ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮ ಸಾಮರಸ್ಯಕ್ಕೆ ಮೇಲ್ಪಂಕ್ತಿ

Last Updated 3 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಕೋಮು ಸಾಮರಸ್ಯ, ಧರ್ಮ ಸಮದೃಷ್ಟಿ ಇತ್ಯಾದಿಗಳ ಬಗ್ಗೆ ಎಷ್ಟೇ ತರಬೇತಿ ಮತ್ತು ನಿರಂತರ ಉಪದೇಶ ನೀಡಿದರೂ ಅದು ಕಾರ್ಯರೂಪಕ್ಕೆ ಬರುವುದು ಕಷ್ಟಸಾಧ್ಯ. ಆದರೆ ಇಂತಹ ಮನೋಭಾವಗಳು ಜನರ ಮನಸ್ಸಿನಲ್ಲಿ ತಂತಾನೇ ಬಂದರೆ ಅದು ವ್ರತದಂತೆ ಮುಂದುವರೆಯುತ್ತದೆ.

ಇಂತಹ ಕೋಮು ಸಾಮರಸ್ಯದ ಮೊಹರಂ ಹಬ್ಬದ ಆಚರಣೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಹೂವಿನಕೋಣೆಯಲ್ಲಿ ಪ್ರತಿ ವರ್ಷ ನಡೆಯುತ್ತದೆ.

ಹೂವಿನಕೋಣೆಯ ಗ್ರಾಮಸ್ಥರು ಮೊಹರಂ ಹಬ್ಬವನ್ನು ತಮ್ಮ ಧರ್ಮದ ಉಳಿದ ಹಬ್ಬಗಳಿಗಿಂತ ಹೆಚ್ಚು ವೈಭವ ಮತ್ತು ಉತ್ಸಾಹಗಳಿಂದ ನಡೆಸುತ್ತಾರೆ.

ಈ ಗ್ರಾಮದಲ್ಲಿ 70ಕ್ಕೂ ಅಧಿಕ ಮನೆಗಳಿವೆ. ಹಿಂದೂ ಮತದ ಬೋವಿ ಜನಾಂಗದವರೇ ಅತ್ಯಧಿಕವಾಗಿರುವ ಈ ಗ್ರಾಮದಲ್ಲಿ ಕೇವಲ ಒಂದೇ ಒಂದು ಮುಸ್ಲಿಂ ಕುಟುಂಬವಿದೆ. ಮೊಹರಂ ಹಬ್ಬದ ಸಂದರ್ಭದಲ್ಲಿ ಇಡೀ ಗ್ರಾಮದವರೆಲ್ಲ ಸೇರಿ ಹಬ್ಬ ಆಚರಿಸುತ್ತಾರೆ. ಈ ಗ್ರಾಮದಲ್ಲಿ ಅಲಾಬಿ ದೇವರಿದ್ದು , ಮೊಹರಂ ಸಂದರ್ಭದಲ್ಲಿ ಈ ದೇವರನ್ನು ಶ್ರದ್ಧಾ-ಭಕ್ತಿಗಳಿಂದ ಪೂಜಿಸಲಾಗುತ್ತದೆ.

ಈ ದೇವರು ಹೂವಿನಕೋಣೆ ಗ್ರಾಮದಲ್ಲಿ ಬಂದು ನೆಲೆಯಾದ ಬಗ್ಗೆ ಅಪರೂಪದ ಘಟನೆ ನಡೆದಿತ್ತು ಎನ್ನುವ ಐತಿಹ್ಯವಿದೆ. ಸುಮಾರು 250- 300 ವರ್ಷಗಳ ಹಿಂದೆ ಗ್ರಾಮದಲ್ಲಿರುವ ಹಿರೇಕೆರೆ ಎಂಬ ಕೆರೆಗೆ ಗ್ರಾಮದ ಮೂರ್ನಾಲ್ಕು ಜನ ತಮ್ಮ ಜಾನುವಾರುಗಳ ಮೈ ತೊಳೆಸಲು ಹೋದಾಗ ‘ನಾನೂ ಬರುತ್ತೇನೆ, ನಾನೂ ಬರುತ್ತೇನೆ’ ಎಂದು ಕೂಗಿ ಕರೆದಂತಾಯಿತು. ಅದರಲ್ಲಿ ಒಬ್ಬಾತ ಧೈರ್ಯಮಾಡಿ ಶಬ್ದ ಬಂದ ದಿಕ್ಕಿಗೆ ಹೊರಳಿದಾಗ ಹಸ್ತದ ರೀತಿಯ ದೇವರ ಮೂರ್ತಿ ಎದ್ದು ಬಂತು. ಅದನ್ನು ತಂದು ತಮ್ಮ ಮನೆಯ ಆವರಣದಲ್ಲಿರಿಸಿ ಪೂಜಿಸಲಾರಂಭಿಸಿದ. ವಾರಕ್ಕೊಮ್ಮೆ ಅದನ್ನು ಪೂಜಿಸುತ್ತಾ ಬಂದು ಮೊಹರಂ ಹಬ್ಬದಲ್ಲಿ ವಿಶೇಷ ಪೂಜೆ ಸಲ್ಲಿಸುವಂತೆ ಸೂಚನೆಯಾಯಿತು ಎನ್ನಲಾಗುತ್ತದೆ.

ಅಂದಿನಿಂದ ಈವರೆಗೂ ಮೊಹರಂ ಹಬ್ಬವನ್ನು ವೈಭವದಿಂದ ಆಚರಿಸಲಾಗುತ್ತದೆ. ದೇವರನ್ನು ಕೆರೆಯಿಂದ ಕರೆತಂದ ಕುಟುಂಬಸ್ಥರಾದ ಹಾಲಪ್ಪ ಮತ್ತು ಚಿದಂಬರ ಇವರು ಈಗ ಈ ದೇವಾಲಯದ ಅಧ್ಯಕ್ಷ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಸಾಂಪ್ರದಾಯಿಕ ಪೂಜಾ ವಿಧಿಗಳು ಯಥಾವತ್ತಾಗಿ ನಡೆಯುವಂತೆ ಮಾರ್ಗದರ್ಶನ ನೀಡುತ್ತಿದ್ದಾರೆ.

ಕತ್ತಲೆ ರಾತ್ರಿಯ ವೈಭವ
ಹಬ್ಬದ ದಿನ ಮುಂಚೆ ಕತ್ತಲೆ ರಾತ್ರಿ ಆಚರಣೆ ನಡೆಯುತ್ತದೆ. ದೇವರ ಮೂರ್ತಿಯನ್ನು ಹೊತ್ತು ಸಾಗಲಾಗುತ್ತದೆ. ಜೊತೆಗೆ ‘ನಿಶಾನೆ ಗಳ’ ಎಂಬ ವಿಶೇಷವಾದ ಕೋಲನ್ನು ಹೂವಿನಿಂದ ಅಲಂಕರಿಸಿಕೊಂಡು ಮನೆ ಮನೆಗೆ ಸಾಗಲಾಗುತ್ತದೆ. ಆಯಾ ಮನೆಯವರು ನೀಡಿದ ಅಕ್ಕಿ, ಬೇಳೆ, ಕಾಯಿ, ದುಡ್ಡು ಇತ್ಯಾದಿಗಳನ್ನು ಸಂಗ್ರಹಿಸುತ್ತಾ ಸಾಗಲಾಗುತ್ತದೆ. ಮನೆಗೆ ಬಂದ ದೇವರ ಉತ್ಸವಕ್ಕೆ ಪ್ರತಿ ಮನೆಯವರೂ ಶ್ರದ್ಧೆಯಿಂದ ಪೂಜಿಸಿ ಕಾಣಿಕೆ ಸಮರ್ಪಿಸುತ್ತಾರೆ.

ರಾತ್ರಿಯಿಡೀ ನಡೆಯುವ ಈ ಉತ್ಸವ ಬೆಳಗಿನ ಜಾವದ ಸುಮಾರಿಗೆ ದೇವರ ಗುಡಿ ತಲುಪುತ್ತದೆ. ಅಲ್ಲಿ ಹರಕೆ ಹೊತ್ತ ಭಕ್ತರು ಮತ್ತು ದೇವರ ಮೂರ್ತಿ ಹೊತ್ತವರು, ನಿಶಾನೆ ಗಳ ಹಿಡಿದವರು ಕೆಂಡಹಾಯುತ್ತಾರೆ. ಹಬ್ಬದ ದಿನ ದೇವರನ್ನು ಮತ್ತು ನಿಶಾನೆ ಗಳವನ್ನು ಹೊರುವವರು ಮೊಹರಂ ಹಬ್ಬಕ್ಕಿಂತ ಇಪ್ಪತ್ತೆರಡು ದಿನ ಮೊದಲಿನಿಂದ ವ್ರತದಲ್ಲಿ ತೊಡಗುತ್ತಾರೆ. ನಿತ್ಯ ಪೂಜೆ,ಸಸ್ಯಾಹಾರ ಸೇವನೆ, ಸಾತ್ವಿಕ ಆಹಾರ ಇತ್ಯಾದಿಗಳ ಮೂಲಕ ಇವರು ಹಬ್ಬದ ವ್ರತ ಆಚರಿಸುತ್ತಾರೆ. 

ಮೊಹರಂ ಹಬ್ಬದ ಬೆಳಿಗ್ಗೆ ಮತ್ತು ಮಧ್ಯಾಹ್ನ ವಿಶೇಷ ಪೂಜೆ ನಡೆಯುತ್ತದೆ. ಈ ಎಲ್ಲ ಪೂಜೆಗಳಲ್ಲಿ ಗ್ರಾಮದ ಮುಸ್ಲಿಂ ಕುಟುಂಬದ ವ್ಯಕ್ತಿ ಪೂಜೆ ನಡೆಸುತ್ತಾನೆ. ಸಂಜೆ ಗ್ರಾಮದಲ್ಲಿ ಮತ್ತೆ ದೇವರ ಮೆರವಣಿಗೆ ನಡೆಯುತ್ತದೆ. ಈ ಸಂದರ್ಭದಲ್ಲಿ ಭಕ್ತರು ಚಾಟಿಯಿಂದ ಹೊಡೆದುಕೊಳ್ಳುತ್ತಾ ತಮ್ಮ ಹರಕೆ ಸೇವೆ ಸಮರ್ಪಿಸುತ್ತಾರೆ. ರಾತ್ರಿ ಇಡೀ ಗ್ರಾಮಸ್ಥರು ದೇವರ ಗುಡಿಯ ಬಳಿ ಸೇರಿ ಮಹಾ ಪೂಜೆ ಸಲ್ಲಿಸಿ ಸಾಮೂಹಿಕ ಭೋಜನ ನಡೆಸುತ್ತಾರೆ. ಆ ದಿನವಿಡೀ ಗ್ರಾಮದ ಯಾರ ಮನೆಯಲ್ಲೂ ರಾತ್ರಿ ಅಡುಗೆ ಮಾಡುವುದಿಲ್ಲ. ಎಲ್ಲರೂ ಪ್ರಸಾದದ ಊಟ ಸೇವಿಸುತ್ತಾರೆ.

ಇನ್ನೂ ವಿಶೇಷವೆಂದರೆ ಗ್ರಾಮದಲ್ಲಿ ರಾಜರಾಜೇಶ್ವರಿ, ಬಸವೇಶ್ವರ ಇತ್ಯಾದಿ ದೇವಾಲಯಗಳಿದ್ದು, ವರ್ಷವಿಡೀ ನಡೆಯುವ ಎಲ್ಲ ಹಿಂದೂ ಹಬ್ಬಗಳಲ್ಲಿ ವಿಶೇಷ ಪೂಜೆ ನಡೆಸಲಾಗುತ್ತದೆ. ಈ ಸಂದರ್ಭಗಳಲ್ಲಿ ಈ ಅಲಾಬಿ ದೇವರಿಗೂ ಮಹಾ ಪೂಜೆ ನೈವೇದ್ಯ ಸಲ್ಲಿಸಲಾಗುತ್ತದೆ.
ಹೀಗೆ ಇಡೀ ಗ್ರಾಮದ ಹಿಂದೂಗಳೆಲ್ಲ ಸೇರಿ ಮೊಹರಂ ಹಬ್ಬವನ್ನು ವೈಭವದಿಂದ ಆಚರಿಸುವ ಹೂವಿನಕೋಣೆಯ ಗ್ರಾಮಸ್ಥರ ಸಂಪ್ರದಾಯ ಧರ್ಮ ಸಾಮರಸ್ಯಕ್ಕೆ ಮೇಲ್ಪಂಕ್ತಿಯಾಗಿ ಸುತ್ತಮುತ್ತಲ ಗ್ರಾಮಸ್ಥರನ್ನು ಆಕರ್ಷಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT