ಶುಕ್ರವಾರ, ಆಗಸ್ಟ್ 23, 2019
22 °C
ಐದು ಗ್ರಾಮಗಳು ಜಲಾವೃತ, ವೆಸ್ಲಿ ಸೇತುವೆ ಮುಳುಗಡೆ, ಐದು ಕಡೆ ಪರಿಹಾರ ಕೇಂದ್ರ ಆರಂಭ

ಬಿಗಡಾಯಿಸಿದ ಪ್ರವಾಹ ಪರಿಸ್ಥಿತಿ

Published:
Updated:
Prajavani

ಕೊಳ್ಳೇಗಾಲ: ಕಾವೇರಿ ನದಿ ಉಕ್ಕಿ ಹರಿಯುತ್ತಿರುವುದರಿಂದ ತಾಲ್ಲೂಕಿನ ನದಿ ಪಾತ್ರದ ಹಳೆ ಅಣಗಳ್ಳಿ, ಹಳೆ ಹಂಪಾಪುರ, ಎಡಕುರಿಯ ಗ್ರಾಮಗಳು ಸೋಮವಾರ ಜಲಾವೃತವಾಗಿದ್ದು ಮೂರು ಗ್ರಾಮಗಳ ಜನರನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. 

ಸಂತ್ರಸ್ತರಿಗಾಗಿ ಜಿಲ್ಲಾಡಳಿತ ಐದು ಪ‍ರಿಹಾರ ಕೇಂದ್ರಗಳನ್ನು ತೆರೆದಿದೆ. ದಾಸನಪುರ ಗ್ರಾಮಸ್ಥರು ಕೊಳ್ಳೇಗಾಲದ ಬಿಸಿಎಂ ಹಾಸ್ಟೆಲ್‌ನಲ್ಲಿ ಆಶ್ರಯ ಪಡೆದಿದ್ದರೆ, ಹಳೆ ಹಂಪಾಪುರದ ಗ್ರಾಮಸ್ಥರಿಗೆ ಮಾದೇಶ್ವರ ಕಲ್ಯಾಣ ಮಂಟಪದಲ್ಲಿ ವ್ಯವಸ್ಥೆ ಮಾಡಲಾಗಿದೆ. ಹಳೆ ಅಣಗಳ್ಳಿ ಜನರಿಗೆ ಸರ್ಕಾರಿ ಬಾಲಕಿಯರ ಮೆಟ್ರಿಕ್‌ ವಿದ್ಯಾರ್ಥಿನಿಲಯದಲ್ಲಿ ಆಶ್ರಯ ಕಲ್ಪಿಸಲಾಗಿದೆ. ಎಡಕುರಿಯ ಗ್ರಾಮದವರಿಗೆ ಸತ್ತೇಗಾಲ ಅಗ್ರಹಾರದ ಸರ್ಕಾರಿ ಶಾಲೆಯಲ್ಲಿ ಉಳಿಯುವುದಕ್ಕೆ ವ್ಯವಸ್ಥೆ ಮಾಡಲಾಗಿದೆ. ಭಾಗಶಃ ನೆರೆಪೀಡಿತವಾಗಿರುವ ಮುಳ್ಳೂರು ಗ್ರಾಮದ ಸಂತ್ರಸ್ತರಿಗಾಗಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಪರಿಹಾರ ಕೇಂದ್ರ ತೆರೆಯಲಾಗಿದೆ. 

ದ್ವೀಪವಾದ ಹರಳೆ ಗ್ರಾಮ: ಹರಳೆ ಗ್ರಾಮದ ಸುತ್ತಲೂ ಕಾವೇರಿ ನೀರು ಆವರಿಸಿದ್ದು, ಗ್ರಾಮ ದ್ವೀಪವಾಗಿ ಮಾರ್ಪಟ್ಟಿದೆ. ಸುರಕ್ಷಿತ ಸ್ಥಳಕ್ಕೆ ಬರುವಂತೆ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಮನವಿ ಮಾಡಿದರೂ, ಜನರು ಊರು ತೊರೆಯಲು ಒಪ್ಪುತ್ತಿಲ್ಲ. ಗ್ರಾಮ ಮುಳುಗುವಷ್ಟು ನೀರು ಬರುವುದಿಲ್ಲ ಎಂದು ಅವರು ವಾದಿಸುತ್ತಿದ್ದಾರೆ. ಶಾಸಕ ಎನ್‌.ಮಹೇಶ್‌ ಅವರು ಗ್ರಾಮಕ್ಕೆ ತೆರಳಿ ಜನರ ಮನವೊಲಿಸಲು ಯತ್ನಿಸಿದರೂ ಅವರು ಬರುವುದಕ್ಕೆ ಒಪ್ಪುತ್ತಿಲ್ಲ. 

ಬಿಗಡಾಯಿಸಿದ ಪ್ರವಾಹ ಪರಿಸ್ಥಿತಿ: ಕಬಿನಿ ಜಲಾಶಯದ ಹೊರ ಹರಿವನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದ್ದರೂ, ಕೆಆರ್‌ಎಸ್‌ನಿಂದ ನೀರು ಹೊರ ಬಿಡುತ್ತಿರುವುದರಿಂದ ಕಾವೇರಿಯಲ್ಲಿ ನೀರಿನ ಹರಿವು ಹೆಚ್ಚಿನ ಪ್ರಮಾಣದಲ್ಲಿದೆ. ಭಾನುವಾರ ದಾಸನಪುರ, ಹಳೆ ಹಂಪಾಪುರದಲ್ಲಿ ಕಂಡು ಬಂದಿದ್ದ ಪ್ರವಾಹ ಪರಿಸ್ಥಿತಿ ತಡ ರಾತ್ರಿ ಹಳೆ ಅಣ್ಣಗಳ್ಳಿ, ಮುಳ್ಳೂರು ಹಾಗೂ ಹರಳೆಗೂ ವಿಸ್ತರಿಸಿತು. ಭಾನುವಾರ ಮಧ್ಯಾಹ್ನದ ಹೊತ್ತಿಗೆ ನೆರೆ ಕೊಳ್ಳೇಗಾಲ ಪಟ್ಟಣದ ಮೋಳೆ, ಭೀಮನಗರಕ್ಕೆ ತಲುಪಿತು. 4 ಮತ್ತು 5ನೇ ವಾರ್ಡ್‌ ವ್ಯಾಪ್ತಿಯಲ್ಲಿ ಬರುವ ಜಮೀನುಗಳಿಗೂ ನೀರು ನುಗ್ಗಿದೆ. 

ಸೋಮವಾರ ಬೆಳಿಗ್ಗೆ ಹಳೆ ಅಣ್ಣಗಳ್ಳಿ ಸಂಪೂರ್ಣವಾಗಿ ಜಲಾವೃತವಾಯಿತು. ಗ್ರಾಮದಿಂದ ನಡೆದುಕೊಂಡು ಬರಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದ್ದರಿಂದ ಗ್ರಾಮಸ್ಥರನ್ನು ಕರೆತರಲು ಕೊಪ್ಪರಿಕೆಗಳನ್ನು ಬಳಸಬೇಕಾಯಿತು. ಶಾಸಕ ಎನ್‌.ಮಹೇಶ್‌, ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ಸ್ವತಃ ಕೊಪ್ಪರಿಕೆಯಲ್ಲಿ ಗ್ರಾಮಕ್ಕೆ ತೆರಳಿ, ಜನರೊಂದಿಗೆ ಮಾತುಕತೆ ನಡೆಸಿ, ಕರೆದುಕೊಂಡು ಬಂದರು. ಮಹಿಳೆಯರು, ಮಕ್ಕಳು ಹಾಗೂ ಹಿರಿಯರು ಕೊಪ್ಪರಿಕೆಯಲ್ಲಿ ಸುರಕ್ಷಿತ ಸ್ಥಳಕ್ಕೆ ಬಂದರೆ, ವಯಸ್ಕರು ಹಾಗೂ ಯುವಕರು ಮೊಣಕಾಲಿನವರೆಗೆ ನಿಂತಿದ್ದ ನೀರಿನಲ್ಲಿ ನಡೆದುಕೊಂಡೇ ಬಂದರು. 

ಹಳೆ ಹಂಪಾಪುರ ಗ್ರಾಮದ ವೃದ್ಧರು, ಮಹಿಳೆಯರು ಮತ್ತು ಮಕ್ಕಳು ಪರಿಹಾರ ಕೇಂದ್ರಗಳಿಗೆ ಬಂದಿದ್ದು, ಯುವಕರು ಹಾಗೂ ವಯಸ್ಕರು ಇನ್ನೂ ಗ್ರಾಮದಲ್ಲೇ ಇದ್ದಾರೆ. 

ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ: ನೆರೆಯಿಂದ ಜನರು ತತ್ತರಿಸುತ್ತಿದ್ದರೂ ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಹಾಗೂ ಬೇರೆ ಕ್ಷೇತ್ರಗಳ ಶಾಸಕರು, ಜನಪ್ರತಿನಿಧಿಗಳು ಸ್ಥಳಕ್ಕೆ ಬಾರದೇ ಇರುವುದಕ್ಕೆ ಹಳೆ ಅಣಗಳ್ಳಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಮುಳುಗಿದ ಈಶ್ವರ ದೇವಸ್ಥಾನ

ಸತ್ತೇಗಾಲದ ಬಳಿ ಇರುವ ಐತಿಹಾಸಿಕ ಈಶ್ವರ ದೇವಸ್ಥಾನವೂ ಬಹುತೇಕ ಮುಳುಗಿದೆ. ಸರಗೂರು, ಸತ್ತೇಗಾಲದ ಬಳಿ ನದಿಯ ನೀರು ರಾಷ್ಟ್ರೀಯ ಹೆದ್ದಾರಿ 209ರ ಸನಿಹಕ್ಕೆ ಬಂದಿದೆ. ಶಿವನಸಮುದ್ರದ ಬಳಿಯ ಐತಿಹಾಸಿಕ ವೆಸ್ಲಿ ಸೇತುವೆ ಭಾನುವಾರ ಸಂಪೂರ್ಣವಾಗಿ ಮುಳುಗಿದೆ. ಕಳೆದ ವರ್ಷದ ಪ್ರವಾಹಕ್ಕೆ ಸಿಲುಕಿ ಸ್ವಲ್ಪ ಪ್ರಮಾಣದಲ್ಲಿ ಹಾನಿಗೀಡಾಗಿದ್ದ ಸೇತುವೆ, ಈ ಬಾರಿ ಸಂಪೂರ್ಣವಾಗಿ ಹಾನಿಗೊಳಗಾಗುವ ಆತಂಕ ಎದುರಾಗಿದೆ. 

ಜಲಾಶಯಗಳಿಂದ ಬಿಡುಗಡೆ ಮಾಡಲಾಗುತ್ತಿರುವ ನೀರಿನ ಪ್ರಮಾಣ ಕಡಿಮೆ ಮಾಡಲಾಗಿದ್ದರೂ ಸೋಮವಾರ ಸಂಜೆಯವರೆಗೆ ನೆರೆ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗಿರಲಿಲ್ಲ. 

ಬದುಕಿದ ಬಡಜೀವ

ನೀರಿನ ಮಟ್ಟ ಹೆಚ್ಚಾಗಿ ಹಳೆ ಅಣ್ಣಗಳ್ಳಿಯಲ್ಲಿ ಅಪಾಯಕ್ಕೆ ಸಿಲುಕಿದ್ದ ರಾಜಮ್ಮ ಮತ್ತು ಮಾದೇಗೌಡ ದಂಪತಿಯನ್ನು ಅಧಿಕಾರಿಗಳು ರಕ್ಷಿಸಿದರು. ಅಸ್ವಸ್ಥಗೊಂಡಿದ್ದ ರಾಜಮ್ಮ ಅವರನ್ನು ತಕ್ಷಣವೇ ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. 

ಸೋಮವಾರ ಬೆಳಿಗ್ಗೆಯಿಂದ ಗ್ರಾಮದ ಜನರನ್ನು ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಬರುವ ಕೆಲಸಕ್ಕೆ ಚಾಲನೆ ನೀಡಲಾಗಿತ್ತು. ಬಹುತೇಕ ಗ್ರಾಮಸ್ಥರು ಬಂದಿದ್ದರೂ ಇವರಿಬ್ಬರು ತೋಟದ ಮನೆಯಲ್ಲೇ ಇದ್ದರು. ನೀರು ಇದ್ದುದರಿಂದ ಅವರಿಗೆ ಬರುವುದಕ್ಕೆ ಸಾಧ್ಯವಾಗಲಿಲ್ಲ. ಮಧ್ಯಾಹ್ನದ ಹೊತ್ತಿಗೆ ಊರಿನವರೊಬ್ಬರು ರಾಜಮ್ಮ ಹಾಗೂ ಮಾದೇಗೌಡ ಅವರು ತೋಟದ ಮನೆಯಲ್ಲಿ ಇರುವ ಬಗ್ಗೆ ಉಪವಿಭಾಗಾಧಿಕಾರಿ ನಿಖಿತಾ ಚಿನ್ನಸ್ವಾಮಿ ಅವರ ಗಮನಕ್ಕೆ ತಂದರು. 

ತಕ್ಷಣ ಅವರು ಅಗ್ನಿಶಾಮಕ ಸಿಬ್ಬಂದಿ ಹಾಗೂ ಊರವರೊಂದಿಗೆ ಕೊಪ್ಪರಿಕೆಯಲ್ಲಿ ಗ್ರಾಮಕ್ಕೆ ತೆರಳಿ ಹಿರಿಯ ದಂಪತಿಯನ್ನು ಕರೆದುಕೊಂಡು ಬಂದರು. ಭಯದಿಂದಾಗಿ ರಾಜಮ್ಮ ಅಸ್ವಸ್ಥರಾಗಿದ್ದವರಂತೆ ಕಂಡು ಬಂದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. 

ಮುಳುಗಿದ ದಾಸನಪುರ, ಹಳೆ ಅಣಗಳ್ಳಿಯಲ್ಲಿ ಐದಡಿ ನೀರು

ಭಾನುವಾರವಷ್ಟೇ ಜಲಾವೃತವಾಗಿದ್ದ ದಾಸನಪುರ ಗ್ರಾಮ ಸೋಮವಾರ ಬಹುತೇಕ ಮುಳುಗಡೆಯಾಗಿದ್ದು, ಮನೆಗಳು ಶೇ 70ರಷ್ಟು ಭಾಗ ಸಂಪೂರ್ಣವಾಗಿ ಮುಳುಗಿದೆ. 10 ಮನೆಗಳು ಕುಸಿದು ಬಿದ್ದಿವೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. 

ಹಳೆ ಅಣಗಳ್ಳಿಯಲ್ಲಿ ಐದು ಅಡಿಗಳಷ್ಟು ಎತ್ತರಕ್ಕೆ ನೀರು ನಿಂತಿದೆ. ನದಿಯಲ್ಲಿ ನೀರಿನ ಹರಿವು ಕಡಿಮೆಯಾದರೆ ರಾತ್ರಿ ನಂತರ ನೆರೆ ಇಳಿಬಹುದು ಎಂಬ ಲೆಕ್ಕಾಚಾರದಲ್ಲಿ ಗ್ರಾಮಸ್ಥರಿದ್ದಾರೆ.

ಕೇಂದ್ರಗಳಲ್ಲಿ 1,172 ಮಂದಿ

ಜಿಲ್ಲಾಡಳಿತ ತೆರೆದಿರುವ ಐದು ಪರಿಹಾರ ಕೇಂದ್ರಗಳಲ್ಲಿ ಸದ್ಯ 1,172 ಮಂದಿ ಆಶ್ರಯ ಪಡೆದಿದ್ದಾರೆ. ಇನ್ನೂ ಹೆಚ್ಚಿನ ಸಂತ್ರಸ್ತರು ಕೇಂದ್ರಕ್ಕೆ ಬರುತ್ತಿದ್ದು, ಈ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ. 

ಸಂತ್ರಸ್ತರಿಗೆ ಊಟ, ಬಟ್ಟೆ, ಹೊದಿಕೆ ಸೇರಿದಂತೆ ಅಗತ್ಯವಸ್ತುಗಳನ್ನು ಜಿಲ್ಲಾಡಳಿತ ನೀಡಿದೆ.

ನೆರೆಪೀಡಿತ ಗ್ರಾಮಗಳ ಎಲ್ಲರೂ ಪರಿಹಾರ ಕೇಂದ್ರಗಳಿಗೆ ಬಂದಿಲ್ಲ. ಅನುಕೂಲಸ್ಥರು ಹಾಗೂ ಕೆಲವರು ತಮ್ಮ ಬಂಧುಗಳ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ. 

Post Comments (+)