ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಳುತಿದೆಯೇ ಅರಣ್ಯ ರೋದನ

Last Updated 21 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ನಮ್ಮ ಗ್ರಾಮದ ಅರಣ್ಯ ಸಂರಕ್ಷಣೆಯ ಹಕ್ಕನ್ನು ಕಸಿದುಕೊಳ್ಳಲು ನೀವ್ಯಾರು’ ಎಂದು ಸರ್ಕಾರದ ವಿರುದ್ಧವೇ ಸಡ್ಡು ಹೊಡೆದವರು ಉತ್ತರ ಕನ್ನಡ ಜಿಲ್ಲೆಯ ಹಳಕಾರ, ಮೂರೂರು, ಕಲ್ಲಬ್ಬೆ, ಹೊಸಾಡ ಗ್ರಾಮಸ್ಥರು. ಹೈಕೋರ್ಟ್‌ವರೆಗೆ ದೂರು ಒಯ್ದು ಅರಣ್ಯದ ಮೇಲಿನ ತಮ್ಮ ಹಕ್ಕನ್ನು ಕಾಪಾಡಿಕೊಂಡವರು ಕೂಡ. ಗ್ರಾಮಸ್ಥರೇ ನಿರ್ವಹಿಸುತ್ತಿರುವ ರಾಜ್ಯದ ಎರಡೇ ಅರಣ್ಯಗಳು ಎಂಬ ಹೆಗ್ಗಳಿಕೆಗೆ ಹಳಕಾರ ಮತ್ತು ಮೂರೂರು ಸುತ್ತಲಿನ ಕಾಡುಗಳು ಪಾತ್ರವಾಗಿವೆ.

ಹಳಕಾರ ಅರಣ್ಯ ಸಮಿತಿ ತನ್ನ ಹೊಣೆಯನ್ನು ಈಗಲೂ ಗಂಭೀರವಾಗಿಯೇ ನಿಭಾಯಿಸುತ್ತಿದೆ. ಆದರೆ, ಮೂರೂರು–ಕಲ್ಲಬ್ಬೆ–ಹೊಸಾಡ ಅರಣ್ಯದ ನಿರ್ವಹಣೆಗೆ ರಚಿಸಲಾಗಿದ್ದ ಗ್ರಾಮಸ್ಥರ ಸಮಿತಿಯಲ್ಲಿ ಮೂಡಿದ ಒಡಕಿನಿಂದಾಗಿ ಸರ್ಕಾರಿ ಅಧಿಕಾರಿಗಳು ಈ ಕಾಡಿನಲ್ಲಿ ಮೂಗು ತೂರಿಸುವಂತಾಗಿದೆ.

ಅದು 1921ನೇ ಇಸವಿ. ಆಗ ಉತ್ತರ ಕನ್ನಡ ಜಿಲ್ಲೆ ಬ್ರಿಟಿಷ್ ಆಡಳಿತದ ಮುಂಬೈ ಪ್ರಾಂತ್ಯಕ್ಕೆ ಒಳಪಟ್ಟಿತ್ತು. ಕರಾವಳಿ ಭಾಗದ ಅರಣ್ಯಗಳಿಂದ ಸರ್ಕಾರಕ್ಕೆ ನಿರೀಕ್ಷಿತ ಆದಾಯ ಬರುತ್ತಿಲ್ಲ ಎಂಬ ಕಾರಣಕ್ಕೆ ಅದನ್ನು ಏನು ಮಾಡಬಹುದು ಎಂಬ ವಿಷಯವಾಗಿ ಅಧ್ಯಯನ ಮಾಡಿ ವರದಿ ನೀಡಲು ಜಿ.ಎಫ್.ಎಸ್ ಕಾಲಿನ್ ಎನ್ನುವ ಫಾರೆಸ್ಟ್ ಸೆಟಲ್‌ಮೆಂಟ್ ಅಧಿಕಾರಿಯನ್ನು ನೇಮಕ ಮಾಡಲಾಗಿತ್ತು.

ಕರಾವಳಿಯ ಅರಣ್ಯ ಪ್ರದೇಶದಲ್ಲಿ ಓಡಾಡಿ ಅಧ್ಯಯನ ನಡೆಸಿದ ಕಾಲಿನ್, ‘ಸರ್ಕಾರಕ್ಕೆ ಕಡಿಮೆ ಆದಾಯ ತರುವ ಅರಣ್ಯವನ್ನು ಜನರೇ ಸಂರಕ್ಷಿಸಿ ಅದರ ಉತ್ಪನ್ನ ಬಳಕೆ ಮಾಡಿ ಕೊಳ್ಳುತ್ತಿದ್ದಾರೆ. ಆದ್ದರಿಂದ ಅವುಗಳ ಉಸ್ತುವಾರಿಯನ್ನು ಅವರಿಗೇ ವಹಿಸುವುದು ಉತ್ತಮ’ ಎಂಬ ವರದಿ ನೀಡಿದ್ದರು.

ಎಲ್ಲ ಊರುಗಳಲ್ಲಿ ವಿಲೇಜ್ ಫಾರೆಸ್ಟ್ ಪಂಚಾಯತ್‌ (ಗ್ರಾಮ ಅರಣ್ಯ ಪಂಚಾಯ್ತಿ) ರಚಿಸಿ ಅವುಗಳನ್ನು ಜನರಿಗೆ ಹಸ್ತಾಂತರ ಮಾಡುವ ಹೊಣೆಯನ್ನು ಆ ಪಂಚಾಯ್ತಿಗಳಿಗೇ ವಹಿಸುವಂತೆ ವರದಿಯಲ್ಲಿ ಶಿಫಾರಸು ಮಾಡಲಾಗಿತ್ತು. ಕಾಲಿನ್ ಅವರೇ ಗ್ರಾಮ ಅರಣ್ಯ ಪಂಚಾಯ್ತಿಯ ಉಪನಿಯಮಗಳನ್ನೂ ರೂಪಿಸಿದ್ದರು.

ಸ್ವಾತಂತ್ರ್ಯ ಪೂರ್ವದಿಂದಲೂ ಬೆಂಕಿ ಪೊಟ್ಟಣ, ಪ್ಲೈವುಡ್, ಪ್ಯಾಕಿಂಗ್ ಮುಂತಾದ ಕೈಗಾರಿಕೆಗಳಿಗೆ ಕಾಡಿನ ಕಟ್ಟಿಗೆಯನ್ನು ಅತಿ ಕಡಿಮೆ ಬೆಲೆಗೆ, ಅಂದರೆ ಟನ್‌ಗೆ 25 ಪೈಸೆಯಿಂದ 1 ರೂಪಾಯಿವರೆಗೆ ಲೀಸ್ ಮೇಲೆ ಕಡಿದುಕೊಂಡು ಹೋಗಲು ಸರ್ಕಾರ ಅನುಮತಿ ನೀಡುತ್ತಿತ್ತು. ಸರ್ಕಾರದ ಈ ಧೋರಣೆಗೆ ಜನ ಕ್ರಮೇಣ ವಿರೋಧ ವ್ಯಕ್ತಪಡಿಸಿದ್ದರು.

‘ಕಾನು’ ಪ್ರದೇಶದಲ್ಲಿರುವ ಹೆಚ್ಚಿನ ಕಟ್ಟಿಗೆಯೆಲ್ಲ ಹೀಗೆ ಮರದ ಕೈಗಾರಿಕೆಗಳಿಗೆ ಬಲಿಯಾಗತೊಡಗಿದಾಗ ಎಚ್ಚೆತ್ತು ಕೊಳ್ಳುವ ಜನರ ಸಂಖ್ಯೆ ಕೂಡ ಹೆಚ್ಚಾಯಿತು. ಜನರ ಪ್ರತಿಭಟನೆ ಸರ್ಕಾರಕ್ಕೆ ಕಿರಿಕಿರಿ ಉಂಟುಮಾಡಿದಾಗ 1972ರಲ್ಲಿ ಕರ್ನಾಟಕ ಅರಣ್ಯ ಕಾಯ್ದೆ ಆಧಾರದ ಮೇಲೆ ಎಲ್ಲ ಅರಣ್ಯ ಪಂಚಾಯ್ತಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರ ಮಾಡುವಂತೆ ರಾಜ್ಯ ಸರ್ಕಾರ ಆದೇಶಿಸಿತ್ತು. ಆದೇಶಕ್ಕೆ ಹೆದರಿ ಎಲ್ಲ ಅರಣ್ಯ ಪಂಚಾಯ್ತಿ ಸಮಿತಿಯವರು ತಮ್ಮ ಅರಣ್ಯವನ್ನು ಸರ್ಕಾರಕ್ಕೆ ಹಸ್ತಾಂತರಿಸಿದ್ದರು.

ಕುಮಟಾ ತಾಲ್ಲೂಕಿನ ಹಳಕಾರ ಹಾಗೂ ಮೂರೂರು–ಕಲ್ಲಬ್ಬೆ–ಹೊಸಾಡ ಅರಣ್ಯ ಪಂಚಾಯ್ತಿ ಸಮಿತಿಯವರು ಹಸ್ತಾಂತರಕ್ಕೆ ವಿರೋಧಿಸಿದ್ದರು. ಅಷ್ಟೇ ಅಲ್ಲ ಹೈಕೋರ್ಟ್‌ನಲ್ಲಿ ಸರ್ಕಾರದ ಆದೇಶದ ವಿರುದ್ಧ ಹೋರಾಟ ಮಾಡಿ ತಮ್ಮ ಅರಣ್ಯ ಪಂಚಾಯ್ತಿ ಉಳಿಸಿಕೊಂಡಿದ್ದರು. ಮುಂದಿನ ಹತ್ತಿಪ್ಪತ್ತು ವರ್ಷಗಳಲ್ಲಿ ಈ ಎರಡು ಅರಣ್ಯ ಪಂಚಾಯ್ತಿಗಳು ಜನರ ಸಹಭಾಗಿತ್ವದಲ್ಲಿ ಹೇಗೆ ಅರಣ್ಯ ಬೆಳೆಸಬಹುದು ಎನ್ನುವುದಕ್ಕೆ ಮಾದರಿ ಆಗಿದ್ದವು. ಈ ಹತ್ತಿಪ್ಪತ್ತು ವರ್ಷಗಳಲ್ಲಿ ಅರಣ್ಯ ಇಲಾಖೆಗೆ ಹಸ್ತಾಂತರಗೊಂಡಿದ್ದ ಅರಣ್ಯಗಳು ಸಂಪೂರ್ಣ ನಾಶ ಹೊಂದಿದ್ದವು.

ಗ್ರಾಮ ಅರಣ್ಯ ಪಂಚಾಯ್ತಿ ಎನ್ನುವ ಉದ್ದದ ಹೆಸರು ಕಿರಿದಾಗಿ ‘ಗ್ರಾಮ ಅರಣ್ಯ’ ಎಂದೇ ಸ್ಥಳೀಯರ ಬಾಯಿಯಲ್ಲಿ ಪ್ರಸಿದ್ಧಿ. 234 ಎಕರೆ ಅರಣ್ಯ ಪ್ರದೇಶ ಹೊಂದಿರುವ ಕುಮಟಾ ಪಟ್ಟಣಕ್ಕೆ ಸಮೀಪದ ಹಳಕಾರ ಗ್ರಾಮ ಅರಣ್ಯಕ್ಕೆ ವ್ಯವಸ್ಥಿತ ಆಡಳಿತ ಸಮಿತಿ ಇದೆ. ಕುಮಟಾ ಪಟ್ಟಣದ ಆಹ್ಲಾದಕರ ವಾತಾವರಣಕ್ಕೆ ಇದರ ಕೊಡುಗೆ ಅಪಾರ.

ಮೂರು ಸಾವಿರ ಎಕರೆ ಅರಣ್ಯ ಪ್ರದೇಶ ಹೊಂದಿರುವ ಮೂರೂರು–ಕಲ್ಲಬ್ಬೆ–ಹೊಸಾಡ ಗ್ರಾಮ ಅರಣ್ಯ ಆಡಳಿತ ಸಮಿತಿ ಸುಮಾರು 20 ವರ್ಷಗಳ ಹಿಂದೆಯೇ ವಜಾಗೊಂಡಿದೆ. ಅದಕ್ಕೆ ಈಗ ಸ್ಥಳೀಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆಡಳಿತಾಧಿಕಾರಿಯಾಗಿ ನೇಮಕಗೊಂಡಿದ್ದಾರೆ.

ಗ್ರಾಮ ಅರಣ್ಯ ಉಪನಿಯಮದ ಪ್ರಕಾರ ಅದು ಜಿಲ್ಲಾಧಿಕಾರಿ ಅಧೀನದಲ್ಲಿ ಕಾರ್ಯ ನಿರ್ವಹಿಸಬೇಕು. ಸಂಸ್ಥೆಯ ವ್ಯಾಪ್ತಿಯಲ್ಲಿ ಬರುವ ಕೃಷಿಕರು, ದನಕರು ಹೊಂದಿರುವವರು ಅದರ ಸದಸ್ಯರು. ಅವರಿಗೆ ಮತದಾನ ಹಕ್ಕು ಸಹ ಇದೆ. ಜಿಲ್ಲಾಧಿಕಾರಿ ಆದೇಶದಂತೆ ತಹಶೀಲ್ದಾರ್ ಅವರು ಪ್ರತೀ ಮೂರು ವರ್ಷಗಳಿಗೊಮ್ಮೆ ಚುನಾವಣೆ ನಡೆಸಿ ಆಡಳಿತ ಸಮಿತಿ ರಚಿಸಬೇಕು.

1972ರ ನಂತರ ಮೂರೂರು, ಕಲ್ಲಬ್ಬೆ, ಬೊಗರಿಬೈಲ, ಕುಡುವಳ್ಳಿ, ಹೋಸಾಡ ಗ್ರಾಮಗಳನ್ನೊಳಗೊಂಡ ‘ಮೂರೂರು–ಕಲ್ಲಬ್ಬೆ–ಹೊಸಾಡ ಗ್ರಾಮ ಅರಣ್ಯ ಪಂಚಾಯ್ತಿ’ಗೆ ಹೊಸ ಆಡಳಿತ ಸಮಿತಿ ರಚನೆಗೊಂಡು ವಿನಾಯಕ ಭಟ್ಟ ತೊಂಡೆಕೆರೆ ಅದರ ಅಧ್ಯಕ್ಷರಾದರು. ಗ್ರಾಮ ಅರಣ್ಯ ಪಂಚಾಯ್ತಿ ಕಾರ್ಯನಿರ್ವಹಿಸಲು ಒಂದು ಕಚೇರಿ, ಒಬ್ಬ ಕಾರ್ಯದರ್ಶಿ, ಅರಣ್ಯ ಕಾವಲುಗಾರನನ್ನು ನೇಮಕ ಮಾಡಿಕೊಳ್ಳಲಾಯಿತು. ಅರಣ್ಯದ ಉತ್ಪನ್ನದಿಂದ ಸಿಬ್ಬಂದಿಗೆ ವೇತನ ನೀಡುತ್ತಿದ್ದರು.

ಸಾಗುವಾನಿ, ನಂದಿ, ಮತ್ತಿ, ಕಣಗಲ, ಹೊನಗಲು, ಧೂಳೆಲೆ, ಬೆಟ್ಟೊನ್ನೆ, ನೇರಲು, ರಾಮಪತ್ರೆ. ಧೂಪ, ಉಪ್ಪಾಗೆ, ಸುರಹೊನ್ನೆ, ಕುರುಡುನಂದಗಾ, ಹೊಳಗೆರೆ, ಸುರಗಿ, ಶಿವಣಿ, ಬರಣಗಿ, ಸಾಗಡಿ, ಕಿಂದಾಳ, ಹೆಬ್ಬಲಸು, ದಾಲ್ಚಿನ್ನಿ, ಲವಂಗ ಹೀಗೆ ಇಪ್ಪತ್ತಕ್ಕೂ ಹೆಚ್ಚಿನ ಜಾತಿಯ ಮರಗಳಿದ್ದವು. ಉಪ್ಪಾಗೆ, ರಾಮಪತ್ರೆ, ದಾಲ್ಚಿನ್ನಿ, ಕಾಳು ಮೆಣಸು, ಸುರಗಿ ಮೊಗ್ಗುಗಳಿಂದ ಆದಾಯ ಬರುತ್ತಿತ್ತು. ಪ್ರತೀವರ್ಷ ಈ ಉತ್ಪನ್ನಗಳನ್ನು ಸಂಗ್ರಹಿಸಲು ಹರಾಜಿನ ಮೂಲಕ ಸಾರ್ವಜನಿಕರಿಗೆ ಅವಕಾಶ ನೀಡುತ್ತಿತ್ತು. ಹರಾಜು ಮೊತ್ತವನ್ನು ಅವರು ಗ್ರಾಮ ಅರಣ್ಯ ಪಂಚಾಯ್ತಿಗೆ ಭರಣ ಮಾಡಬೇಕಿತ್ತು.

‘ಸಾಣಕಲ್ಲು ಅರೆ’ ಎಂದೇ ಪ್ರಸಿದ್ಧವಾದ ಮನೆ ಕಟ್ಟಲು ಬೇಕಾದ ಅತ್ಯುತ್ತಮ ಗುಣಮಟ್ಟದ ಚಿರೆಕಲ್ಲು (ಕೆಂಪು ಕಲ್ಲು) ಗಣಿಗಳು ಇಲ್ಲಿದ್ದವು. ಈ ಪಂಚಾಯ್ತಿ ಸದಸ್ಯರು ನಿಗದಿತ ಶುಲ್ಕ ಪಾವತಿಸಿ ತಮ್ಮ ಮನೆ ಕಟ್ಟಿಕೊಳ್ಳಲು ಕಲ್ಲು ತೆಗೆದುಕೊಳ್ಳಬಹುದಿತ್ತು. ಹಾಗೆಯೇ ಉತ್ತಮ ಗುಣಮಟ್ಟದ ಕಟ್ಟಿಗೆ ಕೂಡ ಇದೇ ಮಾದರಿಯಲ್ಲಿ ಸದಸ್ಯರಿಗೆ ಸಿಗುತ್ತಿತ್ತು.

ಗ್ರಾಮ ಅರಣ್ಯ ಆಡಳಿತ ಸಮಿತಿ ಇದ್ದರೂ ಅಲ್ಲಲ್ಲಿ ಸರ್ಕಾರದಿಂದ ಗುತ್ತಿಗೆ ಪಡೆದ ಪ್ಯಾಕಿಂಗ್ ಉದ್ಯಮ ನಡೆಸುವ ಬೆಳಗಾವಿಯ ದೊಡ್ಡಣ್ಣವರ ಕಂಪೆನಿ, ಬೆಂಕಿ ಪೊಟ್ಟಣ ತಯಾರಿಸುವ ವಿಮ್ಕೋ ಕಂಪೆನಿ ಅರಣ್ಯದಿಂದ ಕಟ್ಟಿಗೆ ತೆಗೆಯುವುದನ್ನು ಮುಂದುವರಿಸಿದ್ದವು. ಇಂಥ ಉದ್ಯಮಗಳಿಗೆ ಜಿಲ್ಲೆಯಲ್ಲಿ ಸರ್ಕಾರ ಅತಿ ಕಡಿಮೆ ದರದಲ್ಲಿ ಹಸಿ ಮರಗಳನ್ನು ಕಡಿಯಲು ಅನುಮತಿ ನೀಡಿರುವುದನ್ನು ಪ್ರತಿಭಟಿಸಿ 80ರ ದಶಕದಲ್ಲಿ ಶಿರಸಿಯಲ್ಲಿ ಸುಂದರಲಾಲ್ ಬಹುಗುಣ ನೇತೃತ್ವದಲ್ಲಿ ಅಪ್ಪಿಕೋ ಚಳವಳಿ ಆರಂಭವಾಯಿತು.

ಮೂಲತಃ ಮೂರೂರಿನವರಾಗಿದ್ದು, ಶಿರಸಿ ಕಾಲೇಜಿನಲ್ಲಿ ಪ್ರಾಚಾರ್ಯರಾಗಿದ್ದ ಪರಿಸರ ಪ್ರೇಮಿ ದಿವಂಗತ ಎಲ್.ಟಿ. ಶರ್ಮ ಅವರ ನೇತೃತ್ವದಲ್ಲಿ ಹೊಸಾಡ–ಮೂರೂರು–ಕಲ್ಲಬ್ಬೆ ಗ್ರಾಮ ಅರಣ್ಯದಲ್ಲಿ ಅದೇ ಮಾದರಿಯ ಪ್ರತಿಭಟನಾ ಮೆರವಣಿಗೆ ನಡೆಯಿತು. ಕೆಲ ವರ್ಷಗಳ ಹಿಂದೆ ಸರ್ಕಾರದ ವಿರುದ್ಧ ಹೋರಾಡಿ ಅರಣ್ಯ ಉಳಿಸಿಕೊಂಡಿದ್ದ ವಿನಾಯಕ ಭಟ್ಟ ತೊಂಡೆಕೆರೆ, ಜಿ.ಕೆ. ಭಟ್ಟ ಮೂರೂರು, ಎಸ್.ಕೆ. ಭಟ್ಟ ತೊಂಡೆಕೆರೆ, ವಿಶ್ವನಾಥ ಭಟ್ಟ ಕಲ್ಲಬ್ಬೆ ಈ ಹೋರಾಟದಲ್ಲೂ ತೊಡಗಿಸಿಕೊಂಡಿದ್ದರು.

ಅರಣ್ಯ ಇಲಾಖೆ ಆಗಾಗ ಹಸ್ತಕ್ಷೇಪ ಮಾಡಿದಾಗ ‘ಗ್ರಾಮ ಅರಣ್ಯಕ್ಕೆ ಪ್ರತ್ಯೇಕ ಸಮಿತಿ ಇದೆ. ನೀವು ಗಿಡ ನೆಟ್ಟು ಬೆಳೆಸಲು ನಮಗೆ ಸಹಾಯ ಮಾಡಿ’ ಎಂದು ಸಮಿತಿಯು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿತು. ಇದರಿಂದ ಅರಣ್ಯ ಇಲಾಖೆ – ಅರಣ್ಯ ಪಂಚಾಯ್ತಿ ನಡುವೆ ಅಂತರ ಉಂಟಾಯಿತು. ಮೂರು ಸಾವಿರ ಎಕರೆ ಅರಣ್ಯವನ್ನು ಇಬ್ಬರು, ಮೂವರು ಕಾವಲುಗಾರರಿಂದ ಕಾಯುವುದು ಕಷ್ಟ ಸಾಧ್ಯವಾಗಿತ್ತು. ಇದು ಅರಣ್ಯದಲ್ಲಿ ಮರಗಳ್ಳರಿಗೆ ಅನುಕೂಲಕರವಾಗಿ ಪರಿಣಮಿಸಿತು.

ಇದೇ ಸಂದರ್ಭದಲ್ಲಿ ಸಮಿತಿಯ ಆಡಳಿತವೂ ಕುಸಿಯುತ್ತಾ ಹೋಯಿತು. ಅರಣ್ಯ ಪಂಚಾಯ್ತಿಗಾಗಿ ಹೋರಾಟ ಮಾಡಿದ್ದ ನಿಜವಾದ ಕಳಕಳಿ ಹೊಂದಿದವರು ದೂರವಾಗತೊಡಗಿದರು. ಆಡಳಿತ ಮಂಡಳಿ ಪದಾಧಿಕಾರಿಗಳೇ ಅರಣ್ಯದಿಂದ ಮರಗಳನ್ನು ಕಡಿದು ಮಾರಾಟ ಮಾಡಿ ಸ್ವಂತಕ್ಕೆ ಲಾಭ ಮಾಡಿಕೊಳ್ಳತೊಡಗಿದರು. ಆ ಸಮಿತಿ ಮುಂದೆ ಬೇರೆಯವರಿಗೆ ಅಧಿಕಾರ ಬಿಟ್ಟುಕೊಡುವುದಕ್ಕೂ ಒಪ್ಪಲಿಲ್ಲ.

ಇದನ್ನು ಕಂಡು ಸ್ಥಳೀಯರು ಆಡಳಿತ ಸಮಿತಿ ವಿರುದ್ಧ ಜಿಲ್ಲಾಧಿಕಾರಿಗೆ ದೂರಿದರು. ಜಿಲ್ಲಾಧಿಕಾರಿ ಅವರು ಚುನಾಯಿತ ಸಮಿತಿಯನ್ನು ರದ್ದುಪಡಿಸಿ ಆಡಳಿತಾಧಿಕಾರಿಯವರ ನೇಮಕ ಮಾಡಿದರು. ಇದು ಗ್ರಾಮ ಅರಣ್ಯಕ್ಕೆ ಬಿದ್ದ ಎರಡನೇ ಹೊಡೆತ. ಅಲ್ಲಿಂದ ಇಲ್ಲಿಯವರೆಗೂ ಮತ್ತೆ ಚುನಾಯಿತ ಸಮಿತಿ ಬರಲಿಲ್ಲ. ಅರಣ್ಯ ಇಲಾಖೆಯೂ ಅದರ ರಕ್ಷಣೆಯನ್ನು ಅಧಿಕೃತವಾಗಿ ಮಾಡುತ್ತಿಲ್ಲ.

ಮರದ ಉದ್ಯಮ ನಡೆಸುವ ಅನೇಕ ಕೈಗಾರಿಕೆಗಳು ದಶಕಗಳ ಕಾಲ ಗ್ರಾಮ ಅರಣ್ಯದಲ್ಲಿರುವ ಹಸಿ ಮರಗಳನ್ನು ಕಡಿದು ಬರಿದಾಗಿಸಿದ್ದರೂ ಅಲ್ಲಿ ಅನೇಕ ಜಾತಿಯ ಅಪರೂಪದ ಮರಗಳು ಇತ್ತೀಚಿನವರೆಗೂ ಇದ್ದವು. ಇಲ್ಲಿ ಹೇರಳವಾಗಿ ಬೆಳೆಯುವ ಕಾಡು ಅಣಬೆ ಸ್ಥಳೀಯರಿಗೆ ಮಳೆಗಾಲದಲ್ಲಿ ಪೌಷ್ಟಿಕ ಆಹಾರವಾಗಿತ್ತು.

ಗ್ರಾಮ ಅರಣ್ಯಕ್ಕೆ ಆಡಳಿತಾಧಿಕಾರಿ ನೇಮಕಗೊಂಡು ಸುಮಾರು ಮೂವತ್ತು ವರ್ಷಗಳು ಕಳೆದಿವೆ. ಕಾಡಿನಲ್ಲಿರುವ ಮರ, ಕೆಂಪು ಕಲ್ಲನ್ನು ಸ್ಥಳೀಯರು, ಹೊರಗಿನವರು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಅದಕ್ಕೆ ಹೊಸ ಸಮಿತಿ ರಚಿಸಿ ಮತ್ತೆ ಜೀವ ತುಂಬುವ ಕೆಲಸಕ್ಕೆ ಮಾತ್ರ ಯಾರೂ ಮುಂದಾಗುತ್ತಿಲ್ಲ.

‘ಮೂರೂರು–ಕಲ್ಲಬ್ಬೆ–ಹೊಸಾಡ ಗ್ರಾಮ ಅರಣ್ಯ ಸಮಸ್ಯೆಗಳ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ’ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಹಿರಿಯ ವಿಜ್ಞಾನಿ ಹಾಗೂ ಸಸ್ಯಶಾಸ್ತ್ರ ನಿವೃತ್ತ ಪ್ರಾಧ್ಯಾಪಕ ಡಾ. ಎಂ.ಡಿ. ಸುಭಾಶ್ಚಂದ್ರ ತಿಳಿಸುತ್ತಾರೆ.

‘ಹಿಂದೆ ಸರ್ಕಾರದ ವಿರುದ್ಧ ಹೋರಾಡಿ ಅರಣ್ಯವನ್ನು ಉಳಿಸಿಕೊಳ್ಳಲಾಗಿತ್ತು. ಮಾಧವ ಗಾಡ್ಗೀಳ್‌ ಸಹ ನಮ್ಮ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಈಗ ಹೊಸ ಸಮಿತಿ ರಚಿಸಿ ಅದಕ್ಕೆ ಮರು ಜೀವ ನೀಡಬಹುದು’ ಎನ್ನುವುದು ಜಿ.ಕೆ. ಭಟ್ಟ ಅವರ ಸಲಹೆ.

ಕತ್ತಿ, ಕೊಡಲಿ ಒಯ್ಯಲು ಅನುಮತಿಯಿಲ್ಲ
ಬ್ರಿಟಿಷ್‌ ಅಧಿಕಾರಿ ಕಾಲಿನ್‌ ರೂಪಿಸಿದ ಉಪನಿಯಮಗಳ ಪ್ರಕಾರ ಗ್ರಾಮಸ್ಥರಿಗೆ ಅರಣ್ಯ ಪಂಚಾಯ್ತಿ ಸದಸ್ಯತ್ವ ಕಡ್ಡಾಯ. ಅವರು ಅರಣ್ಯ ಪ್ರವೇಶಿಸುವಾಗ ಕತ್ತಿ, ಕೊಡಲಿ, ಗರಗಸದಂತಹ ಯಾವುದೇ ಆಯುಧ ಒಯ್ಯುವಂತಿಲ್ಲ. ಕೈಯಲ್ಲಿ ಮುರಿದುಕೊಂಡು ಬರಲು ಸಾಧ್ಯವಿರುವಷ್ಟು ಒಣ ಜಿಗ್ಗು ಸೌದೆ (ಒಣ ಪುರಲೆ) ಮಾತ್ರ ತರಬಹುದು. ಕಾಡಿನಲ್ಲಿ ಬಿದ್ದ ದರಕು ಸಂಗ್ರಹಿಸಿ (ಒಣಗಿದೆಲೆ) ತರಬಹುದು.

ಹಸಿ ಟೊಂಗೆ ಕಡಿಯುವಂತಿಲ್ಲ. ಕಾಡಿನ ಉತ್ಪನ್ನಗಳಾದ ರಾಮಪತ್ರೆ, ಸುರಗಿ ಮೊಗ್ಗು, ಉಪ್ಪಾಗೆ, ದಾಲ್ಚಿನ್ನಿ, ಲವಂಗ, ವಾಟೆಕಾಯಿ, ಮುರುಗಲ ಕಾಯಿ ಸಂಗ್ರಹಿಸಲು ಸಮಿತಿ ಹರಾಜು ಮೂಲಕ ನಿರ್ದಿಷ್ಟ ವ್ಯಕ್ತಿಗಳಿಗೆ ಅವಕಾಶ ನೀಡಬೇಕು. ಒಣ ಕಟ್ಟಿಗೆ ಬೇಕಿದ್ದ ಸದಸ್ಯರು ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು.

ಸಮಿತಿಯೇ ಒಣ ಮರಗಳನ್ನು ಗುರುತಿಸಿ ಅವುಗಳನ್ನು ಕಡಿದು ಆದ್ಯತೆ ಮೇರೆಗೆ, ನಿರ್ದಿಷ್ಟಪಡಿಸಿದ ಶುಲ್ಕದೊಂದಿಗೆ ಸದಸ್ಯರಿಗೆ ನೀಡಬೇಕು. ಅರಣ್ಯದಲ್ಲಿ ಗಿಡ ನೆಡುವಾಗ, ಶ್ರಮದಾನ ಮಾಡುವಾಗ ಸದಸ್ಯರ ಸಹಭಾಗಿತ್ವ ಕಡ್ಡಾಯವಾಗಿರಬೇಕು.

ಈ ಅರಣ್ಯದಲ್ಲಿ ‘ಕಾನು’ ಎಂದು ಕರೆಯಲ್ಪಡುವ ವಿಶೇಷ ಜಾತಿಯ ಮರಗಳುಳ್ಳ ಹಚ್ಚ ಹಸಿರು ಕಾಡು, ದೇವರ ಕಾಡು ಸಹ ಸೇರಿದ್ದವು. ಕಾಲಿನ್ ಅವರು ಅರಣ್ಯ ಪಂಚಾಯ್ತಿ ವ್ಯವಸ್ಥೆ ಮೂಲಕ ಜನರಿಗೆ ಅರಣ್ಯವನ್ನು ಹಸ್ತಾಂತರಿಸಿದ್ದರು. ಮುಂದೆ ಜನರು ಅದು ಅರಣ್ಯ ಅಲ್ಲ, ತಮ್ಮ ತೋಟ ಎನ್ನುವಂತೆ ಜತನದಿಂದ ಸಂರಕ್ಷಿಸಿ ಅದರ ಉತ್ಪನ್ನ ಬಳಕೆ ಮಾಡಿಕೊಳ್ಳುತ್ತಾ ಬಂದಿದ್ದರು.


ಕಾಡು ಅಣಬೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT