ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವನ್ಯಜೀವಿ ಹೊಟ್ಟೆಗೆ ಕರಿಕಡ್ಡಿ ಕಂಟಕ

Last Updated 19 ಮಾರ್ಚ್ 2012, 19:30 IST
ಅಕ್ಷರ ಗಾತ್ರ

ಯಳಂದೂರು ತಾಲ್ಲೂಕಿನ ಬಿಆರ್‌ಟಿ ಹುಲಿ ರಕ್ಷಿತಾರಣ್ಯದಲ್ಲಿ ಶೋಲಾ ಕಾಡುಗಳ ನೆಲೆಯನ್ನೆಲ್ಲ `ಕರಿಕಡ್ಡಿ~ ಕಳೆ ಆವರಿಸಿದೆ. ವನ್ಯಜೀವಿಗಳ ಮೇವಿನ ಮೂಲವಾದ ವಿವಿಧ ಬಗೆಯ ಹುಲ್ಲು ತಳಿಗಳ ಪ್ರಭೇದಗಳನ್ನೇ ಹೊಸಕಿ ಹಾಕುತ್ತಿದೆ.
 
ಇದು ಹೀಗೆಯೇ ಮುಂದುವರಿದರೆ ಕೆಲ ದಶಕಗಳಲ್ಲಿ ಬೆಟ್ಟಗಳು ಬೋಳಾಗಿ ಅನುಪಯುಕ್ತ ಗಿಡಗಂಟಿಗಳ ತಾಣವಾಗಲಿದೆ; ಇದರಿಂದ ಸ್ವಚ್ಛಂದವಾಗಿ ಬದುಕುವ ಕಾಡುಮೃಗಗಳಿಗೆ ಕಂಟಕ ಎದುರಾಗಬಹುದು ಎಂಬುದು ವನ್ಯಜೀವಿ ತಜ್ಞರ ಆತಂಕ.

ವೈಜ್ಞಾನಿಕವಾಗಿ `ಅಗೆರೇಟಿನ ಅಡೆನೊಪೊರ~ ಎನ್ನಲಾಗುವ ಇದನ್ನು ಸೋಲಿಗರು ಕರಿಕಡ್ಡಿ ಎನ್ನುತ್ತಾರೆ. ಇದು ಬೇಸಿಗೆಯಲ್ಲಿ ಒಣಗುತ್ತದೆ, ಆದರೆ ಬೀಜ ಉದುರಿಸಿ ಮಳೆಗಾಲದಲ್ಲಿ ಮೊಳೆತು ಶೀಘ್ರಗತಿಯಲ್ಲಿ ಬೆಳೆಯುತ್ತದೆ.
 
ಈಗಾಗಲೆ ದಕ್ಷಿಣ ಭಾರತದಲ್ಲಿ ವಿನಾಶದ ಅಂಚಿಗೆ ಬಂದಿರುವ (ಶೇ 0.8) ಶೋಲಾ ಕಾಡುಗಳಲ್ಲಿ ಹುಲ್ಲು ಕಡಿಮೆಯಾಗುತ್ತಿದೆ. ಕರಿಕಡ್ಡಿ ಕಸ ಅಳಿದುಳಿದ ಹುಲ್ಲನ್ನೂ ಸಾಯಿಸುತ್ತದೆ, ಬೆಟ್ಟದ ಹಸಿರು ಸೆರಗನ್ನು ತುಂಡರಿಸುತ್ತದೆ ಎಂಬುದು ಸ್ಥಳೀಯರ ಕಳವಳಕ್ಕೆ ಕಾರಣ.

ಅವಳಿ ಘಟ್ಟ ಸಾಲುಗಳು ಕೂಡುವ ಬಿಳಿಗಿರಿಯಬನದ 540 ಚ.ಕಿ.ಮೀ ವ್ಯಾಪ್ತಿಯಲ್ಲಿ ಲಂಟಾನ ಅತಿಯಾಗಿ ಬೆಳೆದಿದೆ. ಈಗ ಕರಿಕಡ್ಡಿಯ ಕಾಟವೂ ಸೇರಿ ಅರಣ್ಯಕ್ಕೇ ಕುತ್ತು ತರುತ್ತಿದೆ.

`ಇಲ್ಲಿರುವ ಹುಲ್ಲುಬೆಟ್ಟ ಕೇವಲ ಶೇ 3.4. ಇದರಲ್ಲಿ ಹಂದಿಬಾನೆ (ಬೋಲಿ) ಹುಲ್ಲು, ಪೊರಕೆ (ಫೀನಿಕ್ಸ್ ಹ್ಯುಮಲಿಸ್), ಸಿಂಬೊಪೊಗೊನ್ ಪ್ಲೆಕ್ಸೋನಸ್, ಪ್ಲೆಬೊಫೈಲಮ್ ಕಂತಿಯಾನಮ್ ಹುಲ್ಲು ಸಂತತಿ ಹಾಗೂ ಸಸ್ಯವರ್ಗ ವಿಶೇಷವಾಗಿ ಕಾಣಬರುತ್ತವೆ.

ಕುರುಚಲು ಕಾಡು ಶೇ 28, ಒಣ ಉದುರೆಲೆ ಶೇ 61, ಸದಾ ಹಸಿರು ಶೇ 6.5ರಷ್ಟು ವಿಸ್ತೀರ್ಣವನ್ನು ಆವರಿಸಿವೆ. ಅಪರೂಪದ ಟೈಗರ್ ಬಿಟ್ಟಿನ್, ಮಲಬಾರ್ ಟ್ರೋಗೋನ್ ಪಕ್ಷಿಗಳಿಗೆ ಎತ್ತರದ ಹುಲ್ಲು ಬೆಟ್ಟಗಳೇ ಬೇಕು. ಅದಿಲ್ಲದೆ ಇವು ಬದುಕಲಾರವು.

ಕಾಡುಪುಷ್ಪ, ಕೀಟಗಳೂ ಇಲ್ಲಿವೆ. ಹೀಗಾಗಿ ಸಸ್ಯಲೋಕದ ಸಂರಕ್ಷಣೆ ಅಗತ್ಯ~ ಎನ್ನುತ್ತಾರೆ ಸಂಶೋಧಕ ಸಿ. ಮಾದೇಗೌಡರು,
ಬಿದಿರೂ ಸಹ ಹುಲ್ಲಿನ ಜಾತಿಗೆ ಸೇರಿದ ದೈತ್ಯ ಗಿಡ. ಹೆಬ್ಬಿದಿರು (ಬಂಬೊಸಾ ಅರುಂಡಿನೇಸಿಯಾ), ಕರಿಬಿದಿರು (ಡೆಂಡ್ರೋಕ್ಯಾಲಮಸ್) ಶೇ 90 ಭಾಗ ನಾಶವಾಗಿದೆ. ಇದೇ ಆಹಾರವಾಗಿದ್ದ ಆನೆಗಳಿಗೀಗ ತೊಡಕಾಗಿದೆ.

ಹೀಗಾಗಿ ನಾಡಿನತ್ತ ನುಗ್ಗುತ್ತವೆ. ಬಿದಿರನ್ನೆ ನಂಬಿ ಬುಟ್ಟಿ ಹೆಣೆಯುತ್ತಿದ್ದ ಗಿರಿವಾಸಿಗಳ ದೇಶಿ ಜ್ಞಾನವೂ ನಶಿಸಿದೆ. ಈಗ ಬಿದಿರಿನ ತಳಿಗಳ ಸಂರಕ್ಷಣೆ ಅತಿ ಅವಶ್ಯ. ಕರಿಕಡ್ಡಿ ಎಗ್ಗಿಲ್ಲದೇ ಬೆಳೆಯುವುದನ್ನು ನಿವಾರಿಸಲು ಅರಣ್ಯ ಇಲಾಖೆ ಕ್ರಮ ವಹಿಸಲಿ ಎನ್ನುತ್ತಾರೆ ಕ್ಷೇತ್ರತಜ್ಞ ಜಡೇಸ್ವಾಮಿ.

ಹುಲ್ಲು ತಿಂದು ಬದುಕುವ ಇಲ್ಲಿನ ಕಡವೆ (ಇಂಡಿಯನ್ ಗೌರ್), ಚುಕ್ಕಿ ಜಿಂಕೆ, ಆನೆಗಳು ಶೋಲಾ ಹಾಗೂ ಹುಲ್ಲು ಬೆಟ್ಟದ ಮೊಗಸಾಲೆಯಲ್ಲಿ ಸಂಚರಿಸುತ್ತವೆ. ಆಹಾರ ಹಾಗೂ ನೀರಿಗಾಗಿ ಹಾಯ್ದು ಬರುವಾಗ ಕರಿಕಡ್ಡಿಯ ಹೆಚ್ಚಳ ಇವುಗಳ ಹಾದಿಯಲ್ಲಿ ಬದಲಾವಣೆ ತರಬಹುದು. ಇದು ಭವಿಷ್ಯದ ಪ್ರಾಣಿಗಳ ಮೇವಿನ ಮೂಲವನ್ನು ಬತ್ತಿಸಬಹುದು.

ಹಾಗಾಗಿ ಇಂತಹ ಕಳೆಗಿಡಗಳ ನಿವಾರಣೆಗೆ ಈಗಿಂದಲೇ ತಂತ್ರ ರೂಪಿಸಿ ಹುಲ್ಲು ತಳಿಗಳನ್ನು ಉಳಿಸಬೇಕಿದೆ ಎನ್ನುವುದು ಅವರ ಮನವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT