ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳ್ಳಿ ಬೆಡಗಿನ ಶಿರ್ಲ್

Last Updated 4 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಹಚ್ಚಹಸಿರಿನ ದಟ್ಟ ಅರಣ್ಯ ಮತ್ತು ಹಲವಾರು ಜಲಧಾರೆಗಳಿಂದಾಗಿ ಉತ್ತರ ಕನ್ನಡ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ಇಲ್ಲಿನ ಕೆಲವು ಜಲಧಾರೆಗಳು ಹೊರಜಗತ್ತಿಗೆ ಇನ್ನೂ ಅಪರಿಚಿತವಾಗಿಯೇ ಇವೆ. ಹೊರಗಿನವರಿಗೆ ಅಷ್ಟಾಗಿ ಗೊತ್ತಿರದ ಜಲಧಾರೆಗಳಲ್ಲಿ ಒಂದು `ಶಿರ್ಲ್~.

ಸುಮಾರು 60 ಅಡಿ ಎತ್ತರದಿಂದ ಧುಮುಕುವ ಶಿರ್ಲ್ ಜಲಪಾತ, ಎರಡು ಹಂತಗಳಲ್ಲಿ ಇಳಿದು ತೊರೆಯಾಗಿ ಹರಿಯುತ್ತದೆ. ತಾಲ್ಲೂಕು ಕೇಂದ್ರ ಯಲ್ಲಾಪುರದ ನೈರುತ್ಯ ದಿಕ್ಕಿಗಿರುವ ನಂದೊಳ್ಳಿ ಗ್ರಾಮಕ್ಕೆ ಸಮೀಪದ ಬ್ರಹ್ಮೆತ್ತಿ ಹಳ್ಳ ಶಿರ್ಲ್ ಫಾಲ್ಸ್‌ನ ಮೂಲಸ್ಥಾನ.

ಮಳೆಗಾಲದಲ್ಲಿ ತಗ್ಗುದಿಣ್ಣೆಗಳನ್ನು ದಾಟಿ ಒಳದಾರಿಯಲ್ಲಿ ಅರಣ್ಯವನ್ನು ಪ್ರವೇಶಿಸಿ, ಸುತ್ತಲ ಘಟ್ಟಪ್ರದೇಶಗಳಿಂದ ಸುರಿದು ಬರುವ ಜಲರಾಶಿ ಮನಮೋಹಕ ಜಲಪಾತವನ್ನು ಸೃಷ್ಟಿಸಿದೆ. ಧುಮ್ಮುಕ್ಕುವ ಧಾರೆ ದೀಪಾವಳಿಗೆ ಹಚ್ಚುವ ಕುಡಿಕೆಗಳು ಚಿಮ್ಮಿಸುವ ಹೊಂಗಿರಣಗಳ ಪ್ರಖರತೆಯನ್ನು ನೆನಪಿಸುತ್ತದೆ.

ಜಲಪಾತದ ಮೇಲ್ಭಾಗದ ಕಲ್ಲುಪ್ರದೇಶ ಉಬ್ಬುತಗ್ಗಿನಂತೆ ಕೊರೆಯಲಾಗಿದ್ದು, ರಭಸದಿಂದ ಹರಿದು ಬರುವ ನೀರು ತೆರೆಗಳಂತೆ ಮುಂದೆ ಬಂದು ಹಿಂದೆ ಹೋಗಿ ಚಿಮ್ಮುತ್ತ ಸುರುಳಿ ಸುರುಳಿಯಾಗಿ ಉಕ್ಕುತ್ತದೆ. ಎರಡು ಧಾರೆಗಳಲ್ಲಿ ಜಲಪಾತ ಕೆಳಗಿಳಿಯುತ್ತದೆ.
ಕೆಳಗಿರುವ ಅಡಿಕೆ ತೋಟದಲ್ಲಿ ನಿಂತು ಜಲಪಾತದ ಸೊಬಗನ್ನು ಸವಿಯಬಹುದು.

ಮಳೆಗಾಲದಲ್ಲಿ ತೀರಾ ಸಮೀಪದಿಂದ ನೋಡುವುದು ಸಾಧ್ಯವಿಲ್ಲ. ಜಲಪಾತ ನೋಡಲು ಬರುವವರು ಕಾಡಿನಲ್ಲಿ ಕೆಳಗೆ ಇಳಿದು ಬರಬೇಕು. ಸೆಪ್ಟೆಂಬರ್ ಕೊನೆಯ ವೇಳೆ ವರುಣನ ಅಬ್ಬರ ಕಡಿಮೆಯಾಗಿ ಜಲಪಾತದ ಬರುವ ಮಾರ್ಗ ಪ್ರವಾಸಿಗ ಸ್ನೇಹಿ ಆಗಿರುತ್ತದೆ.
ಅರವತ್ತು ಅಡಿಗಳಷ್ಟು ಮೇಲಿಂದ ಧುಮ್ಮಿಕ್ಕಿದ ಬಳಿಕ ಕೆಳಗಿನ ಬಂಡೆಗಳ ಮಧ್ಯೆ ಶಿರ್ಲ್ ಹರಿದು ಮುನ್ನುಗ್ಗುತ್ತದೆ.

ಕೆಲವು ಮೀಟರ್‌ನಷ್ಟು ಮುಂದೆ ಸಾಗಿದ ಬಳಿಕ ಮತ್ತೆ 8-10 ಅಡಿಯಷ್ಟು ಕೆಳಗೆ ಇಳಿಯುತ್ತದೆ. ಇದನ್ನು ಜಲಪಾತದ ಎರಡನೆಯ ಮೆಟ್ಟಿಲು ಮತ್ತು ಇದು ಕೆಳಗೆ ಬಂದು ನೆಲವನ್ನು ಸೋಕುವ ಹಂತವನ್ನು ಮೂರನೆಯ ಮೆಟ್ಟಿಲೆಂದು ಹೇಳಬಹುದು. ಸೂರ್ಯನ ಕಿರಣಗಳಿಗೆ ಜಲಪಾತ ಇಳಿಯುವ ರಭಸ ಪ್ರತಿಫಲನಗೊಂಡು ಬೆಳ್ಳಿಬೆಡಗನ್ನು ಸೃಷ್ಟಿಸುತ್ತದೆ.

ಕಲ್ಲುಸೇತುವೆಯ ಗುಹೆ
ಜಲಪಾತದ ಹತ್ತಿರ ಬಲಭಾಗದಲ್ಲಿರುವ ಕಲ್ಲಿನ ಸೇತುವೆಯಂತಿರುವ ಗುಹೆ ವೀಕ್ಷಕರನ್ನು ಆಕರ್ಷಿಸುತ್ತದೆ. ಪಂಚಾಕೃತಿಯ ಕಮಾನು ಅಥವಾ ಸಿಂಗರಿಸಿದ ಮಂಟಪದಂತೆ ಗುಹೆಯ ದ್ವಾರ ಗೋಚರಿಸುತ್ತದೆ. ಗುಹೆಯ ಪ್ರವೇಶದ್ವಾರದಲ್ಲಿ ನಿಂತು ಜಲಪಾತದತ್ತ ಕಣ್ಣು ಹಾಯಿಸಿದಾಗ ನೀರಿನ ದಬದಬೆ ಪೂರ್ಣ ಪ್ರಮಾಣದಲ್ಲಿ ಕಾಣಿಸುವುದಿಲ್ಲ.
 
ಗುಹೆಯ ಮೇಲ್ಭಾಗ ಜಲಪಾತಕ್ಕೆ ಅಡ್ಡವಾಗಿದೆ. ಆದರೆ ಸೇತುವೆಯ ಕಮಾನುಗಳೆರಡರ ನಡುವೆ ನೀರು ವಯ್ಯಾರದಿಂದ ಇಳಿಯುವ ಚಿತ್ತಾಕರ್ಷಕ ನೋಟ ಕಣ್ಣಿಗೆ ತಂಪು. ಬೇಸಿಗೆ ಮತ್ತು ಚಳಿಗಾಲದಲ್ಲಿ ಕಾಣುವ ಈ ಕಲ್ಲುಸೇತುವೆ ಮಳೆಗಾಲದಲ್ಲಿ ನೀರಿನಿಂದ ಆವೃತ್ತವಾಗಿರುತ್ತದೆ ಎನ್ನುವುದು ಸ್ಥಳೀಯರ ಹೇಳಿಕೆ.

ಯಲ್ಲಾಪುರದಿಂದ ಮುಂದೆ ಕಾರವಾರ ಮಾರ್ಗದಲ್ಲಿ 14 ಕಿ.ಮೀ. ದೂರದಲ್ಲಿ ಶಿರ್ಲ್ ಕ್ರಾಸ್ ಇದೆ. ಅಲ್ಲಿ ಇಳಿದುಕೊಂಡು ಜಲಪಾತದತ್ತ ಸಾಗಬೇಕು. ಸುಮಾರು ಒಂದೂವರೆ ಕಿ.ಮೀ.ನಷ್ಟು ಕಾಲ್ನಡಿಗೆ. ಜಲಪಾತ ಹತ್ತಿರವಾಗುತ್ತಿದ್ದಂತೆಯೇ ಬೊಸಬೊಸ ಎಂದು ನೀರಿನ ಸದ್ದು ಕಿವಿಗೆ ಅಪ್ಪಳಿಸುತ್ತದೆ. ಎದುರಿಗೆ ಮುಗಿಲೆತ್ತರಕ್ಕೆ ಬೆಳೆದು ನಿಂತಿರುವ ವನರಾಶಿಯ ದೃಶ್ಯ ಪ್ರಕೃತಿಯ ವಿಸ್ಮಯವನ್ನು ತೋರುತ್ತದೆ.

ಜಲಪಾತದ ಎಡಭಾಗದಲ್ಲಿ ಬಾನೆತ್ತರದ ವನರಾಶಿ ಎಲ್ಲೂ ಬೋಳಾಗಿರದೇ ತೀರಾ ದಟ್ಟವಾಗಿದೆ. ತಾಳೆ, ತಾಳೆಮಡ್ಲು, ಬಿದಿರು, ಜಂಬೆ, ಸಾಗವಾನಿ, ನಂದಿ, ಇತ್ಯಾದಿ ಮರಗಳಿಂದ ಅರಬೈಲ್ ವನರಾಶಿ ಬಲು ಶ್ರಿಮಂತ. ಹನ್ನೆರಡು ತಿಂಗಳೂ ಅಲ್ಲಲ್ಲಿ ಸಣ್ಣ ಜರಿಗಳು ಹರಿಯುತ್ತ ವನರಾಶಿಯನ್ನು ತಂಪಾಗಿರಿಸಿವೆ.ಶಿರ್ಲ್‌ದಲ್ಲಿ ಏಳೆಂಟು ಮನೆಗಳಿವೆ. ಶಿರ್ಲ್ ಗ್ರಾಮ ವಿದ್ಯುತ್ ಸಂಪರ್ಕ ಪಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT