ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಣಿಗಳಿಗೆ ದೀಪ ಬೆಳಗುವ ಅಣೀಪೀಣಿ

Last Updated 4 ನವೆಂಬರ್ 2013, 19:30 IST
ಅಕ್ಷರ ಗಾತ್ರ

ಹಿಂದೆಲ್ಲಾ ದಣಿವಾದಾಗ ಅದನ್ನು ಹಾಡಿನ ಮೂಲಕ ತೀರಿಸಿಕೊಂಡು ಸಂತಸ ಪಡುತ್ತಿದ್ದರು. ಹಬ್ಬ– ಹರಿದಿನಗಳೆಂದರೆ ಎಲ್ಲರಿಗೂ ಸಂತೋಷವೇ. ಹಬ್ಬಗಳಲ್ಲಿ ದೇವರನ್ನು ಪೂಜಿಸುತ್ತಾ ಹಾಡಿ, ಕುಣಿದು ಸಂಸಾರದ ತಾಪತ್ರಯಗಳನ್ನು ಮರೆತು, ಬಂಧು ಬಾಂಧವರು ಹಾಗೂ ನೆರೆಹೊರೆಯವರೊಂದಿಗೆ ತಮ್ಮ ಸಂತಸವನ್ನು ಹಂಚಿಕೊಂಡರೆ ವರ್ಷವೆಲ್ಲ ದುಡಿದು ಹೈರಾಣಾಗಿದ್ದ ಜೀವನಕ್ಕೆ ಎಲ್ಲಿಲ್ಲದ ಚೇತರಿಕೆ.

ಇಂಥದ್ದೇ ಸ್ವರ್ಗಸುಖ ಅನುಭವಿಸುವ ಕಾಲ ದೀಪಾವಳಿ. ಬಲಿಪಾಡ್ಯಮಿ ಜೊತೆಗೆ ದೀಪಾವಳಿಯ ಸಂಭ್ರಮಾಚರಣೆ ಕೊನೆಗೊಂಡರೂ ಉತ್ತರ ಕರ್ನಾಟಕದಲ್ಲಿ ಮಾತ್ರ ಹಬ್ಬ ಮುಗಿದ ಮೇಲೆ ಅಣೀಪೀಣಿ ಸಂಭ್ರಮ
ಏನಿದು ಅಣೀಪೀಣಿ?

ಜಾನುವಾರುಗಳಿಗೆ ದೀಪ ಬೆಳಗುವ ವಿಶಿಷ್ಟ ಆಚರಣೆಯೇ ಅಣೀಪೀಣಿ. ಮಲೆನಾಡಿನ ಅಂಟಿಗೆ ಪಿಂಟಿಗೆಯಂತೆ, ಉತ್ತರ ಕರ್ನಾಟಕದ ಪ್ರಾಚೀನ ಪರಂಪರೆಯುಳ್ಳ ಅಣೀಪೀಣಿಯನ್ನು ದೀಪಾವಳಿಯ ಸಂದರ್ಭದಲ್ಲಿ ಹಳ್ಳಿಯ ದನಕಾಯುವ ಮಕ್ಕಳು ಸೇರಿ ಒಂದು ವಾರ ರಾತ್ರಿ ಸಮಯದಲ್ಲಿ ಪ್ರತಿ ಮನೆಗೆ ತೆರಳಿ ಹಾಡನ್ನು ಹಾಡುತ್ತಾ, ದನಗಳಿಗೆ ದೀಪವನ್ನು ಬೆಳಗುತ್ತಾರೆ. ಪಶು ಸಂಪತ್ತು ಬೆಳೆಯಲಿ, ದನಗಳು ರೋಗದಿಂದ ಮುಕ್ತವಾಗಲಿ, ಮನೆಗಳು ಹಾಲು ಹೈನುಗಳಿಂದ ಸಮೃದ್ಧಿ ಹೊಂದಲಿ ಎಂಬ ಸದಾಶಯ ಹೊಂದಿದ ಹಾಡುಗಳನ್ನು ಆ ಸಂದರ್ಭದಲ್ಲಿ ಹಾಡುತ್ತಾರೆ.

ಹಳ್ಳಿಯ ಮಕ್ಕಳು ತಾವು ದನವನ್ನು ಮೇಯಿಸಲು ಅಡವಿಗೆ ಹೋದಾಗ ಜೌಗು ಪ್ರದೇಶದಲ್ಲಿ ಹುಲುಸಾಗಿ ಬೆಳೆಯುವ ಬಿಳಿ ಹೂವಿನಿಂದ ಕೂಡಿದ ಉದ್ದನೆಯ ಹುಲ್ಲನ್ನು ಕೊಯ್ದು ಕೊಂಡು ಅದರಿಂದ ೫ ಅಥವಾ ೭ ಹೆಡೆಯುಳ್ಳ ನಾಗರ ಹಾವಿನಂತೆ ಅದನ್ನು ಹೆಣೆದು, ಅದರ ಮುಂದೆ ಹಣತೆಯನ್ನು ಇಡಲು ದುಂಡಗೆ ಸಿಂಬಿಯನ್ನು ಮಾಡಿ, ಈ ಸರ್ಪದ ಹಿಂದೆ ಬಿಳಿಬಣ್ಣದ ತೆನೆಯನ್ನು ಹೊಂದಿದ ಈ ಹುಲ್ಲಿನಿಂದ ಎತ್ತರವಾಗಿ ನವಿಲುಗರಿಯಂತೆ ಅದನ್ನು ಬಾಗಿಸುತ್ತಾರೆ. ಇದೇ ಅಣೀಪೀಣಿ.

ಅದರಲ್ಲಿ ಹಣತೆಯನ್ನಿಟ್ಟು ದೀಪವನ್ನು ಹಚ್ಚಿಕೊಂಡು ದೀಪಾವಳಿಯ ರಾತ್ರಿಯ ಸಮಯದಲ್ಲಿ ಏಳೆಂಟು ದನಗಾಹಿ ಹುಡುಗರು ಸೇರಿ, ಅದರಲ್ಲಿ ಒಬ್ಬನು ಅಣೀಪೀಣಿಯನ್ನು ಹಿಡಿಯುತ್ತಾನೆ. ಅವನನ್ನು ಉಳಿದವರು ಅನುಸರಿಸುತ್ತಾರೆ. ಪ್ರತಿ ಮನೆಗೂ ಹೋಗಿ ಅಲ್ಲಿರುವ ಆಕಳು, ಎತ್ತು, ಎಮ್ಮೆಗಳಿಗೆ ಇದನ್ನು ಬೆಳಗುತ್ತಾ ಹಾಡು ಹಾಡುತ್ತಾರೆ. ಅದನ್ನು ಬೆಳಗುತ್ತಾ ಅವನು ಹಾಡುತ್ತಿರುವಂತೆ ಅವನ ಹಿಂದಿನವರು ಆ ಹಾಡಿಗೆ ದನಿಗೂಡಿಸುತ್ತಾರೆ. ದೀಪಕ್ಕೆ ಬೇಕಾದ ಎಣ್ಣೆಯನ್ನು ಬೆಳಗಿದವರ ಮನೆಯಿಂದ ಆಗ ಪಡೆದುಕೊಳ್ಳುತ್ತಾರೆ. ಈ ಹಾಡುಗಳು ಹಾಸ್ಯ, ಭಾವನಾತ್ಮಕ ಹಾಗೂ ವೈಚಾರಿಕವಾಗಿರುತ್ತವೆ. ಎಲ್ಲ ಹಾಡುಗಳ ತಿರುಳು ಮಾತ್ರ ಪಶು ಸಂಪತ್ತಿನ ಸಮೃದ್ಧಿ ಹೊಂದಿರುತ್ತವೆ.

ಹಿಂದೆಲ್ಲ, ರಾಗ ಬದ್ಧವಾಗಿ ಏರಿದ ದನಿಯಲ್ಲಿ ಹಾಡು ಹಾಡುತ್ತಿದ್ದರೆ, ದನಗಳು ಮೈಮರೆತು ಕೇಳುತ್ತಾ, ಬೆರಗುಗಣ್ಣಿನಿಂದ ನೋಡುತ್ತಿದ್ದವು. ಆಗ ಓಣಿಯ ಸಣ್ಣ ಮಕ್ಕಳಿಗಂತೂ ಹಿಗ್ಗೋ ಹಿಗ್ಗು, ಇಂತಹ ಐದಾರು ತಂಡಗಳು ಪ್ರತಿ ಊರುಗಳಲ್ಲಿರುತ್ತಿದ್ದವು. ಈ ಕಾರ್ಯವನ್ನು ದೀಪಾವಳಿ ನಂತರ ಒಂದು ವಾರದವರೆಗೆ ಮಾಡುತ್ತಿದ್ದರು. ಕೊನೆಯ ದಿನ ದೀಪ ಬೆಳಗಿದವರ ಮನೆಯಿಂದ ಖುಷಿಯ ರೂಪದಲ್ಲಿ ಹಣವನ್ನು ಪಡೆದುಕೊಳ್ಳುತ್ತಿದ್ದರು.

ನಮ್ಮ ಪಶು ಸಂಪತ್ತು ಹೆಚ್ಚಳವಾಗಲಿ ಎಂಬ ಉದ್ದೇಶದೊಂದಿಗೆ ಹುಟ್ಟಿಕೊಂಡ ಈ ಅಣೀಪೀಣಿ ಬಗ್ಗೆ ಪ್ರಾಚೀನ ಕಾವ್ಯಗಳಲ್ಲಿ ಸುಳಿವು ಸಿಗುತ್ತದೆ. ಅಂದು ಜನಪದರ ಬದುಕಿಗೆ ಈ ಪರಂಪರೆಯು ಬಹು ಗೌರವಾರ್ಹವಾಗಿತ್ತು. ಆದರೆ ಅಣೀಪೀಣಿ ಇಂದು ಜನಪದರ ಬದುಕಿನಿಂದ ಶಾಶ್ವತವಾಗಿ ಕಣ್ಮರೆಯಾಗಿದೆ. ಹಳ್ಳಿಗರು ತಮ್ಮಲ್ಲಿದ್ದ ದನಗಳನ್ನು ಮಾರಿ, ರೆಡಿಮೇಡ್ ಹಾಲು ಕೊಳ್ಳುತ್ತಿರುವಾಗ ಅಣೀಪೀಣಿಯಾದರೂ ಹೇಗೆ ಉಳಿದೀತು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT