಅವರು ಹೇಳಿದರು.

ಭೂಸ್ವಾಧೀನ ಎಲ್ಲೆಲ್ಲಿ?
*ಬೆಂಗಳೂರು ಪೂರ್ವ ತಾಲ್ಲೂಕಿನ ಬಿದರಹಳ್ಳಿ ಹೋಬಳಿಯ ಕೋನದಾಸಪುರ, ಭಂಡಾರಪುರ, ಚೀಮಸಂದ್ರ, ನಿಂಬೆಕಾಯಿಪುರ, ಬೊಮ್ಮೇನಹಳ್ಳಿ, ಮಂಡೂರು, ಹಂಚರಹಳ್ಳಿ, ಶೃಂಗಾರಪುರ, ಜ್ಯೋತಿಪುರ, ತಿರುಮೇನಹಳ್ಳಿ.

*ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಹಂದರಹಳ್ಳಿ, ಬೂದಿಗೆರೆ, ತೊಟ್ಲತೆವರು.

*ಯಲಹಂಕ ತಾಲ್ಲೂಕಿನ ಮಂಚನಪನಹೊಸಹಳ್ಳಿ, ಗೊಲ್ಲಹಳ್ಳಿ, ಶಿಂಗಹಳ್ಳಿ, ಉಣಚೂರು ಮೈಲನಹಳ್ಳಿ.

ಕಾರಿಡಾರ್‌ನ ವೈಶಿಷ್ಟ್ಯಗಳು
*ನೆಲಮಂಗಲ– ದೇವನಹಳ್ಳಿ, ಹಾರೋಹಳ್ಳಿ– ಆನೇಕಲ್, ಆನೇಕಲ್‌– ಹೊಸಕೋಟೆ ಹಾಗೂ ಹೊಸಕೋಟೆ– ದೇವನಹಳ್ಳಿ ಸಂಪರ್ಕಿಸುವ ನಾಲ್ಕು ಪಥದ ರಸ್ತೆಗಳು ನಿರ್ಮಾಣ ಆಗಲಿವೆ.

*ಅಂದಾಜು ₹ 2,040 ಕೋಟಿಯ ಯೋಜನೆ ಇದಾಗಿದೆ. ಪ್ರತಿ ರಸ್ತೆಯಲ್ಲಿ ತಲಾ ಒಂದೊಂದು ಟೋಲ್‌ ಪ್ಲಾಜಾಗಳು ನಿರ್ಮಾಣ ಆಗಲಿವೆ. ಈಗಾಗಲೇ ಇರುವ ಸಣ್ಣ ರಸ್ತೆಗಳನ್ನು ನಾಲ್ಕು ಪಥದ ರಸ್ತೆಗಳಾಗಿ ಪರಿವರ್ತಿಸಲಾಗುತ್ತದೆ.

*ಯೋಜನೆ ಪೂರ್ಣಗೊಂಡರೆ ಬೆಂಗಳೂರಿನ ಸುತ್ತ ಮತ್ತೊಂದು ವರ್ತುಲ ರಸ್ತೆ ನಿರ್ಮಾಣ ಆದಂತಾಗಲಿದೆ.

*ಹಾಸನ, ಮಂಗಳೂರು, ಮೈಸೂರು, ಕನಕಪುರ, ಬನ್ನೇರುಘಟ್ಟ, ಹೊಸೂರು ಮತ್ತು ಹೊಸಕೋಟೆ ಕಡೆಯಿಂದ ನೇರವಾಗಿ ವಿಮಾನ ನಿಲ್ದಾಣಕ್ಕೆ ತೆರಳಲು ಇದು ನೆರವಾಗಲಿದೆ. ಇದರಿಂದ ನಗರದಲ್ಲಿ ವಾಹನಗಳ ಒತ್ತಡ ಕಡಿಮೆ ಆಗಲಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !