ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಿ ಪ್ರವಾಸಕ್ಕೆ ‘ಉತ್ಸವ’ದ ಬೋನಸ್‌

Last Updated 27 ಫೆಬ್ರುವರಿ 2019, 19:31 IST
ಅಕ್ಷರ ಗಾತ್ರ

ಹಂಪಿ ಎಂದಾಕ್ಷಣ ಎಂಥವರ ಕಣ್ಮನವೂ ಅರಳುವುದು. ಅದು ವಿಶ್ವಪ್ರಸಿದ್ಧ ಪಾರಂಪರಿಕ ತಾಣಗಳಲ್ಲಿ ಪ್ರಮುಖವಾದದ್ದು ಹೇಗೆ ಎಂಬುದನ್ನು ಅಲ್ಲಿಗೆ ಭೇಟಿ ನೀಡಿಯೇ ಅರಿಯಬೇಕು. ಅನುಭವಿಸಬೇಕು. ಏಕೆಂದರೆ ಅದೊಂದು ಪುರಾತನ ಬಯಲು ವಸ್ತುಸಂಗ್ರಹಾಲಯವಾಗಿರುವ ಹಳ್ಳಿ.

ಬೆಟ್ಟ–ಗುಡ್ಡಗಳ ನಡುವೆ ವಿಜಯನಗರ ಸಾಮ್ರಾಜ್ಯದ ಪಳೆಯುಳಿಕೆಗಳಾದ ಹಲವು ಸ್ಮಾರಕಗಳನ್ನು ನೋಡುತ್ತಾ ಸುತ್ತಾಡುವುದೇ ಒಂದು ಚೆಂದ.

ಹಂಪಿ, ಪ್ರವಾಸಿ ತಾಣವಾಗಿ ಹೇಗೆ ಪ್ರಸಿದ್ಧಿಯೋ, ಅಲ್ಲಿರುವ ಕೆಲವು ವಿಶೇಷ ತಾಣಗಳು ಛಾಯಾಗ್ರಾಹಾಕರಿಗೂ ಸ್ವರ್ಗ ಸಮಾನ ತಾಣಗಳು. ಅದರಲ್ಲಿ ಮಾಲ್ಯವಂತ, ಮಾತಂಗ, ಹೇಮಕೂಟದಂತಹ ಜಾಗಗಳಲ್ಲಿ ಅದ್ಭುತವಾದ ಸೂರ್ಯೋದಯ, ಸೂರ್ಯಾಸ್ತವನ್ನು ಸೆರೆ ಹಿಡಿಯಬಹುದು. ಮಾಲ್ಯವಂತ, ಮಾತಂಗ ಪರ್ವತಗಳನ್ನು ಏರಿದರೆ ಸೂರ್ಯಾಸ್ತವನ್ನು ಸೆರೆ ಹಿಡಿಯಬಹುದು. ಸೂರ್ಯಾಸ್ತ ಕಣ್ತುಂಬಿಕೊಳ್ಳಲು, ಕ್ಯಾಮೆರಾದಲ್ಲಿ ಸೆರೆ ಹಿಡಿಯಲು ಆಸಕ್ತ ಛಾಯಾಗ್ರಾಹಕರು, ಹೊತ್ತು ಹುಟ್ಟುವ ಮುನ್ನವೇ ಈ ಬೆಟ್ಟಗಳನ್ನು ಏರಿರುತ್ತಾರೆ. ಇನ್ನೂ ಸೂರ್ಯಾಸ್ತ ನೋಡಲು ಹೇಮಕೂಟಕ್ಕೆ ಹೋಗಬೇಕು.

ಹೊತ್ತು ಇಳಿಯುತ್ತಲೇ ಸೂರ್ಯನ ಕಿರಣಗಳು ಗುಡಿ ಗೋಪುರಗಳ ಮೇಲೆ ಸುರಿಸುವ ಹೊಂಬಣ್ಣಗಳು, ಪ್ರವಾಸಿಗರಿಗೆ ಬೆಳಕಿನ ರಸದೌತಣ ನೀಡುತ್ತವೆ. ಮುಂಜಾನೆ ಮತ್ತು ಸಂಜೆ ತುಂಗಭದ್ರೆಯ ತಟದಲ್ಲಿ ಜುಳುಜುಳು ನಾದ. ಇವುಗಳ ಜತೆಗೆ ‘ಉತ್ಸವ’ದ ಸಂಭ್ರಮವೂ ಸೇರಿದರೆ ಅದೊಂದು ಬೋನಸ್‌! ಈಗ ಮಾರ್ಚ್‌ 2 ಮತ್ತು 3ರಂದು ಹಂಪಿ ಉತ್ಸವ ನಡೆಯಲಿದೆ. ಈಗ ಪ್ರವಾಸ ಬಂದವರಿಗೆ ಉತ್ಸವ ಬೋನಸ್‌.

ಸ್ಥಳೀಯರಿಗೆ ಈ ಬೋನಸ್‌ ದಿನವೂ ದೊರಕುವ ಅವಕಾಶ. ಪ್ರವಾಸಿಗರಿಗೆ ಮಾತ್ರ ಬಂದರಷ್ಟೇ ಸಿಗುವ ಅಪರೂಪದ ಪುಳಕ. ಹೀಗಾಗಿಯೇ ದೇಶ ವಿದೇಶಗಳಿಂದ ಪ್ರವಾಸಿಗರು ಇಲ್ಲಿಗೆ ಬರುತ್ತಲೇ ಇರುತ್ತಾರೆ. ಹಲವರು ಇಲ್ಲಿಯೇ ನೆಲೆಸಿದ್ದಾರೆ. ಹಂಪಿಗೆ ಇರುವ ‘ಹಿಡಿದಿಡುವ ಚಾರಿತ್ರಿಕ ಹಾಗೂ ಪೌರಾಣಿಕ ಗುಣವಿಶೇಷ’ವೇ ಅದಕ್ಕೆ ಕಾರಣ.

ವಿರೂಪಾಕ್ಷೇಕ್ಷರ ಗುಡಿ, ಸಾಸಿವೆಕಾಳು ಗಣೇಶ ಹಾಗೂ ಕಡಲೆಕಾಳು ಗಣೇಶ ಸೇರಿದಂತೆ ಹಲವು ಗುಡಿಗಳ ಗುಚ್ಛವಾದ ಹೇಮಕೂಟ ಪರ್ವತ, ಮಾತಂಗ ಪರ್ವತ, ವಿಜಯ ವಿಠಲ ಗುಡಿ, ಮಾರುಕಟ್ಟೆ ಸಂಕೀರ್ಣ, ಬಜಾರು ರಸ್ತೆ, ಕಲ್ಲಿನ ರಥ, ಹಜಾರರಾಮನ ಗುಡಿ, ಕೃಷ್ಣ ಗುಡಿ, ಉಗ್ರನರಸಿಂಹ, ಬೃಹತ್‌ ಲಿಂಗ, ಕೋದಂಡರಾಮ ಗುಡಿ, ಪಟ್ಟಾಭಿರಾಮ ಗುಡಿ ಸಂಕೀರ್ಣ, ಮಹಾನವಮಿ ದಿಬ್ಬ, ಅಚ್ಯುತರಾಯನ ಗುಡಿ, ರಾಣಿ ಸ್ನಾನಗೃಹ, ಕಮಲ ಮಹಲ್‌,. ಚಿತ್ತಾಕರ್ಷಕ ವಿನ್ಯಾಸದೊಂದಿಗೆ ನಿರ್ಮಾಣವಾಗಿರುವ ಪುಷ್ಕರಣಿಗಳು...ಹೀಗೆ ಹಿಂದೂ ಸ್ಮಾರಕಗಳೊಂದಿಗೆ ಇಲ್ಲಿ ಜೈನ ಹಾಗೂ ಮುಸ್ಲಿಮರ ಸ್ಮಾರಕಗಳೂ ಉಂಟು. 4,100 ಹೆಕ್ಟೇರ್‌ ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ಹಂಪಿಯಲ್ಲಿ ಒಂದೆರಡಲ್ಲ, ನೂರಾರು ಆಕರ್ಷಣೆಗಳು ಎಂಬುದು ಉತ್ಪ್ರೇಕ್ಷೆಯಲ್ಲ.

ಹಾಂ, ಅಂದಹಾಗೆ ಹಂಪಿ ಎನ್ನುವುದು ಮಧ್ಯಕರ್ನಾಟಕದ ಬಳ್ಳಾರಿ ಜಿಲ್ಲೆಯಲ್ಲಿರುವ ಹೊಸಪೇಟೆ ತಾಲ್ಲೂಕಿಗೆ ಸೇರಿದ ಒಂದು ಗ್ರಾಮ ಪಂಚಾಯ್ತಿ ಕೇಂದ್ರ.

ಈ ಹಂಪಿ ನೋಡಲು ಒಂದು ದಿನ ಸಾಲದು. ಕನಿಷ್ಠ ಮೂರು ದಿನವಾದರೂ ಬೇಕು. ಆದರೆ ಅನುಕೂಲಕ್ಕೆ ತಕ್ಕಂತೆ ಮಾರ್ಗದರ್ಶಿಗಳ ಸಲಹೆಯನ್ನೂ ಪಡೆಯಬಹುದು.

**
ಎಲ್ಲಿಂದ ಎಷ್ಟು ದೂರ?
* ಹೈದರಾಬಾದ್‌ನಿಂದ 385 ಕಿ.ಮೀ
* ಬೆಂಗಳೂರಿನಿಂದ 376 ಕಿ.ಮೀ
* ಬೆಳಗಾವಿಯಿಂದ 266 ಕಿ.ಮೀ
* ಹುಬ್ಬಳ್ಳಿಯಿಂದ 160 ಕಿ.ಮೀ
* ಐಹೊಳೆಯಿದ 140 ಕಿ.ಮೀ
* ಗದಗದಿಂದ 104 ಕಿ.ಮೀ
* ಬಳ್ಳಾರಿಯಿಂದ 64 ಕಿ.ಮೀ
* ಹೊಸಪೇಟೆ ರೈಲು ನಿಲ್ದಾಣದಿಂದ 12 ಕಿ.ಮೀ

**
ಹಂಪಿ ಹವಾಮಾನ
ಬೇಸಿಗೆಯಲ್ಲಿ ಗರಿಷ್ಠ 40 ಡಿಗ್ರಿ ಸೆಲ್ಶಿಯಸ್‌, ಕನಿಷ್ಠ 25 ಡಿಗ್ರಿ ಸೆಲ್ಶಿಯಸ್‌
ಚಳಿಗಾಲದಲ್ಲಿ ಗರಿಷ್ಠ 32 ಡಿಗ್ರಿ ಸೆಲ್ಶಿಯಸ್‌, ಕನಿಷ್ಠ 20 ಡಿಗ್ರಿ ಸೆಲ್ಶಿಯಸ್. ಈಗ ಸಾಧಾರಣ ಹವಾಮಾನವಿದೆ. ಬೆಳಿಗ್ಗೆ ತಂಪು, ಮಧ್ಯಾಹ್ನ ಬಿಸಿಲು ಚುರುಕಾಗಿರುತ್ತದೆ. ಇಳಿ ಸಂಜೆ ಪುನಃ ತಣ್ಣನೆ ವಾತಾವರಣ.

**
ಯಾವಾಗ ಭೇಟಿ ಸೂಕ್ತ

ಚಳಿಗಾಲದಲ್ಲಿ ಪ್ರವಾಸ ಸೂಕ್ತ. ಅಕ್ಟೋಬರ್‌ನಿಂದ ಫೆಬ್ರವರಿವರೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ.

**

ಸಂಪರ್ಕ, ವಾಸ್ತವ್ಯ ಹೇಗೆ?

ಮೈಸೂರು, ಬೆಂಗಳೂರು, ಗೋವಾ, ಮತ್ತು ಸಿಕಂದರಾಬಾದ್‌ನಿಂದ ರೈಲು, ಬಸ್‌ಗಳು ಹೊಸಪೇಟೆ ಮೂಲಕವೇ ನಿಯಮಿತವಾಗಿ ಸಂಚರಿಸುತ್ತವೆ. ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುವ ಗುಂತಕಲ್‌ ರೈಲು ನಿಲ್ದಾಣ 116 ಕಿ.ಮೀ ದೂರದಲ್ಲಿದೆ.
ಬೆಂಗಳೂರಿನಿಂದ ಕಾಚಿಗುಡ–ಹುಬ್ಬಳ್ಳಿ ಎಕ್ಸ್‌ಪ್ರೆಸ್‌, ಮೈಸೂರು – ಹುಬ್ಬಳ್ಳಿ– ಹಂಪಿ ಎಕ್ಸ್‌ಪ್ರೆಸ್‌ ಮತ್ತು ಹಂಪಿ ಪ್ಯಾಸೆಂಜರ್‌ ರೈಲುಗಳು ನಿತ್ಯ ಸಂಚರಿಸುತ್ತವೆ. ಇದರ ನಡುವೆ ವಾರಕ್ಕೆ ಮೂರು ದಿನ ಜೋಧ್‌ಪುರ ಎಕ್ಸ್‌ಪ್ರೆಸ್‌ ರೈಲು ಇದೆ.

ಹುಬ್ಬಳ್ಳಿ, ಗೋವಾ, ಬೆಂಗಳೂರಿನಿಂದ, ಹೈದರಾಬಾದ್‌–ತೋರಣಗಲ್‌–ಬೆಂಗಳೂರು ನಡುವೆ ವಿಮಾನಯಾನ ಸೌಲಭ್ಯವೂ ಇದೆ. ಹೈದರಾಬಾದ್‌ನಿಂದ ತೋರಣಗಲ್‌ಗೆ ಬಂದು ಅಲ್ಲಿಂದ ಹೊಸಪೇಟೆ ಮೂಲಕ ಹಂಪಿ ತಲುಬಹುದು.

ಹೊಸಪೇಟೆಯಿಂದ ಹಂಪಿಗೆ ಬಸ್‌, ಆಟೋರಿಕ್ಷಾ, ಕಾರುಗಳು ಬಾಡಿಗೆಗೆ ದೊರಕುತ್ತವೆ. ಹೊಸಪೇಟೆಯಲ್ಲಿ ಬಸ್‌ ಹಾಗೂ ರೈಲು ನಿಲ್ದಾಣವಿದೆ.

ಹಂಪಿಯಲ್ಲಿರುವ ಕೊಟ್ಟೂರುಸ್ವಾಮಿ ಮಠ ಹಾಗೂ ಗಾಯತ್ರಿಪೀಠ ಮಠದಲ್ಲಿ ಹಂಪಿ ಉತ್ಸವದ ಸಂದರ್ಭದಲ್ಲಿ ಮಧ್ಯಾಹ್ನ ಮತ್ತು ಸಂಜೆ ಉಚಿತ ಊಟದ ವ್ಯವಸ್ಥೆ ಇರುತ್ತದೆ.

ಹೊಸಪೇಟೆಯಲ್ಲಿ ಹಲವು ಹೋಟೆಲ್‌, ಲಾಡ್ಜ್‌ಗಳಿದ್ದು ಅಲ್ಲಿ ಕೊಠಡಿಗಳನ್ನು ಕಾಯ್ದಿರಿಸಬಹುದು. ಹಂಪಿಯಲ್ಲಿ ಹೋಮ್‌ ಸ್ಟೇಗಳಿದ್ದರೂ ವಿದೇಶಿಯರಿಗೇ ಆದ್ಯತೆ. ಸಮೀಪದ ಹೊಸಮಲಪನಗುಡಿಯಲ್ಲಿ ರೆಸಾರ್ಟ್‌ಗಳಿವೆ. ಕಮಲಾಪುರದಲ್ಲಿ ಪ್ರವಾಸೋದ್ಯಮ ಇಲಾಖೆಯ ಹೋಟೆಲ್‌ ಮತ್ತು ವಸತಿಗೃಹ ಸಮುಚ್ಛಯವೂ ಇದೆ. ಖಾಸಗಿ ಹೋಟೆಲ್‌ಗಳಿವೆ.

**
ಹಂಪಿಯಲ್ಲಿ ಸಂಚಾರ ಹೇಗೆ?

* ಈ ತಾಣವನ್ನು ನಡೆದು ನೋಡುವುದೇ ಹೆಚ್ಚು ಖುಷಿ ಕೊಡುತ್ತದೆ.
* ಹಂಪಿ ಅಂಗಳದಲ್ಲಿ ಖಾಸಗಿ ವಾಹನಗಳಿಗೆ ಪ್ರವೇಶವಿಲ್ಲ. ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಸುತ್ತಾಡಲು ಬ್ಯಾಟರಿ ಚಾಲಿತ ವಾಹನಗಳನ್ನೂ ಹಂಪಿ ಪಾರಂಪರಿಕ ಪ್ರದೇಶಾಭಿವೃದ್ಧಿ ಪ್ರಾಧಿಕಾರ ವ್ಯವಸ್ಥೆ ಮಾಡಿದೆ.
* ಸ್ಥಳೀಯವಾಗಿ ಬೈಸಿಕಲ್‌ಗಳೂ ಬಾಡಿಗೆಗೆ ಲಭ್ಯವಿವೆ.

**

ಸುತ್ತಮುತ್ತ ಇನ್ನೇನು ನೋಡಬಹುದು?

ಆನೆಗುಂದಿ

ಹಂಪಿಯಿಂದ 10 ಕಿ.ಮೀ ದೂರದಲ್ಲಿ, ತುಂಗಭದ್ರಾ ನದಿಯ ಉತ್ತರ ಭಾಗದ ದಡದಲ್ಲಿರುವ ಆನೆಗುಂದಿ ಒಂದು ಹಳ್ಳಿ ಹಂಪಿಗಿಂತಲೂ ಪ್ರಾಚೀನ. ವಿಜಯನಗರ ಸಾಮ್ರಾಜ್ಯದ ಪ್ರಾದೇಶಿಕ ರಾಜಧಾನಿಯಾಗಿತ್ತು. ಹಂಪಿಗಿಂತಲೂ ಪ್ರಾಚೀನವಾಗಿದ್ದು, ರಾಮಾಯಣದ ಪ್ರಕಾರ ಇದು ಸುಗ್ರೀವನ ರಾಜ್ಯ ಕಿಷ್ಕಿಂದ ಎಂದೇ ಪ್ರಸಿದ್ಧ ಇಲ್ಲಿರುವ ಅಂಜನಾದ್ರಿ ಬೆಟ್ಟ, ಗಗನ ಪ್ಯಾಲೇಸ್‌, ಪಂಪ ಸರೋವರ, ಗವಿ ರಂಗನಾಥ ಸ್ವಾಮಿ ಗುಡಿ, ಹುಚ್ಚೆಪ್ಪನ ಮಠವನ್ನು ಒಮ್ಮೆ ನೋಡಲೇಬೇಕು.

ದರೋಜಿ ಕರಡಿಧಾಮ

ದಕ್ಷಿಣ ಭಾರತ ಪ್ರಮುಖ ದರೋಜಿ ಕರಡಿಧಾಮ ಹಂಪಿಯಿಂದ 15 ಕಿ.ಮೀ, ಹೊಸಪೇಟೆಯಿಂದ 30 ಕಿ.ಮೀ ದೂರದಲ್ಲಿದೆ. ಕಮಲಾಪುರದಲ್ಲಿ ಸ್ಥಾಪನೆಯಾಗಿರುವ ಅಟಲ್‌ ಬಿಹಾರಿ ವಾಜಪೇಯಿ ಜುವಾಲಜಿಕಲ್‌ ಪಾರ್ಕ್‌ಗೆ ಭೇಟಿ ನೀಡಬಹುದು.

ಸಮೀಪದಲ್ಲಿರುವ ಬಳ್ಳಾರಿಯಲ್ಲಿ ಟಿಪ್ಪುಸುಲ್ತಾನ ಕಾಲದ ಕೋಟೆ ವೀಕ್ಷಿಸಬಹುದು. ಸಂಡೂರಿನ ಬೆಟ್ಟ ಶ್ರೇಣಿಗಳಲ್ಲಿ ಚಾರಣ ಮಾಡಬಹುದು.

ಹಂಪಿ ಉತ್ಸವ ವಿಶೇಷಗಳು

ಫೆ.28ರಿಂದ ಮಾರ್ಚ್‌ 6ರವರೆಗೆ ಕಮಲಾಪುರದ ಮಯೂರು ಭುವನೇಶ್ವರಿ ಹೋಟೆಲ್‌ ಆವರಣದಲ್ಲಿ ‘ಹಂಪಿ ಬೈ ಸ್ಕೈ’ ‘ಆಗಸದಿಂದ ಹಂಪಿ’ ಕಾರ್ಯಕ್ರಮ ನಡೆಯಲಿದೆ. ಹೆಲಿಕಾಪ್ಟರ್‌ನಲ್ಲಿ ಕುಳಿತು ಎಂಟು ನಿಮಿಷಗಳ ಕಾಲ ಆಗಸದಿಂದ ಹಂಪಿ ನೋಡುವ ಅವಕಾಶ.

ಫೆ.28ರಂದು ಹಂಪಿಯ ಅಕ್ಕ–ತಂಗಿಯರ ಗುಡ್ಡದಿಂದ ಬೆಳಿಗ್ಗೆ 7ಕ್ಕೆ ಪಾರಂಪರಿಕ ನಡಿಗೆ

ಫೆ.28ರಿಂದ ಮಾರ್ಚ್‌ 3ರವರೆಗೆ ಮರಳು ಕಲಾಕೃತಿ ಉತ್ಸವ. ಹಂಪಿಯ ಕಲಾಕೃತಿಗಳನ್ನು ಮರಳಲ್ಲಿ ರೂಪಿಸುವ ಪ್ರಥಮ ಪ್ರಯತ್ನ

ಮಾರ್ಚ್‌ 1 ರಂದು ವಿಜಯನಗರ ವಸಂತ ವೈಭವ

ಮಾರ್ಚ್‌ 3 ರಂದು ಕಮಲಾಪುರ ಕೆರೆಯಲ್ಲಿ ಮೀನುಗಾರರ ದೋಣಿ ಉತ್ಸವ, ಹೊಸಮಲಪನಗುಡಿಯಲ್ಲಿ ಕುದುರೆ ಜಿಗಿತ ಪ್ರದರ್ಶನ

ಹಂಪಿಯ ಐದು ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ. ಪ್ರಮುಖ ಎದುರು ಬಸವಣ್ಣ ವೇದಿಕೆಯಲ್ಲಿ ಮಾರ್ಚ್‌ 2ರಂದು ಖ್ಯಾತ ಗಾಯಕ ರಾಜೇಶ್‌ ಕೃಷ್ಣನ್‌, 3ರಂದು ಮತ್ತೊಬ್ಬ ಗಾಯಕ ವಿಜಯಪ್ರಕಾಶ್‌ ಗಾಯನ ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT