ವಿಜಯಪುರ ಮಹಾನಗರ ಪಾಲಿಕೆಯ ಕೊನೆ ಬಜೆಟ್‌ ಅಧಿವೇಶನ ಸೋಮವಾರ..!

7
ಬರೋಬ್ಬರಿ ನಾಲ್ಕು ತಿಂಗಳಾದರೂ ನಡೆಯದ ಸಾಮಾನ್ಯ ಸಭೆ; ಇದೇ ಕೊನೆಯೋ..?

ವಿಜಯಪುರ ಮಹಾನಗರ ಪಾಲಿಕೆಯ ಕೊನೆ ಬಜೆಟ್‌ ಅಧಿವೇಶನ ಸೋಮವಾರ..!

Published:
Updated:
Prajavani

ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆಯ ಚುನಾಯಿತ ಜನಪ್ರತಿನಿಧಿಗಳ ಮೊದಲ ಆಡಳಿತ ಮಂಡಳಿಯ ಕೊನೆ ಅವಧಿಯ ಬಜೆಟ್‌ ಅಧಿವೇಶನ ಸೋಮವಾರ (ಫೆ 11) ನಡೆಯಲಿದೆ.

ಹಲವು ಕಟು ಟೀಕೆಗಳ ನಡುವೆಯೂ ಯಥಾಪ್ರಕಾರ ಭೂತನಾಳ ಕೆರೆ ಅಂಗಳದಲ್ಲಿ ಬಜೆಟ್‌ ಅಧಿವೇಶನ ನಿಗದಿಯಾಗಿದೆ. ಬಜೆಟ್‌ ಮುಗಿದ ಬಳಿಕ ಸದಸ್ಯರ ಸಾಮೂಹಿಕ ಫೋಟೊ ಸೆಷನ್‌ ಆಯೋಜನೆಗೊಂಡಿದೆ. ಇದು ಹಲವು ಆಯಾಮದ ಕುತೂಹಲದ ಚರ್ಚೆಗೆ ಗ್ರಾಸವೊದಗಿಸಿದೆ.

‘ಸೋಮವಾರದ ಬಜೆಟ್‌ ಸಭೆಯೇ ಪಾಲಿಕೆ ಆಡಳಿತ ಮಂಡಳಿಯ ಕೊನೆ ಸಭೆ ಆಗಲಿದೆಯಾ ? ಎಸಿಬಿ ಉರುಳಿನಿಂದ ತಪ್ಪಿತಸ್ಥರನ್ನು ರಕ್ಷಿಸಲು, ಪಾಲಿಕೆಯಲ್ಲಿ ಮೇಲುಗೈ ಹೊಂದಿರುವ ಜಿಲ್ಲೆಯ ಪ್ರಭಾವಿ ಹಾಗೂ ಅಧಿಕಾರಿಗಳ ಒತ್ತಡಕ್ಕೆ ಮಣಿದಿರುವ ಮೇಯರ್ ಮತ್ತೊಂದು ಸಾಮಾನ್ಯ ಸಭೆ ಕರೆಯುವುದಿಲ್ಲವಾ..?’

‘ಫೆಬ್ರುವರಿ ಕಳೆದರೆ ಸಹಜವಾಗಿಯೇ ಲೋಕಸಭಾ ಚುನಾವಣೆಯ ಅಧಿಸೂಚನೆ ಪ್ರಕಟಗೊಳ್ಳಲಿದೆ. ಮೇ ಅಂತ್ಯದವರೆಗೂ ಚುನಾವಣಾ ನೀತಿ ಸಂಹಿತಿ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಸಾಮಾನ್ಯ ಸಭೆ ನಡೆಸಲು ಸಾಧ್ಯವಿಲ್ಲ.’

‘ಇನ್ನೂ ಮುಂಬರುವ ಜುಲೈಗೆ ಪಾಲಿಕೆಯ ಹಾಲಿ ಆಡಳಿತ ಮಂಡಳಿಯ ಐದು ವರ್ಷದ ಅಧಿಕಾರದ ಅವಧಿಯೇ ಪೂರ್ಣಗೊಳ್ಳಲಿದೆ. ಈ ಕಡಿಮೆ ಅವಧಿಯಲ್ಲಿ ಮೇಯರ್ ಮತ್ತೊಂದು ಸಾಮಾನ್ಯ ಸಭೆಯನ್ನು ನಡೆಸುತ್ತಾರಾ ಎಂಬುದೇ ನಮಗೆ ಯಕ್ಷ ಪ್ರಶ್ನೆಯಾಗಿ ಕಾಡಲಾರಂಭಿಸಿದೆ’ ಎಂದು ಹೆಸರು ಬಹಿರಂಗಗೊಳಿಸಲಿಚ್ಚಿಸದ ಮಹಾನಗರ ಪಾಲಿಕೆಯ ಸದಸ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಹೋದ ವರ್ಷ ಬಜೆಟ್‌ ಅಧಿವೇಶನ ಆರಂಭಗೊಳ್ಳುತ್ತಿದ್ದಂತೆ, ಬಹುತೇಕ ಸದಸ್ಯರು ಸಾಮಾನ್ಯ ಸಭೆ ಕರೆಯದಿರುವ ಕುರಿತು ಆಗಿನ ಮೇಯರ್ ವಿರುದ್ಧ ಕೆಂಡಾಮಂಡಲರಾಗಿದ್ದರು. ಆಗ ಮೇಯರ್ 10 ದಿನದೊಳಗೆ ಸಾಮಾನ್ಯ ಸಭೆ ನಡೆಸುವೆ ಎಂಬ ಮಾತು ನೀಡಿದ್ದರು.’

‘ತಮ್ಮ ಅಧಿಕಾರದ ಅವಧಿ ಮುಗಿದರೂ ಸಾಮಾನ್ಯ ಸಭೆ ನಡೆಸಲಿಲ್ಲ. ಪೌರ ಸನ್ಮಾನ ನೀಡಲು, ಪಾಲಿಕೆಯ ಆಸ್ತಿ ಲೀಜ್‌ಗೆ ಕೊಡಲು ತುರ್ತು ಸಭೆ ಕರೆದಿದ್ದರು. ಈಗಲೂ ಅದೇ ಪುನರಾವರ್ತನೆಯಾಗಲಿದೆ. ಈಗಿನ ಮೇಯರ್‌ ಸಹ ನಡೆಸಿರುವುದು ಒಂದೇ ಸಭೆ. ಇದು ಬಜೆಟ್‌. ಮತ್ತೆ ತುರ್ತು ಸಭೆ ನಡೆದರೆ, ನೂತನವಾಗಿ ಆಯ್ಕೆಯಾದ ಲೋಕಸಭಾ ಸದಸ್ಯರಿಗೆ ಪೌರ ಸನ್ಮಾನ ನೀಡಲು ಸಭೆ ಕರೆಯಬಹುದು’ ಎಂದು ಹೆಸರು ಬಹಿರಂಗಗೊಳಿಸಲಿಚ್ಚಿಸದ ಹಿರಿಯ ಸದಸ್ಯರೊಬ್ಬರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ತಪ್ಪಿತಸ್ಥರ ವ್ಯವಸ್ಥಿತ ರಕ್ಷಣೆ..!

2018ರ ಅ.12ರಂದು ನಡೆದಿದ್ದ ಮುಂದುವರೆದ ಸಾಮಾನ್ಯ ಸಭೆಯೇ ಐದನೇ ಅವಧಿಯ ಮೇಯರ್‌–ಉಪ ಮೇಯರ್‌ ಆಡಳಿತದಲ್ಲಿ ನಡೆದ ಕೊನೆಯ ಸಾಮಾನ್ಯ ಸಭೆ. ಬರೋಬ್ಬರಿ ನಾಲ್ಕು ತಿಂಗಳು ಗತಿಸಿದರೂ; ಮತ್ತೊಂದು ಸಾಮಾನ್ಯ ಸಭೆ ನಡೆದಿಲ್ಲ.

‘ಪಾಲಿಕೆ ವತಿಯಿಂದ 2017–18ನೇ ಸಾಲಿನಲ್ಲಿ ನಡೆದ ಕಳಪೆ ಕಾಮಗಾರಿ, ಅಕ್ರಮಗಳ ತನಿಖೆಯನ್ನು ಎಸಿಬಿಗೆ ವಹಿಸಬೇಕು ಎಂಬ ಮಹತ್ವದ ಠರಾವನ್ನು ಈ ಹಿಂದಿನ ಸಭೆಯಲ್ಲಿ ಅಂಗೀಕರಿಸಲಾಗಿತ್ತು. ಇದರ ಜತೆಯೇ ಹಿಂದಿನ ಆಯುಕ್ತ ಶ್ರೀಹರ್ಷಶೆಟ್ಟಿ ವಿರುದ್ಧ ಹಕ್ಕುಚ್ಯುತಿ ಮಂಡಿಸಬೇಕು ಎಂಬ ಠರಾವು ಅಂಗೀಕಾರಗೊಂಡಿತ್ತು.’

‘ಈ ವಿದ್ಯಮಾನದ ಬಳಿಕ ಮತ್ತೊಂದು ಸಾಮಾನ್ಯ ಸಭೆ ನಡೆದಿಲ್ಲ. ಅಕ್ರಮದಲ್ಲಿ ಶಾಮೀಲಾಗಿರುವ ಅಧಿಕಾರಿಗಳ ತಂಡ, ಪಾಲಿಕೆಯ ಕೆಲ ಸದಸ್ಯರನ್ನೇ ತಮ್ಮ ‘ಕೈ’ ವಶ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಜಿಲ್ಲೆಯ ಪ್ರಭಾವಿಯೊಬ್ಬರು ಸಹ ಇದಕ್ಕೆ ಅಡ್ಡಗಾಲಾಗಿದ್ದು, ಆಡಳಿತವನ್ನೇ ಹಳ್ಳ ಹಿಡಿಸಿದ್ದಾರೆ’ ಎಂದು ಹೆಸರು ಬಹಿರಂಗಗೊಳಿಸಲಿಚ್ಚಿಸದ ಮಹಾನಗರ ಪಾಲಿಕೆಯ ಸದಸ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !