ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುದಿ ಕಾಲುವೆಗಳಿಗೆ ಮತ್ತೆ ಪ್ರಾಯ!

Last Updated 26 ಜೂನ್ 2017, 19:30 IST
ಅಕ್ಷರ ಗಾತ್ರ

‘ಮೊದಲು ಕಾಲುವೆಗೆ ನೀರು ಬಿಟ್ರೆ ನಮ್ಮೂರಿಗೆ ಬರಲು 7-8 ದಿವಸ ಆಗ್ತಾ ಇತ್ತು, ಆದ್ರೆ ಈ ಸಲ ಕೇವಲ ಮೂರ್ನಾಲ್ಕು ದಿವಸಕ್ಕೆ ಬಂತು. ಮುಂಚೆ ಕಾಲುವೆ ಎಲ್ಲಾ ಮುಚ್ಚಿ ಹೋಗಿ ನೀರು ಅಲ್ಲಲ್ಲೆ ನಿಂತು ಹಳ್ಳಕ್ಕೆ ಹೋಗ್ತಾ ಇತ್ತು. ಈಗ ಅದೆಲ್ಲಾ ಕಂಟ್ರೋಲ್ ಆಗಿದೆ’ ಎಂದರು ಭದ್ರಾವತಿ ತಾಲ್ಲೂಕು ಕಾಗೆಕೊಡಮಗ್ಗೆಯ ರವಿಕುಮಾರ್.

ಅವರೊಂದಿಗೆ ಮಾತನಾಡುತ್ತಾ ಹೋಗಬೇಕಾದರೆ ತುಸು ದೂರದಲ್ಲೇ ಕಾಲುವೆ ನೀರಿನಲ್ಲಿ ಮಕ್ಕಳು ಈಜಾಡುತ್ತಿದ್ದರು. ಹರಿಯುವ ಸ್ವಚ್ಛ ನೀರಿನಲ್ಲಿ ಮಲಗಿ, ಎದ್ದು ಪರಸ್ಪರ ನೀರು ಎರಚಿಕೊಳ್ಳುತ್ತಿದ್ದರು. ಮೊದಲು ಈ ರೀತಿ ಈಜಾಡಲು ಸಾಧ್ಯವೇ ಇರಲಿಲ್ಲ, ಯಾಕೆಂದರೆ ಕಾಲುವೆ ಪೂರಾ ಕಸ ಬೆಳೆದು ನೀರಿನ ಜೊತೆ ಮಣ್ಣೂ ಬರುತ್ತಿತ್ತು, ಕೆಲವೊಮ್ಮೆ ಹಾವುಗಳೂ ಬರುತ್ತಿದ್ದವು ಎಂಬುದು ಈಜಾಡುತ್ತಿದ್ದ ಹುಡುಗ ಸೈಫಾನ್ ಅನಿಸಿಕೆ.

‘ಮುಂಚೆ ಗಲೀಜಾದ ನೀರು ಬರ್ತಿತ್ತು, ಈಗ ಕಾಲುವೆ ರಿಪೇರಿ ಮಾಡಿದ ಮೇಲೆ ನೀರು ಚೆನ್ನಾಗಿ ಬರ್ತಿದೆ. ಪಾತ್ರೆ ತೊಳೀಲಿಕ್ಕೆ, ಬಟ್ಟೆ ಒಗೆಯೋಕೆ ಅನುಕೂಲ ಆಗಿದೆ’ ಎಂದರು ಗೃಹಿಣಿ ಭಾರತಿ.

ಗೊಂದಿ ಅಣೆಕಟ್ಟಿನ ನೀರಾವರಿ ಕಾಲುವೆಗಳ ರಿಪೇರಿಯಿಂದ ಕೃಷಿಗೆ ಆಗಿರುವ ಅನುಕೂಲಗಳನ್ನು ನೋಡಲು ಹೊರಟವರಿಗೆ ಇಷ್ಟೆಲ್ಲಾ ಚಿತ್ರಗಳು ಕಣ್ಣಿಗೆ ಬಿದ್ದವು. ರಾಜ್ಯದ ಹೆಚ್ಚಿನ ಜನರಿಗೆ ಗೊತ್ತಿಲ್ಲದ ಈ ಅಣೆಕಟ್ಟು ಅತ್ಯಂತ ಆಯಕಟ್ಟಿನಲ್ಲಿದೆ. ಸಾವಿರಾರು ಎಕರೆಗೆ ನೀರುಣಿಸುತ್ತದೆ. ಜೊತೆಗೆ ಬಹುಪಯೋಗಿ. ಅಂದಹಾಗೆ ಇದಕ್ಕೀಗ ಶತಮಾನ ತುಂಬಿದೆ. ನೂರು ಮಳೆಗಾಲ ಕಂಡ ಸಮಯದಲ್ಲೇ ಸರ್ಕಾರವು ಇದರ ಆಧುನೀಕರಣಕ್ಕೆ ಕೈಹಾಕಿರುವುದು ಮತ್ತೊಂದು ವಿಶೇಷ.

ಆರಂಭದಲ್ಲಿ ನಿರ್ಮಿಸಿದ ಮಣ್ಣಿನ ಕಾಲುವೆಗಳು ನೀರು ಹರಿಯುವ ರಭಸ, ಬಿರುಸು ಮಳೆ, ಒತ್ತುವರಿ, ದಡ ಕುಸಿತ... ಹೀಗೆ ಹಲವು ಕಾರಣಗಳಿಂದ ಎಷ್ಟೋ ಕಡೆ ಮುಚ್ಚಿಹೋಗಿದ್ದವು. ಎಷ್ಟೋ ಕಡೆ ಕಾಲುವೆಯ ಅಸ್ತಿತ್ವವೇ ಕಾಣದಂತೆ ಪೊದೆಗಳು ಬೆಳೆದಿದ್ದವು. ಬಿಟ್ಟ ನೀರು ಸರಾಗವಾಗಿ ಹರಿಯುತ್ತಲೇ ಇರಲಿಲ್ಲ. ನೀರು ಬಿಟ್ಟಾಗ ಸ್ಥಳೀಯ ಅಚ್ಚುಕಟ್ಟುದಾರರು ಕಾಲುವೆ ಸ್ವಚ್ಛಗೊಳಿಸಿಕೊಳ್ಳುತ್ತಿದ್ದರು, ಆದರೆ ಮುಂದಿನ ಸಲ ಮತ್ತದೇ ಸಮಸ್ಯೆ.

ಕಾಲ-ಕಾಲಕ್ಕೆ ರಿಪೇರಿ ಮಾಡದಿದ್ದುದೇ ಸಮಸ್ಯೆಗೆ ಕಾರಣ. ಅಚ್ಚುಕಟ್ಟುದಾರರು ಹಲವು ಬಾರಿ ಇಲಾಖೆಗಳಿಗೆ ಮನವಿ ಮಾಡಿದ್ದರೂ ಪ್ರಯೋಜನ ಶೂನ್ಯ. ಈ ನಡುವೆ 90ರ ದಶಕದಲ್ಲಿ ಭದ್ರಾ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಆರಂಭವಾಗಿ ಇದರ ವತಿಯಿಂದ ನೀರು ಬಳಕೆದಾರ ಸಹಕಾರ ಸಂಘಗಳು ರಚನೆಯಾದವು. ಗೊಂದಿ ಅಚ್ಚುಕಟ್ಟು ವ್ಯಾಪ್ತಿಯಲ್ಲಿಯೂ ಹತ್ತು ಸಂಘಗಳು ಅಸ್ತಿತ್ವಕ್ಕೆ ಬಂದವು. ಇವುಗಳ ಮೂಲಕ ಅಲ್ಪ-ಸ್ವಲ್ಪ ಕೆಲಸ ಆಯಿತಾದರೂ ಸಮಗ್ರ ರಿಪೇರಿ ಆಗಲೇ ಇಲ್ಲ. ಹೀಗಿರುವಾಗ ಸರ್ಕಾರವು ‘ಕರ್ನಾಟಕ ಸಮಗ್ರ ಮತ್ತು ಸುಸ್ಥಿರ ಜಲ ಸಂಪನ್ಮೂಲ ನಿರ್ವಹಣೆ ಹೂಡಿಕೆ ಯೋಜನೆ’ಯನ್ನು ಆರಂಭಿಸಿತು.

ಸಹಭಾಗಿತ್ವ ತತ್ವದಡಿ ನೀರಿನ ನಿರ್ವಹಣೆ ಇದರ ಪ್ರಧಾನ ಆಶಯ. ಏಷ್ಯಾ ಅಭಿವೃದ್ಧಿ ಬ್ಯಾಂಕ್‌ನ ₹130 ಕೋಟಿ ನೆರವಿನೊಂದಿಗೆ ಪ್ರಾಯೋಗಿಕವಾಗಿ ಗೊಂದಿ ನೀರಾವರಿ ಕಾಲುವೆಗಳ ಆಧುನೀಕರಣವನ್ನು 2016ರಲ್ಲಿ ಆರಂಭಿಸಲಾಯಿತು. ಕರ್ನಾಟಕ ನೀರಾವರಿ ನಿಗಮವು ಇದನ್ನು ಅನುಷ್ಠಾನಗೊಳಿಸುತ್ತಿದ್ದು, ಭದ್ರಾ ಕಾಡಾ ಹಾಗೂ ಸ್ಮೆಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ಗಳು ಯೋಜನೆ ನಿರ್ವಹಣೆಯ ಸಹಭಾಗಿ ಸಂಸ್ಥೆಗಳಾದವು.

‘ನೂರು ವರ್ಷಗಳ ಹಿಂದೆ ನಿರ್ಮಾಣವಾಗಿರುವ ಗೊಂದಿ ಅಣೆಕಟ್ಟೆಯು ನಮ್ಮ ಪೂರ್ವಜರು ನಮಗೆ ಬಿಟ್ಟುಹೋಗಿರುವ ಅತ್ಯಮೂಲ್ಯ ಆಸ್ತಿ. ನೀರು ಬಳಕೆದಾರ ಸಂಘಗಳ ಜೊತೆಗೂಡಿ ಇದರ ಆಧುನೀಕರಣ ಕಾರ್ಯ ನಡೆದಿದೆ’ ಎನ್ನುತ್ತಾರೆ ಅನುಷ್ಠಾನದ ಜವಾಬ್ದಾರಿ ಹೊತ್ತಿರುವ ಮುಖ್ಯ ಎಂಜಿನಿಯರ್ ಆರ್.ಪಿ.ಕುಲಕರ್ಣಿ. 

ಯೋಜನೆಯ ವೈಶಿಷ್ಟ್ಯವೆಂದರೆ ಅಚ್ಚುಕಟ್ಟು ಕಾಲುವೆ ಕಾಮಗಾರಿಗಳನ್ನು ನೀರು ಬಳಕೆದಾರ ಸಂಘಗಳಿಗೇ ನೀಡಿರುವುದು. ‘ಸರಾಸರಿ ಒಂದೂವರೆ ಕೋಟಿ ಮೊತ್ತದ ಕೆಲಸಗಳನ್ನು ಪ್ರತಿ ಸಂಘಗಳಿಗೆ ನೀಡಿದ್ದೇವೆ, ಸಂಘಗಳ ಸದಸ್ಯರು, ಅಚ್ಚುಕಟ್ಟುದಾರರು ಸ್ವತಃ ಮುಂದೆ ನಿಂತು ಕಾಮಗಾರಿ ಮಾಡಿಸುತ್ತಿದ್ದಾರೆ’ ಎನ್ನುತ್ತಾರೆ ಭದ್ರಾ ಕಾಡಾ ಅಧ್ಯಕ್ಷ ಸುಂದರೇಶ್. ನೀರು ಬಳಕೆದಾರರ 11 ಸಂಘಗಳಿದ್ದು ಎಲ್ಲವೂ ಕ್ರಿಯಾಶೀಲವಾಗಿ ಕೈಜೋಡಿಸಿವೆ.

ಗೊಂದಿ ಆಧುನೀಕರಣವು ಸಂಪೂರ್ಣ ಮುಗಿಯುವ ಮೊದಲೇ ಸಕಾರಾತ್ಮಕ ಪರಿಣಾಮ ಕಣ್ಣಿಗೆ ಕಾಣುತ್ತಿದೆ. ಮುಖ್ಯ ಕಾಲುವೆಯಲ್ಲಿ ಹೂಳು ತೆಗೆದು ಕಾಂಕ್ರೀಟ್ ಲೈನಿಂಗ್ ಮಾಡಿರುವುದರಿಂದ ಭದ್ರಾ ಜಲಾಶಯದಿಂದ ಗೊಂದಿ ನಾಲೆಗೆ ಬಿಟ್ಟ ನೀರು ಸರಾಗವಾಗಿ ಹರಿಯುತ್ತಿದೆ.

ಮಣ್ಣಿನ ಕಾಲುವೆಗಳಿದ್ದಾಗ ಹೂಳು ತೆಗೆಯಲು ರೈತರಿಗೆ ಹಿಂಸೆಯಾಗುತ್ತಿತ್ತು. ಕಸ-ಕಡ್ಡಿ, ಮಲ-ಮೂತ್ರ, ಗಲೀಜು ತುಂಬಿದ್ದರಿಂದ ಕೆಲಸ ಮಾಡಿದವರಿಗೆ ತುರಿಕೆ, ಗಾಯ, ಅಲರ್ಜಿ. ಅದರಲ್ಲಿಯೂ ಭದ್ರಾವತಿ ಆಸುಪಾಸು ಕಾಲುವೆಗಳಿಗೆ ಪಟ್ಟಣದ ಕೊಳಚೆ ಸೇರ್ಪಡೆಯಾಗಿ ನೀರು ಮಲಿನಗೊಳ್ಳುತ್ತಿತ್ತು. ಈಗ ಆ ಸಮಸ್ಯೆಯಿಲ್ಲ. ಕಾಲುವೆ ಸ್ವಚ್ಛಗೊಳಿಸುವ ವೆಚ್ಚ ಸಹ ಉಳಿತಾಯವಾಗಿದೆ.


ಕಾಲುವೆ ಪುನಶ್ಚೇತನಕ್ಕೂ ಮುನ್ನ...

‘ನಮ್ಮಂಥ ಕೂಲಿಕಾರರಿಗೂ ಇದ್ರಿಂದ ಅನುಕೂಲ’ ಎಂದು ಮಾತಿಗಿಳಿದ ಕೆ.ಕೆ. ಹೊಸೂರಿನ ಭಾಗ್ಯಮ್ಮ ಅಚ್ಚರಿ ಮೂಡಿಸಿದರು. ಭತ್ತ ತೆನೆಗಟ್ಟುವ ಸಮಯಕ್ಕೆ ಸರಿಯಾಗಿ ಅಣೆಕಟ್ಟೆಯಲ್ಲಿ ನೀರು ಖಾಲಿಯಾಗುತ್ತಿತ್ತು. ಭತ್ತ ಒಣಗಿ ರೈತರಿಗೆ ನಿರಾಸೆ. ಇದರಿಂದ ಪಾರಾಗಲು ಎಷ್ಟೋ ರೈತರು ಜಮೀನನ್ನು ಖಾಲಿ ಬಿಡುತ್ತಿದ್ದರು. ‘ಈಗ ಇರೋ ನೀರೇ ಎಲ್ರಿಗೂ ಸಿಕ್ತಾ ಐತೆ,  ಜಗಳ-ಗುದ್ದಾಟ ಇಲ್ಲ, ತಿರಗಾ ಭತ್ತ ಬೆಳೆದರೆ, ನಮಗೂ ಕೂಲಿ ಸಿಗುತ್ತೆ’ ಎಂದು ಕಾರಣ ಕೊಟ್ಟರು. 

ದೊಡ್ಡಗೊಪ್ಪೇನಹಳ್ಳಿ ನೀರು ಬಳಕೆದಾರರ ಸಹಕಾರ ಸಂಘದ ಕಾರ್ಯದರ್ಶಿ ಗಂಗಣ್ಣ ನೀರುಳಿತಾಯದ ಪಕ್ಕಾ ಲೆಕ್ಕ ಕೊಡುತ್ತಾರೆ. ಅಣೆಕಟ್ಟೆಯಿಂದ 30 ಕಿಲೋಮೀಟರ್ ದೂರದಲ್ಲಿರುವ ಇವರ ಅಚ್ಚುಕಟ್ಟಿಗೆ ನೀರು ತಲುಪಲು 15 ದಿನ ಬೇಕಿತ್ತು, ಕಾಲುವೆ ಆಧುನೀಕರಣದ ನಂತರ ಮೂರೇ ದಿನ ಸಾಕು. ಇದು ಮುಖ್ಯ ಕಾಲುವೆ ರಿಪೇರಿಯಿಂದ ಆಗಿರುವ ಅನುಕೂಲವಾದರೆ ಹೊಲಗಾಲುವೆಗಳ ಪುನಶ್ಚೇತನದಿಂದ ಇವರ ಗ್ರಾಮದ 85 ಹೆಕ್ಟೇರ್ ಅಚ್ಚುಕಟ್ಟಿಗೆ ಮೂರ್ನಾಲ್ಕು ದಿವಸದಲ್ಲೇ ನೀರು ಹಾಯುತ್ತಿದೆ, ಮುಂಚೆ 10-15 ದಿನ ಬೇಕಿತ್ತು.

ಭದ್ರಾ ಜಲಾಶಯದಿಂದ ಗೊಂದಿ ಅಚ್ಚುಕಟ್ಟು ವ್ಯಾಪ್ತಿಗೆ 3.13 ಟಿಎಂಸಿ ಅಡಿ ನೀರು ಹಂಚಿಕೆಯಾಗಿದೆ. ಸಂಪೂರ್ಣ ಆಧುನೀಕರಣದ ನಂತರ ಇದರಲ್ಲಿ ಶೇಕಡ 16ರಷ್ಟು-ಅಂದರೆ 0.50 ಟಿಎಂಸಿ ಅಡಿ ಉಳಿತಾಯವಾಗುತ್ತದೆ ಎಂಬುದು ಯೋಜನೆಯ ನಿರೀಕ್ಷೆ. ಗಂಗಣ್ಣ ಹಾಗೂ ಇತರೆ ರೈತರ ಅಭಿಪ್ರಾಯ ನೋಡಿದರೆ ಇದು ಖಂಡಿತ ಸಾಧ್ಯ.

ಕೇವಲ ನಾಲ್ಕೂವರೆ ಸಾವಿರ ಹೆಕ್ಟೇರಿಗೆ ನೀರುಣಿಸುವ ಕಾಲುವೆಗಳ ಪುನಶ್ಚೇತನದಿಂದಲೇ ಅರ್ಧ ಟಿಎಂಸಿ ಅಡಿ ನೀರುಳಿದರೆ ಲಕ್ಷಾಂತರ ಹೆಕ್ಟೇರ್‌ಗೆ ನೀರುಣಿಸುವ ಇತರೆ ಕಾಲುವೆಗಳ ಆಧುನೀಕರಣದಿಂದ ಸಾಕಷ್ಟು ನೀರಿನ ಉಳಿತಾಯವಾಗಲಿದೆ, ನಮ್ಮ ನೀರಿನ ಕೊರತೆಗೆ ಸ್ವಲ್ಪಮಟ್ಟಿಗೆ ಪರಿಹಾರವೂ ಸಿಗಲಿದೆ. ಮುಖ್ಯವಾಗಿ ಕಾಲುವೆ ಕೊನೆ ಭಾಗದ ರೈತರ ಹೊಲಗಳೂ ನೀರು ಕೊಡಲು ಸಾಧ್ಯ ಅಲ್ಲವೇ? ­

ಚಿತ್ರಗಳು: ಲೇಖಕರವು

***

ಶತಮಾನದ ಅಣೆಕಟ್ಟೆ

ಭದ್ರಾ ನದಿಗೆ ಗೊಂದಿ ಗ್ರಾಮದ ಬಳಿ 1916ರಲ್ಲಿ ಅಣೆಕಟ್ಟೆ ಕಟ್ಟಲಾಗಿದೆ. ಅಣೆಕಟ್ಟೆ ಉದ್ದ 250 ಮೀಟರ್, ಎತ್ತರ 3.6 ಮೀಟರ್. ನಿರ್ಮಾಣಕ್ಕೆ ತೆಗೆದುಕೊಂಡ ಅವಧಿ ಹತ್ತು ವರ್ಷ. ತಗುಲಿದ ಖರ್ಚು 16 ಲಕ್ಷ ರೂಪಾಯಿ. 14.7 ಕಿ.ಮೀ., ಎಡದಂಡೆ ಮತ್ತು 74.4 ಕಿ.ಮೀ., ಬಲದಂಡೆ ಕಾಲುವೆಗಳಿವೆ. ನೂರಾರು ಹೊಲಗಾಲುವೆಗಳ ಜಾಲವಿದೆ.

ಗೊಂದಿ ಗ್ರಾಮದಿಂದ ಭದ್ರಾವತಿ ಆಚೆಗಿನ ಹೊಳೆಹೊನ್ನೂರುವರೆಗೂ ಅಂದಾಜು 4,600 ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುತ್ತದೆ. ಸುಮಾರು 57 ಗ್ರಾಮಗಳು ಇದರ ವ್ಯಾಪ್ತಿಯಲ್ಲಿವೆ. ಭದ್ರಾವತಿ ನಗರದ ಪಕ್ಕದಲ್ಲೇ ಇದರ ಬಲದಂಡೆ ಕಾಲುವೆ ಹಾದು ಹೋಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT