ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಥ ಮರಳಯ್ಯ ಇದು ಎಂಥಾ ಮರುಳು...

Last Updated 13 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

‘ಅಖಾಬಾ.. ಅಖಾಬಾ..’ ಎನ್ನುತ್ತಾ ರಣೋತ್ಸಾಹದಲ್ಲಿ ನೂರಾರು ಕುದುರೆಗಳು ಹಾಗೂ ಒಂಟೆಗಳ ಮೇಲೆ ಅರಬ್ಬರು ವಾದಿ ರಮ್‌ ಮರುಭೂಮಿಯಲ್ಲಿ ಸಾಗುತ್ತಿದ್ದರೆ, ಇರುವೆಗಳ ಸಾಲು ಚಲಿಸುತ್ತಿರುವಂತೆ ಕಂಡುಬಂದಿತ್ತು. 1917ರಲ್ಲಿ ನಡೆದ ‘ಅಖಾಬಾ ಕದನ’ ಕೆಲವು ಕಾರಣಗಳಿಂದ ಇತಿಹಾಸದಲ್ಲಿ ಪ್ರಾಮುಖ್ಯತೆಯನ್ನು ಪಡೆದಿದೆ. ಗುಂಪುಗಳಾಗಿ ಚದುರಿ, ಪರಸ್ಪರ ಕಚ್ಚಾಡುತ್ತಿದ್ದ ಅರಬ್ಬರು ಈ ಯುದ್ಧದಲ್ಲಿ ಒಗ್ಗಟ್ಟನ್ನು ಪ್ರದರ್ಶಿಸಿ ಟರ್ಕಿಗಳನ್ನು ಸೋಲಿಸಿ ಹೊರದೂಡಿದ್ದರು.

ಅಖಾಬಾ, ಜೋರ್ಡಾನ್‌ ದೇಶದ ಪ್ರಮುಖ ಬಂದರು ನಗರ. ವ್ಯಾಪಾರ ವಹಿವಾಟಿನ ಆಯಕಟ್ಟಿನ ಸ್ಥಳವಾದ ಇಲ್ಲಿ ಟರ್ಕಿಗಳು ನೆಲೆ ನಿಂತಿದ್ದರು. ನಗರದ ಮುಂದೆ ಕೆಂಪು ಸಮುದ್ರವಿದ್ದರೆ, ಹಿಂದೆ ಸುಮಾರು 720 ಚದರ ಕಿ.ಮೀ. ವಿಸ್ತಾರದ ವಾದಿ ರಮ್‌ ಮರುಭೂಮಿಯಿದೆ.

ಸಮುದ್ರದ ಕಡೆಯಿಂದ ಮಾತ್ರ ಶತ್ರುಗಳು ದಾಳಿ ಮಾಡಲು ಸಾಧ್ಯ ಎಂದು ಫಿರಂಗಿಗಳನ್ನು ಸಮುದ್ರದೆಡೆಗೆ ತಿರುಗಿಸಿದ್ದ ಟರ್ಕಿಗಳನ್ನು, ತಮ್ಮ ಛಲ ಮತ್ತು ಸಾಹಸದಿಂದ ಅರಬ್ಬರು ಮರುಭೂಮಿಯಲ್ಲಿ ಸಾಗಿ ಬಂದು ಆಕ್ರಮಣ ಮಾಡಿ ಗೆಲುವು ಸಾಧಿಸಿದ್ದರು. ಈ ಅಸಾಧಾರಣ ಸಾಹಸದ ಕಾರಣಕರ್ತೃ – ಥಾಮಸ್ ಎಡ್ವರ್ಡ್ ಲಾರೆನ್ಸ್ ಎಂಬ ಬ್ರಿಟಿಷ್‌ ಅಧಿಕಾರಿ.

ಲಾರೆನ್ಸ್ ಒಬ್ಬ ಬ್ರಿಟಿಷ್ ಪುರಾತತ್ವ ಶಾಸ್ತ್ರಜ್ಞ. ಮಧ್ಯಪ್ರಾಚ್ಯ ರಾಷ್ಟ್ರಗಳ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದ ಈತ ತನ್ನ ಸಂಶೋಧನೆಗಾಗಿ ಸಿರಿಯಾ, ಲೆಬನನ್ ಮತ್ತು ಜೋರ್ಡಾನ್ ದೇಶಗಳನ್ನು ಸುತ್ತಿದ್ದ. ಮೊದಲನೇ ವಿಶ್ವಯುದ್ಧ ಪ್ರಾರಂಭವಾದಾಗ ಕೈರೋದಲ್ಲಿ ಬ್ರಿಟಿಷ್ ಕಮೀಷನ್ ಈತನನ್ನು ನೇಮಿಸಿಕೊಂಡಿತು.

ಟರ್ಕಿಗಳ ವಿರುದ್ಧ ಅರಬ್ಬರು ತಿರುಗಿಬಿದ್ದಾಗ ಅರಬ್ಬರನ್ನು ಒಗ್ಗೂಡಿಸುವಲ್ಲಿ ಮತ್ತು ಅಖಾಬಾ ಹಾಗೂ ದಮಾಸ್ಕಸ್‌ನಿಂದ ಒಟ್ಟೊಮಾನ್ ಟರ್ಕಿಗಳನ್ನು ಹೊಡೆದೋಡಿಸುವಲ್ಲಿ ಲಾರೆನ್ಸ್ ಪ್ರಮುಖ ಪಾತ್ರ ವಹಿಸಿದ್ದ. ಈತನ ‘ಸೆವೆನ್ ಪಿಲ್ಲರ್‍ಸ್ ಆಫ್ ವಿಸ್ಡಮ್’ ಕೃತಿ ಪ್ರಸಿದ್ಧವಾದುದು. ಈ ಕೃತಿಯಲ್ಲಿ ತನ್ನ ಸಾಹಸಗಾಥೆಯನ್ನು ವಿವರವಾಗಿ ಬರೆದಿದ್ದಾನೆ.

ಲಾರೆನ್ಸ್‌ ಅರಬ್ಬರನ್ನು ಒಗ್ಗೂಡಿಸಿದ ಪ್ರದೇಶ ಈಗಿನ ಜೋರ್ಡಾನ್‌ ದೇಶದ ಮರುಭೂಮಿ ‘ವಾದಿ ರಮ್‌’. ತನ್ನ ಕೃತಿಯಲ್ಲಿ ಆತ ವಾದಿ ರಮ್ ಭೂದೃಶ್ಯಗಳನ್ನು ಹಾಡಿ ಹೊಗಳಿದ್ದಾನೆ. ಅದರಿಂದ ಆಕರ್ಷಿತರಾದ ಯೂರೋಪಿಯನ್ನರು ಈಗಲೂ ಅಲ್ಲಿಗೆ ತಂಡೋಪತಂಡವಾಗಿ ಹೋಗುತ್ತಾರೆ.

ಲಾರೆನ್ಸ್ ಬದುಕನ್ನಾಧರಿಸಿ 1962ರಲ್ಲಿ ತೆಗೆದ ಚಲನಚಿತ್ರವೇ ‘ಲಾರೆನ್ಸ್ ಆಫ್ ಅರೇಬಿಯಾ’. ಇದರಲ್ಲಿ ಲಾರೆನ್ಸ್ ಬದುಕನ್ನು ಆವರಿಸಿದ್ದ ಅಲ್ಲಿನ ಜನ, ಮಣ್ಣು, ಭೂಪರಿಸರ ಎಲ್ಲವೂ ನಿಜಕ್ಕೂ ಅದ್ಭುತ. ಅದರಲ್ಲೂ ವಾದಿ ರಮ್‌ ಭೂದೃಶ್ಯಗಳಂತೂ ನಯನ ಮನೋಹರ.

ಪ್ರಕೃತಿ ಸೌಂದರ್ಯಕ್ಕೆ ಹೊಸ ವ್ಯಾಖ್ಯೆ
ಪ್ರಕೃತಿ ಸೌಂದರ್ಯ ಎಂದರೆ ಹಸಿರುಸಿರಿ, ಹಸಿರು ಪಚ್ಚೆ, ಹಸಿರು ಬಯಲು ಎಂದೆಲ್ಲಾ ಕವಿನುಡಿಗಳಂತೆ ಪರಿಭಾವಿಸಿದವರಿಗೆ ಹಸಿರಿಲ್ಲದೆಯೂ ಸೌಂದರ್ಯ ಕಂಡು ಬರುವುದು ವಾದಿ ರಮ್‌ನಲ್ಲಿ. ಅದೊಂದು ಮರುಭೂಮಿ. ಆದರೆ ನಮ್ಮ ರಾಜಸ್ತಾನದಂತೆ ಮರಳಿನ ರಾಶಿಯಿಂದಾದ ಮರುಭೂಮಿಯಲ್ಲ. ಕಪ್ಪು, ಕೆಂಪು ಶಿಲಾವೃತ ವಿಚಿತ್ರ ಆಕಾರದ ಬೃಹತ್ ಬೆಟ್ಟಗುಡ್ಡಗಳ ನಡುವಣ ಕೆಂಪು, ಗಾಢ ಕೆಂಪು, ಕಂದು ಮುಂತಾದ ಬಣ್ಣಗಳ ಮೃದುವಾದ ಮರಳು ಹೊಂದಿದ ಮರುಭೂಮಿ.

ಜೀಪುಗಳಲ್ಲಿ ಕುಳಿತು ವಾದಿ ರಮ್ ಪ್ರವೇಶಿಸಬೇಕು. ವಿವಿಧ ರೀತಿಯ ಕೆಂಪು ಛಾಯೆಯ ಮರಳು, ಗ್ರಾನೈಟ್ ಪರ್ವತಗಳು, ನೀಲಿ ಆಗಸ, ಅಲ್ಲಲ್ಲಿ ಅವುಗಳ ಅಗಾಧತೆಯ ಮುಂದೆ ಇರುವೆಯಂತೆ ಸಾಗುವ ಒಂಟೆಗಳು – ಇದೆಲ್ಲವನ್ನೂ ಒಳಗೊಂಡ ಪರಿಸರ, ಗಿಡ ಮರ ಅಥವಾ ಹಸಿರಿಲ್ಲದೆಯೂ ಮೋಹಕವಾಗಿ ಕಾಣತೊಡಗುತ್ತದೆ. ಜೀಪ್ ಚಾಲಕ ಯಮವೇಗದಲ್ಲಿ ಜೀಪನ್ನು ಚಾಲನೆ ಮಾಡುತ್ತಿದ್ದರೂ ಅಕ್ಕಪಕ್ಕದಲ್ಲಿದ್ದ ಅಗಾಧ ಗ್ರಾನೈಟ್ ಬೆಟ್ಟಗಳ ಮಧ್ಯೆ ಜೀಪು ಇರುವೆಯಂತೆ ಕಾಣುತ್ತದೆ.

ನಡುಬೆಟ್ಟದಲ್ಲಿ ನೀರ ಸೆಲೆ!
ಒಂದಷ್ಟು ದೂರ ವಿವಿಧ ಆಕೃತಿಯನ್ನು ಹೊಂದಿರುವ ಪರ್ವತಗಳನ್ನು ನೋಡುತ್ತಾ ಕ್ರಮಿಸಿದ ಮೇಲೆ ಬೆಡೋಯನ್ ಜನರ ಟೆಂಟ್‌ ಸಿಗುತ್ತದೆ. ನೀರಿನ ತೊಟ್ಟಿಗೆ ಅಳವಡಿಸಿರುವ ನೀರಿನ ಸಣ್ಣ ಕೊಳವೆ ಪರ್ವತದ ಮೇಲಿಂದ ಬಂದಿದೆ. ಈ ಸ್ಥಳವನ್ನು ‘ಲಾರೆನ್ಸ್ ಸ್ಪ್ರಿಂಗ್‌’ ಎನ್ನುತ್ತಾರೆ. ಅಲ್ಲಿರುವ ಪರ್ವತಗಳ ತಳಭಾಗದಲ್ಲಿ ಗ್ರಾನೈಟ್ ಇದ್ದರೆ, ಮೇಲ್ಭಾಗಲ್ಲಿ ಸ್ಯಾಂಡ್ ಸ್ಟೋನ್ ಇರುತ್ತದೆ.

ಸಾಮಾನ್ಯವಾಗಿ ನೆಲದಾಳದಲ್ಲಿ ದೊರಕುವ ಗ್ರಾನೈಟ್ ಶಿಲೆಗಳು ಅಲ್ಲಿ ಮೇಲಿವೆ. ಅದಕ್ಕೆ ಕಾರಣ ಭೂಕಂಪ ಮತ್ತು ಭೂಮಿಯ ಸ್ಥಾನದ ಪಲ್ಲಟಗಳಂತೆ. ಹೀಗಾಗಿ ನೆಲದೊಳಗೆ ಇರಬೇಕಿದ್ದ ನೀರಿನ ಸೆಲೆಯು ಬೆಟ್ಟವೊಂದರ ಮಧ್ಯದಲ್ಲಿ ಇದೆ.

ಈ ನೀರಿನ ಸೆಲೆಗೆ ಅರಬ್ಬರನ್ನು ಒಗ್ಗೂಡಿಸಿದ್ದ ಟಿ.ಇ. ಲಾರೆನ್ಸ್ ಹೆಸರನ್ನು ಇಟ್ಟಿದ್ದಾರೆ. ಅಲ್ಲಿಂದ ಸಣ್ಣ ಕೊಳವೆಯಿಂದ ನೀರನ್ನು ಕೆಳಗೆ ತೊಟ್ಟಿಗೆ ತರಲಾಗುತ್ತದೆ. ಈ ರೀತಿಯ ನೀರಿನ ಸೆಲೆಗಳ ಜ್ಞಾನದಿಂದಲೇ ನಬಾಟಿಯನ್ನರು ತಮ್ಮ ಸಂಪತ್ತನ್ನು ಗಳಿಸುತ್ತಿದ್ದುದು. ಅಲ್ಲೊಂದು ಬಂಡೆಯ ಮೇಲೆ ಆಗಿನವರ ಚಿತ್ರಗಳು ಮತ್ತು ಲಿಪಿಗಳು ಇವೆ.

ಬಂಡೆಗಳ ಕ್ಯಾನ್ವಾಸ್‌ ಮೇಲೆ...
ಜೆಬೆಲ್ ಖಜಾಲಿ ಎಂಬ ಹೆಸರಿನ ಪರ್ವತ ಶ್ರೇಣಿಯ ಬಳಿಯೂ ಬೆಡೋಯನ್ ಟೆಂಟಿದೆ. ಅಲ್ಲಿ ಪ್ರವಾಸಿಗರಿಗಾಗಿ ಮಾರಾಟಕ್ಕೆಂದು ಕೆಲವು ಕಲಾಕೃತಿಗಳನ್ನಿಟ್ಟು ವಿದೇಶೀಯರನ್ನು ಆಕರ್ಷಿಸುತ್ತಾರೆ. ತಿಂಡಿ ಹಾಗೂ ಪಾನೀಯದ ಮಾರಾಟದ ವ್ಯವಸ್ಥೆಯೂ ಇದೆ.

ಮೃದುವಾದ ಕೆಂಪು ಮರಳನ್ನು ತುಳಿಯುತ್ತಾ ಪರ್ವತದ ಬಳಿ ಹೋದರೆ – ಕೊಂಚ ಹಸಿರು ಹುಲ್ಲು, ಒಂದೆರಡು ಮರಗಳು ಕಾಣಿಸುತ್ತವೆ. ಪರ್ವತದ ಕೊರಕಲಲ್ಲಿ ನಬಾಟಿಯನ್ನರು ಹಾಗೂ ಆ ಕಾಲದ ವ್ಯಾಪಾರಸ್ಥರು ಅಲ್ಲಿನ ಬಂಡೆಗಳ ಮೇಲೆ ಚಿತ್ರಿಸಿರುವ ಚಿತ್ರಗಳನ್ನು ನೋಡಬಹುದು.

ವರ್ಷಕ್ಕೊಮ್ಮೆ ಬೀಳುವ ಅತ್ಯಲ್ಪ ಮಳೆ ಈ ಪರ್ವತದ ಕೊರಕಲಲ್ಲಿ ಜಮೆಯಾಗುತ್ತದೆಯಂತೆ. ನೀರಿರುವ ಸ್ಥಳಗಳಲ್ಲಿ ತಂಗುತ್ತಿದ್ದ ವ್ಯಾಪಾರಿಗಳು ಮತ್ತು ಅವುಗಳ ಜ್ಞಾನವಿದ್ದ ನಬಾಟಿಯನ್ನರು ಅಲ್ಲಿ ಚಿತ್ರ ಬಿಡಿಸಿದ್ದಾರೆ. ಆಗಿನ ಸಾಮಾಜಿಕ, ನಂಬಿಕೆ ಮತ್ತು ಜನಜೀವನದ ಬಗ್ಗೆ ಅವು ಬೆಳಕು ಚೆಲ್ಲುತ್ತವೆ.

ಸೆವೆನ್ ಪಿಲ್ಲರ್‍ಸ್‌ ಆಫ್ ವಿಸ್ಡಮ್
ಈ ಪ್ರದೇಶದಲ್ಲೆಲ್ಲೂ ಕಂಡಿರದ ಉದ್ದುದ್ದವಾಗಿ ಮಡಿಚಿಟ್ಟಂತೆ ಕಾಣುವ ವಿಚಿತ್ರ ಆಕಾರದ ಪರ್ವತವೊಂದು ಯಾವುದಕ್ಕೂ ಸೇರದಂತೆ ಪ್ರತ್ಯೇಕವಾಗಿ ಕಂಡುಬರುತ್ತದೆ. ಅದನ್ನು ‘ಸೆವೆನ್ ಪಿಲ್ಲರ್‍ಸ್‌ ಆಫ್ ವಿಸ್ಡಮ್’ ಎಂದು ಹೆಸರಿಸಿದ್ದಾರೆ.

ಸುಮಾರು ಏಳು ಪದರಗಳಿರುವುದರಿಂದ ಲಾರೆನ್ಸ್‌ನ ಕೃತಿಯ ಹೆಸರನ್ನು ಈ ಪರ್ವತಕ್ಕೆ ಇಟ್ಟಿದ್ದಾರೆ. ‘ಲಾರೆನ್ಸ್‌ ಆಫ್‌ ಅರೇಬಿಯ’ ಎಂದೇ ಹೆಸರುಗಳಿಸಿದ ಲಾರೆನ್ಸ್ ತನ್ನ ಅನುಭವಗಳನ್ನು ಕುರಿತು ಬರೆದ ಕೃತಿ ‘ಸೆವೆನ್ ಪಿಲ್ಲರ್‍ಸ್‌ ಆಫ್ ವಿಸ್ಡಮ್’. ಈ ಕೃತಿ 1926ರಲ್ಲಿ ಖಾಸಗಿ ಪ್ರಸಾರಕ್ಕೆಂದು ಅಚ್ಚಾಗಿದ್ದು, 1935ರಲ್ಲಿ ಬಹಿರಂಗ ಪ್ರಕಟಣೆ ಕಂಡಿತು.

ಸಾಕಷ್ಟು ವಿಸ್ತಾರವಾದ ವಾದಿ ರಮ್‌ನಲ್ಲಿ ನೋಡಲು ಅನೇಕ ಸ್ಥಳಗಳಿವೆ. ವಿಚಿತ್ರವಾದ ಶಿಲಾ ಕೌತುಕಗಳಿವೆ. ಚಾರಣ ಕೈಗೊಳ್ಳುವವರಿಗಾಗಿಯೇ ಹಲವಾರು ಚಾರಣ ಮಾರ್ಗಗಳನ್ನು ರೂಪಿಸಲಾಗಿದೆ. ಊಹಿಸಲೂ ಸಾಧ್ಯವಾಗದ ಎತ್ತರದ ಶಿಲಾ ಪರ್ವತಗಳನ್ನು ಹತ್ತಿ ಮೇಲಿಂದ ಕಾಣುವ ಭೂದೃಶ್ಯಗಳನ್ನು ಕೆಂಪು ಮರಳಿನ ರಾಶಿಯನ್ನು ಕಣ್ತುಂಬಿಕೊಳ್ಳಲೆಂದೇ ಸಾಕಷ್ಟು ಮಂದಿ ಪ್ರವಾಸಿಗರು ಅಲ್ಲಿಗೆ ಹೋಗುತ್ತಾರೆ.

ಒಂಟೆಗಳ ಮೇಲೆ, ಕುದುರೆಗಳ ಮೇಲೆಯೂ ಕುಳಿತು ವಾದಿ ರಮ್‌ ನೋಡಬಹುದು. ಚಾರಣ, ಪರ್ವತಾರೋಹಣದ ಜೊತೆ ರಾತ್ರಿ ವೇಳೆಯಲ್ಲಿ ಈ ಮರುಭೂಮಿಯಲ್ಲಿ ತಂಗುವುದೂ ಅಲ್ಲಿನ ಪ್ರವಾಸಿ ಆಕರ್ಷಣೆಗಳಲ್ಲೊಂದು.  

ಸಿನಿಮಾಗೆ ವಾದಿ ರಮ್ ರಂಗು!
ವಾದಿ ರಮ್‌ನ ಕೆಂಬಣ್ಣದ ಮರಳು, ನೀಲಾಕಾಶ, ಮೋಡಗಳ ರಚನೆ, ಕೆಂಪು ಛಾಯೆಯ ಶಿಲಾರಚನೆಯನ್ನು ಹಲವಾರು ಚಲನಚಿತ್ರಗಳಲ್ಲಿ ಬಳಸಿಕೊಳ್ಳಲಾಗಿದೆ. ಹಾಲಿವುಡ್‌ನ ‘ರೆಡ್‌ ಪ್ಲಾನೆಟ್‌’, ‘ಟ್ರಾನ್ಸ್‌ಫಾರ್ಮರ್ಸ್‌’ ಸಿನಿಮಾಗಳನ್ನು ವಾದಿ ರಮ್‌ನಲ್ಲಿ ಚಿತ್ರೀಕರಿಸಿದ್ದಾರೆ.

ಹಿಂದಿಯ ‘ಕ್ರಿಶ್‌ 3’, ತೆಲುಗು ಭಾಷೆಯ ‘ರಗಡ’, ‘ಪರುಗು’, ‘ಗೋವಿಂದುಡು ಅಂದರಿವಾಡೇಲೆ’, ಕನ್ನಡದ ಪುನೀತ್‌ ಅಭಿನಯದ ‘ಪೃಥ್ವಿ’ ಮುಂತಾದ ಚಿತ್ರಗಳ ಹಾಡುಗಳನ್ನು ಈ ಪ್ರದೇಶದ ಸೌಂದರ್ಯದೊಂದಿಗೆ ಚಿತ್ರೀಕರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT