ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರುಸೆಲ್ಸ್‌ನ ಲ್ಯಾಂಡ್‌ಮಾರ್ಕ್ | ಆಟೊಮಿಯಂ ಗೋಳಗಳಲ್ಲಿ...

Last Updated 28 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಬೆಲ್ಜಿಯಂನ ರಾಜಧಾನಿ ಬ್ರುಸೆಲ್ಸ್ ನಗರ ಮಧ್ಯಕಾಲೀನ ಯುಗದ ಆಕರ್ಷಕ ಕಟ್ಟಡಗಳು, ಚಾಕೊಲೇಟ್ ಅಂಗಡಿಗಳು ಹಾಗೂ ಪ್ರತಿನಿತ್ಯ ನಡೆಯುವ ಹೂವುಗಳ ಮಾರುಕಟ್ಟೆಯಿಂದ ಖ್ಯಾತಿ ಪಡೆದಿದೆ. ಇಲ್ಲಿನ ಗ್ರ್ಯಾಂಡ್ ಸ್ಕ್ವೇರ್‌ನಲ್ಲಿ ಪ್ರತಿ ಆಗಸ್ಟ್‌ ತಿಂಗಳಿನಲ್ಲಿ ನಿಜವಾದ ಹೂವುಗಳಿಂದ ಮಾಡಿದ ಕಾರ್ಪೆಟ್ ಕಲಾಪ್ರೇಮಿಗಳನ್ನು ಆಕರ್ಷಿಸುತ್ತದೆ. ವಾಸ್ತುಶಿಲ್ಪ ಅಧ್ಯಯನ ಮಾಡುವವರಿಗೆ ಮತ್ತು ಕಲಾಪ್ರೇಮಿಗಳಿಗೆ ವಿಕ್ಟರ್ ಹೋರ್ಟಾ (Victor Horta) ಅವರ ವಾಸ್ತು ಪ್ರದರ್ಶನ ಗ್ಯಾಲರಿ ಇದೆ. ಅನೇಕ ಪ್ರತಿಷ್ಠಿತ ಕ್ಲಬ್‌‌ಗಳು, ಬಾರ್‌ಗಳು, ರೆಸ್ಟೊರೆಂಟ್‌ಗಳು ಇಲ್ಲಿವೆ. ಕಿರಿದಾದ ರಸ್ತೆಗಳಲ್ಲಿ ನಡೆಯುತ್ತಲೇ ನಗರದ ಸೌಂದರ್ಯವನ್ನು ನೋಡುವುದೇ ಒಂದು ಸಂಭ್ರಮ.

ಯುರೋಪಿಯನ್ ಒಕ್ಕೂಟದ ದೇಶಗಳ ಅನೇಕ ಆಡಳಿತ ಕಚೇರಿಗಳು ಇರುವುದರಿಂದಾಗಿ ಬ್ರುಸೆಲ್ಸ್ ನಗರವನ್ನು ಯುರೋಪಿನ ರಾಜಧಾನಿ ಎಂದೂ ಕರೆಯುತ್ತಾರೆ. ಇಲ್ಲಿ 1958ರಲ್ಲಿ ನಡೆದ ‘ಬ್ರುಸೆಲ್ಸ್ ವರ್ಲ್ಡ್ ಎಕ್ಸ್‌ಪೊ–58’ಗಾಗಿ ಆಟೊಮಿಯಂನಂತಹ ಕಲಾಕೃತಿಯ ಕಟ್ಟಡ ನಿರ್ಮಾಣವಾಗಿದೆ. ಈ ಕಾರಣದಿಂದಲೂ ಬ್ರುಸೆಲ್ಸ್ ನಗರ ಪ್ರಸಿದ್ಧ.

ಆಟೊಮಿಯಂ ಎಂಬ ಅದ್ಭುತ

ಆಟೊಮಿಯಂ ಬ್ರುಸೆಲ್ಸ್‌ನ ಲ್ಯಾಂಡ್‌ಮಾರ್ಕ್ ಕಟ್ಟಡ. ಇದರ ರೂವಾರಿಗಳು ಎಂಜಿನಿಯರ್ ಆಂಡ್ರೆ ವಾಟರ್‌ಕಿನ್ (Andre Waterkeyn) ಮತ್ತು ವಾಸ್ತುಶಿಲ್ಪಿಗಳಾದ ಆಂಡ್ರೆ ಹಾಗೂ ಜೀನ್ ಪೊಲಾಕ್ ಸಹೋದರರು (Andre and Jean Polak). ಆಟೊಮಿಯಂ ಏಕಕಾಲದಲ್ಲಿ ಒಂದು ಕಲಾಕೃತಿ, ಕಟ್ಟಡ, ಪ್ರದರ್ಶನ ಸ್ಥಳವೂ ಹೌದು. ಇದನ್ನು ರಾಷ್ಟ್ರದ ಒಂದು ಹೆಗ್ಗುರುತು ಎನ್ನುತ್ತಾರೆ. ಅಷ್ಟೇ ಅಲ್ಲ ವಿಶ್ವದಲ್ಲಿ ಎಲ್ಲೂ ಇಂಥ ರಚನೆ ಇಲ್ಲ ಎನ್ನಿಸುತ್ತದೆ. 1950ರ ದಶಕದಲ್ಲಿ ವೈಜ್ಞಾನಿಕ ಪ್ರಗತಿ ವೇಗವಾಗಿದ್ದ ಕಾರಣ ಅದರ ಸಂಕೇತವಾಗಿ ಪರಮಾಣುವಿನ ಆಕಾರದಲ್ಲಿ ಈ ಕಟ್ಟಡ ನಿರ್ಮಾಣ ಮಾಡಲಾಯಿತು.

ಒಟ್ಟು 102 ಮೀಟರ್ ಎತ್ತರವಿರುವ ಆಟೊಮಿಯಂ ನಿರ್ಮಾಣ ಒಂದು ತಾಂತ್ರಿಕ ಸವಾಲಾಗಿತ್ತು. 60 ಅಡಿ ವ್ಯಾಸವಿರುವ ಒಂಬತ್ತು ಗೋಳಗಳನ್ನು ಹತ್ತು ಅಡಿ ವ್ಯಾಸವುಳ್ಳ ಕೊಳವೆಗಳಿಂದ ಜೋಡಿಸಿ, ಕಬ್ಬಿಣದ ಅಣುವಿನ ರಚನೆಯನ್ನು ರೂಪಿಸಲಾಗಿದೆ. ಒಂದು ಕಬ್ಬಿಣದ ಅಣುವನ್ನು 165 ಬಿಲಿಯನ್‌ನಷ್ಟು ಹಿಗ್ಗಿಸಿದರೆ ಆಗುವಷ್ಟು ಗಾತ್ರ ಈ ಆಟೊಮಿಯಂನದ್ದು.

ಒಂಬತ್ತು ಗೋಳಗಳಲ್ಲಿ ಆರು ಗೋಳಗಳಿಗೆ ಸಾರ್ವಜನಿಕರಿಗೆ ಪ್ರವೇಶವಿದೆ (ನಡುವಿನ ನಾಲ್ಕು ಗೋಳಗಳಲ್ಲಿ ಮೂರಕ್ಕೆ ನೇರ ಆಧಾರವಿಲ್ಲ. ಹಾಗಾಗಿ ಸುರಕ್ಷತೆಯ ದೃಷ್ಟಿಯಿಂದ ಅವುಗಳಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ). ಒಂದೊಂದು ಗೋಳದಲ್ಲೂ ಮೂರು ಮಹಡಿಗಳಿವೆ. ಗೋಳಗಳ ಒಳಗೆ ಮೆಟ್ಟಿಲುಗಳು, ಎಸ್ಕಲೇಟರ್, ಲಿಫ್ಟ್ ಇದ್ದು ಉಪಯೋಗಿಸುತ್ತಿರುವ ಆರು ಗೋಳಗಳನ್ನು ನೋಡಬಹುದು. ಮಧ್ಯವಿರುವ ನೇರ ಕೊಳವೆಯಲ್ಲಿ ಸೆಕೆಂಡಿಗೆ 20 ಅಡಿಯಷ್ಟು ಏರುವ ಆ ಕಾಲದ ಅತಿ ವೇಗದ ಲಿಫ್ಟ್ ಅನ್ನು ಅಳವಡಿಸಲಾಗಿದೆ. 22 ಜನರನ್ನು ಮೇಲಿನ ಗೋಳಕ್ಕೆ ಕೇವಲ 23 ಸೆಕೆಂಡಿನಲ್ಲಿ ಒಯ್ಯುವ ಸಾಮರ್ಥ್ಯ ಅದಕ್ಕಿದೆ. (ದುಬೈನ ಬುರ್ಜ್ ಖಲೀಫದಲ್ಲಿರುವ ಲಿಫ್ಟ್‌ನಲ್ಲಿ ಕೇವಲ 39 ಸೆಕೆಂಡಿನಲ್ಲಿ 124 ನೇ ಮಹಡಿಗೆ, ಅಂದರೆ ಸುಮಾರು ಎರಡು ಸಾವಿರ ಅಡಿಗಳ ಎತ್ತರಕ್ಕೆ ತಲುಪಿದ್ದೆವು. ಸೆಕೆಂಡಿಗೆ ಸುಮಾರು 34 ಅಡಿಗಳಷ್ಟು ವೇಗದಲ್ಲಿ ಈ ಲಿಫ್ಟ್ ಏರಿತ್ತು!) ಅದು ಈ ಕಾಲದ ತಾಂತ್ರಿಕತೆಯ ನಿದರ್ಶನ. ಓರೆಯಾಗಿರುವ ಕೊಳವೆಗಳಲ್ಲಿ ಅಳವಡಿಸಿರುವ ಎಸ್ಕಲೇಟರ್‌ಗಳು ಯೂರೋಪಿನಲ್ಲಿಯೇ ಅತಿ ಉದ್ದವಾಗಿರುವಂತಹವು. ಅವುಗಳಲ್ಲಿ 100 ಅಡಿಗಳಷ್ಟು ಉದ್ದವಿರುವ ಎಸ್ಕಲೇಟರ್ ಇತ್ತು .

ನಿರ್ಮಾಣವಾದ ನಂತರ ಆಟೊಮಿಯಂ ಆರು ತಿಂಗಳ ಕಾಲ ಬಾಳಬಲ್ಲದು ಎಂದು ಅಂದಾಜಿಸಲಾಗಿತ್ತು. ನಂತರ ಅದನ್ನು ಕೆಡವುವ ಉದ್ದೇಶವಿತ್ತು. ಆದರೆ ಅದರ ಜನಪ್ರಿಯತೆ ಮತ್ತು ಆಕರ್ಷಣೆ ನೋಡಿದ ಸರ್ಕಾರ ಅದನ್ನೊಂದು ‘ಬ್ರುಸೆಲ್ಸ್‌ನ ಲ್ಯಾಂಡ್‌ಮಾರ್ಕ್’ ಕಟ್ಟಡವಾಗಿ ಉಳಿಸಿಕೊಳ್ಳಲು ನಿರ್ಧರಿಸಿತು. ಮೊದಲ ಮೂರು ದಶಕಗಳ ಕಾಲ ಈ ಕಟ್ಟಡವನ್ನು ಹೆಚ್ಚಾಗಿ ನಿರ್ವಹಣೆ ಮಾಡಲಿಲ್ಲ. 21ನೇ ಶತಮಾನಕ್ಕೆ ಕಾಲಿಟ್ಟಾಗ ಆಟೊಮಿಯಂ ದುಸ್ಥಿತಿಯಲ್ಲಿತ್ತೆಂದೇ ಹೇಳಬಹುದು. ಆಗ ಎಚ್ಚೆತ್ತುಕೊಂಡ ಸರ್ಕಾರ 2004ರಲ್ಲಿ ಅದನ್ನು ರಿಪೇರಿ ಮತ್ತು ಮರುನಿರ್ಮಾಣದ ಸಲುವಾಗಿ ಮುಚ್ಚಿತು. ಮೊದಲು ಅಳವಡಿಸಿದ್ದ ಅಂದಗೆಟ್ಟಿದ್ದ ಅಲ್ಯೂಮಿನಿಯಂ ಹಾಳೆಗಳನ್ನು ತೆಗೆದು ಸ್ಟೀಲ್ ಹಾಳೆಗಳನ್ನು ಅಳವಡಿಸಲಾಗಿದೆ. (ಖರ್ಚನ್ನು ಸರಿದೂಗಿಸಲು ಹಳೆಯ ಅಲ್ಯೂಮಿನಿಯಂ ಹಾಳೆಗಳ ತುಂಡುಗಳನ್ನು ಸ್ಮರಣಿಕೆಯಾಗಿ ಮಾರಾಟ ಮಾಡಲಾಯಿತು) ಹೊಸದಾಗಿ ಹೊರಭಾಗಕ್ಕೆ ಎಲ್‌ಇಡಿ ದೀಪಗಳನ್ನು ಜೋಡಿಸಲಾಗಿದೆ. ಈ ಕಾಮಗಾರಿ ಪೂರ್ಣಗೊಳ್ಳಲು ಎರಡು ವರ್ಷ ಹಿಡಿಯಿತು. ಅಂದರೆ ಫೆಬ್ರುವರಿ 14, 2006ರಲ್ಲಿ ಮತ್ತೆ ಸಾರ್ವಜನಿಕ ವೀಕ್ಷಣೆಗೆ ಮುಕ್ತಗೊಳಿಸಲಾಯಿತು. ಅಂದಿನ ಯುವರಾಜ ಪ್ರಿನ್ಸ್ ಫಿಲಿಪ್ ಇದನ್ನು ಉದ್ಘಾಟಿಸಿದರು.

ಪ್ರತಿ ಗೋಳದಲ್ಲೂ ವಿಶೇಷ

ಆಟೊಮಿಯಂನ ನೆಲಮಟ್ಟದ ಗೋಳವನ್ನು 1950 ಮತ್ತು 1958ರ ವಿಶ್ವ ವಾಣಿಜ್ಯ ಸಮಾವೇಶ ಮತ್ತು ಆಟೊಮಿಯಂ ನಿರ್ಮಾಣದ ಕುರಿತ ಪ್ರದರ್ಶನಕ್ಕೆ ಮೀಸಲಿಡಲಾಗಿದೆ. ಎರಡನೆಯ ಗೋಳದಲ್ಲಿ ತಾತ್ಕಾಲಿಕ ಪ್ರದರ್ಶನ ಮಳಿಗೆಗಳಿರುತ್ತವೆ. ನಡುವಿನ ಮತ್ತು ಮೂರನೆಯ ಗೋಳದಲ್ಲಿ ಚಲನಚಿತ್ರ ಪ್ರದರ್ಶನ, ಸಂಗೀತ ಸಮಾವೇಶಗಳು ಮತ್ತು ಮೋಜು ಕೂಟಗಳು ನಡೆಯುತ್ತವೆ. ಎತ್ತರದಲ್ಲಿರುವ ಗೋಳದಿಂದ ಬ್ರುಸೆಲ್ಸ್ ನಗರದ ನೋಟವನ್ನು ಮನದಣಿಯೆ ಕಣ್ತುಂಬಿಕೊಳ್ಳಬಹುದು. ಇಲ್ಲೊಂದು ಉಪಾಹಾರ ಗೃಹವೂ ಇದೆ. ಆರನೆಯ ಗೋಳವನ್ನು ಮಕ್ಕಳಿಗಾಗಿಯೇ ಮೀಸಲಿಟ್ಟಿದ್ದು ಅಲ್ಲಿ ಅವರಿಗಾಗಿ ಶಿಬಿರಗಳು ನಡೆಯುತ್ತವೆ.

ಬೆಲ್ಜಿಯಂನ ಹಕ್ಕು ಸ್ವಾಮ್ಯ ಸಮಿತಿಯು (SABAM) ಆಟೊಮಿಯಂ ಛಾಯಾಚಿತ್ರಗಳನ್ನು ತೆಗೆಯುವುದು ಪ್ರಕಟಿಸುವುದನ್ನು ನಿರ್ಬಂಧಿಸಿತ್ತು. ಅಂತರ್ಜಾಲದಲ್ಲಿ ಪ್ರಕಟಿತ ಎಲ್ಲಾ ಚಿತ್ರಗಳನ್ನು ತೆಗೆದು ಹಾಕಿಸುವಲ್ಲಿ ಸಫಲವಾಗಿತ್ತು. ಆದರೆ ತೀವ್ರ ಒತ್ತಡದ ಪರಿಣಾಮವಾಗಿ 2008 ರಲ್ಲಿ ಸ್ವಲ್ಪ ಮಟ್ಟಿಗೆ, ನಂತರ 2016ರಿಂದೀಚೆಗೆ ಪೂರ್ಣವಾಗಿ ವಾಣಿಜ್ಯ ಉದ್ದೇಶವಿಲ್ಲದ ಚಿತ್ರಗಳನ್ನು ತೆಗೆಯಲು, ಪ್ರಕಟಿಸಲು ಇದ್ದ ನಿರ್ಬಂಧಗಳನ್ನು ತೆಗೆದು ಹಾಕಲಾಯಿತು.

ಪ್ರವೇಶ ಸಮಯ, ಶುಲ್ಕ

ಆಟೊಮಿಯಂ ಬೆಳಿಗ್ಗೆ ಹತ್ತರಿಂದ ಸಂಜೆ ಆರರವರೆಗೆ ತೆರೆದಿರುತ್ತದೆ.

ಪ್ರವೇಶ ಶುಲ್ಕ ವಯಸ್ಕರಿಗೆ – 12 ಯೂರೊ, ಹಿರಿಯ ನಾಗರಿಕರಿಗೆ – 9 ಯೂರೊ, ಯುವಜನರಿಗೆ - 8 ಯೂರೊ, ಮಕ್ಕಳಿಗೆ - 6 ಯೂರೊ

ಆರು ವರ್ಷಕ್ಕಿಂತ ಚಿಕ್ಕ ಮಕ್ಕಳು ಹಾಗೂ ವಿಕಲ ಚೇತನರಿಗೆ ಉಚಿತ ಪ್ರವೇಶ

ತಲುಪುವ ಬಗೆ

ಬ್ರುಸೆಲ್ಸ್‌ ನಗರದ ಉತ್ತರಕ್ಕೆ ಹೇಸೆಲ್ ಪ್ರದೇಶದಲ್ಲಿರುವ ಆಟೊಮಿಯಂ ತಲುಪಲು ಮೆಟ್ರೊ, ಟ್ರಾಮ್ ಸೇವೆ ಲಭ್ಯವಿದೆ. ಹೇಸೆಲ್ ಪ್ರದೇಶದಲ್ಲಿ ಆಟೊಮಿಯಂ ಅಲ್ಲದೆ ಮಿನಿ ಯೂರೋಪ್ ಥೀಮ್ ಪಾರ್ಕ್, 28 ಪರದೆಗಳ ಸಿನಿಮಾ ಸಂಕೀರ್ಣ, ವಾಟರ್ ಪಾರ್ಕ್, ಚೈನಾ ಮತ್ತು ಜಪಾನಿನ ಪ್ರದರ್ಶನ ಸ್ಥಳಗಳಿವೆ. ಬ್ರುಸೆಲ್ಸ್‌ ವಿಮಾನ ನಿಲ್ದಾಣದಿಂದ ಸುಮಾರು 15 ಕಿ.ಮೀ ದೂರದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT