ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಮೋಹಕ ಮನಾಲಿ

Last Updated 5 ಡಿಸೆಂಬರ್ 2018, 19:30 IST
ಅಕ್ಷರ ಗಾತ್ರ

ಹಿಡಿಂಬಾಸುರನ ಸಹೋದರಿ ‘ಹಿಡಿಂಬೆ’. ಭಯಾನಕ ಗಾತ್ರದ ಈಕೆ ಪಾಂಡವರು ವನವಾಸದಲ್ಲಿದ್ದಾಗ ಭೀಮಸೇನನಲ್ಲಿ ವಿವಾಹವಾಗಲೆಂದು ದುಂಬಾಲು ಬೀಳುತ್ತಾಳೆ. ಭೀಮ ವ್ಯಾಸರ ಅನುಮತಿಯಂತೆ ವಿವಾಹವಾಗುತ್ತಾರೆ. ಅವರ ದಾಂಪತ್ಯದಲ್ಲಿ ಘಟೋತ್ಕಚ ಅಪಾರಪರಾಕ್ರಮಿ ಪುತ್ರ ಜನಿಸುತ್ತಾನೆ.

ಭೀಮನ ಈ ರಾಕ್ಷಸ ಪತ್ನಿಯ ಕುರಿತು ದಕ್ಷಿಣದ ರಾಜ್ಯಗಳಲ್ಲಿ ಒಳ್ಳೆಯ ಅಭಿಪ್ರಾಯವಿಲ್ಲ. ಆದರೆ ಉತ್ತರದ ರಾಜ್ಯವೊಂದರಲ್ಲಿ ಹಿಡಿಂಬೆಯನ್ನು ದೈವ ಸ್ವರೂಪಿಣಿಯೆಂದು ನಂಬಿ ಪೂಜಿಸುತ್ತಿದ್ದಾರೆಂದರೆ ಅಚ್ಚರಿ ಪಡಬೇಡಿ!

ಉತ್ತರದ ಹಿಮಾಚಲ ಪ್ರದೇಶದ ಕುಲೂ ಜಿಲ್ಲೆಯ ತಾಣ. ನಗರ ಮನಾಲಿಯ ನೈರುತ್ಯಕ್ಕೆ ಎತ್ತರದ ಪ್ರದೇಶದಲ್ಲಿರುವ ‘ಧುನ್‍ಗಿರಿ ಟೆಂಪಲ್’ನಲ್ಲಿ ಹಿಡಿಂಬೆ ಭಕ್ತಗಣದಿಂದ ‘ಹಡಿಂಬಾದೇವಿ’ ಹೆಸರಿನಲ್ಲಿ ಆರಾಧಿಸಲ್ಪಡುತ್ತಿದ್ದಾಳೆ. ಸಂಪೂರ್ಣ ಕಟ್ಟಿಗೆಯಿಂದ ತಯಾರಿಸಿದ ನಾಲ್ಕಂತಸ್ತಿನ ವಿಶಿಷ್ಟ ದೇವಾಲಯವಿದು. ಇಲ್ಲಿನ ಜನರಿಗೆ ಈಕೆ ದ್ರಾವಿಡ ಜನಾಂಗದ ಮಹಾಪತಿವ್ರತೆ, ಭಕ್ತರ ಉಪಾಸನಾ ದೇವತೆ, ರೌದ್ರರೂಪಿ ಕಾಳಿಕಾ ಕೊಡುಗೈದಾತೆ.

ದೇಗುಲದ ಹೊರವಲಯದಲ್ಲಿನ ನಾಮಫಲಕ ಹೇಳುವಂತೆ ಈ ದೇಗುಲವನ್ನು 1553ರಲ್ಲಿ ರಾಜಾ ಬಹದ್ದೂರ್ ಸಿಂಗ್ ನಿರ್ಮಿಸಿದ್ದು. ಭೀಮಸೇನನ ಅಗಲಿಕೆಯ ನಂತರ ಹಿಡಂಬಾಸುರಿ ಸುದೀರ್ಘ ತಪಸ್ಸು ಮಾಡಿ ದೈವ ಸ್ವರೂಪಿಣಿಯಾಗಿ ಇಲ್ಲಿ ನೆಲೆಸಿದ್ದಾಳೆ. ನಾಲ್ಕು ಅಂತಸ್ತಿನ ಸದೃಢವಿರುವ ಈ ಕಾಷ್ಠ ಕಟ್ಟಡದ ವಿಶಿಷ್ಠ ಕೆತ್ತನೆಯ ಬಾಗಿಲಲ್ಲಿ ತಲೆಬಾಗಿ ಕೈಮುಗಿದು ಒಳ ಹೋದರೆ ದೊಡ್ಡ ಬಂಡೆಯೊಂದರ ಅಡಿ ಗುಹೆಯಂತಹ ಇಕ್ಕಟ್ಟಾದ ಸ್ಥಳದಲ್ಲಿ ಒಂದು ಕಲ್ಲಿನ ತೊಟ್ಟಿಲು, ಪಕ್ಕದಲ್ಲಿ ಕಲ್ಲಿನ ಎರಡು ಪಾದಗಳು ಕಾಣುತ್ತವೆ.

ಹಿಡಿಂಬಾ ದೇವಿಯ ಪಾದಗಳನ್ನು ಕಣ್ಣಿಗೊತ್ತಿಕೊಂಡು ಅಲ್ಲಿನ ಅರ್ಚಕರಿಂದ ಹಣೆಗೆ ತಿಲಕ, ಕುಸುರೆಳ್ಳು-ಮಂಡಕ್ಕಿಗಳ ಪ್ರಸಾದ ಪಡೆದು ಹೊರಬಂದಾಗ ಜೀವನ ಪಾವನ. ಒಳಗೆ ಛಾಯಾಚಿತ್ರ ನಿಶಿದ್ಧ. ದೇವಸ್ಥಾನದ ಹೊರಗೋಡೆಯುದ್ದಕ್ಕೂ ಕಾಡು ಪ್ರಾಣಿಗಳ ಮರದ ಕೆತ್ತನೆಗಳು ಆಕರ್ಷಣೀಯ. ಇಲ್ಲಿ ಹಿಡಿಂಬಾದೇವಿ ಪಾಪಗಳನ್ನು ತೊಳೆಯಲು ತೊಟ್ಟಿಲಿನಲ್ಲಿ ಕುಳಿತು ಧ್ಯಾನ ನಿರತಳಾಗಿದ್ದಳೆಂದು ಪ್ರತೀತಿ. ದಕ್ಷಿಣ ಕನ್ನಡದ ಭೂತದ ಮನೆಯನ್ನು ನೆನಪಿಸುವ ಈ ದೇಗುಲದ ತುತ್ತತುದಿ ತ್ರಿಕೋನಾಕಾರವಿದ್ದು ಬಹುಶಃ ಹಿಮಪಾತವಾದಾಗಲೆಲ್ಲ ಹಿಮ ಜಾರಿ ಹೋಗಲು ನಿರ್ಮಿಸಿರಬೇಕು.

ದೇವಾಲಯದ ಹೊರಗೆ ಸುತ್ತ ವಿಶಾಲ ಸ್ಥಳ. ಒಂದೆಡೆ ಹಚ್ಚ ಹಸಿರು ಹಾಸಿ ಹೊದ್ದಿರುವ ಮೋಹಕ ‘ಧುಂಗ್ರಿವನ’. ಎದುರಿಗೆ ನಯನ ಮನೋಹರ. ಧವಳ ಹಿಮಾವೃತ ತುಂಬು ಜವ್ವನೆಯಂತಹ ಬೆಟ್ಟದ ಸಾಲು. ಅಲ್ಲಲ್ಲಿ ಹಾವಿನಂತೆ ನುಲಿದು ಹರಿಯುವ ಜಲಲ, ಜಲಲ, ಜಲಧಾರೆಯ ಝರಿಗಳು. ಗಗನಕ್ಕೇ ಮುತ್ತಿಕ್ಕಲು ಹವಣಿಸುವ ಪೈನ್, ದೇವದಾರು ಮರಗಳು. ದಟ್ಟ ಹರಿವರ್ಣದ ಕಾನನ, ಮೆಟ್ಟಿಲು ಮೆಟ್ಟಿಲುಗಳ ನಡುವೆ ನಿರ್ಮಿಸಿದ ಮನೆಗಳು, ವರ್ಷದ ಎಲ್ಲಾ ತಿಂಗಳೂ ಇಳೆಗೆ ಸುರಿಯುವ ಮುತ್ತಿನಂತಹ ಮಳೆ, ಆಗಾಗ ಬೀಳುವ ಹಿಮದ ರಾಶಿ, ಅಬ್ಬಾ! ನೋಡಲು ಇನ್ನೂ ನಾಲ್ಕು ಕಣ್ಣು ಕೊಡಬಾರದಿತ್ತೇ, ಆ ಭಗವಂತ ಎನಿಸುತ್ತದೆ.

ಹಿಡಿಂಬಾ ದೇಗುಲದ ಬಲಭಾಗದಲ್ಲಿ ಬೃಹತ್ ದೇವದಾರು ವೃಕ್ಷವೊಂದಿದ್ದು ಅದಕ್ಕೆ ಸುತ್ತಲೂ ಕೆಳಗಿನಿಂದ ಅಷ್ಟೆತ್ತರದವರೆಗೂ ಪ್ರಾಣಿಗಳ ಕೋಡುಗಳಿಂದ ಅಲಂಕೃತಗೊಳಿಸಿದ್ದಾರೆ. ಬುಡದಲ್ಲೊಂದು ವಧಾಸ್ಥಾನವಿದೆ. ಅಲ್ಲಿ ಆಗಾಗ ಪ್ರಾಣಿಬಲಿ ಕೊಡುವರಂತೆ. ಮತ್ತೊಂದು ಬದಿಯಲ್ಲಿ ಇನ್ನೊಂದು ಬೃಹತ್ ವೃಕ್ಷದ ಬುಡದಲ್ಲಿ ಘಟೋತ್ಕಚನ ದೇವಾಲಯವಿದೆ. ತಾಯಿ-ಮಗ ಅನತಿ ದೂರದಲ್ಲಿಯೇ ಪೂಜೆಗೊಳಪಡುತ್ತಾರೆ. ಇಂದಿಗೂ ಮನಾಲಿಯ ಜನರಿಗೆ ಈ ಹಿಡಿಂಬಾ ದೇವಸ್ಥಾನ ಪಾವಿತ್ರತೆಯ ಸಂಕೇತ, ಅವರ ಸಂಸ್ಕೃತಿಯ ಅಸ್ಮಿತೆ. ದೇವಿಯನ್ನು ಭಕ್ತಿಯಿಂದ ಅರ್ಚಿಸಿದರೆ ಬೇಡಿದ್ದು ದೊರೆಯುವುದೆಂಬ ನಂಬಿಕೆ. ಅದು ನಿಜ ಕೂಡ!

ಪ್ರತಿ ವರ್ಷ ಮೇ ತಿಂಗಳಿನಲ್ಲಿ ‘ಧುಂಗ್ರಿಮೇಳ’ ಎಂಬ ಉತ್ಸವ ಆಚರಿಸುತ್ತಾರೆ. ಅಂದು ದೇವಿಯ ಜನ್ಮ ದಿನೋತ್ಸವ. ಹಡಿಂಬಾದೇವಿಯ ಉತ್ಸವ ಮೂರ್ತಿಯ ಮುಂದಾಳತ್ವದಲ್ಲಿ ಮನಾಲಿಯ ಎಲ್ಲಾ ದೇವರ ವೈಭವದ ಮೆರವಣಿಗೆ ಅಂದು ನಡೆಯುತ್ತದೆ. ಸಾವಿರಾರು ಜನರು ಒಗ್ಗೂಡಿ ಗಾಯನ, ನರ್ತನ, ನಾಟಕ ಮತ್ತಿತರ ಮನರಂಜನಾ ಕಾರ್ಯಕ್ರಮ ನಡೆಸುತ್ತಾರೆ. ಮುಸ್ಲಿಮರು ಅಧಿಕ ಸಂಖ್ಯೆಯಲ್ಲಿ ಸೇರುವುದು ಅಂದಿನ ವಿಶೇಷ.

ಉಳಿದಂತೆ ಮನಾಲಿಯ ಶ್ರೀರಾಮದೇವಸ್ಥಾನ, ಪಕ್ಕದಲ್ಲಿ ಸದಾ ಬಿಸಿನೀರಿನ ಬುಗ್ಗೆಯಿರುವ ವಸಿಷ್ಠಬಾತ್, ಬೌದ್ಧ ಮಂದಿರ, ಸೋಲಾಂಗ್ ಕಣಿವೆ, ರೋಹತಾಂಗ್‌ ಪಾಸ್, ಮನು ಟೆಂಪಲ್, ಬೋಟ್‍ಕ್ಲಬ್, ವಸ್ತುಪ್ರದರ್ಶನಾಲಯ ಎಲ್ಲವೂ ಒಂದಕ್ಕಿಂತ ಒಂದು ಚೆನ್ನವೋ ಚೆನ್ನ.

ಮಕ್ಕಳಿಗೆ ಹಾಗೂ ನವ ವಿವಾಹಿತರಿಗೆ ಮನಾಲಿ ಹೇಳಿ ಮಾಡಿಸಿದ ಸ್ಥಳ. ಆಕ್ರೋಟ್ ಹಣ್ಣು, ಟ್ರೆಕಿಂಗ್, ಸ್ನೋ ಸ್ಕೂಟರ್, ಕುದುರೆ ಸವಾರಿ, ಸ್ಕೀಯಿಂಗ್, ಯಾಕ್‍ಸವಾರಿ, ಹಿಮದಲ್ಲಿ ಹೊರಳಾಟ ಒಂದೇ, ಎರಡೇ? ವಿಶೇಷವೆಂದರೆ ಮನಾಲಿಯ ಯಾವುದೇ ದಿಕ್ಕಿಗೆ ಹೋಗಿ ಅಲ್ಲೆಲ್ಲ ಕ್ವಿಂಟಲ್‍ಗಟ್ಟಲೆ ಸ್ಫಟಿಕ ಬೆರೆಸಿದಂತಹ ಪರಿಶುದ್ಧ ಹಾಲಿನಂತೆ ಜುಳುಜುಳು ಹರಿಯುವ ಬಿಯಾಸ್ ನದಿ ಮೈಮರೆಸುತ್ತದೆ. ಇನ್ನೇಕೆ ತಡ, ಹೊರಡಿ ಮನಾಲಿಗೆ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT