ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರಮ್ಮ ವೈಭವ

ಅಕ್ಷರ ಗಾತ್ರ

ಚನ್ನಪಟ್ಟಣದ ಹನಿಯೂರಿನಲ್ಲಿ ಈಗ ಗ್ರಾಮದೇವತೆ ಮಾರಮ್ಮನ ಜಾತ್ರೆಯ ವೈಭವ. ಮೂಕಮಾರಮ್ಮ, ಮೂಗುಮಾರಿ, ಮೂಕಿಮಾರಿ ಎಂಬಿತ್ಯಾದಿ ಹೆಸರಿನಿಂದ ಕರೆಸಿಕೊಳ್ಳುವ ಈ ಮಾರಮ್ಮನ ಉತ್ಸವ ಇದೇ 26ರಂದು ನಡೆಯಲಿದೆ. ಈ ಮಾರಮ್ಮನಿಗೆ ಮೂಕಮಾರಮ್ಮ ಎಂದು ಹೆಸರು ಬಂದಿರುವ ಬಗ್ಗೆ ಐತಿಹ್ಯ ಹೀಗಿದೆ: ರಾವಣನ ತಪಸ್ಸಿಗೆ ಮೆಚ್ಚಿದ ಶಿವ, ಪಾರ್ವತಿ ಸಹಿತನಾಗಿ ಪ್ರತ್ಯಕ್ಷನಾಗುತ್ತಾನೆ. ಪಾರ್ವತಿಯ ಸೌಂದರ್ಯ ನೋಡಿದ ರಾವಣ ಆಕೆಯನ್ನೇ ಬೇಡುತ್ತಾನೆ. ಭಕ್ತನ ಆಸೆ ಈಡೇರಿಸುವುದು ಶಿವನ ಜಾಯಮಾನ. ಆದುದರಿಂದ ಆತ ಪಾರ್ವತಿಯನ್ನು ರಾವಣನ ಹಿಂದೆ ಕಳುಹಿಸುತ್ತಾನೆ.

ಹಿಂದೆ ಬರುತ್ತಿರುವ ಪಾರ್ವತಿಯನ್ನು ರಾವಣ ಪ್ರತಿಸಲ ನೋಡಿದಾಗಲೂ ಆಕೆ ಕಾಳಿ, ಭದ್ರಕಾಳಿ, ಮಾರಮ್ಮ... ಈ ರೂಪದಲ್ಲಿ ಕಾಣಿಸಿಕೊಳ್ಳುತ್ತಾಳೆ. ಭಯಗೊಂಡ ರಾವಣ, ಶಿವನ ಬಳಿ ಬಂದಾಗ ಶಿವನು ಪಾರ್ವತಿಯ ಕೈ ಹಿಡಿದುಕೊಂಡು ಹೋಗುವಂತೆ ತಿಳಿಸುತ್ತಾನೆ. ಆದರೆ ಪಾರ್ವತಿ ಪುನಃ ರಾವಣನಿಗೆ ಕೋಪ ಬರುವಂತೆ ನಡೆದುಕೊಳ್ಳುತ್ತಾಳೆ. ಸಿಟ್ಟಿಗೆದ್ದ ರಾವಣ ಅರಮನೆಗೆ ಕರೆದೊಯ್ಯುತ್ತಾನೆ.

ಮಾರಿಯ ರೂಪದಲ್ಲಿ ಮೂಕವಾಗಿದ್ದ ಪಾರ್ವತಿಯನ್ನು ಗ್ರಾಮಸ್ಥರ ಮೂಲಕ ಒಲಿಸಿಕೊಳ್ಳಲು ರಾವಣ ಇಚ್ಛಿಸುತ್ತಾನೆ. ಆಕೆಯ ದೇಗುಲ ನಿರ್ಮಾಣ ಮಾಡಿ ಗ್ರಾಮಸ್ಥರಿಂದ ಪೂಜೆಗೆ ಒಳಪಡಿಸುತ್ತಾನೆ. ದೇವಾಲಯದಲ್ಲಿದ್ದ ದೇವಿ ಭಕ್ತರ ಪೂಜೆಗೆ ಒಲಿದು ಮಾತನಾಡುತ್ತಾಳೆ. ಇದೇ ಮುಂದೆ `ಮೂಗುಮಾರಮ್ಮ' ಆಯಿತು ಎನ್ನುತ್ತದೆ ಪುರಾಣ. 4 ದಿನ ನಡೆಯುವ ಜಾತ್ರೆಯಲ್ಲಿ ಮಹಾಪೂಜೆ, ಕೊಂಡ ಹಾಯುವುದು, ಪೂಜಾಕುಣಿತ, ಕರಗ ಹೀಗೆ ಅನೇಕ ವಿಧಿವಿಧಾನಗಳು ನಡೆಯುತ್ತವೆ.

ಹೀಗೆ ಬನ್ನಿ: ಚನ್ನಪಟ್ಟಣದಿಂದ ಬರುವುದಾದರೆ, ಸಾತನೂರು-ಚನ್ನಪಟ್ಟಣ ರಸ್ತೆಯಲ್ಲಿ (ಹೊಂಗನೂರಿನಲ್ಲಿ ಎಡಕ್ಕೆ) ಸುಮಾರು 15 ಕಿ.ಮೀ. ಕ್ರಮಿಸಬೇಕು. ಕನಕಪುರ ರಸ್ತೆಯ ಕಡೆಯಿಂದ ಬರುವುದಾದರೆ, ಸಾತನೂರಿನಿಂದ ಚನ್ನಪಟ್ಟಣ-ಸಾತನೂರು ರಸ್ತೆಯಲ್ಲಿ ಸುಮಾರು 8 ಕಿ.ಮೀ. ದೂರದಲ್ಲಿದೆ.

ಇಲ್ಲಿಗೆ ಬಂದರೆ, ಸಮುದ್ರಮಟ್ಟದಿಂದ ಸುಮಾರು 3,600 ಅಡಿ ಎತ್ತರವಿರುವ ಬೃಹತ್ ಏಕಶಿಲಾ ಬೆಟ್ಟ ಶ್ರೀಗವಿಂಗಸ್ವಾಮಿ ಬೆಟ್ಟ' ವನ್ನೂ ನೋಡಬಹುದು. ಚಾರಣಿಗರಿಗೂ ಇದು ಹೇಳಿಮಾಡಿಸಿದಂತಿದೆ. ಇದಲ್ಲದೆ, ಕಬ್ಬಾಳಮ್ಮ ದೇವಾಲಯ, ಕಬ್ಬಾಳು ದುರ್ಗವನ್ನೂ ನೋಡಬಹುದು. ಹಾಗೆಯೇ ಪ್ರಸಿದ್ಧ ನಿಸರ್ಗಧಾಮಗಳಾದ ಮೇಕೆದಾಟು-ಸಂಗಮ ಮತ್ತು ವನ್ಯಧಾಮವೆನಿಸಿದ ಮುತ್ತತ್ತಿ ಸವಿ ಸವಿಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT