ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲೆ-ಬಲೆಯೊಳಗೆ ಜೀವ ಸೆಲೆ

Last Updated 10 ಜೂನ್ 2013, 19:59 IST
ಅಕ್ಷರ ಗಾತ್ರ

ಅಂದು ಕಾರವಾರದಲ್ಲಿ ಮುಸ್ಸಂಜೆ ವಾತಾವರಣ. ಇನ್ನೇನು ನೇಸರ ಬಾನಿನಿಂದ ಮರೆಯಾಗಿ ಜಾರಿಹೋಗುವ ಸಮಯ. ಅಲೆಗಳ ಅಬ್ಬರ ಜೋರಾಗಿತ್ತು. ಇಬ್ಬರು ಮೀನುಗಾರರು ಕೈಯಲ್ಲಿ ಬಲೆ ಹಿಡಿದು ನದಿಯತ್ತ ಧಾವಿಸಿದರು.  ತಕ್ಷಣ ಅಲ್ಲಿಗೆ ಹೆಜ್ಜೆ ಹಾಕಿದೆ. ಕುತೂಹಲದಿಂದ ಅವರು ಮೀನು ಹಿಡಿಯುವುದನ್ನೇ ನೋಡುತ್ತ ನಿಂತೆ.

ಅಲೆಗಳು ರಭಸವಾಗಿ ಬಂದ ಕಡೆಗೆ ಬಲೆಯನ್ನು ಎಸೆಯುತ್ತಿದ್ದರು. ಹೊತ್ತು ಕಳೆದರೂ ಮೀನು ಅವರ ಬಲೆಗೆ ಬೀಳಲಿಲ್ಲ. ಅವರಿಬ್ಬರು ನಿರಾಸೆಯಿಂದಲೇ ಮಾತಾನಾಡುತ್ತ ಬಲೆಯನ್ನು ಮತ್ತೆ ಮತ್ತೆ ಎಸೆಯುತ್ತಿದ್ದರು. ಆದರೂ ಮೀನು ಸಿಗುವ ಲಕ್ಷಣಗಳೇ ಕಾಣಲಿಲ್ಲ.

ಮೀನು ಸಿಕ್ಕೇ ಸಿಗಬಹುದು ಎಂಬ ನಂಬಿಕೆಯಿಂದಲೇ ತಮ್ಮ ಕೆಲಸ ಮುಂದುವರಿಸಿದ್ದರು ಅವರು. ಪ್ರತಿ ಬಾರಿ ಬಲೆ ಎಸೆದಾಗಲೂ ನಿರಾಸೆ. ಒಬ್ಬನ ಬಲೆಯಲ್ಲಿ ಕೇವಲ ಒಂದು ಮೀನು ಬಿದ್ದರೆ, ಮತ್ತೊಬ್ಬನ ಬಲೆಯಲ್ಲಿ ಐದಾರು ಮೀನುಗಳು ಸಿಕ್ಕಿದ್ದವಷ್ಟೇ. ಆದರೂ ಉತ್ಸಾಹಗುಂದದೇ ಬಲೆ ಬೀಸುತ್ತಲೇ ಇದ್ದರು ಅವರು.

ಅತ್ತ ಆ ಮೀನುಗಾರರು ತಮ್ಮ ಹಾಗೂ ಪತ್ನಿ-ಮಕ್ಕಳ ತುತ್ತಿನ ಚೀಲ ತುಂಬಿಸಲು ನಿರಾಸೆಯ ನಡುವೆಯೂ ಬಲೆ ಬೀಸುತ್ತಲೇ ಇದ್ದರೆ, ಇತ್ತ ಕಡಲ ತೀರದ ಸೌಂದರ್ಯ ಸವಿಯ ಬಂದ ಪ್ರವಾಸಿಗರಿಗೆ ಮಾತ್ರ ಅದನ್ನು ನೋಡುವ ಕುತೂಹಲ. ಬಲೆ ಎಸೆಯುವುದು, ನಿರಾಸೆಯ ಭಾವ, ಎಡಬಿಡದ ಪ್ರಯತ್ನ ಎಲ್ಲವೂ ಪ್ರವಾಸಿಗರ ಕ್ಯಾಮೆರಾ ಕಣ್ಣಲ್ಲಿ ದಾಖಲಾಗುತ್ತಿದ್ದವು. ಆದರೆ ಮೀನುಗಾರರ ಮನದಾಳದಲ್ಲಿ ಉಂಟಾಗುತ್ತಿರುವ ನೋವಿನ ಛಾಯೆ ಮಾತ್ರ ಈ ಕಣ್ಣಲ್ಲಿ ಕಾಣಲೇ ಇಲ್ಲ. ಮೀನುಗಳನ್ನೇ ನಂಬಿ ಜೀವನ ದೂಡಬೇಕಾದ ಕಠಿಣ ಪರಿಸ್ಥಿತಿಯ ಸತ್ಯ ಅರಿಯುವಲ್ಲಿ ಫೋಟೊ ಕ್ಲಿಕ್ಕಿಸಿಕೊಳ್ಳುತ್ತಿರುವವರು ವಿಫಲರಾಗಿದ್ದರು.

ಸ್ಮೃತಿಪಟಲದಲ್ಲಿ ಪ್ರಶ್ನೆಗಳ ಸುರಿಮಳೆ
ಸದಾ ಕೂಲಿಯನ್ನೇ ನಂಬಿ ಜೀವನ ಸಾಗಿಸುವವನಿಗೆ ಒಂದು ದಿನ ಕೂಲಿ ಸಿಗದೇ ಹೋದರೆ ಹೇಗೆ ಆಗುವುದೋ ಹಾಗೆಯೇ ಪ್ರತಿ ದಿನ ಸಾಗರದ ಮೀನನ್ನೆ ನಂಬಿ ಬದುಕಿನ ಬಂಡಿ ಸಾಗಿಸುವ ಇಂಥವರಿಗೆ ಮೀನು ಸಿಗದೇ ಹೋದರೆ ಆಗುತ್ತದೆ. ಪ್ರತಿ ದಿನ ಹೀಗೇ ಮುಂದುವರಿದರೆ ಇವರ ಬದುಕು ಸಾಗರದ ಅಲೆಗೆ ಕೊಚ್ಚಿ ಹೋಗುವುದು ಖಂಡಿತ.

ಕೇವಲ ಮೀನುಗಾರರಿಗೆ ಮಾತ್ರವಲ್ಲ ನಮ್ಮ ನಾಡಿನ ಪ್ರತಿಯೊಬ್ಬ ಕೃಷಿಕನ ಬದುಕು ಹೀಗೇ ಆಗಿದೆ. ಪ್ರತಿ ಬಾರಿಯೂ ಉತ್ತಮ ಬೆಲೆ ಸಿಗುವ ನಿರೀಕ್ಷೆಯಿಂದಲೇ ಬೆಳೆಯುತ್ತಾನೆ. ಆದರೆ ಒಳ್ಳೆಯ ಬೆಲೆ ಸಿಕ್ಕಿದೆಯೇ ಎಂಬ ಪ್ರಶ್ನೆಗಳು ನನ್ನ ಸ್ಮೃತಿಪಟಲದಲ್ಲಿ ಮೂಡಿದವು.

ಮತ್ತೊಂದು ತಂಡ ತಾವು ಹಿಡಿದ ಅಲ್ಪಸ್ವಲ್ಪ ಮೀನುಗಳನ್ನು ಬಲೆಯಿಂದ ಪ್ರತ್ಯೇಕಿಸುವಲ್ಲಿ ನಿರತರಾಗಿದ್ದರು. ಈ ಮೀನು ಮಾರಿದರೆ ತಮಗೆಷ್ಟು ಲಾಭ ಬರುವುದು, ಅದರಿಂದ ತಮ್ಮ ಕುಟುಂಬದ ಸದಸ್ಯರ ಹೊಟ್ಟೆಯನ್ನು ಹೇಗೆ ತುಂಬಿಸಬಹುದು ಎಂಬ ಚಿಂತೆ ಅವರ ಮುಖದಲ್ಲಿ ಕಂಡುಬಂದಿತು.

ಅರ್ನೆಸ್ಟ್ ಹೆಮಿಂಗ್‌ವೆಯ ನೊಬೆಲ್ ಪ್ರಶಸ್ತಿ ಪುರಸ್ಕೃತ  `ದಿ ಓಲ್ಡ್ ಮ್ಯೋನ್ ಅಂಡ್ ದ ಸೀ' ಎಂಬ ಕಾದಂಬರಿಯನ್ನು ಕೆ. ಎಸ್. ಭಗವಾನ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ  ಕಾದಂಬರಿಯಲ್ಲಿ ಮೀನುಗಾರನ ಜೀವನವನ್ನೂ ತೆರೆದಿಡುವ ಪ್ರಯತ್ನ ಮಾಡಲಾಗಿದೆ. `ಮನುಷ್ಯ ಹುಟ್ಟಿರುವುದು ಸೋಲುವುದಕ್ಕಲ್ಲ, ಮನುಷ್ಯನನ್ನು ಸಂಹಾರ ಮಾಡಬಹುದು. ಆದರೆ ಸೋಲಿಸಲು ಸಾಧ್ಯವಿಲ್ಲ' ಎಂಬ ಬಗ್ಗೆ ಓದಿದ್ದು ಈ ಕ್ಷಣದಲ್ಲಿ ನೆನಪಾಯಿತು.

ಕಡಲ ತೀರಗಳಿಗೆ ಪ್ರವಾಸ ಹೋದವರಿಗೆ, ಪ್ರವಾಸ ಹೇಗಿತ್ತು? ಎಂದು ಕೇಳಿದರೆ, ಪ್ರತಿಯೊಬ್ಬರು ಅಲ್ಲಿನ ಮೋಜು, ಮಸ್ತಿಯ ಬಗ್ಗೆ ಗಂಟೆ ಗಟ್ಟಲೆ ಮಾತನಾಡುತ್ತಾರೆ. ಆದರೆ ಅಲ್ಲಿನ ತೀರದಲ್ಲಿನ ಜನರ ಜೀವನದ ಸ್ಥಿತಿ ಪ್ರಾಯಶಃ ಅವರ ಅರಿವಿಗೆ ಬರೋದಿಲ್ಲ. ಯಾಕೆಂದರೆ ಪ್ರತಿಯೊಬ್ಬರ ಮನಸ್ಸೂ ಅಲ್ಲಿನ ಮೋಜಿನ ಕಡೆ ಇರುತ್ತದೆ. ಅಲ್ಲಿನ ತೀರಗಳಲ್ಲಿ ಸೂಕ್ಷ್ಮವಾಗಿ ಕಣ್ಣಾಡಿಸಿದರೆ ಕೆಲವೊಂದು ಜನರ ಕಷ್ಟದ ಬದುಕು ತೆರೆದುಕೊಳ್ಳುತ್ತದೆ.
-ನಾಗೇಶ ಕಾರ್ಯ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT