ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್ ಬಂತ್ ಬಸ್ಸು...

Last Updated 14 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ರಾತ್ರಿ ಹೊತ್ತು ಬಸ್ಸುಗಳು ಓಡಾಡೋಕೆ ಶುರುವಾದ ನಂತರ ನಾವೆಲ್ಲ ಎಷ್ಟೊಂದು ಸುಂದರ ಕ್ಷಣಗಳನ್ನ ಕಳೆದುಕೊಂಡು ಬಿಟ್ಟಿದ್ದೀವಲ್ಲಾ ಅಂತ...
ಮೊದಲೆಲ್ಲ ಅಜ್ಜಿ ಮನೆಗೆ ಹೋಗೋದು ಅಂದ್ರೆ ವಾರದ ಮೊದಲೇ ಸಂಭ್ರಮ ಶುರು. ನಮ್ಮಜ್ಜಿ ಮನೆ ಮೈಸೂರು. ನಮ್ಮೂರು ಕಳಸದಿಂದ ಮೈಸೂರಿಗೆ ಹೋಗೋಕೆ ಇದ್ದಿದ್ದು ಎರಡೇ ಡೈರೆಕ್ಟ್ ಬಸ್ಸುಗಳು. ಎರಡೂ ಕೆಂಪು ಬಣ್ಣದ ಕೆಎಸ್ಸಾರ್ಟಿಸಿ ಬಸ್ಸುಗಳೇ. ಬೆಳಗ್ಗೆ ಏಳು ಗಂಟೆ ಸುಮಾರಿಗೆ ಮನೆ ಎದುರು ಕೆಂಪು ಬಸ್ಸು ಹತ್ತಿದ್ರೆ ಮೈಸೂರು ತಲುಪೋ ಹೊತ್ತಿಗೆ ಸೂರ್ಯ ಮನೆಗೆ ಹೋಗೋಗೆ ರೆಡಿಯಾಗಿರ‌್ತಿದ್ದ. ಇನ್ನು ಅಲ್ಲಿಂದ ಆಟೋದಲ್ಲಿ ಅಜ್ಜಿ ಮನೆ ತಲುಪೋ ಹೊತ್ತಿಗೆ ಕತ್ತಲಾಗಿರ‌್ತಿತ್ತು. ಒಂದಿಡೀ ದಿನ ಪ್ರಯಾಣಕ್ಕೇ ಮೀಸಲಾಗಿರ‌್ತಿದ್ದ ಕಾಲ ಅದು.

ಈಗ್ಲೂ ಹೆಚ್ಚೇನೂ ಬದಲಾಗಿಲ್ಲ. ಬಸ್ಸುಗಳ ಸಂಖ್ಯೆ ಸ್ವಲ್ಪ ಜಾಸ್ತಿಯಾಗಿರೋದು ಹೌದಾದ್ರೂ ಇವತ್ತಿಗೂ ಇರೋ ಅವೇ ರಸ್ತೆಗಳ ದಯೆಯಿಂದ ಕನಿಷ್ಠ ಏಳೆಂಟು ಗಂಟೆಗಳ ಪ್ರಯಾಣವಂತೂ ಇದ್ದಿದ್ದೇ. ಆದ್ರೆ ಈಗಿನ ಸೂಪರ್ ಸ್ಪೀಡ್ ಜಮಾನಾದಲ್ಲಿ ಒಂದಿಡೀ ದಿನವನ್ನ ಬಸ್ಸಿನಲ್ಲಿ ಕಳೆಯುವಷ್ಟು ಪುರುಸೊತ್ತು ಎಷ್ಟು ಜನರಿಗಿರುತ್ತೆ ಹೇಳಿ? ಅದಕ್ಕಾಗಿ ಶುರುವಾಗಿದ್ದೇ `ನೈಟ್ ಬಸ್ಸು'ಗಳು. ಮೊದಲ ಬಾರಿಗೆ  `ನೈಟ್ ಬಸ್ಸು' ನಮ್ಮೂರಿಂದ ಹೊರಟಾಗ ಎಲ್ರಿಗೂ ಅದೇನೋ ರೋಮಾಂಚನ. ರಾತ್ರಿ ಬಸ್ಸು ಹತ್ತಿ ಮಲಗಿಬಿಟ್ರೆ ಆಗೋಯ್ತು. ಬೆಳಕು ಹರಿಯೋ ಹೊತ್ತಿಗೆ ಊರು ಬಂದುಬಿಟ್ಟಿರುತ್ತೆ. ನಿದ್ದೆನೂ ಆಯ್ತು, ಪ್ರಯಾಣದ ಗೋಳೂ ಇಲ್ಲ. (ಪ್ರಯಾಣವನ್ನ ಗೋಳು ಅನ್ನೋದಿಕ್ಕೆ ಒಂದು ಕಾರಣ ಇದೆ. ಈ ಹಗಲು ಹೊತ್ತಿನ ಬಸ್ಸುಗಳು ಬಹುತೇಕ ಬಾರಿ ದಾರಿ ಮಧ್ಯ ಕೈಕೊಟ್ಟು ಅದರ ರಿಪೇರಿಗೇ ಗಂಟೆಗಟ್ಟಲೆ ಹಿಡಿಯುತ್ತಿತ್ತು. ಈ ಸಮಯದಲ್ಲಿ ನಿಂತಿರೋ ಬಸ್ಸಿನೊಳಗೆ ಸುಮ್ಮನೇ ಕೂತಿರೋದು ನಿಜಕ್ಕೂ ನರಕವೇ ಸರಿ) `ನೈಟ್ ಬಸ್ಸು'ಗಳಿಂದ ಎಷ್ಟೊಂದು ಸಮಯ ಉಳಿಯುತ್ತಲ್ಲ ಅನ್ನೋ ಸಂಭ್ರಮ ಬೇರೆ. ಕ್ರಮೇಣ ಈ ಬಸ್ಸುಗಳಿಗೆ ಜನ ಎಷ್ಟರ ಮಟ್ಟಿಗೆ ಒಗ್ಗಿಹೋದರೆಂದರೆ ಹಗಲು ಹೊತ್ತಿನಲ್ಲಿ ಬೆಂಗಳೂರು, ಮೈಸೂರು ಥರದ ದೂರದೂರುಗಳಿಗೆ ಬಸ್ಸಿನಲ್ಲಿ ಪ್ರಯಾಣಿಸುವವರು ಎಂದರೆ ಅವರು ಅನಕ್ಷರಸ್ಥರು ಅಂತಲೇ ಬಹುತೇಕರ ಭಾವನೆ!

ಇದೆಲ್ಲಾ ಸರಿ... ಆದರೆ ಈ ನೈಟ್ ಬಸ್ಸುಗಳು ಬಂದ ನಂತರ ನಾವು ಕಳೆದುಕೊಂಡಿದ್ದು ಏನು ಗೊತ್ತೇ? ಅದು ಪ್ರಯಾಣದ ಮಜಾ...
ಕಿಟಕಿ ಪಕ್ಕದ ಸೀಟಿಗಾಗಿ ಸದಾ ಜಗಳವಾಡುತ್ತಾ ಕೊನೆಗೂ ಅದು ಸಿಕ್ಕಾಗ ಆಗೋ ಆನಂದವೇ ಬೇರೆ. ಬಸ್ಸು ರಷ್ ಇದ್ದರಂತೂ ಕಿಟಕಿ ಪಕ್ಕ ಕೂತಿರೋರೆಲ್ಲಾ ನಮ್ಮ ಸಂತೋಷವನ್ನ ಹಾಳುಮಾಡೋಕೆ ಅಂತಲೇ ಭೂಮಿ ಮೇಲೆ ಅವತರಿಸಿರೋ ವಿಲನ್‌ಗಳ ಥರಾ ಕಾಣಿಸ್ತಿದ್ರು.

ಕೆಲವೊಮ್ಮೆಯಂತೂ ಅವ್ರ ಬಳಿ ಹೋಗಿ `ನೀವು ಯಾವ ಸ್ಟಾಪಿನಲ್ಲಿ ಇಳೀತೀರಾ?' ಅಂತ ಕೇಳಿಯೂ ಬಿಡ್ತಿದ್ವಿ. ನಂತರ ಕಿಟಕಿ ಪಕ್ಕ ಕೂತು ಅದ್ರ ಮೂಲಕ ನಮ್ಮಂದಿಗೇ ಚಲಿಸ್ತಾ ಇರೋ ಹೊರಗಿನ ದೃಶ್ಯಗಳನ್ನ ನೋಡೋ ಪುಳಕ ಅನುಭವಿಸಿಯೇ ತೀರಬೇಕು. ಊರು ಬರುವವರೆಗೆ ಆ ಕಿಟಕಿಯಿಂದ ಕಾಣೋದಷ್ಟೇ ಜಗತ್ತು. ತಿಂಡಿಗೆ, ಊಟಕ್ಕೆ ಅಂತ ನಿಲ್ಲಿಸಿದಾಗ ಎಲ್ಲರೂ ಇಳಿದು ಹೋಗ್ತಾ ಇದ್ರೆ ನಾವಂತೂ ಸೀಟು ಬಿಟ್ಟು ಅಲ್ಲಾಡ್ತಾ ಇರ್ಲಿಲ್ಲ. ನಾವು ಬರೋದ್ರೊಳಗೆ ಬೇರೆ ಯಾರಾದ್ರೂ ಆ ಸೀಟನ್ನ ಆಕ್ರಮಿಸಿ ಕೊಂಡುಬಿಟ್ರೆ ಅನ್ನೋ ಭಯ. ಬ್ಯಾಗಿನಲ್ಲಿ ಇರುತ್ತಿದ್ದ ತಿಂಡಿಗಳು, ಹಣ್ಣುಗಳನ್ನ ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೆವು. ಅಷ್ಟೇ ಅಲ್ಲ, ಅಜ್ಜಿ ಮನೆಗೆ ಹೋಗೋದು ಅಂದ್ರೆ ಕನಿಷ್ಠ ಒಂದು ತಿಂಗಳಾದ್ರೂ ಅಲ್ಲೇ ಠಿಕಾಣಿ ಹೊಡೀತಿದ್ವಿ. ಹಾಗಾಗಿ ಲಗೇಜೂ ಜೋರಾಗೇ ಇರ್ತಿತ್ತು. ಆ ಒಂದು ದಿನದ ಮಟ್ಟಿಗೆ ಆ ಸೀಟು  ಸ್ವಂತ ಆಸ್ತಿ ಅನ್ನುವಂತಾಗಿ ಬಿಡುತ್ತಿತ್ತು.

ಅಷ್ಟಕ್ಕೂ ಒಂದಿಡೀ ದಿನ ಕಿಟಕಿಯನ್ನ ಮುಚ್ಚದೆ ಹೊರಗೆ ನೋಡುವಂಥಾದ್ದು ಅಲ್ಲಿ ಏನಿತ್ತು ಅನ್ನೋ ಪ್ರಶ್ನೆ ಎದುರಾಗಬಹುದು. ಅಲ್ಲಿ ವಿಶೇಷವಾಗಿ ಏನೂ ಇರ್ತಾ ಇರ್ಲಿಲ್ಲ. ಆದರೆ ನಮಗೆ ಅದು ವಿಶೇಷ ಅನುಭವವಾಗಿತ್ತು. ವರ್ಷದಲ್ಲಿ ಕೆಲವೇ ಕೆಲವು ಬಾರಿ ಬರೋ ಬಂಪರ್ ಆಫರ್ ಥರಾ. ಊರು ಬಿಟ್ಟ ಕೂಡ್ಲೆ ಸಾಲಾಗಿ ಒಂದಷ್ಟು ಮನೆಗಳು, ಮುಂದೆ ಹೋಗ್ತಾ ಇದ್ದ ಹಾಗೆ ಬರೀ ಕಾಡು ಮೇಡುಗಳದ್ದೇ ಸಾಮ್ರೋಜ್ಯ. ಎಲ್ಲೆಲ್ಲೂ ಹಸಿರು ತೋಟ, ಗದ್ದೆ, ಮಧ್ಯದಲ್ಲೆಲ್ಲೋ ಧುತ್ತನೆ ಎದುರಾಗೋ ನೀರಿನ ಝರಿ... ಆದರೆ ಪ್ರತಿ ಚಿತ್ರವೂ ಕೆಲವೇ ಸೆಕೆಂಡು. ಮತ್ತೆ ಬೇಕೆಂದರೂ ಸಿಗುತ್ತಿರಲಿಲ್ಲ. ಮುಂದಿನ ಊರು ಬಂದಾಗ ಮತ್ತೆ ಮನೆಗಳು, ಅಂಗಡಿಗಳು. ದಾರಿಯಲ್ಲಿ ಕಾಣುವ ಮಕ್ಕಳು ಕೈಬೀಸುತ್ತಿದ್ದವು. ಅವು ನಮಗೆ ಬಹಳ ಪರಿಚಿತ ಅನ್ನೋ ಥರಾ ನಾವೂ ಪ್ರತಿಯಾಗಿ ಕೈಬೀಸ್ತಾ ಇದ್ದೆವು. ಹಾಸನ ದಾಟಿದ ನಂತರದ ಚಿತ್ರಗಳು ಅಷ್ಟೇನೂ ಚೆನ್ನಾಗಿರ್ತಾ ಇರ‌್ಲಿಲ್ಲ. ಕಾಡು ಮುಗಿದು ಹೋಗಿರ್ತಿತ್ತು. ಇನ್ನು ಬರೀ ಬಯಲಿನ ಬಿಸಿಗಾಳಿ. ಬಹುಶಃ ನಾವು ಪ್ರಯಾಣಿಸೋ ಸಮಯಕ್ಕೆ ಗದ್ದೆ ಕೆಲಸವೆಲ್ಲಾ ಮುಗಿದು ಹೋಗಿರುತ್ತಿತ್ತು ಅನ್ಸುತ್ತೆ. ಒಣಗಿದ ನೆಲದಿಂದ ದೂಳು, ಬಿಸಿಗಾಳಿ ಬಿಟ್ರೆ ಬೇರೇನೂ ಇರುತ್ತಿರಲಿಲ್ಲ.

ಆಗ ಸಾಮಾನ್ಯವಾಗಿ ನಾವು ನಿದ್ದೆ ಮಾಡ್ತಾ ಇರ್ತಿದ್ವಿ. ಎಚ್ಚರವಾದಾಗ ಮೈಸೂರು ಹತ್ತಿರ ಬರ್ತಾ ಇದೆ ಅನ್ನೋ ಪುಳಕ. ದೊಡ್ಡ ದೊಡ್ಡ ಕಟ್ಟಡಗಳು, ಜಾಹೀರಾತು ಫಲಕಗಳು ಕಾಣುತ್ತಿದ್ದವು. ಅವುಗಳನ್ನ ಓದೋದೇ ಒಂದು ಸಂಭ್ರಮ. ಟಿ.ವಿ ಟವರ್ ಕಾಣ್ತು ಅಂದ್ರೆ ಮೈಸೂರು ಬಂತು ಅಂತ ಅರ್ಥ. ಆಗ ಶುರು ನಮ್ಮ ಲಗೇಜು ರೆಡಿ ಮಾಡ್ಕೊಳ್ಳೋ ಕೆಲ್ಸ.

ಬಸ್ ಸ್ಟ್ಯಾಂಡ್ ಬಂದ ಕೂಡ್ಲೇ ಧಡ ಬಡ ಬಸ್ಸಿಳಿದು ಆಟೊ ಹತ್ತಿ ಅಜ್ಜಿ ಮನೆ ತಲುಪಿದ್ವಿ ಅಂದ್ರೆ, ಅಲ್ಲಿ ಕರೆಂಟ್ ಹೋಗಿದ್ದಕ್ಕೆ ಹಚ್ಚಿಟ್ಟ ಮೋಂಬತ್ತಿಗಳು ಗಾಳಿಗೆ ತಾರಾಡುತ್ತಾ ನಮ್ಮನ್ನ ಸ್ವಾಗತಿಸ್ತಾ ಇದ್ವು. ಬೊಚ್ಚುಬಾಯಿಯ ತಾತ `ಎಷ್ಟೊತ್ತಿಗೆ ಬಸ್ಸು ಹತ್ತಿದ್ರಿ ಊರಿಂದ?' ಎನ್ನುತ್ತಿದ್ದಂತೆಯೇ ನಾವೂ ನಮ್ ಕೆಂಪು ಬಸ್ಸಿನ ಪ್ರವರ ಹೇಳೋಕೆ ಶುರು ಮಾಡ್ತಿದ್ವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT