ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕಾಕ್‌ನಲ್ಲಿ ಚಹಾ ವಿರಾಮ!

ಪ್ರವಾಸದಲ್ಲಿ ಸ್ವಾರಸ್ಯ
Last Updated 6 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಸಿಂಗಪುರ, ಮಲೇಷ್ಯಾ, ಥಾಯ್ಲೆಂಡ್‌ ದೇಶಗಳ ಪ್ರವಾಸಕ್ಕೆ ಖಾಸಗಿ ಸಂಸ್ಥೆಯೊಂದರ ವತಿಯಿಂದ ಹೊರಟಿದ್ದೆವು. ನೇರವಾಗಿ ಸಿಂಗಪುರಕ್ಕೆ ಹೋದರೆ ಖರ್ಚು ಹೆಚ್ಚೆಂದು, ಬ್ಯಾಂಕಾಕ್‌ಗೆ ಹೋಗಿ ಅಲ್ಲಿಂದ ಮತ್ತೊಂದು ವಿಮಾನ ಏರುವ ಏರ್ಪಾಡನ್ನು ಆಯೋಜಕರು ಮಾಡಿದ್ದರು.

ಬ್ಯಾಂಕಾಕ್‌ನ ‘ಸುವರ್ಣಭೂಮಿ ವಿಮಾನ ನಿಲ್ದಾಣ’ ತನ್ನ ವಿಸ್ತಾರಕ್ಕಾಗಿ ಜಗತ್‌ಪ್ರಸಿದ್ಧ. ಕಟ್ಟಡವೂ ವಿಶಾಲವಾದುದು. ನಡೆದು ಹೋಗಲು ಅನುಕೂಲವಾಗಲೆಂದು ಇಲ್ಲಿ ವೇಗವರ್ಧಕಗಳಿವೆ. ಅವುಗಳ ಮೇಲೆ ನಿಂತರೆ ಸಾಕು, ಕರೆದುಕೊಂಡು ಹೋಗುತ್ತವೆ– ಎಸ್ಕಲೇಟರ್ ತರಹ. ಹೋದೆವು, ಹೋದೇ ಹೋದೆವು. ಅಂತೂ ಬಂತು ಆ ವಿರಾಮಸ್ಥಳ.

ವಿಮಾನ ಹೊರಡಲು ಎರಡು ತಾಸು ಕಾಯಬೇಕಿತ್ತು. ಟೂರ್ ಮ್ಯಾನೇಜರ್ ನಮ್ಮನ್ನೆಲ್ಲ (ನಲವತ್ತು ಜನರನ್ನು) ಒಂದು ಕಡೆ ಕೂಡಿಸಿದ. ಮುಂದಿನ ಏರ್ಪಾಡಿಗಾಗಿ ತಾನು ಒಂದು ತಾಸು ಎಲ್ಲೋ ಹೋಗಿಬರುವುದಾಗಿ ಹೇಳಿ, ಪ್ರತಿಯೊಬ್ಬರಿಗೂ ತಲಾ 50 ಬಾಹತ್‌ಗಳಂತೆ ಲೆಕ್ಕಹಾಕಿ ಕೊಟ್ಟ. ‘ನಮ್ಮ ಸಂಸ್ಥೆ ನಿಮಗೆ ಕೊಡುತ್ತಿರುವ ಉಡುಗೊರೆ ಇದು. ಇದನ್ನು ನಿಮ್ಮಿಷ್ಟದಂತೆ ಖರ್ಚು ಮಾಡಬಹುದು’ ಎಂದ. ಒಂದು ಬಾಹತ್ ಅಂದರೆ ಒಂದೂವರೆ ರೂಪಾಯಿ.

ಮುಂಜಾನೆಯ ಸಮಯ. ನಮಗೆ ಬೇಕಾಗಿದ್ದುದು ಒಂದು ಕಪ್ ಬಿಸಿ ಬಿಸಿ ಚಹಾ. ರೆಸ್ಟೋರೆಂಟ್ ಸಮೀಪದಲ್ಲಿತ್ತು. ಹೋಗಿ ವಿಚಾರಿಸಿದರೆ ಒಂದು ಚಹಾಕ್ಕೆ 106 ಬಾಹತ್ ಎಂದರು. ಇಬ್ಬರಲ್ಲಿನ ಬಾಹತ್‌ಗಳನ್ನು ಒಟ್ಟಿಗೆ ಸೇರಿಸಿದರೂ ಒಂದು ಚಹಾ ಬರುವಂತಿರಲಿಲ್ಲ. ನಮ್ಮ ಕಡೆ ಬಾಹತ್‌ಗಳೂ ಇರಲಿಲ್ಲ. ರೆಸ್ಟೋರೆಂಟ್‌ನವರು ನಮ್ಮ ರೂಪಾಯಿ ಅಥವಾ ಡಾಲರ್‌ಗಳನ್ನು ಸ್ವೀಕರಿಸಲು ಒಪ್ಪಲಿಲ್ಲ. ಕರೆನ್ಸಿ ವಿನಿಮಯ ಮಾಡಿಕೊಳ್ಳಲು ಹೋಗಬೇಕೆಂದರೆ ಆ ವಿನಿಮಯ ಕೇಂದ್ರ ದೂರದಲ್ಲಿತ್ತು.

ಇಲ್ಲಿಯ ಚಹಾದ ವ್ಯವಸ್ಥೆಯನ್ನು ಪ್ರವಾಸೀ ಸಂಸ್ಥೆಯವರೇ ಮಾಡಬೇಕಿತ್ತು, ಅಥವಾ ಚಹಾಕ್ಕೆ ಸಾಕಾಗುವಷ್ಟಾದರೂ ಬಾಹತ್ ಕೊಡಬೇಕಾಗಿತ್ತು ಎಂದು ಎಲ್ಲರೂ ಗೊಣಗುತ್ತ ಕುಳಿತರು.

ನಾನು ಸುಮ್ಮನೆ ಕೂಡಲಿಲ್ಲ. ಧಾರವಾಡದಿಂದ ಹೋದವರು ನಾವು ನಾಲ್ವರು ಒಂದು ಐಡಿಯಾ ಮಾಡಿದೆವು. ಒಂದು ಚಹಾಕ್ಕೆ ಆರ್ಡರ್ ಕೊಟ್ಟೆವು. ಎಕ್ಸ್‌ಟ್ರಾ ಲೋಟಗಳನ್ನು ತರಲು ಹೇಳಿದೆವು. ಬಂತು ದೊಡ್ಡದೊಂದು ಟ್ರೇ. ಅವರು ಪೂರೈಸಿದ ಸಾಮಗ್ರಿಗಳನ್ನು ಬಳಸಿಕೊಂಡು ನಾವೇ ಚಹಾ ತಯಾರಿಸಿಕೊಳ್ಳಬೇಕಿತ್ತು. ತಯಾರಿಸಿಕೊಂಡೆವು. ಅದು ಎಷ್ಟಾಯಿತೆಂದರೆ, ನಾವು ಸಾಮಾನ್ಯವಾಗಿ ಕುಡಿಯುವುದಕ್ಕಿಂತ ಒಂದೂವರೆ ಪಟ್ಟು ಜಾಸ್ತಿ! ಅದನ್ನು ಹಂಚಿಕೊಂಡೆವು.

ನಮ್ಮಲ್ಲಿ ಉಳಿದ ಬಾಹತ್‌ಗಳನ್ನು ಸಹಪ್ರವಾಸಿಗಳಿಗೆ ಕೊಟ್ಟು, ಅವರ ಚಹಾಪಾನಕ್ಕೂ ಅನುವು ಮಾಡಿಕೊಟ್ಟು ಚಹಾವಿರಾಮವನ್ನು ಯಶಸ್ವಿಗೊಳಿಸಿದೆವು. ಟೂರ್ ಮ್ಯಾನೇಜರ್ ತಿರುಗಿ ಬಂದಮೇಲೆ ನಮ್ಮ ಉಪಾಯ ಹೇಳಿದೆವು, ಹಣೆ ಹಣೆ ಬಡಿದುಕೊಂಡ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT