ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡಕತ್ತರಿಯಲ್ಲಿ ನಲುಗಿದೆ ಜೀವನ!

Last Updated 25 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

`ಮೂಲ ಸೌಕರ್ಯಗಳಿಲ್ಲದೆ ವಾಸಿಸುವುದೇ ಕಷ್ಟವಾಗಿದೆ. ಮೂಲ ಸೌಕರ್ಯ ಒದಗಿಸಿದರೂ ಒಂಟಿ ಬದುಕು ಬೇಡವಾಗಿದೆ. ಒಂದೊಂದು ಮನೆ 4- 5 ಕಿ.ಮೀ. ದೂರದಲ್ಲಿದೆ.

ಮೂಲ ಸೌಕರ್ಯಗಳಿಗೆ ಖರ್ಚು ಮಾಡುವ ಹಣವನ್ನು ನಮ್ಮ ಪರಿಹಾರ ಕಾರ್ಯಕ್ಕೆ ವೆಚ್ಚ ಮಾಡಿದ್ದಲ್ಲಿ ಶಾಶ್ವತ ಪರಿಹಾರ ಕಾಣಲು ಸಾಧ್ಯ. ಕುದುರೆಮುಖ ರಾಷ್ಟ್ರೀಯ ಉದ್ಯಾನ ಸಂರಕ್ಷಿಸಿ ದಯವಿಟ್ಟು ಪುನರ್ವಸತಿ ಯೋಜನೆ ಕಾರ್ಯಗತಗೊಳಿಸಿ...'

ಇದು ಬೆಳ್ತಂಗಡಿ ತಾಲ್ಲೂಕಿನ ಕುತ್ಲುರು, ನಾವುರ, ನಾರಾವಿ, ಸುಲ್ಕೇರಿ ಮೊಗ್ರು, ಮಲವಂತಿಗೆ, ಎಳ್ನೀರು, ಶಿರ್ಲಾಲು ಗ್ರಾಮದ ಕುದುರೆಮುಖ ರಾಷ್ಟ್ರೀಯ ಉದ್ಯಾನ ಪ್ರದೇಶದಲ್ಲಿ ವಾಸಿಸುತ್ತಿರುವ ಜನರ ನೋವಿನ ನುಡಿ. ಸರ್ಕಾರದ ಆದೇಶದಂತೆ ಪುನರ್ವಸತಿ ಬಯಸಿ 5- 6 ವರ್ಷಗಳಿಂದ ಇವರು ಸಲ್ಲಿಸುತ್ತ ಬಂದ ಮನವಿ ಸರ್ಕಾರಿ ಕಡತಗಳ ರಾಶಿಯಲ್ಲಿ ಹೂತು ಹೋಗಿವೆ.

ನೆರವು ಸಿಗುವ ಆಸೆಯಲ್ಲಿ ಕೃಷಿಯತ್ತ ಒಲವಿಲ್ಲ. ಇದರಿಂದ ಬೆಳೆಗಳು ನೀರು ಕಾಣದೆ ಒಣಗಿವೆ. ಮುಖ್ಯವಾಹಿನಿಗೆ ಬರಲು ತುದಿಗಾಲಲ್ಲಿ ನಿಂತಿರುವ ನಿವಾಸಿಗಳು ಸರ್ಕಾರದ ಮೌನದಿಂದ ಕಂಗಾಲಾಗಿದ್ದಾರೆ. ಬದುಕು ಅತಂತ್ರವಾಗಿದೆ. ಆದಾಯದ ಮೂಲವಾಗಿದ್ದ ಕಾಡುತ್ಪತ್ತಿ ಸಂಗ್ರಹಣೆಗೂ ಈಗ ಅವಕಾಶ ಇಲ್ಲವಾಗಿದೆ. ಜೀವನ ಅಡಕತ್ತರಿಯಲ್ಲಿ ಸಿಲುಕಿದೆ!

ಹೇಳತೀರದ ಪಾಡು

ಕುತ್ಲುರು ಗ್ರಾಮದ ನೆಲ್ಲಿತಡ್ಕ ಸುತ್ತಮುತ್ತಲು ಆಳಂಬ, ಮಡಿಕೆ, ಮಲೆಜಂಡ ಸೇರಿದಂತೆ ಸುಮಾರು 13  ಪ್ರದೇಶ ಇಲ್ಲಿವೆ. 50ಕ್ಕೂ ಅಧಿಕ ಕುಟುಂಬದಲ್ಲಿ ಸುಮಾರು 450ರಷ್ಟು ಜನಸಂಖ್ಯೆ. ದುರ್ಗಮ ಅರಣ್ಯದೊಳಗಿರುವ ಮನೆಗಳಿಗೆ ನಡೆದುಕೊಂಡು ಹೋಗುವುದೇ ಕಷ್ಟ. ವಾಹನ ಹೋಗುವುದು ದೂರದ ಮಾತು. ಮಳೆಗಾಲದ ಪಾಡು ಹೇಳತೀರದು.

ಪಶ್ಚಿಮ ಘಟ್ಟದ ಭರ್ಜರಿ ಮಳೆಯಾಗುವ ಹೊತ್ತಿನಲ್ಲಿ ಈ ಪ್ರದೇಶದಲ್ಲಿರುವ ಮನೆಗಳ ಮಂದಿಗೆ ಹೊರಜಗತ್ತಿನ ಸಂಪರ್ಕ ಸಾಧಿಸುವುದೇ ಕಷ್ಟ. ಮನೆಮಂದಿ ಅನಾರೋಗ್ಯ ಪೀಡಿತರಾದರೆ ಅವರನ್ನು ಕಂಬಳಿಯಲ್ಲಿ ಸುತ್ತಿ ಹೊತ್ತುಕೊಂಡು ಸುಲ್ಕೇರಿ ಮುಖ್ಯ ರಸ್ತೆಗೆ ಬಂದು ಬಳಿಕ ಅಲ್ಲಿಂದ ನಾರಾವಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವಾಹನದಲ್ಲಿ ಒಯ್ಯಬೇಕಾದ ಸ್ಥಿತಿ ಇದೆ.

ಗರ್ಭಿಣಿಯರಂತೂ ಹೆರಿಗೆಯ ತಿಂಗಳ ಮೊದಲೆ ದೂರದ ಆಸ್ಪತ್ರೆ, ಬಂಧುಗಳ ಮನೆ ಅಥವಾ ಇನ್ಯಾವುದೋ ವಸತಿ ವ್ಯವಸ್ಥೆಯನ್ನು ಆಶ್ರಯಿಸಬೇಕು!

ಶಾಲಾ ಮಕ್ಕಳು ಕೂಡ ಅರಣ್ಯದ ದುರ್ಗಮ ಹಾದಿಯಲ್ಲಿ ನಡೆದುಕೊಂಡು ಸುಲ್ಕೇರಿಯ ಶಾಲೆಗೆ ಹೋಗಬೇಕು. ಮಳೆಗಾಲದಲ್ಲಂತೂ ಬಿಡದ ಮಳೆ, ರಕ್ತ ಹೀರುವ ಜಿಗಣೆಗಳಿಂದ ಕಚ್ಚಿಸಿಕೊಂಡು, ಕಾಲುದಾರಿಯ್ಲ್ಲಲಿ ಹರಿಯುವ ಮಳೆ ನೀರಿನಲ್ಲೆ ನಡೆದುಕೊಂಡು ಶಾಲೆಗೆ ಹೋಗಬೇಕು.

ದಾರಿಯಲ್ಲಿ ಕಾಡುಹಂದಿ, ಕಾಡುಕೊಣ (ಕಾಟಿ) ಗಳು ಎದುರಾದಾಗ ಭಯವಾಗುವುದು ಎನ್ನುತ್ತಾಳೆ ನೆಲ್ಲಿತ್ತಡ್ಕದಿಂದ ಸುಲ್ಕೇರಿ ಸರ್ಕಾರಿ ಶಾಲೆಗೆ ಹೋಗುವ ಐದನೇ ತರಗತಿಯ ಕೀರ್ತಿಕಾ. ಇದರಿಂದ ಶಿಕ್ಷಣ ವಂಚಿತರಾಗುತ್ತಿದ್ದಾರೆ ಮಕ್ಕಳು.

ರಾಷ್ಟ್ರೀಯ ಉದ್ಯಾನದೊಳಗೆ ಇದ್ದ ಕೆಲವು ಕುಟುಂಬಗಳು 10 ಲಕ್ಷ ರೂಪಾಯಿ ಪರಿಹಾರ ಪಡೆದು ಹೊರಗೆ ಹೋಗಿ ಪುನರ್ವಸತಿ ಕಂಡಿವೆ. ನೆಲ್ಲಿತ್ತಡ್ಕ, ಆಲಂಬ, ಕುರಿಯಾಡಿಯಲ್ಲಿದ್ದ ಆರು ಕುಟುಂಬಗಳು ಪರಿಹಾರ ಪಡೆದು ಈಗಾಗಲೇ ಉದ್ಯಾನದಿಂದ ಹೊರಗೆ ಹೋಗಿ ಪುನರ್ವಸತಿ ಪಡೆದಿವೆ.

ತೋಟಗಾರಿಕಾ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆಯವರೇ ಅವರ ಕೃಷಿ ಭೂಮಿ ಹಾಗೂ ಮನೆಯ ಮೌಲ್ಯಮಾಪನ ಮಾಡಿ ಬೆಲೆ ಕಟ್ಟುತ್ತಾರೆ. ಆದರೆ ರಾಷ್ಟ್ರೀಯ ಉದ್ಯಾನದೊಳಗೆ ಉಳಿದಿರುವ 52 ಕುಟುಂಬಗಳಲ್ಲಿ 18 ಕುಟುಂಬಗಳು ಪುನರ್ವಸತಿ ಪಡೆಯಲು ಕಾದು ಕುಳಿತಿವೆ. ಉದ್ಯಾನದಿಂದ ಹೊರಗೆ ಹೊರಟವರು ಸೂಕ್ತ ಪರಿಹಾರ, ನೆಲೆಯೂ ಸಿಗದೆ ಅತಂತ್ರರಾಗಿದ್ದಾರೆ.

ಅವೈಜ್ಞಾನಿಕ ಪರಿಹಾರ

ಉದ್ಯಾನದೊಳಗೆ ಹಲವು ಕುಟುಂಬಗಳು ಬಾಕಿಯಾಗಲು ಸರ್ಕಾರದ ಅವೈಜ್ಞಾನಿಕ ಪರಿಹಾರ ನೀತಿಯೇ ಕಾರಣ. ತಾತ, ಮುತ್ತಾತನ ಕಾಲದಿಂದ ಹಿಡಿದು ಹಲವಾರು ದಶಕಗಳಿಂದ ಅರಣ್ಯದೊಳಗೆ (ಕೆಲವು ಕುಟುಂಬಗಳು ಶತಮಾನದಿಂದ ಅಲ್ಲೇ ನೆಲೆಸಿವೆ) ನೆಲೆನಿಂತು ಮನೆಕಟ್ಟಿ, ಹಲವು ಎಕರೆಗಳಲ್ಲಿ ತೋಟ, ಕೃಷಿ ಮಾಡಿರುವ ಹಲವು ಕುಟುಂಬಗಳ ಒಟ್ಟು ಆಸ್ತಿಯ ಬೆಲೆ ರೂ. 10 ಲಕ್ಷಕ್ಕಿಂತ ಅಧಿಕ ಇದೆ. ಹಾಗಾಗಿ ಸರ್ಕಾರ ನೀಡುವ 10 ಲಕ್ಷ ರೂಪಾಯಿ ಪರಿಹಾರ ಎಲ್ಲಿ ಸಾಕಾಗುವುದು? ಎಂಬುದು ಅವರ ಪ್ರಶ್ನೆ.

`ನನ್ನ ಮನೆ ಹಾಗೂ ಕೃಷಿ ಭೂಮಿಯ ಒಟ್ಟು ಮೌಲ್ಯ ಸುಮಾರು 60 ಲಕ್ಷ ರೂಪಾಯಿ. ಸರ್ಕಾರ ಕೇವಲ 10 ಲಕ್ಷ ರೂಪಾಯಿ ಪರಿಹಾರ ನೀಡಿದೆ. ಹೀಗಾದರೆ ನಮ್ಮ ಗತಿಯೇನು' ಎನ್ನುವುದು ಕುರಿಯಾಡಿಯ ಬಾಬು ಮಲೆಕುಡಿಯ ಅವರ ಪ್ರಶ್ನೆ.

ನೆಲ್ಲಿತ್ತಡ್ಕದ ಸದಾನಂದ ಭಟ್ ಅವರ ಆಸ್ತಿಯ ಮೌಲ್ಯ ಸುಮಾರು 15 ಲಕ್ಷ ರೂಪಾಯಿ. ಮಲೆಜಂಡದ ರಾಮ ಮಲೆಕುಡಿಯ ಎರಡು ಎಕರೆ ಜಾಗದಲ್ಲಿ 600 ಅಡಿಕೆ, ತೆಂಗು ಹಾಗೂ ಇತರ ಕೃಷಿಗಳಿವೆ. ಅಲ್ಲಿರುವ ಮನೆಯಲ್ಲಿ ಅವರು ವಾಸ ಇಲ್ಲದೆ ಮೂರು ವರ್ಷಗಳೇ ಆಗಿವೆ.

ಇಲ್ಲೇ ಹುಟ್ಟಿ ಬೆಳೆದ ಮಲೆಜಂಡದ ಲಕ್ಷ್ಮಣ ಮಲೆಕುಡಿಯ, ಸಂಜೀವ ಮಲೆಕುಡಿಯ ಇವರೆಲ್ಲ ಇಲ್ಲಿನ ಮನೆ, ತೋಟ, ಕೃಷಿಯನ್ನು ತೊರೆದು ಇದೀಗ ನಾಯ್ದಗುರಿ ಎಂಬಲ್ಲಿ ಗುಡಿಸಲು ಕಟ್ಟಿಕೊಂಡು ಕೂಲಿ ಮಾಡಿ ಜೀವನ ನಡೆಸುತ್ತಿದ್ದಾರೆ. ಅವರ ಆಸ್ತಿಯ ಮೌಲ್ಯಮಾಪನವಾಗಲಿ, ಪರಿಹಾರವಾಗಲಿ ಇನ್ನೂ ಸಿಕ್ಕಿಲ್ಲ.

`ಆ ದುರ್ಗಮ ಅರಣ್ಯದೊಳಗೆ ಮೂಲ ಸೌಕರ್ಯಗಳಾದ ರಸ್ತೆ, ವಿದ್ಯುತ್, ವೈದ್ಯಕೀಯ ಸೌಲಭ್ಯ, ಶಿಕ್ಷಣ ಯಾವುದೂ ಇಲ್ಲ. ಹೀಗಾಗಿ ಆಸ್ತಿ, ಮನೆ ಬಿಟ್ಟು ಹೊರಗೆ ಹೋಗುತ್ತೇವೆ.

ಆದರೆ ನಮ್ಮ ಮನೆ ಮತ್ತು ಕೃಷಿ ಭೂಮಿಯು ನ್ಯಾಯಯುತವಾಗಿ ಎಷ್ಟು ಬೆಲೆ ಬಾಳುವುದೋ ಅಷ್ಟು ಮೊತ್ತದ ಪರಿಹಾರ ಒದಗಿಸಬೇಕು. ಜತೆಗೆ ಒಂದು ಎಕರೆ ಕೃಷಿ ಯೋಗ್ಯ ಭೂಮಿ ಒದಗಿಸಬೇಕು' ಎನ್ನುತ್ತಾರೆ ಎನ್. ರಾಮಚಂದ್ರ ಭಟ್.

ಈ ಬೇಡಿಕೆಗಳ ಮನವಿಯನ್ನು ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕುದುರೆಮುಖ ರಾಷ್ಟ್ರೀಯ ಉದ್ಯಾನದ ಡಿಸಿಎಫ್‌ಗೆ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ರಾಮ ಮಲೆಕುಡಿಯ.

ಸುಲ್ಕೇರಿ ಗ್ರಾಮದ ನಾಯ್ದಗುರಿಯಲ್ಲಿದ್ದ 612 ಎಕರೆ ಸರ್ಕಾರಿ ಭೂಮಿಯಲ್ಲಿ 190 ಎಕರೆ ಭೂಮಿಯನ್ನು ಮಲೆಕುಡಿಯರ ಪುನರ್ವಸತಿಗಾಗಿಯೇ ಮೀಸಲಿರಿಸಲಾಗಿದೆ.

ಆದರೆ ಈ 190 ಎಕರೆ ಸೇರಿದಂತೆ ಒಟ್ಟು 612 ಎಕರೆ ಭೂಮಿಯನ್ನು ಹಲವರು ಒತ್ತುವರಿ ಮಾಡಿಕೊಂಡು ಅಲ್ಲಿ ಈಗ ಕೇವಲ 100 ಎಕರೆಯಷ್ಟು ಮಾತ್ರ ಸರ್ಕಾರಿ ಭೂಮಿ ಉಳಿದಿದೆ.

ಹೀಗಿದ್ದರೂ ಅತಿಕ್ರಮಣ ತೆರವಿಗೆ ಕಂದಾಯ ಅಧಿಕಾರಿಗಳು ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ನಕ್ಸಲ್ ಬಾಧಿತ ಪ್ರದೇಶಗಳ ಅಭಿವೃದ್ಧಿಗಾಗಿ ಬಿಡುಗಡೆಯಾದ ಐದು ಕೋಟಿ ರೂಪಾಯಿಯಲ್ಲಿ ಯಾವುದೇ ಸೌಲಭ್ಯಗಳು ದೊರೆತಿಲ್ಲ ಎಂದು ದೂರುತ್ತಾರೆ ಸ್ಥಳೀಯರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT