ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿರು ಹೊದಿಕೆಯ ‘ಪುಲ್ಲಣಿ’

Last Updated 12 ಮೇ 2014, 19:30 IST
ಅಕ್ಷರ ಗಾತ್ರ

ಹಾವೇರಿ ಜಿಲ್ಲೆ ದಾರ್ಶನಿಕರ ಬೀಡು.  ಜಿಲ್ಲೆಯಲ್ಲಿ ಮಠ ಮಾನ್ಯಗಳು ಹೆಚ್ಚು. ಜತೆಗೆ ಪುಣ್ಯಕ್ಷೇತ್ರಗಳು ಅನೇಕ. ಧಾರ್ಮಿಕ ಹಾಗೂ ಐತಿಹಾಸಿಕ ಎರಡೂ ಹಿನ್ನೆಲೆ ಹೊಂದಿರುವ ಕ್ಷೇತ್ರ ಗಳಗನಾಥ. ಜಿಲ್ಲೆಯ ಗಡಿ ಗ್ರಾಮವಾದ ಇದು ಪುಟ್ಟ ಗ್ರಾಮ. ಇಲ್ಲಿನ ಗಳಗೇಶ್ವರ ದೇವಸ್ಥಾನ ಪುರಾಣ ಪ್ರಸಿದ್ಧಿ ಜತೆಗೆ ಗತ ವೈಭವ ನೆನಪಿಸುವಂತಹದು.

ಗಳಗನಾಥದ ಈ ದೇವಸ್ಥಾನದಲ್ಲಿ ಜ್ಯೋತಿರ್ಲಿಂಗ ಇದೆ. ಇದಕ್ಕೆ ಯಾವುದೇ ಲೋಹ ಸ್ಪರ್ಶಿಸಿದರೂ ಅದು ಬಂಗಾರ ಆಗುತ್ತಿತ್ತು. ಹಾಗಾಗಿ ವಿಗ್ರಹ ಚೋರರ ಭಯ ಸದಾ ಇತ್ತು. ಕಾರಣ ಅಲ್ಲಿ ತಪಸ್ಸು ಮಾಡುತ್ತಿದ್ದ ಗರ್ಗ ಮುನಿಗಳು ಈ ಲಿಂಗಕ್ಕೆ ಗಳಗ ತೊಡಿಸುವ ಮೂಲಕ ರಕ್ಷಣೆ ನೀಡಿದರೆಂದು ಪ್ರತೀತಿ. ಅಂದಿನಿಂದ ಗಳಗೇಶ್ವರ, ಗರ್ಗೇಶ್ವರ ದೇವಸ್ಥಾನ ಎಂಬ ಐತಿಹ್ಯ ಪಡೆದಿದೆ. ಶಾಸನಗಳ ಪ್ರಕಾರ ಈ ಗ್ರಾಮಕ್ಕೆ ಪುಲ್ಲಣಿ ಎಂಬ ಹೆಸರು.

   ಗುಡಿಯ ಮೇಲ್ಭಾಗದಲ್ಲಿ ಗುಹೆ ಇದೆ. ಅಲ್ಲಿ ಹದಿನೈದು ಜನ ಕುಳಿತುಕೊಳ್ಳುವಷ್ಟು ವಿಶಾಲ ಜಾಗವಿದೆ. ಅಲ್ಲಿಯೇ ಮುನಿಗಳು ಕುಳಿತು ಕಿಂಡಿಯ ಮೂಲಕ ಜ್ಯೋತಿರ್ಲಿಂಗ ದರ್ಶನ ಮಾಡುತ್ತಿದ್ದರು. ಗಳಗ ಹಾಕಿದ್ದರಿಂದ ಅಭಿಷೇಕವಿಲ್ಲದೇ ಅಪಚಾರ ಆದೀತು ಎಂಬ ಕಾರಣಕ್ಕೆ. ಗಳಗಕ್ಕೆ ರಂಧ್ರ ಮಾಡಿ ಈ ಮೂಲಕ ಅಭಿಷೇಕ ಕೈಗೊಳ್ಳುವ ಸಂಪ್ರದಾಯ ಇದೆ.

ಶಿಲ್ಪ ವೈಭವ
ದೇವಾಲಯದ ಗರ್ಭಗೃಹದಲ್ಲಿ ಬೃಹದಾಕಾರದ ಶಿವಲಿಂಗವಿದೆ. ಗರ್ಭಗೃಹದ ಪಕ್ಕದಲ್ಲಿ ಆದಿಶಕ್ತಿ, ಪಾರ್ವತಿ ವಿವಿಧ ಭಂಗಿಯ ಶಿಲ್ಪಗಳು ಹಾಗೂ ಜಟಾಧಾರಿ ಶಿವನ ಶಿಲ್ಪ, ವಿಷ್ಣು ಮತ್ತು ವರಹಾ ಮೂರ್ತಿ ಶಿಲ್ಪಗಳನ್ನು ಇಡಲಾಗಿದೆ.  ಗರ್ಭಗೃಹದ ಒಳ ಹಿಂದಿನ ಗೋಡೆಗಳಲ್ಲಿ ಶಿಖರವುಳ್ಳ ಕೋಷ್ಠಗಳನ್ನು, ಮೇಲ್ಛಾವಣೆಯಲ್ಲಿ ಭುವನೇಶ್ವರಿ ಯನ್ನು ಕಾಣಬಹುದು. ಗರ್ಭಗೃಹ ಬಾಗಿಲು 12 ಅಡಿ ಎತ್ತರವಿದ್ದು ನೋಡುಗರ ಕಣ್ಮನ ಸೆಳೆಯುತ್ತದೆ. ಬಾಗಿಲ ಲಲಾಟ ಬಿಂಬದಲ್ಲಿ ಸುಂದರ ಶಿಲ್ಪಗಳನ್ನು ಕಾಣಬಹುದು. ನವರಂಗವೂ ಮೂರು ಪ್ರವೇಶ ದ್ವಾರಗಳನ್ನು ಹೊಂದಿದೆ.

ಸುಕನಾಸಿಯಲ್ಲಿ ಅನೇಕ ಸುಂದರ ದೇವತಾ ಮೂರ್ತಿಗಳಿವೆ. ಸೂಕ್ಷ್ಮ ಕುಸುರಿಗಳ ಮೂಲಕ ಕಲಾಸಕ್ತರ ಗಮನ ಸೆಳೆಯುತ್ತದೆ. ಈ ದೇವಾಲಯ ಕಲಾತ್ಮಕ ಕಂಬಗಳನ್ನು ಹೊಂದಿದೆ.  ದೇವಾಲಯದ ಶಿಲ್ಪಗಳ ಕೆತ್ತನೆ ಕಲಾತ್ಮಕತೆಯಿಂದ, ಅತಿ ಸೂಕ್ಷ್ಮತೆಯಿಂದ ಕೂಡಿದೆ. ಈ ಎಲ್ಲ ಸಾಧ್ಯತೆಗಳನ್ನು ನಿರ್ಮಿಸಿದ ಕಲಾಕಾರನ ಕಲೆ ನಿಜಕ್ಕೂ ಸ್ಮರಣೀಯವಾದದು. 
                                                                                           
   ವಿಶಾಲವಾದ ಅಂತರಾಳವು ಆಕರ್ಷಕ ಜಾಲಂದರಗಳನ್ನು ಹೊಂದಿದೆ. ನದಿಯ ಮಹಾಪೂರದಿಂದ ಹಾನಿಯಾಗದಿರಲೆಂದು ಇಲ್ಲಿ ಎತ್ತರವಾದ ಅಧಿಷ್ಠಾನ ಕಂಡುಬರುತ್ತದೆ. ಇದರ ಆಕಾರ ನಕ್ಷತ್ರಾಕಾರವಾಗಿದ್ದು, ತಳಹದಿಯಲ್ಲಿ ವಿಶಾಲವಾಗಿದೆ. ನದಿ ತೀರದಲ್ಲಿ  ಪೂರ್ವಾಭಿಮುಖವಾಗಿರುವ ಈ ದೇವಾಲಯ ಭವ್ಯ, ವಿಶಾಲ ಹಾಗೂ ಶಿಲ್ಪ ವೈಭವದಿಂದ ಕೂಡಿದ್ದು ವಿಸ್ತಾರವಾದ ಸಂಕೀರ್ಣವನ್ನು ಹೊಂದಿದೆ.

ಜೀವ ನದಿಗಳ ಸಂಗಮ
ನಾಡಿನ ಜೀವ ನದಿಗಳೆಂದೇ ಪ್ರತೀತಿ ಹೊಂದಿರುವ ತುಂಗೆ, ಭದ್ರೆ, ವರದೆ, ಕುಮದ್ವತಿ ಹಾಗೂ ಧರ್ಮಾ ನದಿಗಳು, ಈ ಗ್ರಾಮದ ಕೂಗಳತೆಯ ದೂರದಲ್ಲಿರುವ ಸಂಗಮಗೊಂಡಿವೆ. ಕಾರಣ ಗಳಗನಾಥ ಬಳಿ ಪ್ರವಿತ್ರ ಸ್ನಾನಮಾಡಿ ಗ್ರಾಮದ ಜ್ಯೋರ್ತಿಲಿಂಗ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆಯುತ್ತಾರೆ. ಈ ಕಾರಣದಿಂದಾಗಿ ಈ ಕ್ಷೇತ್ರ ಪಂಚಗಂಗೇಶ್ವರ ಎಂಬ ಹೆಸರಿನಿಂದಲೂ ಕರೆಸಿಕೊಳ್ಳುತ್ತದೆ.

ಸ್ಮಾರಕಗಳ ರಕ್ಷಣೆ
ಗಳಗೇಶ್ವರ ದೇವಸ್ಥಾನ ಪರಂಪರೆ ಹೊಂದಿರುವ ಕಾರಣಕ್ಕೆ ಈ ದೇವಸ್ಥಾನ ರಕ್ಷಣೆಯನ್ನು ಪ್ರಾಚ್ಯವಸ್ತು ಇಲಾಖೆ ವಹಿಸಿಕೊಂಡಿದೆ. ಇಲಾಖೆ ಪ್ರಕಾರ, ಈ ದೇವಸ್ಥಾನ 11ನೇ ಶತಮಾನದ ಅಂತ್ಯದಲ್ಲಿ ಆಡಳಿತ ನಡೆಸಿದ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ನಿರ್ಮಿತವಾದುದು. ನಂತರ ಬಂದ ಹೊಯ್ಸಳ ಅರಸರು ಈ ನಕ್ಷತ್ರಾಕಾರದ ಸ್ಥಲ ವಿನ್ಯಾಸದ ದೇವಸ್ಥಾನ ನಿರ್ಮಾಣವನ್ನೇ ಮುಂದುವರೆಸಿದರು. ಈಗ ಈ ದೇವಸ್ಥಾನ ಜೀರ್ಣೋದ್ಧಾರಗೊಂಡಿದೆ.

ಮುಂದಿನ ದಿನಗಳಲ್ಲಿ ನಮ್ಮ ಪ್ರಾಚೀನ ಕಲಾ ಪ್ರಕಾರ ಗಳನ್ನು ನೆನಪಿಸುವ ಸ್ಮಾರಕಗಳ ರೀತಿ ಇವುಗಳನ್ನು ರಕ್ಷಿಸುವ ಉದ್ದೇಶ ಇಲಾಖೆಯದು. ದೇವಾಲಯದ ಸುತ್ತಲು ಹಸಿರು ಕಂಗೊಳಿಸುತ್ತಿದೆ. ಅಲ್ಲದೇ ಅಲ್ಲಿರುವ ನೈಸರ್ಗಿಕ ವಾತಾವರಣ ಬಳಸಿಕೊಂಡು ಪ್ರವಾಸಿಗರನ್ನು ಆಕರ್ಷಿಸುವ ಕೆಲಸ ನಡೆಯುತ್ತಿದೆ.

ಪ್ರವಾಸಿಗರು ಗಳಗನಾಥದಂಥ ಐತಿಹಾಸಿಕ ಸ್ಮಾರಕಗಳನ್ನು ತಪ್ಪದೇ ನೋಡಬೇಕು. ಅಲ್ಲಿರುವ ಶಿಲ್ಪಕಲಾ ಸೊಬಗನ್ನು ಸವಿಯಬೇಕು. ಆದರೆ ಆ ಸ್ಮಾರಕಗಳನ್ನು ಉಳಿಸಿ ಮುಂದಿನ ತಲೆಮಾರಿಗೆ ರಕ್ಷಿಸಬೇಕಾದ ಕರ್ತವ್ಯವೂ ನಮ್ಮದಾಗಬೇಕು.

ಹೋಗೋದು ಹೇಗೆ
ಈ ಕಲೆಯ ಬಲೆಯನ್ನು ಸವಿಯಲು ಖುಷಿಯಿಂದ ಪಯಣಕ್ಕೆ ಸಿದ್ಧರಾಗಿ. ಹಾವೇರಿಯಿಂದ 45 ಕಿ.ಮೀ ಅಂತರಲ್ಲಿದೆ. ಹಾವೇರಿಯಿಂದ ಗುತ್ತಲ ಮಾರ್ಗವಾಗಿ ಬರಬಹುದು. ರಾಣಿಬೆನ್ನೂರಿನಿಂದ ಗುತ್ತಲಕ್ಕೆ ಬಂದು ಅಲ್ಲಿಂದ 13 ಕಿ.ಮೀ ದೂರ ಕ್ರಮಿಸಿದರೆ ಗಳಗನಾಥ ಸಿಗುತ್ತದೆ. ಬಸ್ಸುಗಳು, ಖಾಸಗಿ ವಾಹನಗಳು ಲಭ್ಯ. ಈಗ ಮಳೆಗಾಲ ರಕ್ಷಣೆ ಎಚ್ಚರಿಕೆ ವಹಿಸುವುದು ಹೆಚ್ಚು ಸೂಕ್ತ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT