ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೇ ಸೀರೆ ನೇಯ್ದ ಬದುಕು

Last Updated 28 ಮಾರ್ಚ್ 2016, 19:58 IST
ಅಕ್ಷರ ಗಾತ್ರ

ಕಾರ್ಯನಿಮಿತ್ತ ಹದಿನೈದು ದಿನಗಳ ಹಿಂದೆ ಊರಿಗೆ ಹೋಗಿದ್ದೆ. ಊರಿನ ಅಗಸೆ ಬಾಗಿಲಿನ ಬಯಲಿನಲ್ಲಿ ಗುಂಪಿನ ಮಧ್ಯೆ ಏನೋ ನಡೆಯುತ್ತಿರುವಂತೆ ಜನಸಮೂಹ ನೆರೆದಿತ್ತು. ಏಕೆಂದು ಕುತೂಹಲದಿಂದ ಗುಂಪಿನ ಮಧ್ಯೆ ಇಣುಕಿದಾಗ ಕಂಡು ಬಂದಿದ್ದು ಕರಕುಶಲಿಗರ ತಂಡ! ಅಲ್ಲೊಂದು ವಿಭಿನ್ನ ಕೈಚಳಕ ನನ್ನ ಗಮನ ಸೆಳೆಯಿತು. ಅದುವೇ, ಹಳೇ ಸೀರೆ, ಗೋಣಿ ಚೀಲ, ಪ್ಲಾಸ್ಟಿಕ್ ಚೀಲ, ಸೊಳ್ಳೆ ಪರದೆಯನ್ನು ಪಟಪಟನೆ ಕುಡುಗೋಲಿನಿಂದ ಸೀಳಿ, ಎಳೆಎಳೆಯಾಗಿಸಿ, ತಿರುಗಣಿಯುಳ್ಳ ಮೆಷಿನ್ನಿಗೆ ಸಿಕ್ಕಿಸಿ, ರಾಟೆಯನ್ನು ತಿರುಗಿಸುತ್ತಾ ಕಣ್ಮುಚ್ಚಿ ಕಣ್ಬಿಡುವುದರೊಳಗೆ ಹಗ್ಗ ತಯಾರಿಸುವ ವಿಶಿಷ್ಟ ಕುಶಲಕಲೆಗಾರಿಕೆ!

ಅದರಲ್ಲಿ ನಿರತವಾಗಿದ್ದದ್ದು ಮೂಲತಃ ರಾಯಚೂರಿನ ಲಿಂಗಸೂಗೂರು ತಾಲ್ಲೂಕಿನ ಮುದಗಲ್ ಬಳಿಯ ಕೆ. ಮರಿಯಮ್ಮನಹಳ್ಳಿಯ ಅರೆ ಅಲೆಮಾರಿ ಸಮುದಾಯದ ಜೋಸೆಫ್ ಕುಟುಂಬ. ಹೌದು, ಇದು ತನ್ನ ಬದುಕನ್ನು ಕಳೆದುಕೊಂಡು ಬೇಡವಾದ ವಸ್ತುಗಳಿಂದಲೇ ತಮ್ಮ ಬದುಕನ್ನು ಕಟ್ಟಿಕೊಂಡು ಬದುಕುವ ಅನಿವಾರ್ಯತೆಯಲ್ಲಿ ಬಾಳುತ್ತಿರುವ ಒಂದು ಕುಟುಂಬದ ಕತೆ. ಈ ಕೆಲಸವನ್ನು ಅವರು ಕರೆದುಕೊಳ್ಳುವುದು, ಹಗ್ಗ ಹೊಸೆಯೋ  ಕೆಲಸ ಎಂದೇ. ಒಂದು ಸೀರೆಗೆ 20–30 ರೂಪಾಯಿ; ಸೊಳ್ಳೆಪರದೆಗೆ 40 ರೂಪಾಯಿ; ವಿವಿಧ ಅಳತೆಗಳ ಹಳೆ ಸೀರೆಗಳಿಂದ ಹಗ್ಗ ಹೊಸೆದು ಕೊಡಲು ಐದು ನಿಮಿಷ ತೆಗೆದುಕೊಂಡರೆ, ಸೊಳ್ಳೆ ಪರದೆಯಿಂದ ತಯಾರಿಸಲು ಏಳರಿಂದ ಎಂಟು ನಿಮಿಷ ತೆಗೆದುಕೊಳ್ಳುತ್ತಾರೆ. ಅಂತೆಯೇ ಪ್ಲಾಸ್ಟಿಕ್/ಗೋಣಿಚೀಲಕ್ಕೆ ಕೇವಲ ಎರಡರಿಂದ ನಾಲ್ಕು ನಿಮಿಷ ಸಾಕು.

ಸೀರೆಯ ಅಳತೆಗನುಗುಣವಾಗಿ ಹಗ್ಗಕ್ಕೆ ಇಪ್ಪತ್ತರಿಂದ ಮೂವತ್ತು ರೂಪಾಯಿ; ಸೊಳ್ಳೆ ಪರದೆ ಹಗ್ಗಕ್ಕೆ ಮೂವತ್ತರಿಂದ ನಲ್ವತ್ತು ರೂಪಾಯಿ ಹಾಗೂ ಗೋಣಿ ಚೀಲ/ಪ್ಲಾಸ್ಟಿಕ್ ಚೀಲದ ಹಗ್ಗ ತಯಾರಿಸಿಕೊಡಲು ಹತ್ತು ರೂಪಾಯಿಯಿಂದ ಹದಿನೈದು ರೂಪಾಯಿ ನಿಗದಿಪಡಿಸಲಾಗಿದೆ ಎನ್ನುತ್ತಾರೆ ಜೋಸೆಫ್ ಪತ್ನಿ ಮಾರ್ಥಾ. ‘ಇಲ್ ಹಗ್ ಹೊಸೀಲಿಕ್ ಮಂದೀನೆ ಹರುದ್ ಬಟ್ಟೆ, ಚೀಲ ಕೊಡೂದ್ರೀಂದ್ ನಮುಗ್ ಖರ್ಚ್ ಭಾಳೇನಿಲ್ರೀ. ಹಗ್ ಹೊಸೀ ರಾಟೆ ತಿರುಗಿಸ್ಲೀಕ್ ನಮ್ ದೇಹ್ದಾಗೀನ್ ಶಕ್ತಿ ಜೊತೀಗ್ ಯುಕ್ತಿ ಬಳುಸ್ತೀವ್ರೀ. ಅದೇ ನಮುಗ್ ಈ ಕಸುಬ್‌ನಾಗ್ ಬಾಳ್ಲಿಕ್ ಅನುಕೂಲಾ ಮಾಡೈತ್ರೀ, ಸಾಹೇಬ್ರಾ. ಒಟ್ನಾಗ್ ದಿನುಕ್ 200 ರೂಪಾಯ್ನಿಂದಾ 500 ರೂಪಾಯ್ ದುಡೀಲಿಕ್ ತ್ರಾಸೇನಿಲ್ರೀ...’ ಎನ್ನುತ್ತಾರೆ ಜೋಸೆಫ್ ಹಗ್ಗದ ರಾಟೆ ತಿರುಗಿಸುತ್ತಲೇ.

ಮಕ್ಕಳಿಗೆ ಶಿಕ್ಷಣ ಗಗನ ಕುಸುಮ!
ತಂದೆ-ತಾಯಿ ಹೀಗೆ ಊರೂರು ಸುತ್ತಿ ತಮ್ಮ ಕುಲಕಸುಬನ್ನು ನಡೆಸುತ್ತಿದ್ದರೆ, ಅವರ ಮಕ್ಕಳು ವಯಸ್ಸಾದ ಅಜ್ಜ-ಅಜ್ಜಿಯರ ನೆರಳಲ್ಲಿ ಓದು-ಬರಹ ನಡೆಸುತ್ತಾರೆ. ಆದರೆ, ಅಪ್ಪ-ಅಮ್ಮನನ್ನು ಬಿಟ್ಟು ಇರಲಾರದ ಮಕ್ಕಳು ಅವರೊಡನೆ ಬರುವುದರಿಂದ ಅವರ ಶಿಕ್ಷಣ ಮೂರಾಬಟ್ಟೆಯಾಗಿದೆ. ಇಂತಹ ಅರೆಅಲೆಮಾರಿ ಸಮುದಾಯಗಳ ಜೀವನಕ್ರಮದಿಂದಾಗಿಯೇ ಸರ್ಕಾರಗಳ ಶಿಕ್ಷಣ ನೀಡಿಕೆ ಕುರಿತ ಅನೇಕ ಯೋಜನೆ, ಕಾರ್ಯಕ್ರಮಗಳು ಯಶ ಕಾಣುವಲ್ಲಿ ಅಡ್ಡಗೋಡೆಗಳಾಗಿವೆ. ತನ್ನೂರಿನಲ್ಲಿ ಸ್ವಂತ ಮನೆ-ಮಠ ಹೊಂದಿರುವ ಜೋಸೆಫ್‌ಗೆ 4–5 ಎಕರೆ ಸ್ವಂತ ಜಮೀನಿದ್ದು, ಸಜ್ಜೆ, ತೊಗರಿ ಬೆಳೆಯುತ್ತಾರೆ. ಆದರೂ ಊರೂರು ಸುತ್ತಿ ಈ ಕಸುಬು ಮಾಡುವ ಅಗತ್ಯವೇನು ಎಂದು ಕೇಳಿದರೆ, ‘ಈ ಕಸುಬು ತನ್ನ ತಾತ-ಮುತ್ತಾತನ ಕಾಲದಿಂದ್ಲೂ ನಡೆಸ್ಕೊಂತಾ ಬಂದೀವ್ರೀ.

ಅದುನ್ ಬಿಡಬಾರದೆನ್ನೋ ಆಸೆಯಂತೆ ಹೀಗ್ ತಂಡೋಪತಂಡವಾಗಿ ನಮ್ಮ ಬಂಧು-ಬಳಗ ಮಡ್ಕೋಂತಾ ನಡೆದೀವ್ರೀ. ಒಟ್ನಾಗ ತಿಂಗ್ಳಿಗೊಂದ್ಸಾರಿ ಎಲ್ರೂ ಎಲ್ಲೇ ಇದ್ರೂ ನಮ್ಮೂರ್ನಾಗ್ ಹೋಗ್ ಸೇರ್‌ತೀವ್ರೀ. ಅದ್ರಲ್ಲೂ ಹಬ್ಬ-ಹರಿದಿನದಾಗ್ ತಪ್ಪಿಸ್ಕೊಳ್ಳಂಗಿಲ್ಲಾರೀ’ ಎಂದು ಕಸುಬಿನ ಪ್ರವರ ಬಿಚ್ಚಿಡ್ತಾನೆ ತಂಡದ ಹುಡುಗ ವಕೀಲ. ಕ್ರೈಸ್ತ ಸಮುದಾಯಕ್ಕೆ ಸೇರಿದ ಜೋಸೆಫ್ ಈ ತಂಡದ ಮಾಲೀಕ. ಪಡಿತರ ಚೀಟಿ, ಮತದಾರರ ಗುರುತಿನ ಪತ್ರವಿದೆ. ಕೊರಚ ಭಾಷೆ ಮಾತನಾಡುವ ಈತನಿಗೆ ಹಗ್ಗ ಹೊಸೆಯೋ ಕೆಲಸ ವಂಶಪಾರಂಪರ್ಯವಾಗಿ ಬಂದ ಬಳುವಳಿಯಂತೆ. ಜೋಸೆಫ್‌ನ ತಾತ ಅಮ್ಮಣ್ಣಪ್ಪನಿಂದ ಇವನ ತಂದೆ, ಚಿಕ್ಕಪ್ಪಂದಿರು ಈ ಕಲೆಯನ್ನು ಕರಗತ ಮಾಡಿಕೊಂಡು ಬಂದವರು.

ರಾಯಚೂರಿನ ಲಿಂಗಸೂಗೂರು ತಾಲ್ಲೂಕಿನ ಮುದಗಲ್ ಬಳಿಯ ಕೆ.ಮರಿಯಮ್ಮನಹಳ್ಳಿಯವನಾದ ಜೋಸೆಫ್ ಕಳೆದ 30 ವರ್ಷಗಳಿಂದಲೂ ಜತನದಿಂದ ಈ ಕಲೆಯನ್ನು ಮುಂದುವರೆಸಿಕೊಂಡು, ತುತ್ತಿನ ಚೀಲದ ಮುಖ್ಯ ಆಧಾರ ಮಾಡಿಕೊಂಡವನು. ಇದೇ ಕಸುಬಿನಿಂದ ಇಡೀ ಕುಟುಂಬವನ್ನು ಸಾಕುವ ಜವಾಬ್ದಾರಿ ಇವನದು. ಒಟ್ಟಿನಲ್ಲಿ ಆಧುನಿಕ ಮಾರುಕಟ್ಟೆ ಹಾಗೂ ಯಾಂತ್ರೀಕೃತ ಹಗ್ಗಗಳ ಭರಾಟೆಯಲ್ಲಿಯೂ ಅದಕ್ಕೆ ಸಡ್ಡು ಹೊಡೆಯುವಂತೆ ಹಗ್ಗ ನೇಯುತ್ತಾ ಕೃಷಿಕಸ್ನೇಹಿಯಾಗಿ ಹಗ್ಗ ಹೊಸೆಯುತ್ತಲೇ ತನ್ನ ಬದುಕಿನ ದೀಪ ಉರಿಸಿಕೊಳ್ಳುತ್ತಿರುವ ಜೋಸೆಫ್‌ನಂತಹ ಕರಕುಶಲಿಗರು ನಮ್ಮ ನಡುವೆ ಮಾದರಿಪ್ರಾಯ ಅನಿಸಿಕೊಳ್ಳುತ್ತಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT