ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರಿಮನೆಯ ನೀರಲ್ಲಿ...

Last Updated 7 ಮೇ 2011, 19:30 IST
ಅಕ್ಷರ ಗಾತ್ರ

ಶೃಂಗೇರಿ ಸಮೀಪದ ಕಾಡಿನ ನಡುವಿರುವ ಪುಟ್ಟ ಹಳ್ಳಿ ಸಿರಿಮನೆ. ಪ್ರಶಾಂತ ವಾತಾವರಣದಿಂದ ಕೂಡಿದ ಪ್ರದೇಶ. ಈ ಹಳ್ಳಿಯ ಸಮೀಪದಲ್ಲಿ ಒಂದು ನಯನ ಮನೋಹರ ಜಲಪಾತವಿದೆ. ಅದೇ ಸಿರಿಮನೆ ಜಲಪಾತ!

ಸುತ್ತಲೂ ಬೆಟ್ಟಗುಡ್ಡಗಳು. ಜೊತೆಗೆ ಹಸಿರು ಕಾನನದ ರಂಗವಲ್ಲಿ. ಬೆಟ್ಟದ ಮೇಲೆ ಲಕ್ಷೀನರಸಿಂಹ ನೆಲೆಸಿದ್ದಾನೆ. ದೇವಾಲಯದ ಸಮೀಪದಲ್ಲಿ ಪುಟ್ಟ ನದಿ. ಬೆಟ್ಟಗುಡ್ಡಗಳನ್ನು ಸೀಳಿಕೊಂಡು ಹರಿಯುವ ಆ ನದಿ ಸಿರಿಮನೆಯ ಬಾಗಿಲಿನಿಂದ ಜಲಪಾತವಾಗಿ ಧುಮ್ಮಿಕ್ಕುತ್ತದೆ. ಧುಮ್ಮಿಕ್ಕಿ ಹರಿಯುವ ಜಲಧಾರೆಯ ಜೊತೆಗೆ ದುಂಬಿಯ ಹಾಡಿನ ಝೇಂಕಾರವೂ ಕೇಳುತ್ತದೆ.

ಈ ಜಲಧಾರೆ ಸೌಂದರ್ಯ ಸವಿಯಲು ಇಪ್ಪತ್ತು ಮೂವತ್ತು ಅಡಿ ಕೆಳಗಿಳಿಯಬೇಕು. ಅದಕ್ಕಾಗಿ ಅರಣ್ಯ ಇಲಾಖೆಯವರು ಮೆಟ್ಟಿಲುಗಳನ್ನು ಜೋಡಿಸಿದ್ದಾರೆ. ಬೆಟ್ಟ ಇಳಿಯುತ್ತಿದ್ದರೆ, ನಿಶ್ಯಬ್ದವಾದ ಕಾಡಿನ ನಡುವೆ ಜುಯ್ಯೋಂ..  ಎಂಬ ಸದ್ದು. ಜಲಪಾತ ಸಮೀಪದಲ್ಲಿದೆ ಎನ್ನುವುದು ಆ ಸದ್ದಿನ ಅರ್ಥ.

ಮೆಟ್ಟಿಲು ಇಳಿದು, ಪಾಚಿಕಟ್ಟಿದ ಬಂಡೆಗಳ ಮೇಲೆ ನಿಂತು ಕೈಗಳೆರಡನ್ನೂ ಬಿಚ್ಚಿ ನಿಂತರೆ, ಮೈಮನಗಳ ಸುಳಿಯಲ್ಲಿ ಜಲಪಾತ ಕಚಗುಳಿ ಇಟ್ಟಂತೆನಿಸುತ್ತದೆ. ಸರ್ವ ಋತುವಿನಲ್ಲೂ ಹೀಗೆ ಧುಮ್ಮಿಕ್ಕುವ ಈ ಜಲಪಾತದೊಂದಿಗೆ ಒಡನಾಡುವುದೇ ಒಂದು ಅದ್ಭುತ. ಜಲಪಾತಕ್ಕೆ ಮೈಯೊಡ್ಡಿ ನಿಂತರೆ ದೇಹವೆಲ್ಲ ಹಗುರ. ಮನಸ್ಸು ಹಕ್ಕಿಯಾಗುವ ಕ್ಷಣಗಳವು.

ಜಲಪಾತ ವೀಕ್ಷಣೆಗಾಗಿಯೇ ಅರಣ್ಯ ಇಲಾಖೆಯವರು ವೀಕ್ಷಣಾ ಗೋಪುರ ಕಟ್ಟಿಸಿದ್ದಾರೆ.
ಸಿರಿಮನೆ ಜಲಪಾತ ಶೃಂಗೇರಿಯಿಂದ ಸುಮಾರು 22 ಕಿ.ಮೀ ದೂರದಲ್ಲಿದೆ. ಶೃಂಗೇರಿಯಿಂದ ವಾಹನ ಸೌಲಭ್ಯವಿದೆ. ಆಟೊ, ಟ್ಯಾಕ್ಸಿಗಳೂ ಲಭ್ಯ. ಕಿಗ್ಗದಿಂದ ಸಿಂದೋಡಿ ಕಡೆಗೆ ಹೋಗುವ ಮಾರ್ಗ ಮಧ್ಯದಲ್ಲಿರುವ ‘ಸಿರಿಮನೆ ಜಲಪಾತ’ ನೋಡುವವರಿಗೆ ‘ಕಿಗ್ಗ’ ಎಂಬ ಮತ್ತೊಂದು ಐತಿಹಾಸಿಕ ತಾಣ ಬೋನಸ್ ರೂಪದಲ್ಲಿ ಲಭ್ಯ.
-

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT