ಸಾವಯವ ಮಿಶ್ರ ಕೃಷಿಕ ಜಾನ್‌ ಜೋಸೆಫ್‌

ಬುಧವಾರ, ಏಪ್ರಿಲ್ 24, 2019
29 °C
ಒಂದೂವರೆ ಎಕರೆ ಜಮೀನಿನಲ್ಲೇ ಬೇಸಿಗೆಯಲ್ಲೂ ಸಾವಯವ ಮಿಶ್ರ ಬೇಸಾಯ

ಸಾವಯವ ಮಿಶ್ರ ಕೃಷಿಕ ಜಾನ್‌ ಜೋಸೆಫ್‌

Published:
Updated:
Prajavani

ಹನೂರು: ಬೇಸಾಯದಲ್ಲಿ ಲಾಭವಿಲ್ಲ ಎನ್ನುತ್ತಾ ಮೂಗು ತಿರುಗಿಸಿಕೊಂಡು ಇರುವ ಜಮೀನನ್ನು ಪಾಳು ಬಿಟ್ಟು ಕೂಲಿ ಕೆಲಸಕ್ಕೆ ತೆರಳುತ್ತಿರುವ ಇಂದಿನ ಕೃಷಿಕರ ನಡುವೆ ಇಲ್ಲೊಬ್ಬ ರೈತ ಇರುವಂತಹ ಸ್ವಲ್ಪವೇ ಜಮೀನಿನಲ್ಲಿ ಸಾವಯವ ಮಿಶ್ರ ಕೃಷಿ ಮಾಡಿ ಆದಾಯದ ಮೂಲ ಕಂಡುಕೊಂಡಿದ್ದಾರೆ.

ತಾಲ್ಲೂಕಿನ ಮಾರ್ಟಳ್ಳಿ ಬಳಿ ಇರುವ ಶಿಲುಬೆನಗರ ಗ್ರಾಮದ ಜಾನ್‍ ಜೋಸೆಫ್ ಅವರು ತಮಗೆ ಇರುವ ಅಲ್ಪ ಜಮೀನಿನಲ್ಲೇ ಬೇಸಿಗೆಯಲ್ಲೂ ಮಿಶ್ರ ಕೃಷಿ ಮಾಡಿ ಗಮನ ಸೆಳೆದಿದ್ದಾರೆ. ಒಂದೂವರೆ ಎಕರ ಜಮೀನಿನಲ್ಲೇ ವಿವಿಧ ಹಣ್ಣು, ತರಕಾರಿ ಬೆಳೆದು ಜೀವನ ನಿರ್ವಹಣೆಯಲ್ಲಿ ನಿರತರಾಗಿದ್ದಾರೆ.

ಮಿಶ್ರ ಬೆಳೆ: ಜಮೀನಿನಲ್ಲಿ ಕೊರೆಸಲಾಗಿರುವ ಒಂದು ಕೊಳವೆಬಾವಿಯಿಂದ ಈ ಬೇಸಿಗೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಇದರಿಂದ ಧೃತಿಗೆಡದ ರೈತ ಜೋಸೆಫ್ ಕೃಷಿ ಹೊಂಡ ನಿರ್ಮಿಸಿ ಸಮೀಪದ ಜಮೀನಿನಿಂದ ನೀರು ಸಂಗ್ರಹಣೆಗೆ ಮುಂದಾಗಿ ಕೃಷಿ ಮಾಡುತ್ತಿದ್ದಾರೆ. ಇರುವ ಒಂದೂವರೆ ಎಕರೆ ಜಮೀನಿನಲ್ಲಿ ಸಪೋಟ, ನಿಂಬೆ, ಮಾವು, ಪರಂಗಿ, ಟೊಮೆಟೊ, ಬದನೆ, ಕೊತ್ತಂಬರಿ ಸೊಪ್ಪು ಬೆಳೆದಿದ್ದಾರೆ. ಇದರೊಂದಿಗೆ ನಾಲ್ಕು ಹಸುಗಳನ್ನು ಸಾಕುತ್ತಿದ್ದಾರೆ.

ಕೈಹಿಡಿದ ಸಾವಯವ ಕೃಷಿ: ಸಾಮಾನ್ಯವಾಗಿ ಬೇಸಿಗೆ ವೇಳೆ ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುವುದರಿಂದ ಬೆಳೆಗಳು ಒಣಗುತ್ತವೆ. ಆದರೆ, ಕಳೆದ 15 ವರ್ಷಗಳಿಂದ ಅವರು ಅನುಸರಿಸಿಕೊಂಡು ಬಂದಿರುವ ಸಾವಯವ ಕೃಷಿ ಅವರ ಜಮೀನನ್ನು ಸದಾ ಹಸಿರಿನಿಂದ ಕಂಗೊಳಿಸುವಂತೆ ಮಾಡಿದೆ.

ಗಿಡಗಳು ಫಸಲು ನೀಡಿದ ಬಳಿಕ ಒಣಗಿ ಹೋಗುತ್ತವೆ. ಆ  ಗಿಡಗಳನ್ನು ಜಮೀನಿನಲ್ಲೇ ಕೊಳೆಯಲು ಬಿಡುವುದರಿಂದ ಭೂಮಿಗೆ ಉತ್ತಮ ಪೋಷಕಾಂಶ ದೊರೆತು ಮಣ್ಣಿನ ಫಲವತ್ತತೆಯೂ ಹೆಚ್ಚಲಿದೆ. ಅಲ್ಲದೇ, ಹಸುಗಳ ಗೊಬ್ಬರವನ್ನು ಫಸಲಿಗೆ ಬಳಸುತ್ತೇನೆ. ಒಂದೂವರೆ ದಶಕದಿಂದ ಯಾವುದೇ ರಾಸಾಯನಿಕ ಗೊಬ್ಬರ ಬಳಸಿಲ್ಲ. ಇದರ ಪರಿಣಾಮ ಮಣ್ಣಿನ ಪೋಷಕಾಂಶ ಗುಣಮಟ್ಟದಿಂದ ಕೂಡಿದೆ. ಬೆಳೆಗಳಿಗೆ ನೀರಿನ ಕೊರತೆಯಾದರೂ ಉತ್ತಮ ಇಳುವರಿ ಪಡೆಯಬಹುದು ಎಂದು ಜೋಸೆಫ್‌ ಅವರು ‘ಪ್ರಜಾವಾಣಿ’ಯೊಂದಿಗೆ ತಮ್ಮ ಅನುಭವ ಬಿಚ್ಚಿಟ್ಟರು.

ಅನಿಷಾ ನೆರವು: ಕೃಷಿಯ ಬಗ್ಗೆ ಇವರಲ್ಲಿದ್ದ ಆಸಕ್ತಿಯನ್ನು ಗಮನಿಸಿದ ಕಡಬೂರಿನ ಅನಿಷಾ ಸಂಸ್ಥೆಯವರು ನಾಟಿ ಬಿತ್ತನೆ ಬೀಜಗಳನ್ನು ನೀಡುವ ಮೂಲಕ ಇವರಲ್ಲಿನ ಕೃಷಿ ಆಸಕ್ತಿಯನ್ನು ಮತ್ತಷ್ಟು ಹೆಚ್ಚಿಸಿದರು. ಬಿತ್ತನೆ ಬೀಜದ ಜತೆಗೆ ಸಾವಯವ ಕೃಷಿಯ ಪದ್ಧತಿ ಹಾಗೂ ದೇಸಿ ಗೊಬ್ಬರ ಬಳಸಿ ಉತ್ತಮ ಇಳುವರಿ ಪಡಯುವುದರ ಬಗ್ಗೆ ತರಬೇತಿ ನೀಡಿದರು. ಇದರ ಪರಿಣಾಮ ಇಂದು ಜೋಸೆಫ್ ಅವರು ಮಾದರಿ ಕೃಷಿಕರಾಗಿ ಹೊರಹೊಮ್ಮಿದ್ದಾರೆ. ಬೆಳೆಯುವ ತರಕಾರಿಗಳನ್ನು ತಾವೇ ಅಂಗಡಿಗಳಿಗೆ ಹೋಗಿ ಮಾರಾಟ ಮಾಡಿ ಸ್ವಾಭಿಮಾನದ ಬದುಕು ಕಟ್ಟಿಕೊಂಡಿದ್ದಾರೆ.

ಬೆಳೆ ಬದಲಾವಣೆಯಿಂದ ಹೆಚ್ಚಿನ ಇಳುವರಿ

ಹಿಂದೆ ಕೃಷಿ ನಂಬಿ ಬದುಕುತ್ತಿದ್ದೆವು. ಅದಕ್ಕಾಗಿಯೇ ನಾವು ಯಾವ ವೃತ್ತಿ ಕಲಿಯಲು ಮುಂದಾಗಲಿಲ್ಲ. ಆದರೆ, ಇಂದು ಕೃಷಿಯಲ್ಲಿ ನಾವು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಸಿಗುತ್ತಿಲ್ಲ. ಕೃಷಿ ಬಿಟ್ಟು ಬೇರೆ ಕೆಲಸ ಮಾಡಲು ಆಗುವುದಿಲ್ಲ ಮತ್ತು ಮನಸ್ಸೂ ಇಲ್ಲ. ಹೆಚ್ಚಿನ ಇಳುವರಿಗಾಗಿ ಹೆಚ್ಚೆಚ್ಚು ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ಬಳಸುವ ಬದಲು ಪ್ರತಿ ವರ್ಷ ಬೆಳೆಗಳನ್ನು ಬದಲಾಯಿಸಬೇಕು. ಇದರಿಂದ ಭೂಮಿಯ ಫಲವತ್ತತೆ ಹೆಚ್ಚುವ ಜೊತೆಗೆ ಹೆಚ್ಚಿನ ಇಳುವರಿ ಪಡೆಯಬಹುದು. ಮಣ್ಣಿನ ಆರೋಗ್ಯ ಕೂಡ ಕಾಪಾಡಬಹುದು ಎನ್ನುತ್ತಾರೆ ರೈತ ಜಾನ್‌ ಜೋಸೆಫ್.

ಬರಹ ಇಷ್ಟವಾಯಿತೆ?

 • 8

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !