ಕರಾವಳಿ ಸ್ವಾದದ ‘ಕೊಂಕಣ್’

ಸೋಮವಾರ, ಮಾರ್ಚ್ 25, 2019
26 °C

ಕರಾವಳಿ ಸ್ವಾದದ ‘ಕೊಂಕಣ್’

Published:
Updated:
Prajavani

‘ನೋಡಿ ಇದು ಅಂಜಲ್ ಸುರ್ಮೈ ತವಾ, ಕೆಂಪು ಮೆಣಸಿನಕಾಯಿ ಪೇಸ್ಟ್ ಹಚ್ಚಿ ತಯಾರಿಸಿದ್ದು, ಮತ್ತೆ ಇದು ಪಾಂಫ್ರೆಟ್ ಹಸಿ ಮೆಣಸಿನಕಾಯಿ, ಕಾಳುಮೆಣಸು, ಉಪ್ಪು ಹಾಕಿ ಸವರಿ ತವಾ ಫ್ರೈ ಮಾಡಿದ್ದು, ಅದು ಸಿಗಡಿ ಕೋಳಿವಾಡ... ಈಗ ಬಂತಲ್ಲ ಅದು ಚಿಕನ್ ಉರವಲ್ ಗೋಡಂಬಿ ರುಬ್ಬಿ, ಕೆಂಪುಮೆಣಸಿನಕಾಯಿ ಪೇಸ್ಟ್ ಹಾಕಿ ಮಾಡಿದ್ದು...’

ಕೊಂಕಣ್ ರೆಸ್ಟೋರೆಂಟ್‌ನ ಮಾಲೀಕರಾದ ಚೈತ್ರಾ ಅರುಣ್ ಮತ್ತು ನೀಲ್ ರಾಡಿಗ್ರಾಸ್ ಬಿಡುವಿಲ್ಲದೆ ವಿವರಿಸುತ್ತಿದ್ದರೆ ಟೇಬಲ್ ಮೇಲಿದ್ದ ಕರಾವಳಿ ಖಾದ್ಯಗಳು ಬಾಯಲ್ಲಿ ನೀರೂರಿಸುವಂತಿದ್ದವು.

ಕಡುಕೆಂಪು ಬಣ್ಣದಲ್ಲಿ ಕಂಗೊಳಿಸುತ್ತಿದ್ದ ಸುರ್ಮೈ ತವಾ ಫಿಶ್ ಫ್ರೈ ತುಣುಕೊಂದನ್ನು ಮುರಿದು ಬಾಯಿಗಿಟ್ಟುಕೊಳ್ಳುತ್ತಿದ್ದಂತೆ ನಾಲಗೆಯ ರುಚಿ ತಣಿಸಿತು. ಹದವಾಗಿ ಬೆಂದು, ಮೇಲ್ಮೈನಲ್ಲಿ ಬ್ಯಾಡಗಿ ಮೆಣಸಿನ ಕಾಯಿ ಪೇಸ್ಟ್ ಹಚ್ಚಿದ್ದ ಸುರ್ಮೈ ರುಚಿ ತಿಂದಷ್ಟು ಮತ್ತಷ್ಟು ತಿನ್ನಬೇಕೆಂಬ ಆಸೆ ಹುಟ್ಟಿಸುವಂತಿತ್ತು.

ಕ್ಷಣಾರ್ಧದಲ್ಲಿ ಖಾಲಿಯಾದ ಸುರ್ಮೈ ನಂತರ, ಪಾಂಫ್ರೆಟ್ ಉಪ್ಪುಮುಂಚಿ ಮಡಚಿದ ಬಾಳೆಲೆಯಲ್ಲಿ ಸ್ವಾಗತಿಸಿತು. ಬಾಳೆಲೆ ಬಿಡಿಸಿ ಉಪ್ಪುಮುಂಚಿಯನ್ನು ಬಾಯಲ್ಲಿಟ್ಟಾಗ ಆರಂಭದಲ್ಲಿ ತುಸು ಸಪ್ಪೆ ಅನಿಸಿತಾದರೂ ಅದರೊಳಗಿನ ಹಸಿಮೆಣಸಿನಕಾಯಿ ಮತ್ತು ಕಾಳುಮೆಣಸಿನ ಪೇಸ್ಟ್ ನಾಲಗೆಗೆ ಸ್ಪರ್ಶವಾಗುತ್ತಲೇ ಉಪ್ಪುಮುಂಚಿಯ ರುಚಿ ಮತ್ತಷ್ಟು ಹೆಚ್ಚಾಯಿತು. ಈಗ ತಾನೇ ಮೀನು ತಿನ್ನಲು ಆರಂಭಿಸುವವರಿಗೆ ಮತ್ತು ಪುಟ್ಟ ಮಕ್ಕಳಿಗೆ ಮುಳ್ಳುಗಳು ಕಡಿಮೆ ಇರುವ ಈ ಮೀನು ಹೇಳಿಮಾಡಿಸಿದ್ದು.

ಕುಚಲಕ್ಕಿ ಅನ್ನದ ಜತೆಗೆ ಚಿಕನ್ ಉರವಲ್‌ನ ಗಸಿ ಬೆರೆಸಿ ತಿಂದಾಗ ಕರಾವಳಿಯಲ್ಲೇ ಇದ್ದಂತೆ ಭಾವ ಮೂಡಿಸಿತು. ಇದರ ಜತೆಗೆ ನೆಂಚಿಕೊಳ್ಳಲು ಸಾಲಾಗಿ ಜೋಡಿಸಿಟ್ಟಿದ್ದ ಸಿಗಡಿ ಕೋಳಿವಾಡ ಊಟದ ಸ್ವಾದವನ್ನು ಮತ್ತಷ್ಟು ಹೆಚ್ಚಿಸಿತು. ಇದಿಷ್ಟು ಮುಗಿಸುವಷ್ಟರಲ್ಲಿ ಕರಾವಳಿಯ ಬಸಿದ ಶ್ಯಾವಿಗೆ, ಇಡ್ಲಿ ಬಂದವು. ಕಾಣೆ ಮೀನಿನ ಸಾರಿನೊಳಗೆ ಅದ್ದಿ ತಿಂದಾಗ ಅದರ ಮಸಾಲೆಯ ಸ್ವಾದ ನಾಲಗೆಯ ರುಚಿಮೊಗ್ಗುಗಳನ್ನು ತಣಿಸಿತು. ಹದವಾಗಿ ಬೆರೆತ ಮಸಾಲೆ ನಾಲಗೆಗಷ್ಟೇ ಅಲ್ಲ ಮನಸಿಗೂ ಆಪ್ಯಾಯವೆನಿವಂತಿತ್ತು. ಕೊನೆಗೆ ಬಂದ ಕುಂಬಳಕಾಯಿ ಹಲ್ವಾ ಅರ್ಥಾತ್ ಕಾಶಿ ಹಲ್ವಾ ಊಟದ ಆಟಕ್ಕೆ ಮುಕ್ತಾಯವನ್ನು ಸೂಚಿಸಿತು. ಹಲ್ವಾದ ಮೇಲಿದ್ದ ವೆನಿಲಾ ಐಸ್‌ಕ್ರೀಂ ಬೇಸಿಗೆಯ ಬೇಗೆಯನ್ನು ತಣಿಸಿತು.


ಚೈತ್ರಾ ಹಾಗೂ ನೀಲ್

ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಸೇಂಟ್ ಮಾರ್ಕ್ಸ್ ರಸ್ತೆ ಭಾಗದಲ್ಲಿ ಕರಾವಳಿ ಸ್ವಾದದ ಆಹಾರಕ್ಕಾಗಿ ಹುಡುಕಾಡುವವರಿಗೆ ‘ಕೊಂಕಣ್’ ಹೇಳಿಮಾಡಿಸಿದ ಹೋಟೆಲ್. ಕೊಂಕಣಿ– ಕರಾವಳಿ ಶೈಲಿಯ ವಿಶೇಷ ಖಾದ್ಯಗಳು ಇಲ್ಲಿನ ವಿಶೇಷ. ಒಂದೂವರೆ ವರ್ಷದ ಹಿಂದೆ ಆರಂಭವಾದ ‘ಕೊಂಕಣ್’ ಈಚೆಗೆ ಸಮುದ್ರಾಹಾರ ಪ್ರಿಯರಿಗೆ ವಿಶೇಷ ಖಾದ್ಯಗಳನ್ನು ರೂಪಿಸಿದೆ.

ಕರಾವಳಿಯ ಸೌರಭ ಸೂಸುವ ಪೆನ್ಸಿಲ್ ಸ್ಕೆಚ್‌ಗಳು, ನೀಟಾಗಿ ಜೋಡಿಸಿಟ್ಟ ಟೇಬಲ್ ಕುರ್ಚಿಗಳು, ಬಿಸಿಲ ಝಳ ಕಡಿಮೆ ಮಾಡುವಂತಿರುವ ಕಿಟಕಿಯ ಬಿದಿರಿನ ಪರದೆಗಳು, ದೊಡ್ಡದಾದ ಕಿಟಕಿಗಳು, ಹಿನ್ನೆಲೆಯಲ್ಲಿ ತೇಲಿಬರುವ ಗೋವಾದ ಹಾಡುಗಳು ಕರಾವಳಿ– ಕೊಂಕಣಿ ಪರಿಸರವನ್ನು ಕಟ್ಟಿಕೊಡುತ್ತವೆ.

ಖಾಸಗಿ ಕಂಪನಿಗಳಲ್ಲಿ ಐಟಿ ಮ್ಯಾನೇಜ್‌ಮೆಂಟ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಚೈತ್ರಾ ಮತ್ತು ನೀಲ್ ಬೆಂಗಳೂರಿಗರಿಗೆ ಸೀಫುಡ್ ಮತ್ತು ಕರಾವಳಿ ಸ್ವಾದದ ಪರಿಚಯಿಸಬೇಕೆಂಬ ಉದ್ದೇಶದಿಂದ ನೌಕರಿ ತೊರೆದು ‘ಕೊಂಕಣ್’ ರೆಸ್ಟೊರೆಂಟ್ ಆರಂಭಿಸಿದವರು. ‘ಅಸಲಿ ಬ್ಯಾಡಗಿ ಮೆಣಸಿನಕಾಯಿ, ಮಂಗಳೂರಿನ ತೆಂಗು, ಕರಾವಳಿಯ ಮಸಾಲ ಸಾಮಗ್ರಿಗಳನ್ನು ಬಳಸಿ ಕಲ್ಲಿನ ರುಬ್ಬುಗುಂಡಿನಲ್ಲಿ ರುಬ್ಬಿ ಖಾದ್ಯಗಳಿಗೆ ಬಳಸುವುದೇ ನಮ್ಮ ವಿಶೇಷ. ಇದುವೇ ನಮ್ಮ ಹೋಟೆಲ್‌ನ ಸ್ವಾದದ ಅಸಲಿಗುಟ್ಟು. ಇದರ ಹಿಂದೆ ನಮ್ಮ ಶೆಫ್ ಶ್ರೀನಿವಾಸ ಕುಂದಾಪುರ ಅವರ ಶ್ರಮವಿದೆ’ ಅನ್ನುತ್ತಾರೆ ನೀಲ್.

ಅಪ್ಪಟ ಕರಾವಳಿ ರುಚಿ ಬಯಸುವವರು ಒಮ್ಮೆ ‘ಕೊಂಕಣ್‌’ಗೆ ಭೇಟಿ ಕೊಡಲು ಅಡ್ಡಿಯಿಲ್ಲ.

ಹೋಟೆಲ್: ಕೊಂಕಣ್ ರೆಸ್ಟೊರೆಂಟ್
ವಿಶೇಷ: ಸುರ್ಮೈ ತವಾ ಫ್ರೈ, ಕರಾವಳಿ ಖಾದ್ಯಗಳು
ಒಬ್ಬರಿಗೆ: ಸ್ಪೆಷಲ್ ಥಾಲಿ ₹ 400 (ಸೋಮವಾರ– ಶುಕ್ರವಾರದವರೆಗೆ)
ಸಮಯ: ಪ್ರತಿದಿನ ಮಧ್ಯಾಹ್ನ 12.30ರಿಂದ 3.30, ರಾತ್ರಿ 7.30ರಿಂದ 11ರವರೆಗೆ
ಸ್ಥಳ: ಕೊಂಕಣ್ ರೆಸ್ಟೊರೆಂಟ್, ನಂ. 48, ಮೊದಲ ಮಹಡಿ, ಚರ್ಚ್‌ಸ್ಟ್ರೀಟ್, ಎಲ್‌ಐಸಿ ಕಟ್ಟಡ ಹಿಂಭಾಗ
ಟೇಬಲ್: 86187 58686

ಬರಹ ಇಷ್ಟವಾಯಿತೆ?

 • 12

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !