ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉರುಸಲು ಬೀರುವ ಉತ್ಸವ

Last Updated 9 ನವೆಂಬರ್ 2015, 19:47 IST
ಅಕ್ಷರ ಗಾತ್ರ

ದೀಪಾವಳಿ ಹಬ್ಬದ ಮೂರು ದಿನಗಳ ಕಾಲ ಗ್ರಾಮೀಣ ಪ್ರದೇಶಗಳಲ್ಲಿ ಹಲವು ವಿಶಿಷ್ಟ ಸಂಪ್ರದಾಯ ಮತ್ತು ಅಚರಣೆ ನಡೆಯುತ್ತದೆ. ಊರಿನಿಂದ ಊರಿಗೆ ಈ ಆಚರಣೆ ಮತ್ತು ನಂಬಿಕೆಗಳು ಭಿನ್ನವಾಗಿರುತ್ತದೆ.

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಗೌತಮಪುರ ಗ್ರಾಮದಲ್ಲಿ ಬಲಿ ಪಾಡ್ಯಮಿ ಹಬ್ಬದ ದಿನ ಸಂಜೆ ಹಂದಿಯ ರಕ್ತವನ್ನು ಅನ್ನದಲ್ಲಿ ಮಿಶ್ರಣಮಾಡಿ ಜಾನುವಾರುಗಳಿಗೆ ಪ್ರೋಕ್ಷಣೆ ಮಾಡುವ ಹಗಲುದುರ್ಗಿ ಪ್ರಸಾದ ವಿತರಣೆ ಅಥವಾ ಉರುಸಲು ಬೀರುವ ಹಬ್ಬ ಎಂಬ ವಿಶಿಷ್ಟ ಆಚರಣೆ ರೂಢಿಯಲ್ಲಿದೆ.

ಗ್ರಾಮದ ತ್ಯಾಗರ್ತಿ ರಸ್ತೆಯಲ್ಲಿ ಮುಖ್ಯ ಹೆದ್ದಾರಿಗೆ ತಾಗಿಕೊಂಡಂತೆ ಹಗಲುದುರ್ಗಿ ಮತ್ತು ಮಾರಿಕಲ್ಲು ಭೂತರಾಯನ ದೇವರ ನೆಲೆಯಿದೆ. ಈ ಸ್ಥಳದಲ್ಲಿ ಮಾರಿಕಲ್ಲು ಭೂತರಾಯ ಹಾಗೂ ಹಲವು ಪ್ರಾಚೀನ ಶಾಸನಗಳನ್ನೊಳಗೊಂಡ ಶಿಲಾಕಲ್ಲುಗಳಿವೆ. ಹಗಲು ದುರ್ಗಿ ದೇವರ ಕಲ್ಲು ಶಿಲೆಯದಾಗಿದ್ದು ಸುಮಾರು 8ಅಡಿ ಎತ್ತರವಾಗಿದೆ. ಈ ದೇವರನ್ನು ಗೋಕಲ್ಲು ಎಂದು ಕರೆಯುವ ವಾಡಿಕೆಯಿದೆ.

ಈ ಉತ್ಸವದ ಆರಂಭದಲ್ಲಿ ಗೋಕಲ್ಲಿನ ದೇವರಿಗೆ ತೆಂಗಿನ ಕಾಯಿ ಮತ್ತು ಹಣ್ಣಿನ ನೈವೇದ್ಯ ಸಮರ್ಪಣೆಯಾಗುತ್ತದೆ. ಮಾರಿಕಲ್ಲು ಭೂತರಾಯ ವಿಗ್ರಹ ಜಂಬಿಟ್ಟಿಗೆಯ ಚಚ್ಚೌಕದ ಕಲ್ಲಾಗಿದೆ. ಇದು ಸುಮಾರು 5 ಅಡಿ ಎತ್ತರ ಮತ್ತು ಮೂರು ಅಡಿಯಷ್ಟು ಅಗಲವಿದೆ. ಈ ಕಲ್ಲಿನ ಮೇಲ್ಭಾಗದಲ್ಲಿ ವಿಶಿಷ್ಟವಾದ ಸುಮಾರು 10 ಸೆಂ.ಮೀ. ವ್ಯಾಸದ ರಂಧ್ರವಿದೆ. ದೀಪಾವಳಿ ಹಬ್ಬ ಆರಂಭವಾಗುತ್ತಿದ್ದಂತೆ ಅಂದರೆ ನರಕ ಚತುರ್ದಶಿಯಂದು ಈ ದೇವರ ಸ್ಥಳದ ಆವರಣವನ್ನು ಸ್ವಚ್ಛಗೊಳಿಸಲಾಗುತ್ತದೆ.

ಬಲಿಪಾಡ್ಯಮಿ ದಿವಸ ಬೆಳಿಗ್ಗೆ ದೇವರ ಕಲ್ಲುಗಳನ್ನು ಚೆನ್ನಾಗಿ ತೊಳೆದು, ಹೂವುಗಳಿಂದ ಅಲಂಕರಿಸಿ ತಳಿರು ತೋರಣಗಳಿಂದ ಸಿಂಗರಿಸಲಾಗುತ್ತದೆ. ಬಲಿಪಾಡ್ಯಮಿಯ ದಿನ ಸಂಜೆ ಈ ದೇವರಿಗೆ ವಿಶೇಷ ಪೂಜೆ ನಡೆಸಲಾಗುತ್ತದೆ. ದೇವರ ಕಟ್ಟೆಯ ಮೇಲೆ ನೆಡಲಾದ ತ್ರಿಶೂಲಕ್ಕೆ ಕೋಳಿ ಚುಚ್ಚಿ ಬಲಿ ನೀಡಲಾಗುತ್ತದೆ. ದೇವರ ಮುಂಭಾಗದಲ್ಲಿ ಹಂದಿಯ ರಕ್ತವನ್ನು ತೆಗೆದು ಈಗಾಗಲೇ ಸಿದ್ಧಪಡಿಸಲಾದ ಅನ್ನದೊಂದಿಗೆ ಬೆರೆಸಿ ಉರುಸಲು ಸಿದ್ಧಮಾಡಲಾಗುತ್ತದೆ. ಈ ಬಲಿ ಪೂಜೆ ನಡೆಯುತ್ತಿದ್ದಂತೆ ಗ್ರಾಮಸ್ಥರೆಲ್ಲ ಆಗಮಿಸಿ ಹಣ್ಣು ಕಾಯಿ ನೈವೇದ್ಯ ಸಮರ್ಪಿಸುತ್ತಾರೆ.

  ಗ್ರಾಮದ ಶ್ರೀಮಾರಿಕಾಂಬಾ ದೇವಾಲಯದ ಮುಂಭಾಗದಿಂದ ಇಡೀ ಗ್ರಾಮದ ಎಲ್ಲ ಜಾನುವಾರುಗಳನ್ನು ಕರೆತರಲಾಗುತ್ತದೆ. ಹಸು, ಕರು ಮತ್ತು ಎತ್ತುಗಳಿಗೆ ಮಾತ್ರ ಪ್ರವೇಶವಿದ್ದು ಕೋಣ ಮತ್ತು ಎತ್ತುಗಳಿಗೆ ಪ್ರವೇಶ ನೀಡಲಾಗುವುದಿಲ್ಲ. ಹೀಗೆ ಸಾಲಾಗಿ ಸಾಗಿ ಬಂದ ಹಸು-ಕರು ಎತ್ತುಗಳಿಗೆ ಮಾರಿಕಲ್ಲು ಭೂತರಾಯನ ಕಟ್ಟೆಯ ಮುಂಭಾಗದ ತ್ಯಾಗರ್ತಿ ರಸ್ತೆಯಲ್ಲಿ ಹಂದಿ ರಕ್ತ ಮಿಶ್ರಣ ಮಾಡಿದ ಉರುಸಲನ್ನು (ಹಗಲುದುರ್ಗಿ ಪ್ರಸಾದ) ಮೈ ಮೇಲೆ ಎರಚಲಾಗುತ್ತದೆ. ಹೀಗೆ ಮಾಡುವುದರಿಂದ ಜಾನುವಾರುಗಳಿಗೆ ತಗಲುವ ತೊಂದರೆ ಮತ್ತು ರೋಗಗಳು ದೂರವಾಗುತ್ತದೆ ಎಂಬ ನಂಬಿಕೆಯಿದೆ. ಹೀಗೆ ಉರುಸಲು ಎರಚುವಾಗ ಡೋಲು ಬರಿಸಿ, ಪಟಾಕಿ ಸಿಡಿಸಿ ಜಾನುವಾರುಗಳನ್ನು ಜೋರಾಗಿ ಓಡಿಸಲಾಗುತ್ತದೆ.

ಓಡುತ್ತಾ ಸಾಗಿ ಬಂದು ಬಹುಬೇಗ ಕೊಟ್ಟಿಗೆಗೆ ತಲುಪಿದರೆ ಆ ಕುಟುಂಬಸ್ಥರಿಗೆ ಒಳಿತಾಗುತ್ತದೆ ಎಂಬ ನಂಬಿಕೆ ಸಹ ಇದೆ. ಹೀಗೆ ಉರುಸಲು ಎರಚುವಾಗ ಮನುಷ್ಯರಿಗೆ ಸೋಂಕಿದರೆ ಕೆಡುಕಾಗುತ್ತದೆ ಎಂಬ ನಂಬಿಕೆಯಿದ್ದು ಜನರಿಗೆ ತಾಗದಂತೆ ಎಚ್ಚರಿಕೆ ವಹಿಸಲಾಗುತ್ತದೆ. ಈ ಸಂದರ್ಭದಲ್ಲಿ ಮಾರಿಕಾಂಬಾ ದೇವಾಲಯದ ಮುಂಭಾಗದಿಂದ ತ್ಯಾಗರ್ತಿ ರಸ್ತೆಯ ಕಡೆಗೆ ಏಕಮುಖವಾಗಿ ಜಾನುವಾರುಗಳು ಚಲಿಸುವಂತೆ ವ್ಯವಸ್ಥೆಮಾಡಲಾಗುತ್ತದೆ.

ಈ ಹಗಲುದುರ್ಗಿ ಉತ್ಸವ ವೀಕ್ಷಿಸಲು ಗ್ರಾಮದ ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಮತ್ತು ಯುವಕರು ಎಲ್ಲಾ ಜಾತಿ- ಮತದವರು ಗುಂಪು ಗುಂಪಾಗಿ ಆಗಮಿಸುತ್ತಾರೆ. ಬಹು  ಹಿಂದಿನ ಕಾಲದಿಂದ ಈ ರೀತಿಯ ವಿಶಿಷ್ಟ ಆಚರಣೆ ರೂಢಿಯಲ್ಲಿದ್ದು ಇದನ್ನು ವೀಕ್ಷಿಸಲು ಬಹು ದೂರದ ಊರುಗಳಿಂದ ಜನರು ಬರುತ್ತಾರೆ.

ನೋನಿ ಹಬ್ಬ
ಸಾಗರ ತಾಲ್ಲೂಕಿನ  ಆಚಾಪುರ ಗ್ರಾಮದಲ್ಲಿ ದೀಪಾವಳಿಯ ಅಮಾವಾಸ್ಯೆಯಂದು ಬಲಿ ಸಮರ್ಪಣೆಯ ನೋನಿ ಹಬ್ಬ ಆಚರಿಸಲಾಗುತ್ತದೆ. ಗ್ರಾಮದಲ್ಲಿನ ರಾಷ್ಟ್ರೀಯ ಹೆದ್ದಾರಿ 206ರಿಂದ ಸ್ವಲ್ಪ ದೂರದಲ್ಲಿರುವ ಓಬಳವ್ವನ ಗದ್ದುಗೆಗೆ ವಿಶೇಷ ಪೂಜೆ ನಡೆಯುತ್ತದೆ. ಈ ಸ್ಥಳದಲ್ಲಿ ಎತ್ತರದ ಕಲ್ಲಿನ ಕಟ್ಟೆ, ಪ್ರಾಚೀನ ಕಾಲದ ದೇವರ ಕಲ್ಲುಗಳು, ಕಾಡು ಸಂಪಿಗೆ ಮರ ಇತ್ಯಾದಿಗಳಿವೆ.

ಪ್ರಾಚೀನ ಕಾಲದಲ್ಲಿ ಓಬಳವ್ವ ಎಂಬ ದೇವತೆ ಇಲ್ಲಿ ನೆಲೆಸಿದ್ದಳಂತೆ. ದೇವರ ಗುಡಿ ಮುಂಭಾಗದಲ್ಲಿ ತಣ್ಣೀರಿನ ಬಾವಿ ಮತ್ತು ಬಿಸಿ ನೀರಿನ ಬಾವಿ ಇತ್ತು ಎನ್ನಲಾಗಿದೆ. ಗ್ರಾಮದಲ್ಲಿ ಯಾರ ಮನೆಯಲ್ಲಾದರೂ ಮದುವೆ ಇತ್ಯಾದಿ ಮಂಗಳ ಕಾರ್ಯ ನಡೆಯುವುದಿದ್ದರೆ ಇಲ್ಲಿಗೆ ಬಂದು ಎರಡೂ ಬಾವಿಗಳಲ್ಲಿ ಸ್ನಾನ ಮಾಡಿ ಒದ್ದೆ ಬಟ್ಟೆಯಲ್ಲಿ ಬಂದು ದೇವರನ್ನು ಭಕ್ತಿಯಿಂದ ಪ್ರಾರ್ಥಿಸಿದರೆ ವಿವಿಧ ಬಂಗಾರದ ಆಭರಣಗಳನ್ನು ನೀಡುತ್ತಿದ್ದಳಂತೆ. ಮಂಗಳ ಕಾರ್ಯ ಮುಗಿಸಿದ ನಂತರ ವಾಪಸು ದೇವರ ಗುಡಿಗೆ ತಂದು ಹಿಂತಿರುಗಿಸಬೇಕಿತ್ತಂತೆ. ಯಾರೋ ದೇವತೆಯನ್ನು ನಿಂದಿಸಿದ ಕಾರಣ ದೇವತೆ ಕಲ್ಲಾಗಿ ನೆಲೆಯಾದಳು ಎಂಬ ಕಥೆಯಿದೆ.

ಇಲ್ಲಿನ ಗದ್ದುಗೆಯ ಕಟ್ಟೆಯ ಮೇಲೆ ಕುದುರೆ ಮೇಲೆ ವೀರ ಯುದ್ಧಕ್ಕೆ ಸನ್ನದ್ಧನಾಗಿ ಕುಳಿತ ಭಂಗಿಯ ಸುಮಾರು ಅರ್ಧ ಅಡಿ ಎತ್ತರದ ಲೋಹದ ವಿಗ್ರಹಗಳನ್ನು ಇಟ್ಟು ಪೂಜಿಸಲಾಗುತ್ತದೆ. ಸಾಲು ಸಾಲಾಗಿ ಇರುವ ಜೊತೆಗೆ ನಂದಿ, ಯುದ್ಧ ದೇವತೆ, ಆಯುಧಧಾರಿ ಕಾಲಾಳುಗಳು, ತ್ರಿಶೂಲಗಳನ್ನು ಸಹ ಸಾಲಾಗಿ ಜೋಡಿಸಿ ಪೂಜಿಸಲಾಗುತ್ತದೆ.

ಇಡೀ ದೃಶ್ಯ ಯುದ್ಧದ ಸನ್ನಿವೇಶವನ್ನು ಪ್ರತಿಬಿಂಬಿಸುವುದು ಇಲ್ಲಿನ ವಿಶಿಷ್ಟವಾಗಿದೆ. ನೋನಿ ಹಬ್ಬದ ದಿನ ಮಾತ್ರ ಗ್ರಾಮಸ್ಥರು ಈ ವಿಗ್ರಹಗಳನ್ನು ಮೆರವಣಿಗೆಯಲ್ಲಿ ತಂದು ಪ್ರತಿಷ್ಠಾಪಿಸಿ ಬಲಿ ಪೂಜೆ ನಂತರ ಪುನಃ ಬೆತ್ತದ ಬುಟ್ಟಿಯಲ್ಲಿ ತುಂಬಿಕೊಂಡು ಹಿಂತಿರುಗುತ್ತಾರೆ. ನೋನಿ ಹಬ್ಬವನ್ನು ಬಿಟ್ಟು ವರ್ಷವಿಡೀ ಉಳಿದ ದಿನಗಳಲ್ಲಿ ಗ್ರಾಮದ ವೀರೇಶ ಎಂಬವರ ಮನೆಯಲ್ಲಿ ಇವುಗಳನ್ನು ಇಡುವುದು ತಲ ತಲಾಂತರದ ಸಂಪ್ರದಾಯವಾಗಿದೆ.

ಆಚಾಪುರ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ 206ರ ಸಮೀಪ ಸುಮಾರು 8 ಅಡಿ ಎತ್ತರದ ಬೃಹತ್ ಐತಿಹಾಸಿಕ ಶಾಸನದ ಕಲ್ಲು ಇದೆ. ಪ್ರಾಚೀನ ಕಾಲದಲ್ಲಿ ಆಚಾಪುರವನ್ನು ಆಡಳಿತ ಕೇಂದ್ರವನ್ನಾಗಿಕೊಂಡು ಆಳುತ್ತಿದ್ದ ಮಾಚರಾಜ ಎಂಬ ಅರಸ ಕಾಳಾಮುಖ ಪಂಥದ ಮಹಾ ತಪಸ್ವಿ ಅನಂತ ಶಿವಶಕ್ತಿ ಪಂಡಿತರಿಗೆ ಗ್ರಾಮದಲ್ಲಿ ತೀರ್ಥದ ಕೊಳವನ್ನು ನಿರ್ಮಿಸಿ ಧಾರೆ ಎರೆದು ಕೊಟ್ಟ ಬಗ್ಗೆ ಈ ಶಾಸನದಲ್ಲಿ ಉಲ್ಲೇಖವಿದೆ.

ಗ್ರಾಮಸ್ಥರು ಇದನ್ನು ಲಿಪಿಕಲ್ಲಿನ ದೇವರು ಎಂದು ಕರೆಯುತ್ತಾರೆ. ಈ ಶಾಸನದಲ್ಲಿ ಸೂರ್ಯ ಚಂದ್ರ, ಈಶ್ವರ ಲಿಂಗಗಳ ಚಿತ್ರವಿದೆ. ಇದೂ ಗ್ರಾಮ ದೇವತೆ ಎಂಬ ನಂಬಿಕೆ ಗ್ರಾಮಸ್ಥರಲ್ಲಿದ್ದು ದೀಪಾವಳಿಯ ಅಮಾವಾಸ್ಯೆಯ ದಿನ ಗ್ರಾಮದ ಎಲ್ಲ ಜಾತಿಯ ಜನರೂ ಸೇರಿ ಒಟ್ಟಾಗಿ ಪೂಜೆ ಸಲ್ಲಿಸುವ ಸಂಪ್ರದಾಯವಿದೆ.ಈ ಕಲ್ಲಿಗೆ ಹಣ್ಣು ಕಾಯಿ ಮಾತ್ರ ನೈವೇದ್ಯವಾಗಿ ನೀಡುವ ರೂಢಿಯಿದ್ದು ಪ್ರಾಣಿ ಬಲಿ ಪದ್ಧತಿ ಇಲ್ಲದಿರುವುದು ವಿಶೇಷವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT