ಚೆಂಡು ಹೂ, ಕನಕಾಂಬರದಲ್ಲಿ ಕಂಡ ಬದುಕು

ಬುಧವಾರ, ಮಾರ್ಚ್ 20, 2019
26 °C
ಸಂತೇಮರಹಳ್ಳಿ: ಒಂದೂವರೆ ಎಕರೆಯಲ್ಲಿ ಕೃಷಿ, ಹೈನುಗಾರಿಕೆಯಲ್ಲೂ ಸಾಧನೆ

ಚೆಂಡು ಹೂ, ಕನಕಾಂಬರದಲ್ಲಿ ಕಂಡ ಬದುಕು

Published:
Updated:
Prajavani

ಸಂತೇಮರಹಳ್ಳಿ: ಚೆಲುವಾಗಿ ಅರಳಿ ನಿಂತಿರುವ ಚೆಂಡು ಹೂ, ಅಂಬರಕ್ಕೆ ಮುಖ ಮಾಡಿ ನಿಂತಿರುವ ಕನಕಾಂಬರ... ಸಂತೇಮರಹಳ್ಳಿಯ ಪರಶಿವಪ್ಪ ಅವರ ತೋಟದ ಚಿತ್ರಣ ಇದು. ನೋಡುಗರು ಸ್ವಲ್ಪ ಹೊತ್ತು ನಿಂತು ತೋಟದತ್ತ ದೃಷ್ಟಿ ಹಾಯಿಸಿಯೇ ಮುಂದುವರಿಯುವಷ್ಟರ ಮಟ್ಟಿಗೆ ಅವರ ತೋಟದಲ್ಲಿ ಹೂಗಳು ಅರಳಿವೆ.

ಪರಶಿವಪ್ಪ ಅವರು ಒಂದೂವರೆ ಎಕರೆ ಜಮೀನಿನಲ್ಲಿ ಅರ್ಧ ಎಕರೆಯಲ್ಲಿ ಚೆಂಡು ಹೂ, ಅರ್ಧ ಎಕರೆಯಲ್ಲಿ ಕನಕಾಂಬರ ಹಾಗೂ ಉಳಿದರ್ಧ ಎಕರೆಯಲ್ಲಿ ಹಸುಗಳಿಗೆ ಮೇವು ಬೆಳೆ ಬೆಳೆಯುತ್ತಾ ಸಂಪೂರ್ಣವಾಗಿ ತಮ್ಮನ್ನು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ಮಂಡ್ಯ ಜಿಲ್ಲೆ ಮಾರಸಿಂಗನಹಳ್ಳಿಯ ನರ್ಸರಿಯಲ್ಲಿ ಚೆಂಡು ಮಲ್ಲಿಗೆ ಗಿಡಗಳಿಗೆ ₹2.5 ಹಾಗೂ ಕನಕಾಂಬರ ಗಿಡಗಳಿಗೆ ₹1 ತಲಾ 2,000  ಪೈರುಗಳನ್ನು ತಂದು ಜಮೀನಿನಲ್ಲಿ ನಾಟಿ ಮಾಡಿದ್ದಾರೆ. ನಾಟಿ ಮಾಡಿದ 3 ತಿಂಗಳಿಗೆ ಸರಿಯಾಗಿ ಗಿಡಗಳು ಹೂ ಬಿಡಲು ಆರಂಬಿಸಿವೆ.

ನೀರಾವರಿ, ಸ್ವಂತ ಹಸುಗಳ ಸಾವಯವ ಗೊಬ್ಬರದ ಫಲವಾಗಿ ಯಾವುದೇ ಕೂಲಿ ಆಳುಗಳಿಗೆ ಹಣ ವ್ಯಯ ಮಾಡದೇ ತಾವೇ ಶ್ರಮ ವಹಿಸಿ ಫಲ ಕಾಣುತ್ತಿದ್ದಾರೆ. ಪೈರುಗಳು ಔಷಧಿ ಸೇರಿದಂತೆ ₹10 ಸಾವಿರ ಮಾತ್ರ ಇವರಿಗೆ ಖರ್ಚಾಗಿದೆ.

ಶ್ರಮಕ್ಕೆ ತಕ್ಕ ದುಡ್ಡು: ಹೂಗಳು ಕಟಾವು ಹಂತಕ್ಕೆ ಬಂದ ನಂತರ 2–3 ದಿನಗಳಿಗೊಮ್ಮೆ ಹೂ ಮಾರಾಟದಿಂದ ಪರಶಿವಪ್ಪ ಅವರು ಹಣ ಗಳಿಸುತ್ತಿದ್ದಾರೆ. ಚೆಂಡು ಹೂ ಕೆಜಿಗೆ ₹30ರಂತೆ ಮಾರಾಟವಾಗುತ್ತಿದೆ. 3 ದಿನಗಳಿಗೊಮ್ಮೆ 80ಕೆಜಿ ವರೆಗೂ ಮಾರಾಟ ಮಾಡುತ್ತಾರೆ. ಗೌರಿ-ಗಣೇಶ ಹಬ್ಬದ ಸಮಯದಲ್ಲಿ ಕೆಜಿಗೆ ₹100 ವರೆಗೂ ಮಾರಾಟ ಮಾಡಿದ್ದಾರೆ. ಕನಕಾಂಬರ ಹೂವನ್ನು ನಾಲ್ಕೈದು ದಿನಗಳಿಗೊಮ್ಮೆ ಬಿಡಿಸುತ್ತಾರೆ. ಕೆಜಿಗೆ ₹300ರಿಂದ ₹600 ರವರೆಗೂ ಮಾರಾಟ ಮಾಡುತ್ತಾರೆ. ಲಕ್ಷ್ಮೀ ಪೂಜೆ, ಹಬ್ಬ ಹರಿ ದಿನಗಳಲ್ಲಿ ಕೆಜಿಗೆ ₹1,000ದವರೆಗೆ ಹೋದ ನಿದರ್ಶನಗಳೂ ಇವೆ. 

ಹೂ ಖರೀದಿಸುವವರು ಬೇಡಿಕೆ ಇದ್ದ ಸಮಯದಲ್ಲಿ ಮನೆ ಬಾಗಿಲಿಗೆ ಬಂದು ಖರೀದಿಸುತ್ತಾರೆ. ಕೆಲವೊಂದು ಸಮಯದಲ್ಲಿ ಪರಶಿವಪ್ಪ ಅವರೇ ಮಾರುಕಟ್ಟೆಗಳಿಗೆ ಹೋಗಿ ಮಾರಾಟ ಮಾಡಿ ಬರುತ್ತಾರೆ.

ಕಳೆ ಗಿಡವೇ ಗೊಬ್ಬರ: ಹೆಚ್ಚು ರಾಸಾಯನಿಕ ಗೊಬ್ಬರವನ್ನು ಬಳಸದೆಯೇ ಇವರು ಕೃಷಿ ಮಾಡುತ್ತಾರೆ. ಜಮೀನಿನಲ್ಲಿ ಬೆಳೆಯುವ ಕಳೆಗಿಡಗಳನ್ನು ಹಸಿರೆಲೆ ಗೊಬ್ಬರವನ್ನಾಗಿಸಿ ಹೂ ಗಿಡಗಳಿಗೆ ಹಾಕುತ್ತಾರೆ. ವಾರಕೊಮ್ಮೆ ಔಷಧಿಗೆ ಮಾತ್ರ ಹಣ ಖರ್ಚು ಮಾಡುತ್ತಾರೆ. ಹೂ ಬಿಡಿಸುವ ಸಮಯದಲ್ಲಿ ಮನೆಯ ಸದಸ್ಯರೂ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾರೆ.

ಹೈನುಗಾರಿಕೆ: ಪರಶಿವಪ್ಪ ಅವರು ಹೂಗಳನ್ನು ಮಾತ್ರ ಅವಲಂಬಿಸದೆ, ಹೈನುಗಾರಿಕೆಯನ್ನೂ ನಡೆಸುತ್ತಾರೆ. ಹಸುಗಳಿಗೆ ಅವರು ಹೊರಗಡೆಯಿಂದ ಮೇವು ತರುವುದಿಲ್ಲ. ಅರ್ಧ ಎಕರೆ ಜಮೀನಿನಲ್ಲಿಯೇ ಬೇಕಾದಷ್ಟು ಮೇವನ್ನು ಬೆಳೆಯುತ್ತಿದ್ದಾರೆ. ಹೈನುಗಾರಿಕೆಯಲ್ಲೂ ಅವರು ಸಾಫಲ್ಯ ಕಂಡಿದ್ದಾರೆ.

ಇವರ ಹೂ ಬೆಳೆ ಹಾಗೂ ಹೈನುಗಾರಿಕೆಯ ಕಸಬನ್ನು ಮೆಚ್ಚಿದ ಕೆಲವು ರೈತರು ಇವರ ಮಾದರಿಯನ್ನು ಅನುಸರಿಸಲು ಇವರ ತೋಟಕ್ಕೆ ಆಗಮಿಸಿ ಮಾಹಿತಿ ಪಡೆದು ಹೋಗುತ್ತಿದ್ದಾರೆ.

‘ಕುಟುಂಬದ ಕಸುಬು’

‘ಚೆಂಡು ಹೂ ಮತ್ತು ಕನಕಾಂಬರ ಹೂವಿನ ಬೆಳೆಗೆ ನಮ್ಮ ಕುಟುಂಬ ಹೊಂದಿಕೊಂಡಿದೆ. ಇವುಗಳಿಂದಾಗಿ ಪ್ರತಿದಿನ ಸಂಪಾದನೆ ಮಾಡುತ್ತಿದ್ದೇವೆ. ಯಾವುದೇ ಸಮಸ್ಯೆ ಎದುರಾಗಿಲ್ಲ. ಹೂ ಫಸಲು ಮುಗಿದ ನಂತರ ಹೊಸದಾಗಿ ಹೂ ಬಿಡುವವರೆಗೆ ಹೈನುಗಾರಿಕೆಯನ್ನು ನೆಚ್ಚಿಕೊಂಡಿದ್ದೇವೆ’ ಎಂದು ಪರಶಿವಪ್ಪ ‘ಪ್ರಜಾವಾಣಿ‘ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !