ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಿತ್ತಿ ಚಿತ್ರಗಳಲ್ಲಿ ಯೋಗಿಯ ಜೀವನ

Last Updated 2 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ಚಿತ್ರ ಕಲಾವಿದರು ನಿಸರ್ಗದಲ್ಲಿರುವ ಅಪ್ಯಾಯಮಾನವಾದ ಸಂಗತಿಗಳನ್ನು ಪ್ರತಿ ಸೃಷ್ಟಿ ಮಾಡುತ್ತಾರೆ. ನಿಸರ್ಗ ಹಾಗೂ ಕಲ್ಪನೆಗಳಲ್ಲಿ ಮೂಡಿದ ಅನೇಕ ಸಂಗತಿಗಳನ್ನು ವೈವಿಧ್ಯಮಯವಾಗಿ ಅಭಿವ್ಯಕ್ತಿಸುತ್ತಾರೆ.

ಸಂಡೂರಿನ ವಿ.ಟಿ. ಕಾಳೆ ಅಂತಹ ಅಪರೂಪದ ಚಿತ್ರ ಕಲಾವಿದರು. ನಿಸರ್ಗದ ಎಲ್ಲ ಆಯಾಮಗಳನ್ನು ತಮ್ಮ ಕಲಾಭಿವ್ಯಕ್ತಿಗೆ ಬಳಸಿಕೊಂಡ ಪ್ರತಿಭಾವಂತರು. ನಿಸರ್ಗ ಹಾಗೂ ಮಾನವೀಯ ಮುಖಗಳನ್ನು ಚಿತ್ರ ಕಲಾಕೃತಿಗಳಲ್ಲಿ ಮೂಡಿಸುವುದರಲ್ಲಿ  ನಿಷ್ಣಾತರು. ಅವರು ಇತ್ತೀಚೆಗೆ ಬಾಗಲಕೋಟೆ ತಾಲ್ಲೂಕಿನ ಶಿವಯೋಗ ಮಂದಿರದ ಯೋಗಿ ಹಾನಗಲ್ ಕುಮಾರಸ್ವಾಮಿ ಅವರ ಬದುಕಿನ ವಿಸ್ಮಯಗಳನ್ನು ಕುರಿತು 36 ಬೃಹತ್ ಭಿತ್ತಿ ಚಿತ್ರಗಳನ್ನು ರಚಿಸಿದ್ದಾರೆ!

ಈ ಚಿತ್ರಗಳು ನೋಡುಗರಿಗೆ ಅನನ್ಯ ಅನುಭವ ಉಂಟು ಮಾಡುತ್ತವೆ. ಕುಮಾರ ಸ್ವಾಮಿಯವರ ಬದುಕಿನ ಪ್ರಮುಖ ಘಟ್ಟಗಳನ್ನು ನೆನಪು ಮಾಡಿಕೊಡುತ್ತವೆ. ಶಿವಯೋಗಿಗಳ ಭಕ್ತರು ಹಾಗೂ ಆಧ್ಯಾತ್ಮದಲ್ಲಿ ಆಸಕ್ತಿ ಇರುವವರಿಗೆ ಈ ಚಿತ್ರಗಳು ವಿಶಿಷ್ಟ ಅನುಭವ ನೀಡುತ್ತವೆ. ಪ್ರತಿಯೊಂದು ಚಿತ್ರವೂ ಜೀವ ಸ್ವರೂಪಿಯಾಗಿವೆ.

ವಿ.ಟಿ. ಕಾಳೆಯವರು 1934 ರಲ್ಲಿ ಬಾಗಲಕೋಟೆ ಜಿಲ್ಲೆಯ ಹುನಗುಂದದಲ್ಲಿ ಜನಿಸಿದರು. ಮುಂಬಯಿಯ ಸರ್. ಜೆಜೆ ಕಲಾ ಶಾಲೆಯಲ್ಲಿ ಡಿಪ್ಲೊಮಾ ಪದವಿ ಪಡೆದು ನಂತರ ಗದಗಿನ ವಿಜಯ ಕಲಾಮಂದಿರದಲ್ಲಿ ಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದರು.
ನಂತರ ಸಂಡೂರಿನ ಘೋರ್ಪಡೆ ಶಾಲಾ ಸಮುಚ್ಚಯದಲ್ಲಿ ಕಲಾ ಶಿಕ್ಷಕರಾಗಿ ಕೆಲಸ ಮಾಡಿ ನಿವೃತ್ತರಾದ ನಂತರ ಭಿತ್ತಿ ಚಿತ್ರಗಳ ರಚನೆಯಲ್ಲಿ ತೊಡಗಿಕೊಂಡಿದ್ದಾರೆ.

ಕರ್ನಾಟಕದ ರಾಜ್ಯ ಸರ್ಕಾರ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಭಾಜರಾಗಿರುವ ಕಾಳೆಯವರು ಹಲವಾರು ಕಡೆಗಳಲ್ಲಿ ತಮ್ಮ ಚಿತ್ರಗಳ ಪ್ರದರ್ಶನ ಮಾಡಿದ್ದಾರೆ. ಅವರು ನಾಟಕಕಾರ ಹಾಗೂ ನಟರೂ ಹೌದು. ಅವರ ‘ಪ್ರೌಢದೇವರಾಯ ವೈಭವಂ’ ಎಂಬ ಬಯಲಾಟ, ‘ಗಾಳಿಗೋಪುರ’ ನಾಟಕ ಜನಪ್ರಿಯವಾಗಿದೆ.

‘ಬಾಪೂಜಿ’ ಹಿಂದಿ ಧಾರವಾಹಿಗೂ ಕಲಾ ನಿರ್ದೇಶಕರಾಗಿ ಕಾಳೆ ದುಡಿದಿದ್ದಾರೆ. ರಾಗಮಾಲಾ ಚಿತ್ರ ಸರಣಿ ಅವರ ಕಲಾ ಪ್ರೌಢಿಮೆಗೆ ನಿದರ್ಶನ. ಭಾಗೇಶ್ರೀ ಕೇದಾರ, ಭೈರವಿ, ಬಸಂತ, ಮೇಘ ಮಲ್ಹಾರ ಮುಂತಾದ ರಾಗಗಳ ಬಿಂಬಿಸುವ ವರ್ಣಚಿತ್ರಗಳನ್ನು ರಚಿಸಿದ್ದಾರೆ.

ವೇದಗಳ ಕಾಲದ ದೇವತೆಗಳು, ಮಾತೃ ದೇವತೆಗಳ ಚಿತ್ರಗಳನ್ನು ರೂಪಿಸಿದ್ದಾರೆ. ಸುಮಾರು 20 ಸಾವಿರಕ್ಕೂ ಹೆಚ್ಚು ವರ್ಣ ಚಿತ್ರಗಳು, ಭಾವಚಿತ್ರಗಳು, ನಿಸರ್ಗ ಚಿತ್ರಗಳು ಹಾಗೂ 15-20 ಸಾವಿರಕ್ಕೂ ಹೆಚ್ಚು ರೇಖಾ ಚಿತ್ರಗಳನ್ನು ಕಾಳೆ ರಚಿಸಿದ್ದಾರೆ.

 ಕಳೆದ 50 ವರ್ಷಗಳಿಂದ ಅವ್ಯಾಹತವಾಗಿ ಕಲಾ ಸೇವೆಯಲ್ಲಿ ಕಾಳೆಯವರು ಕರ್ನಾಟಕ ಕಂಡ ಅಪರೂಪದ ಕಲಾವಿದ. ಹಾನಗಲ್ ಕುಮಾರಸ್ವಾಮಿ ಅವರ ಬದುಕು ಕುರಿತ 36 ಬೃಹತ್ ಭಿತ್ತಿ ಚಿತ್ರಗಳು ಅವರ ಅದ್ಭುತ ಕಲಾ ಪ್ರತಿಭೆಯ ದ್ಯೋತಕ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT