ಗುರುವಾರ , ಆಗಸ್ಟ್ 13, 2020
23 °C

ಬುದ್ಧ ತತ್ವಗಳ ‘ನಾರಾ’ ನಗರ

ಎಸ್.ಪಿ.ವಿಜಯಲಕ್ಷ್ಮಿ Updated:

ಅಕ್ಷರ ಗಾತ್ರ : | |

Prajavani

ಜಪಾನ್‍ ದೇಶವನ್ನು ನೋಡಿ ಬಂದವರು ಆ ದೇಶವನ್ನು ಪ್ರೀತಿಸದೇ ಇರಲು ಸಾಧ್ಯವಿಲ್ಲ. ಯಾಕೆಂದರೆ, ಆ ದೇಶ ಅಷ್ಟು ಸುಂದರವಾಗಿದೆ, ತುಂಬಾ ಸ್ವಚ್ಛವಾಗಿದೆ, ಶಿಸ್ತು-ಶಿಷ್ಟಾಚಾರ ಪಾಲಿಸುವ ಪ್ರಜೆಗಳಿದ್ದಾರೆ. ಕೆಲಸವನ್ನು ದೇವರೆಂದು ಕಾಣುವ, ನಿಷ್ಠೆಯಿಂದ, ದಕ್ಷತೆಯಿಂದ ದುಡಿಯುವವರಿದ್ದಾರೆ. ಮೋಸ-ದಗಲ್ಬಾಜಿ, ಕಪಟ, ಅಪರಾಧ ಸಂಖ್ಯೆ ಬಹಳ ಕಡಿಮೆ.

ಜಪಾನೀಯರು ಬಹಳ ಮೃದು ಸ್ವಭಾವದವರು. ಮೆಲ್ಲ ನಡೆಯವರು. ಎದುರು ಯಾರೇ ಬರಲಿ ‘ವಸುಧೈವ ಕುಟುಂಬಕಂ’ ಎಂಬ ನಮ್ಮ ನೀತಿ ಅಳವಡಿಸಿಕೊಂಡು, ಕೊಂಚ ತಲೆ ಬಾಗಿ ಮೆಲ್ಲನೆಯ ಮುಗುಳ್ನಗೆಯೊಂದನ್ನು ಬೀರಿ ಮುಂದೆ ಹೋಗುತ್ತಾರೆ. ನನಗಂತೂ ಆ ದೇಶದಲ್ಲಿ ಹೆಜ್ಜೆ ಹೆಜ್ಜೆಗೂ ಇಂಥದ್ದೇ ಅನುಭವವಾಯಿತು. ಜಪಾನ್ ಎಂದರೆ ಪ್ರೀತಿ ಹುಟ್ಟಿಬಿಟ್ಟಿತು !

ಹೊಕೈಡೋ, ಶಿಕಾಕು, ಕ್ಯೋಶೋ ಮತ್ತು ಹೋಂಶು ಎಂಬ ನಾಲ್ಕು ದ್ವೀಪಗಳಿಂದಾಗಿರುವ ಜಪಾನಿನ ಹೋಂಶು ದ್ವೀಪದ ಕಾನ್ಸಾಯ್‍ ರೀಜನ್‌ನಲ್ಲಿ ಕ್ಯೋಟೊದಿಂದ ಕೇವಲ ಅರ್ಧಗಂಟೆ ರಸ್ತೆ ಮಾರ್ಗದಲ್ಲಿ ಪ್ರಯಾಣಿಸಿದರೆ ಚಂದದ ಊರು ‘ನಾರಾ‘ ಸಿಗುತ್ತದೆ. ಈ ನಗರ ಅನೇಕ ಹಳ್ಳಿಗಳನ್ನೊಳಗೊಂಡ ‘ನಾರಾ ಪ್ರಿಫೆಕ್ಚರ್‌’ ಎಂಬ ಜಿಲ್ಲೆಯೂ ಆಗಿದೆ. ಈ ವಿಭಾಗದ ರಾಜಧಾನಿ ಮತ್ತು ಪ್ರಮುಖ ನಗರವಾಗಿದೆ. ಕ್ಯೋಟೊದಂತೆ ಇದು ಪುರಾತನ ಮತ್ತು ಸಾಂಪ್ರದಾಯಿಕ ಹೆಗ್ಗಳಿಕೆಯನ್ನು ಹೊತ್ತಿರುವ ನಗರ. ಇಲ್ಲಿಯ ಬಹುದೊಡ್ಡ ಆಕರ್ಷಣೆಯೇ ‘ಟೊಡೈಜಿ ಟೆಂಪಲ್’.

ಟೊಡೈಜಿ ಟೆಂಪಲ್

ನಾರಾದಲ್ಲಿರುವ ಈ ‘ಟೋಡೈ-ಜಿ’ ಎನ್ನುವ ಬುದ್ಧ ದೇಗುಲ ಸಂಕೀರ್ಣ ಒಂದು ಸಾವಿರ ವರ್ಷಗಳ ಹಿಂದೆ ಜಪಾನಿನ ಧಾರ್ಮಿಕ ಪ್ರಮುಖ ಕೇಂದ್ರವಾಗಿತ್ತು 9 ರಿಂದ 17ನೇ ಶತಮಾನಗಳ ರಾಜಕೀಯ ಬೆಳವಣಿಗೆಗಳಲ್ಲಿ ಇದು ಜಪಾನಿನ ಅತಿ ದೊಡ್ಡ ಬುದ್ಧನ ದೇಗುಲವಾಯಿತು. ವಿಶ್ವದ ಅತಿದೊಡ್ಡ ಮರದ ದೇಗುಲವೆಂಬ ಹೆಗ್ಗಳಿಕೆಯನ್ನೂ ಪಡೆದಿತ್ತು. ಆದರೆ, ಇಲ್ಲಿ ಒಮ್ಮೆ ಭೂಕಂಪ, ಒಮ್ಮೆ ಅಗ್ನಿದುರಂತದ ಕಾರಣದಿಂದ ಈ ದೇಗುಲ ನಾಶವಾಗಿ, ಈಗ ಹಿಂದಿಗಿಂತ ಅರ್ಧ ಚಿಕ್ಕದಾಗಿದೆ.

ನಿಜ, ಇಲ್ಲಿ ಪ್ರಾಚೀನ ದೇಗುಲದ ಪ್ರತಿರೂಪವಿದೆ. ಅದರ ಪಗೋಡಾಗಳೇ ನೂರು ಮೀಟರ್‌ ಎತ್ತರ ಇತ್ತೆಂದು ಅಲ್ಲಿ ದಾಖಲಾಗಿದೆ. 8ನೇ ಶತಮಾನದ ‘ಶೋಗುನ್’(ರಾಜ) ಒಬ್ಬ ಬುದ್ಧನ ಬಗ್ಗೆ ತೀವ್ರ ನಂಬಿಕೆಯುಳ್ಳವನಾಗಿದ್ದು, ‘ಜನರ ಉದ್ಧಾರ ಅವನಿಂದ ಮಾತ್ರ ಸಾಧ್ಯ’ ಎನ್ನುವ ಭಕ್ತಿಭಾವ ಹೊಂದಿ, ಈ ದೇಗುಲ, ವಿಗ್ರಹದ ನಿರ್ಮಾಣಕ್ಕೆ ಮುಂದಾದ. ಅಚ್ಚರಿಯ ವಿಷಯವೆಂದರೆ, ಜಪಾನಿನ ಅರ್ಧದಷ್ಟು ಜನಸಂಖ್ಯೆ ಈ ಪುಣ್ಯಕಾರ್ಯಕ್ಕೆ ಕೈಜೋಡಿಸಿತಂತೆ. ಹೀಗೆ 1330 ವರ್ಷಗಳಷ್ಟು ಪ್ರಾಚೀನದ ಈ 15 ಮೀಟರ್‌ ಎತ್ತರದ ಕಂಚಿನ ಬುದ್ಧಮೂರ್ತಿ  ‘ದಾಯ್‍ಬಿಟ್ಸು‘ ‘ಗ್ರೇಟ್ ಬುದ್ಧ’ ಎಂದು ಕರೆಸಿಕೊಳ್ಳುವ ದೈವ. ಮೊದಲಿಗೆ ನಿರ್ಮಿತವಾದದ್ದು ಕಂಚಿಗೆ ಚಿನ್ನದ ಲೇಪವಿತ್ತ ಲೋಹದಲ್ಲಿ. ಆದರೀಗ ಮೇಲಣ ಚಿನ್ನದ ಹಾಳೆ ಪೂರ್ಣ ಸವಕಲಾಗಿ ಕಪ್ಪುವರ್ಣದಲ್ಲಿ ನೋಡುಗರ ಕಣ್ಸೆಳೆಯುತ್ತಿದೆ.

ಪ್ರಾಪಂಚಿಕ ಭೋಗಗಳಿಂದ ವಿಮುಕ್ತನಾದವನು ಈ ದೇವ ಎಂದು ಮೂರ್ತಿಗೆ ಯಾವ ಅಲಂಕಾರವನ್ನೂ ಮಾಡಿಲ್ಲ. ಅದೇ ಈ ಮೂರ್ತಿಯ ಪಕ್ಕದಲ್ಲಿರುವ ಬೋಧಿಸತ್ವರೆಂಬ ಇಬ್ಬರು ಅನುಯಾಯಿಗಳ ಮೂರ್ತಿಗಳಿಗೆ ಸರ್ವಾಲಂಕಾರ ಮಾಡಿದ್ದಾರೆ. ಇದರರ್ಥ, ಈ ಐಹಿಕ ಪ್ರಪಂಚಕ್ಕೆ ಬಂದ ಮೇಲೆ ಇಲ್ಲಿಯ ಎಲ್ಲ ಭೋಗಭಾಗ್ಯಗಳನ್ನು ಹೊಂದಿ ಸುಖಿಸುವ ಹಕ್ಕು ಮನುಜನಿಗಿದೆ ಹಾಗೂ ಇದು ಸಹಜತತ್ವ. ಆದರೆ, ಅದಕ್ಕೇ ಅಂಟಿಕೊಳ್ಳದೆ ವಿರಾಗಿ ಬುದ್ಧದೇವನಂತೆ ಪಾರಮಾರ್ಥಿಕ ಅನುಭಾವದೆಡೆಗೆ ಮನಸನ್ನು ಲೀನಗೊಳಿಸಿಕೊಳ್ಳಬೇಕೆಂದು ಎರಡೂ ಪಕ್ಕಪಕ್ಕದಲ್ಲಿ ಹೀಗೆ ಸ್ಥಾಪಿಸಲಾಗಿದೆ.

ನಂಬಿಕೆಗಳ ಆಗರ

ನಮ್ಮ ದೇಶದಲ್ಲಿರುವಂತೆ ಇಲ್ಲಿ ನಂಬಿಕೆಗಳು ಹೇರಳವಾಗಿವೆ. ಈ ದೇಗುಲದ ಪ್ರವೇಶದಲ್ಲೇ ದೊಡ್ಡದಾದ ಅಗರಬತ್ತಿ ಕರಂಡಕವಿದೆ. ಇಲ್ಲಿ ಬಂದ ಭಕ್ತರು ಗಂಧದಕಡ್ಡಿಗಳನ್ನು ಹೊತ್ತಿಸಿ, ಒಳಗೆ ಸಿಗಿಸಿ, ಅದರ ಧೂಮವನ್ನು ಕೈಗಳಿಂದ ತಮ್ಮ ಮುಖ, ಶಿರಕ್ಕೆ ಒತ್ತಿಕೊಳ್ಳುತ್ತಾರೆ. ಒಳಗಿನ ಪ್ರಾಕಾರದಲ್ಲಿ ಗರುಡಗಂಬದಂಥ ರಚನೆಯಿದೆ. ದೇಗುಲದಲ್ಲಿ ನಮ್ಮಂತೆ ತೀರ್ಥ ತೆಗೆದುಕೊಂಡು, ಕೆಳಗಿನ ಆಯತಾಕಾರದ ಮರದ ಪೆಟ್ಟಿಗೆಯಲ್ಲಿ ಕಾಣಿಕೆ ಅರ್ಪಿಸುತ್ತಾರೆ. ದೇಗುಲದೊಳಗಿನ ಮರದ ಕಂಬದಲ್ಲಿರುವ ಕಿಂಡಿಯೊಂದರಲ್ಲಿ ಅತ್ತಿಂದಿತ್ತ ತಲೆತೂರಿ, ಹರಕೆ ಒಪ್ಪಿಸುತ್ತಾರೆ. ಹೀಗೆ ಮಾಡಿದರೆ ಆ ಆತ್ಮ ಪವಿತ್ರಾತ್ಮವಾಗಿ ಮುಂದಣ ಜನ್ಮದಲ್ಲಿ ಬುದ್ಧನಂತೆ ಜ್ಞಾನಮೂರ್ತಿಯಾಗಿ ಹುಟ್ಟು ಪಡೆವುದಂತೆ. ಅಂದರೆ, ಪುನರ್ಜನ್ಮದಲ್ಲಿ ಅಪಾರ ನಂಬಿಕೆ.

ಜಿಂಕೆವನದ ಸೊಬಗು

ಈ ದೇಗುಲದ ಮುಖ್ಯದ್ವಾರದ ಬಳಿಯೇ ವಿಶಾಲವಾದ ಜಿಂಕೆವನವಿದೆ. ಸ್ವರ್ಗದಿಂದ ದೇವರು ಧವಳವರ್ಣದ ಜಿಂಕೆಯ ಮೇಲೆ ಭುವಿಗೆ ಬಂದಿಳಿದನೆಂದು, ಜಪಾನಿನಲ್ಲೊಂದು ನಂಬಿಕೆಯಿದೆ. ಹಾಗಾಗಿಯೇ, ಜಿಂಕೆಯನ್ನು ದೇವವಾಹನ ಎಂದು ಪರಿಗಣಿಸಿ, ಇಲ್ಲಿ ಅವುಗಳನ್ನು ಪೋಷಿಸಿ, ಅವುಗಳಿಗೂ ಸ್ವಲ್ಪವೂ ತೊಂದರೆಯಾಗದಂತೆ ಸಲಹುತ್ತಾರೆ.

ಒಟ್ಟಿನಲ್ಲಿ ದೇವರು ಇಲ್ಲ ಎನ್ನುತ್ತಲೇ, ಜಗತ್ತು ಒಂದಿಲ್ಲೊಂದು ನಂಬಿಕೆಯ ಮೇಲೇ ಸಾಗುತ್ತಿರುವುದು ಸತ್ಯ. ಇಲ್ಲಿ ನಯನ ಮನೋಹರವಾದ ಉದ್ಯಾನವೊಂದಿದ್ದು, ಅದರಲ್ಲಿ ಹೇರಳವಾದ ಮರಗಳಿವೆ. ಇವುಗಳ ಎಲೆಗಳು ‘ಆಟಮ್’ ಸೌಂದರ್ಯದಿಂದ ಹೂವಿನ ಬಣ್ಣದಲ್ಲಿ ಕಂಗೊಳಿಸುತ್ತಿದ್ದವು.

ಇವಲ್ಲದೆ ಊರಿನಲ್ಲಿ ಅನೇಕ ಶಿಂಟೋಶ್ರೈನ್‍ಗಳು, ದೇಗುಲಗಳು, ಮ್ಯೂಸಿಯಂಗಳು, ಜಪಾನೀ ಕಲೆಯ ಮನೋಹರ ಉದ್ಯಾನಗಳಿದ್ದು ಒಂದಕ್ಕಿಂತ ಒಂದು ಕಲಾತ್ಮಕವಾಗಿವೆ. ಇಲ್ಲಿಯ ಶಿಂಟೋ ಶ್ರೈನ್ ಒಂದರಲ್ಲಿ ಸುಮಾರು 3000ದಷ್ಟು ಧರ್ಮಾಧಾರಿತ ‘ಲ್ಯಾಂಟನ್‌‘ಗಳಿದ್ದು ಅತಿ ಸುಂದರವಾದ ದೇಗುಲವಾಗಿದೆ.

ಜಪಾನ್ ತುಂಬ ಶಾಂತಿಯುತ ದೇಶ. ಸ್ವಚ್ಛತೆ, ಶಿಸ್ತು, ವಿನಯ, ದಕ್ಷತೆ ಇವರನ್ನು ನೋಡಿ ಕಲಿಯಬೇಕು. ಆದರೆ ಇಂದು, ಜಪಾನಿನ ಸಾಮಾಜಿಕ ಮನೋಭಾವವೂ ಸ್ವಲ್ಪ ಬದಲಾಗಿದೆ. ಬಿಂದಾಸ್ ವರ್ತನೆಯ ಯುವಜನತೆ, ಸಡಿಲಾಗುತ್ತಿರುವ ಕೌಟುಂಬಿಕ ವ್ಯವಸ್ಥೆ, ವೃದ್ಧರ ಏಕಾಂಗಿತನ ಹೀಗೆ ನಮ್ಮಲ್ಲಿರುವ ಅನೇಕ ತಲ್ಲಣಗಳು ಈ ಪರಂಪರೆಯ ನಾಡನ್ನೂ ಕಳವಳಕ್ಕೀಡು ಮಾಡಿದೆ ಎನ್ನುವುದು ನಮ್ಮ ಗೈಡ್ ಯೂಕೋ ಹೇಳಿದ ಸಂಗತಿ.

ಒಮ್ಮೊಮ್ಮೆ ಯುವಜನತೆ ಎಲ್ಲೆಂದರಲ್ಲಿ ಕಸ ಎಸೆಯುವುದುಂಟು. ಅಂಥ ಸಂದರ್ಭದಲ್ಲಿ ವೃದ್ಧರು ಅವರ ಬಗ್ಗೆ ಚಕಾರವೆತ್ತದೆ ಹಾದಿಗೆ ಬಿದ್ದ ಆ ಕಸವನ್ನು ತೆಗೆದು ಡಸ್ಟ್‌ಬಿನ್‍ಗೆ ಹಾಕಿ ಮುಂದೆ ಹೋಗುತ್ತಾರೆ. ಹಾಗಾಗಿ ಯುವಜನತೆ ನಾಚಿಕೊಂಡು ಇನ್ನೊಮ್ಮೆ ಹಾಗೆ ಮಾಡಲು ಹಿಂಜರಿಯುತ್ತಾರಂತೆ. ಅಬ್ಬಾ, ಎಂಥ ಪಾಠ !

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.