ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾ ಪ್ರವಾಸಕ್ಕೆ ಕವಿದ ಕತ್ತಲು

srilanka
Last Updated 24 ಏಪ್ರಿಲ್ 2019, 20:00 IST
ಅಕ್ಷರ ಗಾತ್ರ

ಶ್ರೀ ಲಂಕಾದಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ಬಾಂಬ್‌ ಸ್ಫೋಟದ ನಂತರ ದ್ವೀಪ ರಾಷ್ಟ್ರಕ್ಕೆ ಭೇಟಿ ನೀಡುವಬೆಂಗಳೂರಿಗರು ಪ್ರಯಾಣಿಕರ ಸಂಖ್ಯೆ ಏಕಾಏಕಿ ಇಳಿಮುಖವಾಗಿದೆ. ಬೆಂಗಳೂರು– ಕೊಲೊಂಬೊ ಟಿಕೆಟ್‌ ಮಾರಾಟವೂ ತೀವ್ರ ಕುಸಿತ ಕಂಡಿದೆ. ಸ್ಫೋಟದಲ್ಲಿ ಒಂಬತ್ತು ಕನ್ನಡಿಗರು ಮೃತಪಟ್ಟ ನಂತರ ಲಂಕಾಕ್ಕೆ ಟಿಕೆಟ್‌ ಕಾಯ್ದಿರಿಸಿದ್ದ ಬೆಂಗಳೂರಿನ ಪ್ರಯಾಣಿಕರುಸುರಕ್ಷತೆಯ ಭೀತಿಯಿಂದ ಪ್ರವಾಸ ರದ್ದುಗೊಳಿಸುತ್ತಿದ್ದಾರೆ. ಅಲ್ಲಿಗೆ ತೆರಳಿದ್ದ ಪ್ರವಾಸಿಗರು ಪ್ರವಾಸ ಮೊಟಕುಗೊಳಿಸಿ ವಾಪಸಾಗುತ್ತಿದ್ದಾರೆ.

ದಕ್ಷಿಣ ಭಾರತೀಯರ ನೆಚ್ಚಿನ ಪ್ರವಾಸ ತಾಣವಾಗಿ ಶ್ರೀಲಂಕಾ ಹೊರಹೊಮ್ಮಿದೆ. ಒಂದು ಮಾಹಿತಿಯ ಪ್ರಕಾರ ಏಪ್ರಿಲ್‌ 21ರಿಂದ 24ರ ಅವಧಿಯಲ್ಲಿಬೆಂಗಳೂರಿನಿಂದ ಕೊಲೊಂಬೊಕ್ಕೆ ಕಾಯ್ದಿರಿಸಿದ್ದ ಶೇ 41ರಷ್ಟು ವಿಮಾನ ಟಿಕೆಟ್‌ ರದ್ದಾಗಿವೆ.ಇದು ಪ್ರವಾಸ ಆಯೋಜಕ ಸಂಸ್ಥೆಗಳ ಆತಂಕಕ್ಕೂ ಕಾರಣವಾಗಿದೆ.

ಸದ್ಯ ಕೊಲೊಂಬೊಕ್ಕೆ ಯಾವುದೇ ಟಿಕೆಟ್‌ ಬುಕ್ಕಿಂಗ್‌ ಮಾಡುತ್ತಿಲ್ಲ ಎಂದು ಟ್ರಾವೆಲ್‌ ಆ್ಯಂಡ್‌ ಟೂರ್‌ ಸಂಸ್ಥೆ ಹೇಳಿಕೊಂಡಿದೆ. ಅನಿರೀಕ್ಷಿತ ಘಟನೆಯ ನಂತರ ಕೆಲವು ಟ್ರಾವೆಲ್‌ ಏಜೆನ್ಸಿಗಳು ಟಿಕೆಟ್‌ ರದ್ದು ಶುಲ್ಕ ಕೈಬಿಡುವುದಾಗಿ ಹೇಳಿಕೊಂಡಿವೆ.ಸ್ಫೋಟಕ್ಕೂ ಮುಂಚೆ ಮತ್ತು ನಂತರದ ಪರಿಸ್ಥಿತಿಗೆ ಹೋಲಿಸಿದರೆ ಪ್ರಯಾಣಿಕರ ಪ್ರಮಾಣದಲ್ಲಿ ಶೇ 23ರಷ್ಟು ಇಳಿಮುಖವಾಗಿದೆ. ಅನೇಕ ಪ್ರಯಾಣಿಕರು ತಮ್ಮ ಪ್ರವಾಸವನ್ನು ಮೊಟಕುಗೊಳಿಸಿರುವುದಾಗಿ ಹೇಳಿದ್ದಾರೆ ಎಂದು ಈಸ್‌ಮೈ ಟ್ರಿಪ್‌ ಸಿಇಒ ನಿಶಾಂತ್‌ ಪಿಟ್ಟಿ ‘ಮೆಟ್ರೊ’ಗೆ ತಿಳಿಸಿದ್ದಾರೆ.

ಸದ್ಯ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರತಿದಿನ ಕೊಲೊಂಬೊಕ್ಕೆ ಮೂರು ವಿಮಾನಗಳಿವೆ. ಎರಡು ಶ್ರೀಲಂಕಾ ಏರ್‌ಲೈನ್ಸ್‌ ಮತ್ತುಒಂದು ‘ಇಂಡಿಗೊ’ಗೆ ಸೇರಿದ ವಿಮಾನಗಳು ಸಂಚರಿಸುತ್ತವೆ. ಭಾರತದಿಂದ ಒಟ್ಟು 22 ವಿಮಾನಗಳು ಸಂಚರಿಸುತ್ತಿವೆ. ಆದರೆ, ಬೆಂಗಳೂರಿನಿಂದ ಎಷ್ಟು ಪ್ರಯಾಣಿಕರು ಶ್ರೀಲಂಕಾಕ್ಕೆ ತೆರಳಿದ್ದಾರೆ ಎಂಬ ಮಾಹಿತಿ ತಮ್ಮ ಬಳಿ ಇಲ್ಲ ಎಂದು ಕೆಂಪೇಗೌಡ ವಿಮಾನ ನಿಲ್ದಾಣದ ಸಾರ್ವಜನಿಕ ಸಂಪರ್ಕ ಅಧಿಕಾರಿ ‘ಮೆಟ್ರೊ’ಗೆ ತಿಳಿಸಿದರು.

ಶ್ರೀಲಂಕಾದಲ್ಲಿ ಶಾಂತಿ ನೆಲೆಸಿದ ನಂತರದ ದಿನಗಳಲ್ಲಿ ಬೆಂಗಳೂರಿಗರಿಗೆ ಕೊಲೊಂಬೊ ಅತ್ಯಂತ ನೆಚ್ಚಿನ ಪ್ರವಾಸಿ ತಾಣವಾಗಿದೆ. ಬೇಸಿಗೆ ಮತ್ತು ಈಸ್ಟರ್‌ ರಜೆ ಕಳೆಯಲು ಬೆಂಗಳೂರಿನಿಂದ ಅನೇಕ ಟಿಕೆಟ್‌ಗಳನ್ನು ಕಾಯ್ದಿರಿಸಲಾಗಿತ್ತು. ಆ ಪೈಕಿ ಅನೇಕರು ಈಗಾಗಲೇ ದ್ವೀಪ ರಾಷ್ಟ್ರದಲ್ಲಿದ್ದಾರೆ. ಸ್ಫೋಟದ ನಂತರ ಹೆಚ್ಚಿನ ಬೆಂಗಳೂರಿಗರು ಶ್ರೀಲಂಕಾ ಪ್ರವಾಸ ಮೊಟಕುಗೊಳಿಸುತ್ತಿರುವುದು ಟ್ರಾವೆಲ್‌ ಏಜೆನ್ಸಿಗಳ ಅನುಭವಕ್ಕೆ ಬಂದಿದೆ.

ಶ್ರೀಲಂಕಾ ಏಕೆ ಮೆಚ್ಚಿನ ತಾಣ?

ವರ್ಷದಿಂದ ವರ್ಷಕ್ಕೆ ನೆರೆಯ ದ್ವೀಪ ರಾಷ್ಟ್ರಕ್ಕೆ ಭೇಟಿ ನೀಡುವ ಭಾರತೀಯರ ಸಂಖ್ಯೆ ಹೆಚ್ಚಾಗುತ್ತಿದೆ.2017ರಲ್ಲಿ3,84,628 ಲಕ್ಷ ಭಾರತೀಯ ಪ್ರವಾಸಿಗರು ಶ್ರೀಲಂಕಾಕ್ಕೆ ಭೇಟಿ ನೀಡಿದ್ದರೆ, 2018ರಲ್ಲಿ ಆ ಸಂಖ್ಯೆ 3,97,985 ಲಕ್ಷ ತಲುಪಿದೆ ಎನ್ನುತ್ತವೆ ಶ್ರೀಲಂಕಾ ಪ್ರವಾಸೋದ್ಯಮ ಅಭಿವೃದ್ಧಿ ಪ್ರಾಧಿಕಾರದ ಅಂಕಿ, ಅಂಶಗಳು. ಈ ಸಂಖ್ಯೆ ಈ ಬಾರಿ ಇನ್ನೂ ಹೆಚ್ಚಾಗುವ ಅಂದರೆ ಐದು ಲಕ್ಷ ಮೀರುವ ನಿರೀಕ್ಷೆಯನ್ನು ಪ್ರವಾಸೋದ್ಯಮ ಪ್ರಾಧಿಕಾರ ಹೊಂದಿತ್ತು.

ಭಾರತದಲ್ಲಿ ಜಿಎಸ್‌ಟಿ ಜಾರಿಗೆ ಬಂದ ನಂತರ ಭಾರತದಲ್ಲಿ ಪ್ರವಾಸ, ಹೊಟೆಲ್‌, ವಾಸ್ತವ್ಯ, ಸಾರಿಗೆ ದುಬಾರಿಯಾಗಿದೆ. ಕೊಡಗು ಮತ್ತು ಕೇರಳದಲ್ಲಿ ಪ್ರವಾಹ ಮತ್ತು ಅಯ್ಯಪ್ಪ ದೇವಸ್ಥಾನ ಗಲಾಟೆಯ ನಂತರ ಬೆಂಗಳೂರಿಗರಿಗೆ ಶ್ರೀಲಂಕಾ ನೆಚ್ಚಿನ ಪ್ರವಾಸಿ ತಾಣವಾಗಿದೆ. ಕೇವಲ ₹7 ಸಾವಿರದಿಂದ ₹8 ಸಾವಿರಕ್ಕೆ ಏರ್‌ ಟಿಕೆಟ್‌ ದೊರೆಯುತ್ತವೆ. ಬೆಂಗಳೂರಿನಲ್ಲಿ ಅನೇಕ ಟ್ರಾವೆಲ್ ಏಜೆನ್ಸಿಗಳು ಶ್ರೀಲಂಕಾದ ಹೆಸರು ಶಿಫಾರಸು ಮಾಡುತ್ತಿವೆ.

ರಾಮಾಯಣ, ಬುದ್ಧನ ನಂಟು

ಎಲ್‌ಟಿಟಿಇ ಹಾವಳಿ ತಗ್ಗಿದ ನಂತರ ಶ್ರೀಲಂಕಾದಲ್ಲಿ ಶಾಂತಿ ನೆಲೆಸಿದ್ದು, ಪ್ರವಾಸೋದ್ಯಮಕ್ಕೆ ಅಲ್ಲಿಯ ಸರ್ಕಾರ ಉತ್ತೇಜನ ನೀಡುತ್ತಿದೆ. ಪ್ರವಾಸೋದ್ಯಮದಿಂದ ಶ್ರೀಲಂಕಾ ಸರ್ಕಾರಕ್ಕೂ ಹೇರಳ ಆದಾಯ ಹರಿದು ಬರುತ್ತಿದೆ. ರಾಮಾಯಣ ಮತ್ತು ಬೌದ್ಧ ಧರ್ಮಕ್ಕೆ ಸಂಬಂಧಿಸಿದ ಅನೇಕ ಪೌರಾಣಿಕ ಸ್ಥಳಗಳ ಸರ್ಕೀಟ್‌, ಸುಂದರ ಕಡಲ ಕಿನಾರೆಗಳು, ಆಕರ್ಷಕ ಬೀಚ್‌ ರಿಸಾರ್ಟ್‌ಗಳು ಭಾರತೀಯ ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಶ್ರೀಲಂಕಾ ಏಕೆ ಬೆಂಗಳೂರಿಗರ ಮೆಚ್ಚಿನ ಪ್ರವಾಸಿ ತಾಣವಾಗುತ್ತಿದೆ ಎಂಬ ಪ್ರಶ್ನೆಗೆ ಮಲ್ಲೇಶ್ವರದ ಗಣೇಶ್‌ ಟೂರ್ ಅಂಡ್‌ ಟ್ರಾವೆಲ್ಸ್‌ನ ಮಾಲೀಕ ಪರಮೇಶ್‌ ನೀಡಿದ ವಿಶ್ಲೇಷಣೆ ಇದು.

ಶ್ರೀಲಂಕಾ ಪ್ರವಾಸ ತಾಣಗಳು ಮತ್ತು ವೆಚ್ಚದ ಬಗ್ಗೆ ಮಾಹಿತಿ ಕೋರುವವರ ಸಂಖ್ಯೆ ಕೂಡ ಗಣನೀಯವಾಗಿ ಇಳಿಕೆಯಾಗಿದೆ. ಸಿಂಗಾಪುರ, ಬ್ಯಾಂಕಾಂಕ್‌, ಹಾಂಕಾಂಗ್‌, ಮಲೇಷ್ಯಾ, ಬಾಲಿ, ಇಂಡೊನೇಷ್ಯಾ, ಆಸ್ಟ್ರೇಲಿಯಾ ವಿಮಾನ ವೆಚ್ಚ, ಹೋಟೆಲ್‌ ಬಗ್ಗೆ ಮಾಹಿತಿ ಕೇಳುವ ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತಿದೆ ಎನ್ನುತ್ತಾರೆ ಪರಮೇಶ್‌.

ತೂಗುಯ್ಯಾಲೆಯಲ್ಲಿ ಶಾಲಾ ಪ್ರವಾಸ

ನಗರದ ಬಸವೇಶ್ವರ ವೃತ್ತದಲ್ಲಿರುವಸೋಫಿಯಾ ಶಾಲೆ 9ನೇ ತರಗತಿಯ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಜೂನ್‌ನಲ್ಲಿ ಶ್ರೀಲಂಕಾಕ್ಕೆ ಪ್ರವಾಸಕ್ಕೆ ಹೊರಡಲು ಸಜ್ಜಾಗಿದ್ದರು. ಭೀಕರ ಸ್ಫೋಟದಿಂದ ಬೆಚ್ಚಿಬಿದ್ದಿರುವ ಪಾಲಕರಲ್ಲಿ ಆತಂಕ ಮನೆ ಮಾಡಿದೆ. ಮಕ್ಕಳನ್ನುಶ್ರೀಲಂಕಾ ಬದಲು ಬೇರೆ ಎಲ್ಲಿಗಾದರೂ ಪ್ರವಾಸಕ್ಕೆ ಕರೆದೊಯ್ಯುವಂತೆ ಪಾಲಕರು ಶಾಲೆಯ ಆಡಳಿತ ಮಂಡಳಿಗೆ ಮನವಿ ಮಾಡಿದ್ದಾರೆ. ಈ ಬಗ್ಗೆ ಶಾಲೆಯ ಆಡಳಿತ ಮಂಡಳಿ ಇನ್ನೂ ತೀರ್ಮಾನ ತೆಗೆದುಕೊಳ್ಳಬೇಕಿದ್ದು, ಬಹುತೇಕ ಶ್ರೀಲಂಕಾ ಪ್ರವಾಸ ರದ್ದಾಗುವ ಸಾಧ್ಯತೆ ಇದೆ ಎನ್ನುವುದು ಪಾಲಕರ ನಿರೀಕ್ಷೆಯಾಗಿದೆ.

ತಾಯ್ನಾಡಿಗೆ ಮರಳುವ ಧಾವಂತದಲ್ಲಿ ಶ್ರೀಲಂಕಾ ವಿದ್ಯಾರ್ಥಿನಿ

ನಗರದ ಟಿ. ಜಾನ್ಸ್‌ ಫ್ಯಾಷನ್ ಟೆಕ್ನಾಲಜಿ ಕಾಲೇಜಿನಲ್ಲಿ ಕಲಿಯುತ್ತಿರುವ ಶ್ರೀಲಂಕಾದ ಗಾಲೆ ನಗರದ ಬಿಮಾಶಾ ತಾಯ್ನಾಡಿಗೆ ಮರಳಲು ಹಾತೊರೆಯುತ್ತಿದ್ದಾರೆ. ಸ್ಫೋಟದ ನಂತರ ತೀವ್ರ ಕಳವಳಗೊಂಡಿರುವ ಆಕೆ ತನ್ನ ಕುಟುಂಬ ಸದಸ್ಯರನ್ನು ನೋಡುವ ಅವರ ಕ್ಷೇಮ ಸಮಾಚಾರ ವಿಚಾರಿಸುವ ತವಕದಲ್ಲಿದ್ದಾರೆ. ದೂರವಾಣಿ ಮತ್ತು ಸಾಮಾಜಿಕ ಜಾಲತಾಣಗಳ ಸಂಪರ್ಕ ಕಡಿತಗೊಂಡಿದ್ದರಿಂದ ಅಲ್ಲಿಯ ಮಾಹಿತಿ ದೊರೆಯದೆ ವ್ಯಾಕುಲಗೊಂಡಿರುವ ಬಿಮಾಶಾ ಆದಷ್ಟೂ ಬೇಗ ತಾಯ್ನಾಡಿಗೆ ಧಾವಿಸುವ ಧಾವಂತದಲ್ಲಿದ್ದಾರೆ.

ಈಸ್ಟರ್‌ ದಿನ ಚರ್ಚ್‌ ಮತ್ತು ಹೊಟೆಲ್‌ಗಳಲ್ಲಿ ಸ್ಫೋಟ ಸಂಭವಿಸಿದ ಮರುದಿನ ಅನೇಕ ಭಾರತೀಯರು ಪ್ರವಾಸ ಮೊಟಕುಗೊಳಿಸಿ ಮರಳಿದ್ದಾರೆ. ಟಿಕೆಟ್‌ ಕಾಯ್ದಿರಿಸಿದ ಪ್ರಯಾಣಿಕರು ಪ್ರವಾಸ ರದ್ದುಗೊಳಿಸಿದ್ದಾರೆ.

–ಕರಣ್‌ ಆನಂದ್‌, ಕಾಕ್ಸ್‌ ಆ್ಯಂಡ್‌ ಕಿಂಗ್ಸ್‌ ಸಂಪರ್ಕ ಅಧಿಕಾರಿ

ಹಾಂಕಾಂಗ್‌, ಚೀನಾ, ಮಲೇಷ್ಯಾದಲ್ಲಿ ಭಾರತೀಯ ಸಸ್ಯಾಹಾರಿ ಪ್ರವಾಸಿಗರು ಊಟ, ತಿಂಡಿ ಸಮಸ್ಯೆ ಎದುರಿಸುತ್ತಾರೆ. ಶ್ರೀಲಂಕಾದಲ್ಲಿ ಭಾರತೀಯ ತಿಂಡಿ, ತಿನಿಸು ಸಿಗುತ್ತವೆ. ಭಾರತದ ಹೊಟೆಲ್‌ಗಳು ಸಾಕಷ್ಟಿವೆ. ಮೇಲಾಗಿ ಸಂಸ್ಕೃತಿ, ವಾತಾವರಣದಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ. ವಿಮಾನ ಟಿಕೆಟ್ ಶುಲ್ಕ ಮತ್ತು ಪ್ರಯಾಣ ಅವಧಿ ಕಡಿಮೆ. ಶ್ರೀಲಂಕಾದ ರೂಪಾಯಿಗೆ ಹೋಲಿಸಿದರೆ ಭಾರತದ ರೂಪಾಯಿ ಮೌಲ್ಯ ಹೆಚ್ಚು. ಗೋವಾಕ್ಕೆ ಹೋಗುವ ಬದಲು ಹತ್ತು ಸಾವಿರ ಹೆಚ್ಚು ದುಡ್ಡು ಹಾಕಿದರೆ ಶ್ರೀಲಂಕಾಕ್ಕೆ ಹೋಗಿ ಬರಬಹುದು. ಸಾಕಷ್ಟು ಸಂಖ್ಯೆಯ ಭಾರತೀಯರು ಅಲ್ಲಿದ್ದಾರೆ. ವೀಸಾ ಜಂಜಾಟವೂ ಇಲ್ಲ. ಕುಟುಂಬದೊಂದಿಗೆ ಅಗ್ಗದಲ್ಲಿ ವಿದೇಶಿ ಸುತ್ತಾಟದ ಮಜಾ ಕೂಡ ದೊರೆಯುತ್ತದೆ. ಈ ಎಲ್ಲ ಕಾರಣಗಳಿಂದಾಗಿ ಶ್ರೀಲಂಕಾ ಎಲ್ಲರ ಆಯ್ಕೆಯಾಗಿದೆ ಎನ್ನುತ್ತಾರೆ ಚರ್ಚ್‌ಸ್ಟ್ರಿಟ್‌ನಲ್ಲಿ ಕಚೇರಿ ಹೊಂದಿರುವ ಟ್ರಾವೆಲ್‌ ಪಾಯಿಂಟ್‌ನ ಮಾಲೀಕ ಯೋಗೀಶ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT