ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆನಾಡ ಜಲಧಾರೆಗಳ ಸುತ್ತ ಒಂದು ಪಯಣ

Last Updated 27 ಜುಲೈ 2018, 19:30 IST
ಅಕ್ಷರ ಗಾತ್ರ

ಎರಡು ದಿನ, ನಾಲ್ಕು ಜಲಪಾತಗಳು, ಮತ್ತೊಂದಿಷ್ಟು ಟ್ರೆಕ್ಕಿಂಗ್ ಅಂತೆಲ್ಲಾ ಹೇಳಿ ಅಡ್ವೆಂಚರ್ ಅಡ್ಡಾದ ಯಶವಂತ್ ಅರಸ್ ಮನದಲ್ಲಿ ಹೊಸ ಆಸೆ ಹುಟ್ಟಿಸಿದ್ದರು. ಆ ಜಲಪಾತಗಳ ಸೊಬಗನ್ನು ಕಣ್ತುಂಬಿಕೊಳ್ಳಬೇಕೆಂಬ ಆಸೆಬಹಳ ದಿನಗಳಿಂದ ಮನದಲ್ಲಿಯೇ ಹುದುಗಿತ್ತು.

ಯಲ್ಲಾಪುರ ಸುತ್ತಮುತ್ತ ಸಾಕಷ್ಟು ಜಲಪಾತಗಳಿವೆ. ಮುಖ್ಯವಾಗಿ ಮಾಗೋಡ ಮತ್ತು ಸಾತೊಡ್ಡಿ ಜಲಪಾತಗಳು. ಬಹುಷಃ ಎಲ್ಲ ಋತುಗಳಲ್ಲಿಯೂ ಕೊಂಚ ನೀರು ಹಿಡಿದಿಟ್ಟುಕೊಳ್ಳುವ ಜಲಪಾತವೆಂದರೆ ಸಾತೊಡ್ಡಿ ಜಲಪಾತ ಒಂದೇ ಇರಬೇಕು.

ಅದರೊಟ್ಟಿಗೆ, ಶಿರಲೆ ಜಲಪಾತವನ್ನೂ ನೋಡಿ ಸರ್. ಬಹಳ ಜನರಿಗೆ ಈ ಜಲಪಾತದ ಬಗ್ಗೆ ಗೊತ್ತಿಲ್ಲ. ನಮ್ಮ ಇಟಿನರಿಯಲ್ಲಿ ನಡೆದು ನೋಡಬೇಕಾದ ಜಲಪಾತ ಇದೊಂದೇ’ ಎಂದು ಯಶವಂತ್ ಪರಿಚಯಿಸಿದರು. ಶಿರಲೆ ಹೆಸರು ಸ್ವಲ್ಪ ಅಪರಿಚಿತವೇ ಎನಿಸಿತು ನನಗೆ.

ಅಲ್ಲಿಗೆ ಹೋಗಲು ಜೊತೆಗೆ ಬರುತ್ತೇನೆ ಅಂದಿದ್ದ ಮಗ ಕೈಕೊಟ್ಟಾಗ ಮತ್ತೆ ಅಪರಿಚಿತರೊಂದಿಗೆ ಪ್ರಯಾಣ ಆರಂಭವಾಯಿತು. ಈಚೆಗೆ ಒಂದು ಶುಕ್ರವಾರ ರಾತ್ರಿಬೆಂಗಳೂರು ಬಿಟ್ಟು ಯಲ್ಲಾಪುರದಿಂದ ಸ್ವಲ್ಪ ದೂರದಲ್ಲಿದ್ದ ಸಾತೊಡ್ಡಿ ಹೋಮ್‍ಸ್ಟೇ ತಲುಪಿದೆವು. ಅದಾಗಲೇ ಬ್ರೇಕ್ ಫಾಸ್ಟ್ ಸಮಯವಾಗಿತ್ತು. ಹಸಿದ ಹೊಟ್ಟೆಗೆ ಹೋಮ್‍ಸ್ಟೇಯ ಗಣಪತಿಯವರು ಕೊಟ್ಟ ಒಗ್ಗರಣೆ ಸುಧಾಮನ ಅವಲಕ್ಕಿಯನ್ನು ನೆನಪಿಸಿತು.

ನಮ್ಮ ಮೊದಲ ಭೇಟಿಯೇ ಶಿರಲೆ ಜಲಪಾತ. ಅದು ಯಲ್ಲಾಪುರದಿಂದ ಸುಮಾರು 15 ಕಿ.ಮೀ. ದೂರದಲ್ಲಿದೆ. ಮುಖ್ಯ ರಸ್ತೆಯಲ್ಲಿ ಇದನ್ನು ಗುರುತಿಸುವ ಫಲಕಗಳೇನೂ ಇಲ್ಲ. ಗೊತ್ತಿದ್ದವರಷ್ಟೇ ಹೋಗಬೇಕು. ಹಾಗಾಗಿ, ಸ್ಥಳೀಯ ವಿದ್ಯಾರ್ಥಿಗಳೇ ನಮಗೆ ಇಲ್ಲಿ ಹೆಚ್ಚು ಕಾಣಸಿಕ್ಕರು. ಶಿರಲೆ ಗ್ರಾಮ ಅರಣ್ಯ ಸಮಿತಿಯವರು 20 ರೂಪಾಯಿ ಪ್ರವೇಶ ಶುಲ್ಕ ಇಟ್ಟಿದ್ದಾರೆ.

‘ನೀರು ಭಾಳ ಇದೆ. ಇಳಿಯುವ ಸಾಹಸ ಮಾಡಬೇಡಿ’ ಎಂದು ಗೇಟಿನಲ್ಲಿದ್ದವರು ಎಚ್ಚರಿಸಿದರು. ಪಾರ್ಕಿಂಗ್ ತಾಣದಿಂದ ಸುಮಾರು 5 ಕಿ.ಮೀ. ನಡಿಗೆ. ಇದರಲ್ಲಿ ಮೂರುಕಿ.ಮೀ. ಸಿಮೆಂಟ್ ರಸ್ತೆ ಇದೆ. ಆದರೆ ಪ್ರವಾಸಿ ವಾಹನಗಳಿಗೆ ಪ್ರವೇಶ ಇಲ್ಲ. ನಂತರದ 2 ಕಿ.ಮೀ. ಮರಗಿಡಗಳ ನಡುವೆ, ಇಂಬಳಗಳ ಬಗ್ಗೆ ಎಚ್ಚರಿಸುತ್ತ ಡೇವಿಡ್ ಸಾಗುತ್ತಿದ್ದರೆ ಕಿವಿಯಲ್ಲಿ ಜಲಪಾತದ ಭೋರ್ಗರೆತ ಮೊರೆಯುತ್ತಿತ್ತು. ಆದರೆ, ಅದು ಕಣ್ಣಿಗೆ ಮಾತ್ರ ಬೀಳಲಿಲ್ಲ.

ಕೊನೆಗೆ ಧುಮ್ಮಿಕ್ಕಿ ಹರಿಯುತ್ತಿದ್ದ ನೀರಿನ ಮೇಲೆ ಮರದ ಕಿರು ಸೇತುವೆ ಕಂಡಿತು. ಅದೇ ಜಲಪಾತವೇನೋ ಎನ್ನುತ್ತ ಕಣ್ಣರಳಿಸಿದರೆ ಡೇವಿಡ್ ಇನ್ನೂ ಮುಂದೆ ನಡೆಸಿಕೊಂಡೆ ಕರೆದೊಯ್ದರು. ಇನ್ನೊಂದು ಕಿ.ಮೀ. ನಡೆದಾಗ ಸಿಕ್ಕಿದ್ದೇ ಶಿರಲೆ ಜಲಪಾತ. ಅಗಾಧ ಕೆಂಬಣ್ಣದ ನೀರನ್ನು ಚೆಲ್ಲುತ್ತ ಭೋರ್ಗರೆಯುತ್ತಿತ್ತು. ಸುಮಾರು 30 ಅಡಿ ಎತ್ತರದಿಂದ ಬೀಳುತ್ತಿದ್ದ ಜಲಪಾತದ ಆರ್ಭಟಕ್ಕೆ ಬೆದರಿ ದೂರದಲ್ಲೇ ನಿಂತಿದ್ದರೂ ಸಿಂಪಡಿಸುತ್ತಿದ್ದ ನೀರಿನಲ್ಲೇ ತೊಪ್ಪೆಯಾದ ಸ್ಥಿತಿ.

ನಂತರ ನಮ್ಮ ಪ್ರಯಾಣ ಮಾಗೋಡ ಜಲಪಾತಕ್ಕೆ. ದಾರಿಯಲ್ಲಿ ಸಿಕ್ಕ ಗ್ರಾಮಸ್ಥರೊಬ್ಬರು ‘ಏನೂ ಕಾಣಿಸೋದಿಲ್ಲ ಬಿಡಿ. ಮಂಜು ಮುಸುಕಿದೆ’ ಎಂದು ನಿರಾಸೆಗೊಳಿಸಿದರು. ಅವರು ಹೇಳಿದ್ದು ನಿಜ. ಸುಮಾರು ಕಿ.ಮೀ. ದೂರದಲ್ಲಿಯೇ ಜಲಪಾತ ವೀಕ್ಷಣೆಗೆ ಗೋಪುರಗಳಿವೆ. ಅಲ್ಲಿ ನಿಂತರೆ ಕೇವಲ ಮಂಜಿನ ಪರದೆ ಮಾತ್ರ ಕಾಣಿಸುತ್ತಿತ್ತು. ನೀರಿನ ಮೊರೆತದ ಹಿನ್ನೆಲೆ ಸಂಗೀತ ಮಾತ್ರ ಹಾಗೆಯೇ ಇತ್ತು. ಹತ್ತು ನಿಮಿಷ ಹಾಗೇ ನಿರೀಕ್ಷೆಯಲ್ಲೇ ನಿಂತಿದ್ದು ಸಾರ್ಥಕವೆನಿಸಿತು.

ಮಂಜಿನ ಪರದೆ ನಿಧಾನಕ್ಕೆ ಸರಿಯುತ್ತ ಜಲಪಾತದ ಅಪೂರ್ವ ಸೌಂದರ್ಯ ರಾಶಿಯನ್ನು ಪರಿಚಯಿಸುತ್ತ ಹೋಯಿತು. ಮಾಗೋಡು ಜಲಪಾತದ ಬಹುತೇಕ ಚಿತ್ರಗಳು ಒಂದೇ ಶಾಖೆಯನ್ನು ಹೊಂದಿದೆ. ಆದರೆ ಭಾರಿ ಮಳೆಯಿಂದಾಗಿ ಧುಮ್ಮಿಕ್ಕುತ್ತಿದ್ದ ನೀರು ಎರಡು ಕವಲಾಗಿ ಒಡೆದು ಸೌಂದರ್ಯ ಇಮ್ಮಡಿಸಿತ್ತು. ಹಸಿರು ರಾಶಿಯ ನಡುವೆ ಸಾಗುತ್ತ ಸುರಿಯುತ್ತಿದ್ದ ಕೆಂಬಣ್ಣದ ನೀರು ‘ಪಿಕ್ಚರ್ ಪರ್ಫೆಕ್ಟ್’ ದೃಶ್ಯ ಸೃಷ್ಟಿಸಿತ್ತು. ಹುಬ್ಬಳ್ಳಿಯ ಉಣಕಲ್ ಕೆರೆಯಲ್ಲಿ ಹುಟ್ಟುವ ಬೇಡ್ತಿ ನದಿ ಹರಿಯುತ್ತ ಇಲ್ಲಿ ಜಲಪಾತವಾಗಿ 650 ಅಡಿ ಎತ್ತರದಿಂದ ಧುಮ್ಮಿಕ್ಕುತ್ತದೆ. ಜೇನುಕಲ್ಲು ಗುಡ್ಡದ ವೀಕ್ಷಣೆ ನಂತರ ಮೊದಲ ದಿನ ಮುಕ್ತಾಯ. ಬೆಳಿಗ್ಗೆಯಿಂದ ಎಡೆಬಿಡದೇ ಸುರಿಯುತ್ತಿದ್ದ ಜಿಟಿಜಿಟಿ ಮಳೆ ಬಿಸಿಬಿಸಿ ಬೋಂಡಾ ಬಜ್ಜಿಯ ಆಸೆ ಹುಟ್ಟಿಸಿದಾಗ ಡೇವಿಡ್ ಸೈ ಎಂದರು. ಹೋಮ್‍ಸ್ಟೇ ತಲುಪಿ ಕಾಲಿಗೆ ಹತ್ತಿದ್ದ ಇಂಬಳಗಳನ್ನು ಲೆಕ್ಕ ಮಾಡಿ ತೊಳೆದು ಹಾಕಿ ಬೆಚ್ಚಗಿನ ಬಿಸಿನೀರಿನ ಸ್ನಾನ ಹಾಯೆನಿಸಿತು. ಹೊರಗೆ ಹರಟುತ್ತ ಕುಳಿತಿದ್ದಾಗ ಹಿಂಬದಿಯಲ್ಲಿ ಸದ್ದಿಲ್ಲದೇ ಕುಳಿತಿದ್ದ ವಿಷಪೂರಿತ ಕಟ್ಟಂಬಳ ಹಾವು ಎಲ್ಲರನ್ನೂ ಚದುರಿಸಿತು.

ಮರುದಿನ ಬೆಳ್ಳಂಬೆಳಗ್ಗೆ ಸಾತೊಡ್ಡಿ ಜಲಪಾತಕ್ಕೆ ಪ್ರಯಾಣ. ಹೋಮ್ ಸ್ಟೇಯಿಂದ ಸುಮಾರು 10 ಕಿ.ಮೀ. ದೂರದಲ್ಲಿತ್ತು. ಹಿಂದಿನ ದಿನ ರಾತ್ರಿ ಭಾರಿ ಗಾಳಿ ಮಳೆ ಇತ್ತು. ಬೆಳಿಗ್ಗೆಯೂ ಮಳೆ ಬಿಟ್ಟಿರಲಿಲ್ಲ. ಜಲಪಾತಕ್ಕೆ ಮೂರು ಕಿ.ಮೀ. ಇದೆಯೆನ್ನುವಾಗ ಮರವೊಂದು ನಡುಮುರಿದುಕೊಂಡು ರಸ್ತೆಯಲ್ಲಿಯೇ ಮಲಗಿತ್ತು. ಟೆಂಪೊ ಟ್ರಾವೆಲ್ಲರ್‌ನ ಡ್ರೈವರ್ ಶಾಂತಕುಮಾರ್, ಸದ್ಯದ ಮಟ್ಟಿಗೆ ಅದನ್ನು ದಾಟಿಮುಂದೆ ಹೋಗೋಕೆ ಸಾಧ್ಯವೇ ಇಲ್ಲ ಅಂದುಬಿಟ್ಟರು. ಸಮೀಪದಲ್ಲಿ ಮನೆಮಠಗಳಿಲ್ಲದ ಅರಣ್ಯದಂತಿದ್ದ ಪ್ರದೇಶ. ಕೈಯಲ್ಲಿ ಎಳೆದು ಹಾಕುವ ಸಾಹಸಕ್ಕೆ ಮುಂದಾದರೆ ಮುರಿದ ಮರದಲ್ಲಿ ಮನೆಕಟ್ಟಿಕೊಂಡಿದ್ದು, ದಿಕ್ಕಾಪಾಲಾಗಿ ಓಡಾಡುತ್ತಿದ್ದ ಕೆಂಪಿರುವೆಗಳು ಎಲ್ಲೆಂದರಲ್ಲಿ ಮೈಮೇಲೆ ಹತ್ತಿದವು.

‘ವಾಪಾಸ್ ಹೋಗೋಣ... ಜೋಗ ನೋಡಿ ಹೋಗುವಾಗ ಸರಿ ಹೋಗುತ್ತೆ’ ಎಂದು ಡೇವಿಡ್ ಹೇಳಿದರೂ ನಾವು ಪಟ್ಟು ಬಿಡಲಿಲ್ಲ. ಕೊನೆಗೂ ಶಾಂತಕುಮಾರ್ ನಮ್ಮ ಮನವಿಗೆ ಶಾಂತರಾದರು. ಇರುವೆ ಕಚ್ಚಿದರೂ ಸರಿಯೇ ಸಾತೊಡ್ಡಿ ನೋಡಿಯೇ ಸಿದ್ಧ ಎಂದು ಪ್ರತಿಜ್ಞೆ ಮಾಡಿದ ಕಿರಣ್, ರಾಹುಲ್ ಎಲ್ಲ ಕೈ ಹಾಕಿ ಮರದ ಕೊಂಬೆ ಎಳೆದರು. ಪ್ರಯಾಣ ಸುಗಮವಾಯಿತು. ಸಾತೊಡ್ಡಿ ಪಾರ್ಕಿಂಗ್ ಪ್ರದೇಶದಿಂದ ಜಲಪಾತದವರೆಗೆ ಒಂದು, ಒಂದೂವರೆ ಕಿ.ಮೀ. ನಡೆಯಬೇಕು.

ಕರಿಕಲ್ಲ ಬಂಡೆಗಳ ಮೇಲೆ ಕವಲು ಕವಲಾಗಿ ಬೀಳುತ್ತಿದ್ದ ಜಲಪಾತದ ನಿರೀಕ್ಷೆಯಲ್ಲಿದ್ದ ನಮಗೆ ಸಾತೊಡ್ಡ ಬೇರೆಯೇ ನೋಟ ಒದಗಿಸಿತು. ಒಂದಿಷ್ಟು ಕಲ್ಲೂ ಕಾಣಿಸಿದಂತೆ ನೀರು ಧುಮ್ಮಿಕ್ಕುತ್ತಿತ್ತು. ಹತ್ತಿರ ಹೋಗುವ ಸಾಧ್ಯತೆಯೇ ಇರಲಿಲ್ಲ. ಸಾತೊಡ್ಡಿ ಒಂದು ಅದ್ಭುತ ಜಲಪಾತ. ಗಂಟೆ ಹನ್ನೊಂದು ಸರಿದರೂ ಹಸಿವಿನ ಚಿಂತೆ ಕಾಡಲಿಲ್ಲ. ಊಟದ ಹೊತ್ತಿನಲ್ಲಿ ಉಪಹಾರ ಮುಗಿಸಿ ಗಣಪತಿಯವರು ಕಟ್ಟಿಕೊಟ್ಟ ಹಲಸಿನ ಹಪ್ಪಳ ಮೆಲ್ಲುತ್ತ ಉಂಚಳ್ಳಿ ಜಲಪಾತದತ್ತ ತೆರಳಿದೆವು. ಇಲ್ಲಿಯೂ ಜಲಪಾತಕ್ಕೆ ಮಂಜಿನ ಪರದೆ ಎಳೆಯಲಾಗಿತ್ತು. ಸ್ವಲ್ಪ ಹೊಂಬಿಸಿಲು ಮೂಡಿದ್ದರಿಂದ ನಿಧಾನವಾಗಿ ಸುರಿಯುತ್ತಿದ್ದ ಜಲಪಾತದ ನೀರಿನ ಹನಿಗಳು ಕಾಮನಬಿಲ್ಲು ಸೃಷ್ಟಿಸುತ್ತಿದ್ದವು. ಕೆಳಗಿನ ವೀಕ್ಷಣೆ ಗೋಪುರದಲ್ಲಿ ಜಲಪಾತ ಏನೂ ಕಾಣಿಸುತ್ತಿರಲಿಲ್ಲ. ಆದರೆ ಗಾಳಿಯೊಂದಿಗೆ ಬೀರುತ್ತಿದ್ದ ನೀರು ಮಳೆ ಸುರಿಸಿದಂತೆ ತೊಪ್ಪೆ ಮಾಡುತ್ತಿತ್ತು. ಉಂಚಳ್ಳಿಯ ಮೇಲಿನ ಜಲರಾಶಿ ಸ್ವಲ್ಪ ಕಾಣಿಸಿದ್ದು ಮಾತ್ರ ಮೊದಲ ಟವರ್‌ನಲ್ಲಿಯೇ.

ಎರಡು ದಿನಗಳ ಮಳೆಯಿಂದಾಗಿ ಮೈದುಂಬಿ ಹರಿಯತ್ತಿದ್ದ ಐದು ಹೆಸರಾಂತ ಜಲಪಾತಗಳೊಂದಿಗೆ ಅಲ್ಲಲ್ಲಿ ಕಾಣಸಿಕ್ಕ ಅನಾಮಧೇಯ ಜಲಪಾತಗಳು ಹಲವು. ನಮ್ಮ ಟೀಮಿನಲ್ಲಿ ಮೊದಲು ಗುರುತಿಸಿದವರ ಹೆಸರನ್ನೇ ಆ ಜಲಪಾತಕ್ಕೆ ಇಟ್ಟು ಖುಷಿಪಟ್ಟೆವು.

ನಾವು ಭೇಟಿ ನೀಡಿದ ಬಹುತೇಕ ಎಲ್ಲ ಜಲಪಾತಗಳಿಗೂ ಒಳ್ಳೆಯ ರಸ್ತೆ ವ್ಯವಸ್ಥೆ ಇದೆ. ಇಳಿಯಲು ಮೆಟ್ಟಿಲುಗಳನ್ನು ಮಾಡಲಾಗಿದೆ. ಆ ಮಟ್ಟಿಗೆ ಪ್ರವಾಸೋದ್ಯಮ ಇಲಾಖೆ ಶ್ಲಾಘನೀಯ ಕೆಲಸ ಮಾಡಿದೆ.

ದಾರಿಯಲ್ಲಿ ಪ್ರವಾಸಿಗರು
ದಾರಿಯಲ್ಲಿ ಪ್ರವಾಸಿಗರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT