ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐತಿಹಾಸಿಕ ಸಗರಾದ್ರಿ ಬೆಟ್ಟ

ಅಕ್ಷರ ಗಾತ್ರ

ಏರು ದಾರಿಯಲ್ಲಿ ಬಂಡೆಯ ಮೇಲೆ ಸಾಗುತ್ತಿದ್ದರೆ, ಆ ದಾರಿಯ ತುದಿಯಲ್ಲಿ ಪಾಳು ಬಿದ್ದ ಕೋಟೆಯ ಗೋಡೆಗಳು ಕಾಣಿಸುತ್ತವೆ. ಸಮೀಪಕ್ಕೆ ಹೋದರೆ, ವಿಶಾಲ ಬಯಲು. ಪಕ್ಕದಲ್ಲೊಂದು ದೇವಸ್ಥಾನ. ಮುಂದೆ ಮುರಿದು ಬಿದ್ದ ಕೋಟೆಯ ಗೋಡೆಗಳು..

ಇದು ಯಾದಗಿರಿ ಜಿಲ್ಲೆಯ ಶಹಾಪುರ ಸಮೀಪದಲ್ಲಿರುವ ಸಗರಾದ್ರಿ ಬೆಟ್ಟದ ದೃಶ್ಯ. ಈ ಬೆಟ್ಟ ಏರಿದರೆ ಇಂಥ ಐತಿಹಾಸಿಕ ಕುರುಹುಗಳಿರುವ ಕೋಟೆ ಕೊತ್ತಲಗಳು, ದೇವಾಲಯಗಳು, ಶಾಸನಗಳು ಕಂಡುಬರುತ್ತವೆ.

ಸಗರಾದ್ರಿ ಬೆಟ್ಟದ ಇತಿಹಾಸವೇ ರೋಚಕವಾಗಿದೆ. ಮಹಾಬಲಶಾಲಿಯೂ ಆಗಿದ್ದ ಸಗರ ಚಕ್ರವರ್ತಿ ಈ ಕೋಟೆಯನ್ನು ಕಟ್ಟಿಸಿದ. ವಿಜಯನಗರದ ಅರಸರು ಅದಕ್ಕೊಂದು ಹೊಸ ರೂಪ ಕೊಟ್ಟರು. ಮುಂದೆ ಮೊಘಲ್ ಚಕ್ರವರ್ತಿ ಔರಂಗಜೇಬನ ದಾಳಿಗೆ ತುತ್ತಾಯಿತು. ಶಿಥಿಲವಾಗಿ ಹಾಳುಬಿದ್ದ ಕೋಟೆಯನ್ನು ವಿಜಯಪುರದ ಬಾದಶಾಹಪುನರ್ ನಿರ್ಮಿಸಿದ್ದರೆಂದು ಇತಿಹಾಸ ಹೇಳುತ್ತದೆ. ಕೋಟೆಯಲ್ಲಿ ಕಂಡುಬರುವ ಅನೇಕ ದೇವಸ್ಥಾನಗಳು, ಮಹಾಭಾರತದ ಹೆಸರಿನ ಕೊಳಗಳು, ಬಾವಿಗಳು ಮತ್ತು ಸ್ಮಾರಕಗಳು ಈ ಇತಿಹಾಸದ ಮಾಹಿತಿಗೆ ಸಾಕ್ಷಿಯಾಗಿವೆ.

ಬಹುಮನಿ ಅರಸರ ಕಾಲದಲ್ಲಿ ಸಗರಗಡ ಎಂದು ಹೆಸರಾದ ಶಹಾಪುರ ಕೋಟೆಯಲ್ಲಿ ಅಂದಿನ ಅರಸರು ಸೆರೆಯಾಳುಗಳನ್ನು ಇಡುತ್ತಿದ್ದರಂತೆ. ಬಹುಮನಿ ರಾಜ್ಯ ಒಡೆದ ನಂತರ ಈ ಕೋಟೆ ವಿಜಯಪುರದ ಆದಿಲ್‍ಶಾಹಿ ಮನೆತನದ ವಶವಾಯಿತು. ನಂತರ ವಿಜಯನಗರದ ದೊರೆಗಳಾದ ಪ್ರೌಢದೇವರಾಯ, ಲಕ್ಕಣ್ಣ ದಂಡೇಶ, ಕೃಷ್ಣದೇವರಾಯ, ಅಳಿಯ ರಾಮರಾಯ ಕಾಲದವರೆಗೂ ಈ ನಾಡು ಅವರ ಕೈವಶದಲ್ಲಿತ್ತು. ಸಗರ ಕೋಟೆಯಲ್ಲಿ ಕೃಷ್ಣದೇವರಾಯ ಯುದ್ಧ ಮಾಡಿದ್ದ ಎಂಬುದು ಇತಿಹಾಸಕಾರರ ಅಭಿಪ್ರಾಯವಾಗಿದೆ.

800 ವರ್ಷಗಳ ಇತಿಹಾಸ

ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ಈ ಕೋಟೆ ನೆಲ ಮಟ್ಟದಿಂದ 600 ಅಡಿ ಎತ್ತರದಲ್ಲಿದೆ. ಇದು ಎಂಟು ಸುತ್ತಿನ ಕೋಟೆಯಾಗಿದ್ದು, ಅತೀ ಉದ್ದನೆಯ ಚಕ್ರವ್ಯೂಹದಂತಹ ಕೋಟೆ ಎಂಬ ಖ್ಯಾತಿಯೂ ಇದಕ್ಕಿದೆ. ಈ ಬೆಟ್ಟದಲ್ಲಿ ಚರಬಸವೇಶ್ವರ ಗದ್ದುಗೆ, ಮೌನೇಶ್ವರ ಅನುಷ್ಠಾನ ಸ್ಥಳ, ಗವಿ ರಂಗನಾಥ, ಸಿದ್ದಲಿಂಗೇಶ್ವರ, ಪಾಂಡವರ ಕಲ್ಲು, ಭೀಮನ ಗವಿ, ದಿಗ್ಗಿ ಸಂಗಮನಾಥ ದೇವಾಲಯಗಳಿವೆ. ಚರಬಸವೇಶ್ವರ ದೇವಾಲಯ ಸುಂದರ ವಿನ್ಯಾಸಗಳಿಂದ ಕೂಡಿದೆ.

ಸಗರಾದ್ರಿ ಬೆಟ್ಟದ ಪರಿಸರದಲ್ಲಿ ಮಂದಾಕಿನಿ, ತಾವರೆಕೆರೆ, ಸಿದ್ಧಪುರಷ್ಕರಣಿ, ಅಕ್ಕ–ತಂಗಿಯರ ಬಾವಿ, ಪಾಂಡವರ ಬಂಡೆ, ನಕುಲ–ಸಹದೇವರ ಸ್ಮಾರಕಗಳಿವೆ. ಬೆಟ್ಟದಲ್ಲಿರುವ ಜಲಮೂಲಗಳು ಆ ಕಾಲದಲ್ಲಿ ಕೋಟೆಯ ಮೇಲ್ಭಾಗದ ನಿವಾಸಿಗಳಿಗೆ ನೀರು ಒದಗಿಸುತ್ತಿದ್ದವು. ಈಗ ಬೆಟ್ಟದ ಜೀವಪರಿಸರದ ಉಳಿವಿಕೆಗೆ ಕಾರಣವಾಗಿವೆ.

ಸೂಕ್ತ ರಕ್ಷಣೆಗೆ ಅಗತ್ಯ

ಹೈದ್ರಾಬಾದ್ ಕರ್ನಾಟಕದ ಮಾಸ್ತಿಯೆಂದು ಹೆಸರುವಾಸಿಯಾಗಿದ್ದ ನಾಡಿನ ಪ್ರಮುಖ ಸಾಹಿತಿ ದಿ.ಸಗರ ಕೃಷ್ಣಾಚಾರ್ಯರು ತಮ್ಮ ಸಗರನಾಡಿನ ಪೌರಾಣಿಕ ಹಿರಿಮೆ ಲೇಖನದಲ್ಲಿ ಮತ್ತು ಸಗರ ಚಕ್ರವರ್ತಿಯ ಜನನ ವೃತ್ತಾಂತ ಹಾಗೂ ಮಂದಾಕಿನಿ ಮಹಾತ್ಮೆ ಮುಂತಾದ ಅವರ ಬರಹಗಳಲ್ಲಿ ವಿಶ್ಲೇಷಿಸಿದ್ದಾರೆ. ಇಂತಹ ಐತಿಹಾಸಿಕ ಬೆಟ್ಟ ಹಾಗೂ ವಿಶಿಷ್ಟ ಜೀವ ಪರಿಸರ ವ್ಯವಸ್ಥೆ ಉಳಿಸಿ ಬೆಳೆಸಲು ಪ್ರಾಚ್ಯವಸ್ತು ಮತ್ತು ಪುರಾತತ್ವ ಇಲಾಖೆ ಹಾಗೂ ಪರಿಸರ ಸಂರಕ್ಷಣೆ ಇಲಾಖೆಗಳು ಸೂಕ್ತ ರಕ್ಷಣಾ ಕ್ರಮಗಳು ಕೈಗೊಳ್ಳುವ ಅವಶ್ಯಕತೆಯಿದೆ.

ಇಂಥ ಅಪರೂಪದ ಐತಿಹಾಸಿಕ ತಾಣದ ಬಗ್ಗೆ ಇಂದಿನ ಪೀಳಿಗೆಗೆ ಮಾಹಿತಿ ನೀಡುವ ಸಲುವಾಗಿ ಶಹಾಪುರದ ಬಾಪುಗೌಡ ದರ್ಶನಾಪುರ ಸ್ಮಾರಕ ಮಹಿಳಾ ಕಾಲೇಜು ವಿದ್ಯಾರ್ಥಿಗಳನ್ನು ಈ ಕೋಟೆಗೆ ಪ್ರವಾಸ ಕರೆದೊಯ್ಯಲಾಗಿತ್ತು. ಶಹಾಪುರ ಬೆಟ್ಟದ ಮೇಲಿರುವ ಕೋಟೆ ಹಾಗೂ ಸ್ಮಾರಕಗಳನ್ನು ಇತಿಹಾಸ ತಜ್ಞರು ಪರಿಚಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT