ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನದ ಆಗರ ಅಗಸ್ತ್ಯ

Last Updated 23 ಜೂನ್ 2014, 19:30 IST
ಅಕ್ಷರ ಗಾತ್ರ

ಬೆಟ್ಟ ಗುಡ್ಡಗಳ ನಡುವೆ ಕಡಿದಾದ ದಾರಿ, ಕುರುಚಲು ಮರಗಿಡ. ಅವುಗಳ ನಡುವಿಂದ ತೂರಿ ಬರುವ ಹಕ್ಕಿಗಳ ಇಂಚರ. ಕಾಡು ಹೂಗಳ ಪರಿಮಳ, ಅವುಗಳ ಮಕರಂದ ಹೀರಲು ಬರುವ ಬಣ್ಣಬಣ್ಣದ ಚಿಟ್ಟೆಗಳು... ಎತ್ತರದ ಪ್ರದೇಶದಲ್ಲಿ ಇವನ್ನೆಲ್ಲಾ ನೋಡುತ್ತಾ ನಿಂತು ಮಂದಹಾಸ ಬೀರುತ್ತಿರುವ ಅಗಸ್ತ್ಯ ಮುನಿಗಳ ಕಪ್ಪುಶಿಲೆಯ ಪ್ರತಿಮೆ...

ಕರ್ನಾಟಕ ಹಾಗೂ ತಮಿಳುನಾಡು ಗಡಿಗೆ ಹೊಂದಿಕೊಂಡಂತೆ ಆಂಧ್ರಪ್ರದೇಶದ ಕುಪ್ಪಂ ಮಂಡಳದ ಗುಡಿವಾಂಕ ಗ್ರಾಮ ವ್ಯಾಪ್ತಿಯ 172 ಎಕರೆ ಜಾಗದಲ್ಲಿ ಸ್ಥಾಪಿತವಾದ ಅಂತರರಾಷ್ಟ್ರೀಯ ಪ್ರತಿಷ್ಠಾನ ‘ಅಗಸ್ತ್ಯ’ದ ನೋಟವಿದು. ಬೆಂಗಳೂರಿನಿಂದ ಕೇವಲ ಎರಡು ಗಂಟೆಗಳ ದಾರಿ ಇಲ್ಲಿಗೆ.

‘ಅಗಸ್ತ್ಯ’, ರಾಮಜಿ ರಾಘವನ್‌ರ ಕನಸಿನ ಕೂಸು. ಮಕ್ಕಳಲ್ಲಿ ವಿಜ್ಞಾನದೆಡೆಗೆ ಸಂಶೋಧನಾತ್ಮಕ ಮನೋ ಭಾವ, ಸೃಜನಾತ್ಮಕತೆ ಬೆಳೆಸುವ ಧ್ಯೇಯದೊಂದಿಗೆ ಭಾರತೀಯ ಶಿಕ್ಷಣ ಟಸ್ಟ್‌ ಅಡಿಯಲ್ಲಿ 1999ರಲ್ಲಿ ರಾಮಜಿ ರಾಘವನ್ ಹಲವು ಉದ್ಯಮಿಗಳ ಸಹಾಯದಿಂದ ಇದನ್ನು ಸ್ಥಾಪಿಸಿದರು. ಪ್ರಸ್ತುತ ಅಗಸ್ತ್ಯ ಸಂಸ್ಥೆ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಗುಜರಾತ್, ರಾಜಸ್ತಾನ, ಹಿಮಾಚಲ ಪ್ರದೇಶ, ದೆಹಲಿ, ಬಿಹಾರ ಒಳಗೊಂಡಂತೆ 12 ರಾಜ್ಯಗಳಲ್ಲಿ ಕೆಲಸ ಮಾಡುತ್ತಿದೆ.

ಪರಿಸರ ತಜ್ಞರಾದ ಯಲ್ಲಪ್ಪರೆಡ್ಡಿ ಹಾಗೂ ಹರೀಶ ಭಟ್ಟ ಅವರ ಮಾರ್ಗದರ್ಶನದಲ್ಲಿ ಸಾವಯವ ವಿಧಾನದಲ್ಲಿ 600 ಸಸ್ಯಪ್ರಬೇಧಗಳನ್ನು ಇಲ್ಲಿ ಬೆಳೆಸಲಾಗಿದೆ. ಜೀವವೈವಿಧ್ಯ ಉದ್ಯಾನ ಇಲ್ಲಿನ ಆಕರ್ಷಣೆ. ಅಗಸ್ತ್ಯ ಮೂರ್ತಿಯ ಸುತ್ತಲೂ ವಿವಿಧ ಗಿಡಮೂಲಿಕೆಗಳ 12 ಸಿದ್ಧವನಗಳು ವೇದಕಾಲದ ವೈದ್ಯಶಾಸ್ತ್ರವನ್ನು ನೆನಪಿಸುತ್ತವೆ. ಇಲ್ಲಿರುವ ಚಿಟ್ಟೆವನದಲ್ಲಿ 80 ಪಕ್ಷಿಜಾತಿಗಳು, 150ಕ್ಕೂ ಹೆಚ್ಚು ಜೇಡ ಪ್ರಬೇಧಗಳು ಇವೆ.

ಈ ಕ್ಯಾಂಪಸ್‌ನಲ್ಲಿ 2000ರಲ್ಲಿ ಹಮ್ಮಿಕೊಂಡ ಬೃಹತ್ ವನಮಹೋತ್ಸವದ ಫಲಿತಾಂಶವನ್ನು ಇಂದು ಕಾಣಬಹುದಾಗಿದೆ. ಈ ಮೊದಲೇ ಅಲ್ಲಿ ಇದ್ದ ಗಿಡ, ಮರ, ಪೊದೆಗಳನ್ನು ಉಳಿಸಿ, ಪೋಷಿಸಿ ಬರಡು ಜಾಗಕ್ಕೆ ಹಸಿರಿನ ಹೊದಿಕೆ ಹೊದಿಸಲಾಗಿದೆ. ಇಲ್ಲಿನ ಗುಡ್ಡಗಳಲ್ಲಿ ಅಪರೂಪ ಔಷಧಿ ಸಸ್ಯಗಳು ಕಂಡುಬಂದಿದ್ದು, ಅವುಗಳನ್ನು ಸಂರಕ್ಷಿಸಲಾಗಿದೆ.

ನೀರು ಸಂಗ್ರಹ ಕೌಶಲ್ಯ
ಈ ಕ್ಯಾಂಪಸ್‌ನ 172 ಎಕರೆ ಜಾಗದಲ್ಲಿ ಬಿದ್ದ ಒಂದು ಹನಿ ನೀರೂ ಹೊರಹೋಗದ ಕೌಶಲ್ಯಪೂರ್ಣ ವಿಧಾನ ಅಳವಡಿಸಲಾಗಿದೆ. ಅಲ್ಲಲ್ಲಿ ನೀರಿನ ಹರಿವಿಗೆ ಅಡೆತಡೆ ನಿರ್ಮಿಸಲಾಗಿದೆ. ಅಂತರ್ಜಲ ಮರುಪೂರಣಕ್ಕಾಗಿ 15 ಚೆಕ್ ಡ್ಯಾಂಗಳನ್ನು, ಮಳೆನೀರು ಸಂಗ್ರಹಕ್ಕಾಗಿ 25 ಮರುಪೂರಣ ಇಂಗುಗುಂಡಿಗಳನ್ನು ನಿರ್ಮಿಸಲಾಗಿದೆ. ಎಲ್ಲ ಕಟ್ಟಡಗಳಿಗೂ ಸೌರಶಕ್ತಿ ಹಾಗೂ ಪವನಶಕ್ತಿಯಿಂದ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಮರಗಳಿಗೆ ಹನಿ ನೀರಾವರಿ ವ್ಯವಸ್ಥೆ ಮಾಡಲಾಗಿದೆ.

ಗುಡ್ಡ ಬೆಟ್ಟಗಳ ಈ ಕ್ಯಾಂಪಸ್‌ ಅನ್ನು ಅಭಿವೃದ್ಧಿ ನೆಪದಲ್ಲಿ ಹಾಳುಮಾಡದೇ ನೈಸರ್ಗಿಕವಾಗಿ ಕಾಪಾಡಿಕೊಂಡು ಪರಿಸರ ಸ್ನೇಹಿ ವಿಧಾನ ಅಳವಡಿಸಿಕೊಂಡಿದ್ದು ಈ ವಿಜ್ಞಾನ ಕೇಂದ್ರದ ವಿಶೇಷ. ಇಡೀ ಕ್ಯಾಂಪಸ್ ತೆರೆದ ಜೀವ ವೈವಿಧ್ಯ ಪ್ರಯೋಗಾಲಯದಂತಿದೆ. ಇಲ್ಲಿ ಸ್ಥಳೀಯ ವನಸ್ಪತಿ ಹಾಗೂ ಪ್ರಾಣಿ ಸಮೂಹಕ್ಕೆ ಮಹತ್ವ ನೀಡಲಾಗಿದೆ. ಬೆಂಗಳೂರಿನ ಖ್ಯಾತ ವಾಸ್ತುಶಿಲ್ಪಿ ಶಾರುಖ್ ಮೇಸ್ತ್ರಿ ಇಲ್ಲಿನ ಕಟ್ಟಡಗಳನ್ನು ವಿನ್ಯಾಸಗೊಳಿಸಿದ್ದಾರೆ. ಸುಂದರವಾದ ಕಲ್ಲಿನ ಆಕೃತಿಗಳನ್ನು ಅಲ್ಲಲ್ಲಿ ಕಾಣಬಹುದು.

ಸಂಪೂರ್ಣ ಗಾಳಿಯಂತ್ರದಿಂದ ನಡೆಯುವ 40 ಕೊಠಡಿಗಳ ವಸತಿ ಸಮುಚ್ಛಯ, ಕಲಾ ಸಮುಚ್ಛಯ, ಅಲ್ಪವೆಚ್ಚದ ಬೋಧನೋಪಕರಣಗಳ ತಯಾರಿಕಾ ಘಟಕವನ್ನು ಇದು ಒಳಗೊಂಡಿದೆ. 6.75 ಎಕರೆ ವಿಸ್ತೀರ್ಣದ ದೊಡ್ಡದಾದ ಆಟದ ಮೈದಾನ, ಗಣಿತ, ಕಂಪ್ಯೂಟರ್, ರೋಬೋಟಿಕ್ಸ್ ಪ್ರಯೋಗಾಲಯ, 15 ಸಾವಿರ ಚದರ ಅಡಿಯ ಅನ್ವೇಷಣಾ ಕೇಂದ್ರ, ಭ್ರಮಾ ಕೊಠಡಿ, ಜೀವಶಾಸ್ತ್ರ ಹಾಗೂ ಮಾಧ್ಯಮ ಪ್ರಯೋಗಾಲಯ, ಕಲಾ ಕೇಂದ್ರವೂ ನಿರ್ಮಾಣ ಗೊಂಡಿವೆ. ಇಲ್ಲಿನ 3ಡಿ ತಾರಾಲಯ ಅತ್ಯಾಧುನಿಕ ವ್ಯವಸ್ಥೆಯೊಂದಿಗೆ ವಿಶ್ವದ ದರ್ಶನ ಮಾಡಿಸುತ್ತದೆ.

ಆಡಿ ಕಲಿ, ಮಾಡಿ ಕಲಿ
ವಿಜ್ಞಾನ ವಿಷಯಗಳ ‘ಆಡಿಕಲಿ ಮಾಡಿಕಲಿ’ ತತ್ವದ ಮೇಲೆ ಇಲ್ಲಿ ಪ್ರತೀ ವಾರಕ್ಕೆ 500  ತರಗತಿ ನಡೆಯುತ್ತವೆ. 40 ಶಿಕ್ಷಕರ ತಂಡ ಕುಪ್ಪಂದ ಸುತ್ತಮುತ್ತಲಿನ 500 ಸರ್ಕಾರಿ ಶಾಲೆಗಳ ಮಕ್ಕಳೂ, ಶಿಕ್ಷಕರೂ ಕೇಂದ್ರದ ವಾಹನಗಳಲ್ಲಿ ಕರೆತಂದು ಅವರಿಗೆ ವಿಜ್ಞಾನದ ಅನುಭವಗಳನ್ನು ನೀಡಲಾಗುತ್ತಿದೆ.

ಅಕ್ಕಪಕ್ಕದ 45 ಗ್ರಾಮಗಳಲ್ಲಿ ಸಮುದಾಯ ವಿಜ್ಞಾನ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು ಶಾಲಾ ಅವಧಿಯ ನಂತರ ಮಕ್ಕಳು ಅಲ್ಲಿ ವಿಜ್ಞಾನದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ. ಸುತ್ತಮುತ್ತಲಿನ ಸರ್ಕಾರಿ ಶಾಲಾ ಶಿಕ್ಷಕ ಹಾಗೂ ವಿದ್ಯಾರ್ಥಿಗಳಿಗೆ ಹಲವಾರು ವಿಜ್ಞಾನದ ಯೋಜನೆ ಹಾಕಿಕೊಂಡಿದ್ದು, ಸುತ್ತಲಿನ ಗ್ರಾಮಗಳ ನೀರು ಮತ್ತು ಆಹಾರದ ಗುಣಮಟ್ಟ ಎತ್ತರಿಸಲು ನೆರವಾಗಿವೆ.

ಸಂಚಾರಿ ಪ್ರಯೋಗಾಲಯ
ವಿಜ್ಞಾನ ವಿಷಯಗಳನ್ನು ಶಾಲೆ ಶಾಲೆಗೆ ಹೋಗಿ ತಿಳಿಸಿಕೊಡುವ ಪ್ರಯತ್ನವೇ ಸಂಚಾರಿ ಪ್ರಯೋಗಾಲಯ. 61 ಮೊಬೈಲ್ ವಾಹನಗಳು, 259 ಜನ ಸಂಪನ್ಮೂಲ ಶಿಕ್ಷಕರು ಇಲ್ಲಿದ್ದಾರೆ. ಮಕ್ಕಳಿಗೆ ಆಟದ ಮೂಲಕ ವಿಜ್ಞಾನ ಕಲಿಸುವ ಪ್ರಯತ್ನ ನಡೆದಿದೆ. ಮೊಬೈಲ್ ವಾಹನಗಳು ಎಲ್.ಸಿ.ಡಿ/ ಡಿ.ವಿ.ಡಿ/ ಯು.ಪಿ.ಎಸ್ ಗಳನ್ನು ಹೊಂದಿದ್ದು ಈಗಾಗಲೇ 10 ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಈ ಪ್ರಯತ್ನ ನಡೆದಿದೆ.

ಸರ್ಕಾರದ ಸರ್ವ ಶಿಕ್ಷಣ ಅಭಿಯಾನದ ಸಹಯೋಗದೊಂದಿಗೆ ಒಂದು ಶಾಲೆಗೆ ಮೂರು ಬಾರಿ ಭೇಟಿ ಕೊಡುವ ಯೋಜನೆ ಈ
ಮೊಬೈಲ್ ವಾಹನದ್ದು. ಕಡಿಮೆ ವೆಚ್ಚದ ವಿಜ್ಞಾನ ಉಪಕರಣಗಳ ತಯಾರಿಕೆಯನ್ನೂ ಈ ತಂಡ ಮಕ್ಕಳಿಗೆ ಕಲಿಸಿ ಕೊಡುತ್ತದೆ. ಗ್ರಾಮೀಣ ಭಾಗದ ಹಿಂದುಳಿದ ಹಳ್ಳಿಗಳಿಗೆ ತಲುಪಲು ‘ಲ್ಯಾಬ್ ಇನ್ ಎ ಬೈಕ್’ ಯೋಜನೆ ಈ ವರ್ಷದಿಂದ ಜಾರಿಗೆ ಬರುತ್ತಿರುವುದು ವಿಜ್ಞಾನ ಪ್ರಸಾರದ ಮತ್ತೊಂದು ಪ್ರಯತ್ನ.

ಪ್ರತೀ ತಿಂಗಳು 600 ವಿಜ್ಞಾನದ ತತ್ವಗಳನ್ನು, ಪರಿಕಲ್ಪನೆಗಳನ್ನು ತಿಳಿಸಿಕೊಡುವ ಪ್ರಯತ್ನವೇ ಡಬ್ಬದಲ್ಲಿ ಪ್ರಯೋಗಾಲಯ. 10 ವಿಶಿಷ್ಟವಾದ ಡಬ್ಬಗಳನ್ನು ಅಗಸ್ತ್ಯ ವಿನ್ಯಾಸಗೊಳಿಸಿದ್ದು, ಪ್ರತೀ ಡಬ್ಬ 20 ಪ್ರಯೋಗಗಳನ್ನು ಪ್ರಯೋಗಗಳ ಸಾಧನ ಸಲಕರಣೆಗಳನ್ನು ಹೊಂದಿರುತ್ತದೆ. ಹತ್ತು ದಿನಗಳಿಗೊಮ್ಮೆ ಈ ಡಬ್ಬ ಒಂದು ಶಾಲೆಯಿಂದ ಮತ್ತೊಂದು ಶಾಲೆಗೆ ವರ್ಗಾವಣೆಯಾಗುತ್ತವೆ. ಶಾಲೆಯಲ್ಲಿನ ವಿಜ್ಞಾನ ಶಿಕ್ಷಕರು ಈ ಡಬ್ಬದ ಪ್ರಯೋಗಗಳನ್ನು ಬಳಸಿಕೊಂಡು ಪಾಠ ಮಾಡಬೇಕಾಗುತ್ತದೆ.

ಈ ಯೋಜನೆ 2013–14ರಲ್ಲಿ ಪ್ರಾಯೋಗಿಕವಾಗಿ ಹುಬ್ಬಳ್ಳಿ ಧಾರವಾಡ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಯಶಸ್ವಿಯಾಗಿದೆ. ವಿಜ್ಞಾನದ ಸಂತಸದ ಕಲಿಕೆಗಾಗಿ ಹಮ್ಮಿಕೊಂಡಿದ್ದು ಅಭಿಯಾನ ಜಿಜ್ಞಾಸಾ ವಿಜ್ಞಾನ ಜಾತ್ರೆ. ವರ್ಷವಿಡೀ ಕಲಿತ ವಿಜ್ಞಾನವನ್ನು ಸೃಜನಾತ್ಮಕವಾಗಿ ಅಭಿವ್ಯಕ್ತಪಡಿಸಲು ಈ ಜಾತ್ರೆ ಅವಕಾಶ ಕಲ್ಪಿಸಿದೆ.

ಈ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಒಂದು ಲಕ್ಷ ಮೊತ್ತದ ಬಹುಮಾನ ನೀಡಲಾಗುತ್ತದೆ. 14 ವರ್ಷಗಳ ಹಿಂದೆ ಕುಪ್ಪಂನಲ್ಲಿ ಪ್ರಾರಂಭವಾದ ಅಗಸ್ತ್ಯ ವಿಜ್ಞಾನ ಕೇಂದ್ರ ಇಂದು ದೇಶದ ಎಲ್ಲೆಡೆ ಹಬ್ಬಿದೆ. ಇದರ ಆಡಳಿತಾತ್ಮಕ ಕಚೇರಿ ಇರುವುದು ಬೆಂಗಳೂರಿನಲ್ಲಿ. ಗ್ರಾಮೀಣ ಪ್ರದೇಶದಲ್ಲಿ ವಿಜ್ಞಾನ ಪ್ರಸಾರದ ಗುರಿ ಹೊಂದಿರುವ ‘ಅಗಸ್ತ್ಯ’ಕ್ಕೆ ಇದು ಸವಾಲೇ ಸರಿ.

ಇಂದು ಅತಿ ದೊಡ್ಡ ಸ್ವಯಂಸೇವಾ ಸಂಸ್ಥೆಯಾಗಿ ಬೆಳೆಯುತ್ತಿದೆ. ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಅಗಸ್ತ್ಯದ ಪಠ್ಯಕ್ರಮ ಹಾಗೂ ಮಾದರಿ ವಿನ್ಯಾಸಗೊಳಿಸಿ ಶಿಕ್ಷಕರಿಗೆ ತರಬೇತಿ ನೀಡಿದ್ದಾರೆ. ಸದ್ಯ ವಾರ್ಷಿಕ ಎಂಟು ಕೋಟಿ ಬಂಡವಾಳ ಇದರ ಕಾರ್ಯಚಟುವಟಿಕೆಗಳಿಗೆ ಬೇಕಾಗುತ್ತದೆ. ಸಮಾಜದಲ್ಲಿ ವೈಜ್ಞಾನಿಕ ಮನೋಭಾವ, ವೈಜ್ಞಾನಿಕ ದೃಷ್ಟಿಕೋನವನ್ನು ಇದು ನಿರೀಕ್ಷಿಸುತ್ತದೆ. ವೈಜ್ಞಾನಿಕ ಭಾರತ ಕಟ್ಟಲು ಅಗಸ್ತ್ಯದ ಚಟುವಟಿಕೆಗಳು ಸಹಕಾರಿಯಾದರೆ ಅವರ ಶ್ರಮ ಸಾರ್ಥಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT