ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡೆಗಣನೆಯಲ್ಲಿ ಕಾಗಿನೆಲೆ

Last Updated 18 ನವೆಂಬರ್ 2013, 19:30 IST
ಅಕ್ಷರ ಗಾತ್ರ

ಹಾವೇರಿ ಜಿಲ್ಲೆಯ ಕಾಗಿನೆಲೆ ಎಂದ ತಕ್ಷಣ ನೆನಪಾಗುವುದು ದಾಸಶ್ರೇಷ್ಠರಲ್ಲಿ ಒಬ್ಬರಾದ ಕನಕದಾಸರು. ಇವರ ಜನ್ಮಭೂಮಿ ಇದೇ ಜಿಲ್ಲೆಯ ಶಿಗ್ಗಾವಿ ಬಳಿಯ ಬಾಡವಾದರೂ ಅವರ ಕಾವ್ಯದಲ್ಲಿ ಕಾಗಿನೆಲೆಯ ಅಣುಅಣುವೂ ಬಿಂಬಿತಗೊಂಡಿದೆ. ಕಾಗಿನೆಲೆಯ ಆದಿಕೇಶವ ಕನಕದಾಸರ ಆರಾಧ್ಯದೈವ. ಆದುದರಿಂದಲೇ ಕನಕದಾಸರ ಪ್ರತಿಯೊಂದು ಕೀರ್ತನೆಯಲ್ಲೂ ‘ಕಾಗಿನೆಲೆ ಆದಿಕೇಶವ’ ಎಂಬ ಅಂಕಿತ ಕಂಡುಬರುತ್ತದೆ. ಒಂದರ್ಥದಲ್ಲಿ ಇಲ್ಲಿಯ ಆದಿಕೇಶವ ಕನಕದಾಸರ ಉಸಿರು.

ಜಿಲ್ಲಾ ಕೇಂದ್ರದಿಂದ ಸುಮಾರು ೧೨ ಕಿ.ಮೀ. ದೂರದಲ್ಲಿರುವ ಕಾಗಿನೆಲೆ, ಕನಕದಾಸರ ಪಾದ ಸ್ಪರ್ಶದಿಂದಾಗಿಯೇ ಇತಿಹಾಸ ಪ್ರಸಿದ್ಧಿ ಪಡೆದಿದೆ. ಇವರು ಬಾಡ ಗ್ರಾಮದಿಂದ ಆದಿಕೇಶವನ ವಿಗ್ರಹವನ್ನು ತಂದು ಕಾಗಿನೆಲೆಯಲ್ಲಿ ಪ್ರತಿಷ್ಠಾಪಿಸಿದರು ಎನ್ನುತ್ತದೆ ಇತಿಹಾಸ.

ಬದಲಾದ ಪರಿಸ್ಥಿತಿ!
ದುರದೃಷ್ಟವಶಾತ್  ಇಂದು ಕಾಗಿನೆಲೆಯನ್ನು ಕೇಳುವವರೇ ಇಲ್ಲ. ಇಲ್ಲಿಯ ಐತಿಹಾಸಿಕ ಸ್ಮಾರಕಗಳು ಅವಸಾನದ ಹಾದಿ ಹಿಡಿದಿವೆ. ಹಾಗೆ ನೋಡಹೋದರೆ ಆದಿಕೇಶವ, ಲಕ್ಷ್ಮೀನರಸಿಂಹ, ಸೋಮೇಶ್ವರ, ವೀರಭದ್ರ, ಬ್ರಹ್ಮೇಶ್ವರ, ಸಂಗಮೇಶ್ವರ ಮುಂತಾದ ದೇಗುಲಗಳಿಗೆ ಪ್ರಸಿದ್ಧಿ ಪಡೆದಿದೆ ಕಾಗಿನೆಲೆ. ಆದಿಕೇಶವ ಮತ್ತು ಲಕ್ಷ್ಮೀನರಸಿಂಹ ದೇವಾಲಯಗಳು ಒಂದೇ ಪ್ರಾಂಗಣದೊಳಗಿದ್ದರೆ, ಉಳಿದ ದೇಗುಲಗಳು ಅಲ್ಲಲ್ಲಿ ಚದುರಿದಂತೆ ನೆಲೆಗೊಂಡಿವೆ. ಇದಾವುದೂ ಇಂದು ಸುಸ್ಥಿತಿಯಲ್ಲಿ ಇಲ್ಲ.

ಇಲ್ಲಿ ಕೆರೆಯೊಂದರ ದಂಡೆಯಲ್ಲಿ ಕನಕದಾಸರ ಗದ್ದುಗೆ ಇದೆ. ಕನಕದಾಸರ ಕಾಲಕ್ಕಿಂತ ಮೊದಲೇ ಕಾಗಿನೆಲೆ ಪ್ರಸಿದ್ಧವಾಗಿತ್ತು ಎಂಬುದನ್ನು ಸಾರುವ ಅನೇಕ ಪ್ರಾಚೀನ ಸ್ಮಾರಕಗಳು  ಕನಕದಾಸರ ಸಮಾಧಿಯ ಆಸುಪಾಸಿನಲ್ಲಿವೆ.

ಇಲ್ಲಿ ಕುಸಿದು ಬಿದ್ದಿರುವ ಐತಿಹಾಸಿಕ ದೇಗುಲಗಳ ಅವಶೇಷಗಳು, ಮಂಟಪಗಳು, ವೀರಗಲ್ಲುಗಳು ಹಾಗೂ ಶಾಸನಗಳು ವಿಪುಲವಾಗಿ ಕಂಡು ಬರುತ್ತವೆ. ಆದರೆ ಇವೆಲ್ಲವೂ ಗಿಡಗಂಟಿಗಳ ಮಧ್ಯೆ ಕಾಲಕಸವಾಗಿ ಹೂತು ಹೋಗುತ್ತಿವೆ!

ಕುಸುರಿ ಕೆತ್ತನೆಯಿಂದ ಕಲಾತ್ಮಕವಾಗಿ ಕಂಗೊಳಿಸುತ್ತಿರುವ ಕಲ್ಲಿನ ಕಂಬಗಳು ನಿರ್ಲಕ್ಷ್ಯಕ್ಕೆ ಗುರಿಯಾಗಿವೆ. ಇಲ್ಲಿ ಬಹುತೇಕ ಸ್ಮಾರಕಗಳು  ಕಲ್ಯಾಣದ ಚಾಲುಕ್ಯರು ಮತ್ತು ಸೇವುಣರ ಕಾಲದವು. ಇದೇ ಕಾಲಕ್ಕೆ ಸೇರಿದ ದೊಡ್ಡ ಪ್ರಮಾಣದ ಶಾಸನಗಲ್ಲುಗಳು ಇಲ್ಲಿ ಅನಾಥವಾಗಿ ಬಿದ್ದಿವೆ.

ರಾಜ್ಯ ಸರ್ಕಾರ ಕಾಗಿನೆಲೆಯ ಅಭಿವೃದ್ಧಿಗಾಗಿ ೨೦೦೬ರಲ್ಲಿ ‘ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ’ ರಚಿಸಿದೆ. ಈ ಪ್ರಾಧಿಕಾರ, ಕಾಗಿನೆಲೆಯಲ್ಲಿ ರಸ್ತೆಗಳ ಅಭಿವೃದ್ಧಿ, ನೂತನ ಸ್ಮಾರಕಗಳ ನಿರ್ಮಾಣ, ಕನಕದಾಸರ ಗದ್ದುಗೆಯ ಜಿರ್ಣೋದ್ಧಾರ ಮುಂತಾದ ಕಾಮಗಾರಿಗಳನ್ನು ಕೈಗೊಂಡಿದೆ. ಆದರೆ ಕನ್ನಡ ನಾಡಿನ ಇತಿಹಾಸ ಮತ್ತು ಭವ್ಯ ಪರಂಪರೆಯ ಮೇಲೆ ಬೆಳಕು ಚೆಲ್ಲುವ ಪ್ರಾಚೀನ  ಸ್ಮಾರಕಗಳ ಕಡೆಗೆ ಗಮನಹರಿಸುವವರೇ ಇಲ್ಲ.

ಕೋಟ್ಯಂತರ ರೂಪಾಯಿ ವೆಚ್ಚಮಾಡಿ ನೂತನವಾಗಿ ಅನೇಕ ಮಂಟಪ, ಕಮಾನು ಮತ್ತು ಸ್ಮಾರಕಗನ್ನು ನಿರ್ಮಿಸುವುದಕ್ಕಿಂತ ಅಮೂಲ್ಯವಾದ  ಪ್ರಾಚೀನ  ಸ್ಮಾರಕಗಳ ರಕ್ಷಣೆ ಬಹುಮುಖ್ಯವಲ್ಲವೇ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT