ಭಾನುವಾರ, ಆಗಸ್ಟ್ 25, 2019
28 °C

ಕಾಶ್ಮೀರಿಗಳಿಗೆ ಧೈರ್ಯ ತುಂಬಿದ ಕಮಿಷನರ್‌

Published:
Updated:
Prajavani

ಬೆಂಗಳೂರು: ಸಂವಿಧಾನದ 370ನೇ ವಿಧಿಯ ಅಡಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸವಲತ್ತನ್ನು ಕೇಂದ್ರ ಸರ್ಕಾರ ರದ್ದುಪಡಿಸಿದ ಹಿನ್ನೆಲೆಯಲ್ಲಿ, ನಗರದಲ್ಲಿರುವ ಕಾಶ್ಮೀರಿ ವ್ಯಾಪಾರಿಗಳ ಒಕ್ಕೂಟದ 12 ಸದಸ್ಯರ ಜೊತೆ ಪೊಲೀಸ್‌ ಕಮಿಷನರ್‌ ಭಾಸ್ಕರ್‌ ರಾವ್‌ ಬುಧವಾರ ಚರ್ಚೆ ನಡೆಸಿದರು.

‘ಸಾಮಾಜಿಕ ಜಾಲತಾಣಗಳ ಮೂಲಕ ಹ‌ಬ್ಬಿಸುವ ಯಾವುದೇ ಗಾಳಿ ಸುದ್ದಿಗಳಿಗೆ ಕಿವಿಗೊಡಬೇಡಿ. ಯಾವುದೇ ಸ್ಪಷ್ಟೀಕರಣ ಬೇಕಿದ್ದರೆ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ. ಸೂಕ್ತ ರಕ್ಷಣೆ ನೀಡಲು ಇಲಾಖೆ ಸಿದ್ಧ’ ಎಂದು ಕಾಶ್ಮೀರಿಗಳಿಗೆ ಭಾಸ್ಕರ್‌ ರಾವ್‌ ಭರವಸೆ ನೀಡಿದರು.

‘ನಗರದಲ್ಲಿ ಸುಮಾರು 10 ಸಾವಿರ ಕಾಶ್ಮೀರಿಗಳಿದ್ದಾರೆ. ಬಹುತೇಕರು ವಿದ್ಯಾರ್ಥಿಗಳು. ನಾವೆಲ್ಲರೂ ಸೌಹಾರ್ದದಿಂದ ಇದ್ದೇವೆ. ಆದರೆ, ಕಾಶ್ಮೀರದಲ್ಲಿನ ಬೆಳವಣಿಗೆಗಳ ಬಗ್ಗೆ ಚಿಂತೆ ಇದೆ’ ಎಂದು ಒಕ್ಕೂಟದ ಸದಸ್ಯರು ಆತಂಕ ತೋಡಿಕೊಂಡರು.

‘ನಿಮ್ಮ ಸಮುದಾಯದ ಅಹವಾಲುಗಳನ್ನು ಆಲಿಸಲು ಡಿಸಿಪಿ (ದಕ್ಷಿಣ) ರೋಹಿಣಿ ಕಟೋಚ್‌ ಅವರನ್ನು ನೋಡಲ್‌ ಅಧಿಕಾರಿಯಾಗಿ ನೇಮಿಸಲಾಗಿದೆ’ ಎಂದೂ ಭಾಸ್ಕರ್‌ ಅವರು ತಿಳಿಸಿದರು.

Post Comments (+)