ಹಿಸ್ನಾ ಜಾಗತಿಕ ಕೊಂಕಣಿ ಚಲನಚಿತ್ರ ಪುರಸ್ಕಾರ

7

ಹಿಸ್ನಾ ಜಾಗತಿಕ ಕೊಂಕಣಿ ಚಲನಚಿತ್ರ ಪುರಸ್ಕಾರ

Published:
Updated:
Deccan Herald

ವಿಠಲ ಮಲೆಕುಡಿಯ ಕಳೆದ ಒಂಭತ್ತು ವರ್ಷಗಳಿಂದ ಕೊಂಕಣಿ ಸಂಗೀತ ಪುರಸ್ಕಾರ ನೀಡಿ ಸಂಗೀತ ಕ್ಷೇತ್ರದ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಿಸಿಕೊಟ್ಟ ಮಾಂಡ್ ಸೋಭಾಣ್ ಸಾಂಸ್ಕೃತಿಕ ಸಂಘಟನೆ ಈ ಬಾರಿ ಚಲನಚಿತ್ರ ಪುರಸ್ಕಾರವನ್ನು ನೀಡಲು ತಯಾರಿ ನಡೆಸಿದೆ.

ನಿರಂತರ ಬೆಳವಣಿಗೆಗೆ ತೆರೆದುಕೊಳ್ಳುತ್ತಿರುವ ಸಿನಿಮಾ ಜಗತ್ತಿಗೆ ಕೊಂಕಣಿ ಭಾಷಾ ಸಿನಿಮಾವೂ ಹೊರತಲ್ಲ. ಸಿನಿಮಾ ಕ್ಷೇತ್ರ, ಕಲಾವಿದರನ್ನು ಗೌರವಿಸಲು ಮತ್ತು ಇನ್ನಷ್ಟು ಸಿನಿಮಾ ಉತ್ತೇಜನಕ್ಕೆ ಕೊಂಕಣಿ ಪ್ರಮುಖ ಸಾಂಸ್ಕೃತಿಕ ಸಂಘಟನೆ ಮಾಂಡ್ ಸೋಭಾಣ್ ಪ್ರಥಮ ಬಾರಿಗೆ ಕೊಂಕಣಿ ಚಲನಚಿತ್ರ ಪುರಸ್ಕಾರನೀಡುತ್ತಿದೆ.

ಈ ಬಾರಿ ಕೊಂಕಣಿ ಚಲನಚಿತ್ರ ಪುರಸ್ಕಾರ 8 ವಿಭಾಗಗಳಲ್ಲಿ ನೀಡಲಾಗುತ್ತಿದೆ. ಈಗಾಗಲೇ 8 ಸಿನಿಮಾಗಳು ನಮಗೆ ಬಂದಿದೆ. ಕೊಂಕಣಿ ಸಿನಿಮಾ ಕ್ಷೇತ್ರಕ್ಕೆ ಪ್ರೋತ್ಸಾಹ ಬೇಕು. ಕೊಂಕಣಿ ಸಿನಿಮಾ ನೋಡುಗರ ಪ್ರತಿಕ್ರಿಯೆ ಕಡಿಮೆ ಇರುವುದರಿಂದ ಈ ಕ್ಷೇತ್ರ ಬೆಳೆಯುತ್ತಿಲ್ಲ, ಅದಕ್ಕಾಗಿ ಬೆಂಬಲ ನೀಡುವ ಭಾಗವಾಗಿ ಈ ವರ್ಷದಿಂದ ಪುರಸ್ಕಾರ ನೀಡಲು ಪ್ರಾರಂಭಿಸಿದ್ದೇವೆ. ಮುಂದಿನ ವರ್ಷ ಇನ್ನೂ ಹೆಚ್ಚು ಸಿನಿಮಾಗಳು ಬರುವ ನಿರೀಕ್ಷೆ ಇದೆ. ಪ್ರತಿ 2 ವರ್ಷಕ್ಕೆ ಒಮ್ಮೆ ಚಲನಚಿತ್ರ ಪುರಸ್ಕಾರ ನೀಡುವ ಆಲೋಚನೆಯಿದೆ ಎನ್ನುತ್ತಾರೆ ಸೋಭಾಣ್ ಮುಖ್ಯಸ್ಥ ಎರಿಕ್ ಒಝಾರಿಯೋ.

ಈ ಪುರಸ್ಕಾರಕ್ಕೆ ಯಾವುದೇ ಪ್ರದೇಶದ ಜಾತಿ, ಧರ್ಮ ನೋಡದೇ ಕೊಂಕಣಿ ಭಾಷೆಗೆ ಒತ್ತು ನೀಡಲಾಗಿದೆ. ಗೋವಾದಿಂದ 4, ಮಂಗಳೂರಿನಿಂದ 2 ಹಾಗೂ ಜಿಎಸ್‌ಬಿ ಸಮುದಾಯದಿಂದ 2 ಸಿನಿಮಾಗಳು ಬಂದಿದೆ. 8 ವಿಭಾಗದಲ್ಲಿ ನೀಡುವ ಪ್ರಶಸ್ತಿ ಶ್ರೇಷ್ಠ ಚಲನಚಿತ್ರ, ಶ್ರೇಷ್ಠ ನಿರ್ದೇಶಕ, ಶ್ರೇಷ್ಠ ನಟ, ಶ್ರೇಷ್ಠ ನಟಿ, ಶ್ರೇಷ್ಠ ಪೋಷಕ ನಟ, ಶ್ರೇಷ್ಠ ಪೋಷಕ ನಟಿ, ಶ್ರೇಷ್ಠ ಸಾಹಿತ್ಯ, ಶ್ರೇಷ್ಠ ಸಂಗೀತ ವಿಭಾಗ ಒಳಗೊಂಡಿದೆ.

ಈಗಾಗಲೇ ಶ್ರೇಷ್ಠ ಚಲನಚಿತ್ರ ವಿಭಾಗದಲ್ಲಿ ‘ಅಂತು’, ‘ಕನೆಕ್ಷನ್’, ‘ಸೊಫಿಯಾ’ ಸಿನಿಮಾಗಳು ನಾಮಿನೇಟ್ ಆಗಿವೆ. ಬೆಸ್ಟ್ ಡೈರೆಕ್ಟರ್‌ಗಳಾಗಿ ಕ್ರೈಸ್ಟ್ ಸಿಲ್ವ, ಹ್ಯಾರಿ ಫರ್ನಾಂಡಿಸ್, ಕರೋಪಾಡಿ ಅಕ್ಷಯ ನಾಯಕ್ ಹೆಸರು ದಾಖಲಾಗಿದೆ. ಉತ್ತಮ ನಟರಾಗಿ ಸೊಫಿಯಾ ಚಿತ್ರದ ಎಲ್ಟನ್ ಮಸ್ಕರೇನಸ್, ಸೋಲ್ ಕರ್ರಿ ಚಿತ್ರದ ಜಾಸ್ಕಿ ಶರೂಫ್, ಅಂತು ಚಿತ್ರದ ಸುಜಯ್ ಶ್ಯಾನುಭಾಗ್ ಹಾಗೂ ಉತ್ತಮ ನಟಿಯಾಗಿ ಸೊಫಿಯಾ ಚಿತ್ರದ ಎಸ್ಟರ್ ನರೋನ್ಹಾ, ಏಕ್ ಅಸ್ಲ್ಯಾರ್ ಏಕ್ ನಾ ಚಿತ್ರದ ಪ್ರಿಯಾ ಮಿನೇಜಸ್, ಸೋಲ್ ಕರ್ರಿ ಚಿತ್ರದ ಸೀಮಾ ಬಿಸ್ವಾಸ್ ಹೆಸರು ಪಟ್ಟಿಯಲ್ಲಿದೆ. ಶ್ರೇಷ್ಠ ಪೋಷಕ ನಟರಾಗಿ ಚಿದಾನಂದ ಕಾಮತ್, ನಾಗೇಂದ್ರ ಶೆಣೈ, ರೋನ್ ರೋಡ್ರಿಗಸ್, ಪೋಷಕ ನಟಿಯಾಗಿ ಫ್ರಿವಿತಾ ಡಿಸೋಜ, ಪೂರ್ಣಿಮಾ ಸುರೇಶ್, ಸೋನಂ ಮೋನಾಜ್ಕರ್ ಹೆಸರು ಅಂತಿಮ ಪಟ್ಟಿಯಲ್ಲಿದೆ. ಉತ್ತಮ ಸಾಹಿತ್ಯಕ್ಕೆ ಹ್ಯಾರಿ ಫರ್ನಾಂಡಿಸ್, ಕರೋಪಾಡಿ ಅಕ್ಷಯ್ ನಾಯಕ್, ಪ್ರದೀಪ್ ಬಾರ್ಬೊಝಾ ಮತ್ತು ಸಂಗೀತ ಕ್ಷೇತ್ರಕ್ಕೆ ರಮಿತ್ ಮಹೇಶ್, ಅನಿಲ್ ವೇಗಸ್, ಕನೆಕ್ಷನ್ ಸಿನಿಮಾದ ಕ್ರಿಸ್ಟ್ ಸಿಲ್ವ, ಜೋಲ್ ಫರ್ನಾಂಡಿಸ್ ಟೈರೊನ್ ನರೋನ್ಹಾ ನಾಮಿನೇಟ್ ಆಗಿದ್ದಾರೆ.

ಪುರಸ್ಕಾರಕ್ಕೆ ತೀರ್ಪುಗಾರರಾಗಿ ಮಂಗಳೂರಿನ ಡಾ.ರಿಚರ್ಡ್ ಕ್ಯಾಸ್ತಲಿನೋ, ಗೋವಾದ ಜಿತೇಂದ್ರ ಶಿಕೇರ್‌ಕರ್, ಡಾ.ರಾಜಯ್ ಪವಾರ್, ಹೊನ್ನಾವರದ ರಾಜೇಶ್ ಫರ್ನಾಂಡಿಸ್,  ಜೋನ್ ಎಂ.ಪೆರ್ಮನ್ನೂರು, ಬಿ ಚರಣ್ ಕುಮಾರ್, ಡೊಲ್ವಿನ್ ಎಂ.ಮೆಂಡೊನ್ಸಾ ಕೊಳಲಗಿರಿ ತಲಾ ಮೂವರನ್ನು ಅಂತಿಮಗೊಳಿಸಿದ್ದಾರೆ.

ಪ್ರಶಸ್ತಿ ಪ್ರದಾನ ಡಿಸೆಂಬರ್ 9 ರಂದು ಸಂಜೆ 6 ಗಂಟೆಯಿಂದ ನಗರದ ಶಕ್ತಿನಗರದ ಕಲಾಂಗಣ್ ಸಭಾಂಗಣದಲ್ಲಿ ನಡೆಯಲಿದ್ದು, ವಿಜೇತರ ಹೆಸರನ್ನು ಘೋಷಿಸಲಾಗುತ್ತದೆ. ಪ್ರತೀ ವಿಭಾಗಕ್ಕೆ ₹25 ಸಾವಿರ ನಗದು, ಸನ್ಮಾನ, ಟ್ರೋಫಿ ನೀಡಲಾಗುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !