ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಕ್ಷರಸ್ಥ ಉಪನ್ಯಾಸಕರು...!

Last Updated 9 ಜನವರಿ 2017, 19:30 IST
ಅಕ್ಷರ ಗಾತ್ರ

ಅಲ್ಲೊಂದು ಜೋಪಡಿ, ಜೋಪಡಿಯ ಅಂಗಳದ ಸುತ್ತಲೂ ಹೂವು ಸಂಪತ್ತು. ಆ ಪುಷ್ಪರಾಶಿ ನಡುವೆ ತಂಡೋಪತಂಡವಾಗಿ ಬರುವ ಜನರು. ಆ ತಂಡದ ನಡುವೆ ಒಬ್ಬ ಮಹಿಳೆ. ಆ ಮಹಿಳೆಯಿಂದ ವಿಶೇಷ ‘ಉಪನ್ಯಾಸ’... ಆಕೆಯ ಮಾತಿಗೆ ತಲೆದೂಗುವ ತಂಡದ ಜನರು... ಇಂಥದ್ದೊಂದು ಅಪರೂಪದ ‘ಉಪನ್ಯಾಸ’ ದೃಶ್ಯ ಕಾಣಸಿಗುವುದು ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲ್ಲೂಕಿನ ಪಟ್ಟಲಚಿಂತಿ ಗ್ರಾಮದಲ್ಲಿ. ಇಲ್ಲಿ ಲಕ್ಷ್ಮವ್ವ ದಂಡಿನ ಎನ್ನುವವರು ಕೃಷಿಕರಿಗೆ ಜ್ಞಾನದ ಹರಿವನ್ನು ವಿಸ್ತರಿಸುತ್ತಾರೆ.

ಕೃಷಿ ಕ್ಷೇತ್ರದ ಆಗುಹೋಗು, ಕೃಷಿಯಲ್ಲಿ ಬದುಕು ಕಟ್ಟಿಕೊಳ್ಳುವ ವಿಧಾನ ಎಂಥದ್ದು, ಲಾಭದಾಯಕ ಬೇಸಾಯದ ಕ್ರಮ ಯಾವುದು, ಅಧಿಕ ಬಂಡವಾಳವಿಲ್ಲದೆ ಸರಳವಾಗಿ ಹೇಗೆ ಕೃಷಿ ಮಾಡಬಹುದು... ಇಂತಹ ಹಲವಾರು ಪ್ರಶ್ನೆಗಳಿಗೆ ಲಕ್ಷ್ಮವ್ವ ಅವರಲ್ಲಿ ಉತ್ತರವಿದೆ. ಇವರಂತೆಯೇ ಕಾರ್ಯ ನಿರ್ವಹಿಸುವ ಇನ್ನೊಬ್ಬ ಮಹಿಳೆ ಬಾಗಲಕೋಟೆ ಜಿಲ್ಲೆ ಬದಾಮಿ ತಾಲ್ಲೂಕಿನ ಚೊಳಚಗುಡ್ಡ ಗ್ರಾಮದ ಶರಣಮ್ಮ. ಬಾಳೆ ಬೆಳೆಯಲ್ಲಿ ಅಪಾರ ಅನುಭವ ಹೊಂದಿರುವ ಇವರು, ಬಾಳೆ ಬೆಳೆ, ಕುಳೆ ಬೆಳೆ, ಕೊಯ್ಲಿನ ವಿಧಾನ, ಮಾರುಕಟ್ಟೆ ವ್ಯವಸ್ಥೆ, ಲಾಭ-ಹಾನಿಗಳ ಬಗ್ಗೆ ಸಂಪೂರ್ಣ ಮಾಹಿತಿ, ತರಬೇತಿ ನೀಡುತ್ತಾರೆ.

ಯಾವುದೇ ಕೃಷಿ ಉಪನ್ಯಾಸಕರಿಗೆ ಕಡಿಮೆ ಇಲ್ಲದಂತೆ ಮಾಹಿತಿ ನೀಡುವ ಇವರಿಬ್ಬರೂ ಕೃಷಿಪಂಡಿತರೂ ಅಲ್ಲ, ಕೃಷಿ ವಿಷಯದಲ್ಲಿ ಪದವಿ ಪಡೆದವರಲ್ಲ, ಬದಲಿಗೆ ಕೃಷಿಯಲ್ಲಿ  ಪಳಗಿದವರು. ಬಾಳೆ ಬೆಳೆಯ ಜ್ಞಾನ ಹೊಂದಿರುವ ಶರಣಮ್ಮ ನಾಲ್ಕನೇ ತರಗತಿ ಓದಿದ್ದರೆ, ಸಮಗ್ರ ಕೃಷಿ ತರಬೇತಿ ನೀಡುವ ಲಕ್ಷ್ಮವ್ವ ಅನಕ್ಷರಸ್ಥೆ. ತಮ್ಮ ಕೃಷಿ ಬದುಕಿನಲ್ಲಿ ಕಂಡುಕೊಂಡ ನೈಜ ಅನುಭವಗಳೇ ಇವರ ಪಾಠಗಳು.

ಆಯಾ ಪ್ರದೇಶದ ಮಣ್ಣು, ನೀರು, ಹವಾಮಾನ ಹೂವಿನ ಬೇಸಾಯಕ್ಕೆ, ಹಣ್ಣಿನ ಬೇಸಾಯಕ್ಕೆ ಹೇಗೆ ಸೂಕ್ತವಾಗಿದೆ, ಕಡಿಮೆ ಖರ್ಚಿನಲ್ಲಿ ಅಲ್ಪಾವಧಿ ಬೆಳೆಯಾಗಿರುವ ಹೂವಿನ  ಬೇಸಾಯ ಮಾಡುವುದು ಹೇಗೆ ಎಂಬುದನ್ನು ಪ್ರಾತ್ಯಕ್ಷಿಕೆಯ ಮೂಲಕ ತೋರಿಸಿಕೊಡುತ್ತಿದ್ದಾರೆ.

ಮಹಿಳೆಯರ ಉತ್ಸುಕತೆ: ಕೃಷಿ ಇಲಾಖೆಯಿಂದ ನಡೆಯುವ ‘ಪ್ರಗತಿಪರ ಕೃಷಿಕರ ಭೇಟಿ’ ಕಾರ್ಯಕ್ರಮಗಳ  ಸಂದರ್ಭದಲ್ಲಿ ಇಲಾಖೆಯವರೇ ತಂಡತಂಡವಾಗಿ ಮಹಿಳೆಯರನ್ನು ಇಲ್ಲಿಗೆ ಕರೆದುಕೊಂಡು ಬರುತ್ತಾರೆ. ಸ್ವಸಹಾಯ ಸಂಘದ ಮಹಿಳೆಯರೂ ಇವರ ಅನುಭವದ ಮಾತು ಕೇಳಲು ಉತ್ಸುಕತೆ ತೋರುತ್ತಿದ್ದಾರೆ. ಕೃಷಿ ಅಷ್ಟೇ ಅಲ್ಲ ಉಪಕಸುಬುಗಳು, ಕೃಷಿಯೇತರ ಚಟುವಟಿಕೆಗಳನ್ನು ಹೇಗೆ ನಿರ್ವಹಿಸಬಹುದು ಎಂಬ ಬಗ್ಗೆಯೂ ಇವರು ತಿಳಿ ಹೇಳುತ್ತಾರೆ.

‘ನಮ್ಮ ಸಂಸ್ಥೆಯ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಹತ್ತಾರು ಸ್ವಸಹಾಯ ಸಂಘದ ನೂರಾರು ಮಹಿಳೆಯರನ್ನು ಇಲ್ಲಿಗೆ ಕರೆದುಕೊಂಡು ಕೃಷಿ ಹಾಗೂ ಕೃಷಿಯೇತರ ಪಾಠ ಹೇಳಿಸಿದ್ದೇವೆ. ಸದ್ಯ ಹಲವಾರು ಮಹಿಳೆಯರು ಇವರ ಮಾರ್ಗದರ್ಶನದಲ್ಲಿ ಕೃಷಿ ಮಾಡಿ ಯಶಸ್ವಿಯಾಗುತ್ತಿದ್ದಾರೆ’ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಮೇಲ್ವಿಚಾರಕ ಸಂಗಪ್ಪ ಹೂಗಾರ ಅಭಿಮಾನದಿಂದ ಹೇಳುತ್ತಾರೆ.

ಕೃಷಿಯಲ್ಲಿ ಸೋತ ಜೀವಗಳಿಗೆ ಆಸೆ ಹುಟ್ಟಿಸುವಂತಹ ಮಾತುಗಾರಿಕೆ ಲಕ್ಷ್ಮಮ್ಮ ಅವರದಾಗಿದೆ. ತಮ್ಮ ಭಾಗಕ್ಕೆ ಸೂಕ್ತವಾಗುವ, ಕಡಿಮೆ ಬಂಡವಾಳದಲ್ಲಿಯೇ ನಡೆಯಬಹುದಾದ ಕೃಷಿ ಮಾಹಿತಿಯನ್ನು ಅವರು ನೀಡುತ್ತಾರೆ. ಇಷ್ಟೆಲ್ಲ ಮಾಹಿತಿ ನಿಮಗೆ ಹೇಗೆ ದೊರಕಿತು ಎಂದು ಯಾರಾದರೂ ಕೇಳಿದರೆ ‘ನನಗೇನು ಗೊತ್ತಿಲ್ರಿ, ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ಮಣ್ಣಿನಲ್ಲಿ ದುಡಿಯುವ ಭೂಮಿತಾಯಿಯ ಮಕ್ಕಳು ನಾವು’ ಎಂದು ಭೂಮಿತಾಯತ್ತ ಕೈ ಮಾಡಿ ತೋರುತ್ತಾರೆ.

ಕೃಷಿ ಟಿಪ್ಸ್‌:‘ನೀರಿನ ಪ್ರಮಾಣ ಕಡಿಮೆಯಾದಾಗ ದೀರ್ಘಾವಧಿ ಬೆಳೆ ಹಾಕುವ ಬದಲು ನಿತ್ಯ ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ವಿವಿಧ ಹೂವುಗಳನ್ನು ಬೆಳೆಯುವುದರಿಂದ ಕುಟುಂಬಕ್ಕೆ ಆಸರೆಯಾಗುತ್ತದೆ’ ಎನ್ನುತ್ತಾರೆ ಲಕ್ಷ್ಮವ್ವ. ‘ಸೂರ್ಯಕಾಂತಿ, ಮೆಕ್ಕೆಜೋಳ ಬೆಳೆಗಳಿಗೆ ಮೀಸಲಾಗಿದ್ದ ನಾವು, ಬರುವ ಆದಾಯವನ್ನು ಕೂಲಿಗಾಗಿ ಹಾಗೂ ಬೀಜ ಗೊಬ್ಬರಕ್ಕಾಗಿ ನೀಡುತ್ತಿದ್ದೇವೆ.

ಕೇವಲ 10 ಗುಂಟೆ ಭೂಮಿಯಲ್ಲಿ ಬೆಳೆಯಲಾಗಿದ್ದ ನಮ್ಮ ಕನಕಾಂಬರಿ ಕೈಹಿಡಿಯಿತೇ ಹೊರತು ನಾಲ್ಕಾರು ಎಕರೆಯಲ್ಲಿ ಬೆಳೆದ ಮೆಕ್ಕೆಜೋಳ ಮಾತ್ರ ಕೈಹಿಡಿಯಲಿಲ್ಲ.ಹೂವಿನ ಬೇಸಾಯಕ್ಕೆ ಇಳಿದರೆ ಸದ್ಯ ಕೈತುಂಬ ಕಾಸು ಎಣಿಸಬಹುದು’ ಎನ್ನುವುದು ಅವರ ಅನುಭವದ ನುಡಿ.

‘ಮಹಿಳೆಯರಲ್ಲಿ ಏಕಾಗ್ರತೆ ಶಕ್ತಿ ಇರುತ್ತದೆ, ಅಲ್ಲದೆ ಹಿಡಿದ ಕೆಲಸ ಪೂರ್ಣ ಗೊಳಸುವ ಆತ್ಮವಿಶ್ವಾಸ ಇರುತ್ತದೆ, ಇವೆರಡನ್ನೂ ಬಳಸಿಕೊಂಡು ಕೃಷಿ ಮಾಡಿ ಸಮಾಜದಲ್ಲಿ ಉತ್ತಮ ಸ್ಥಾನ ಪಡೆಯಬಹುದು, ಸರ್ಕಾರ ಮಹಿಳೆಯರಿಗೆ ಪ್ರೋತ್ಸಾಹ ನೀಡುತ್ತಿದೆ, ಮಹಿಳೆಯರು ಕೃಷಿ ಚಟುವಟಿಕೆಗೆ ಮುಂದಾಗಬೇಕು’ ಎಂದು ಬಾಳೆ ಕೃಷಿಯ ಪರಿಣತಿ ಹೊಂದಿರುವ ಶರಣಮ್ಮ ಹೇಳುತ್ತಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT