ಶುಕ್ರವಾರ, ಜನವರಿ 27, 2023
26 °C
ಕಾಂಗ್ರೆಸ್‌ಗೆ ದಾಖಲೆ ಗೆಲುವಿನ ಕನಸು

ಕಾಂಗ್ರೆಸ್‌–ಜೆಡಿಎಸ್ ಮೈತ್ರಿ: ಯಾರಿಗೆ ಲಾಭ, ನಷ್ಟ?

ಆರ್‌.ಜಿತೇಂದ್ರ Updated:

ಅಕ್ಷರ ಗಾತ್ರ : | |

ರಾಮನಗರ: ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್‌–ಜೆಡಿಎಸ್ ಮೈತ್ರಿಯಿಂದ ನಿಜಕ್ಕೂ ಯಾವ ಪಕ್ಷಕ್ಕೆ ಲಾಭ? ಯಾರಿಗೆ ಹೆಚ್ಚು ನಷ್ಟ?

ಮೈತ್ರಿ ಸುದ್ದಿ ಅಧಿಕೃತವಾಗುತ್ತಲೇ ಇಂತಹದ್ದೊಂದು ಲೆಕ್ಕಾಚಾರವು ಮೂರು ಪಕ್ಷಗಳ ಪಡಸಾಲೆಗಳಲ್ಲಿ ಚರ್ಚೆಯಾಗುತ್ತಿದೆ. ಈ ಹೊಂದಾಣಿಕೆಯ ರಾಜಕಾರಣವನ್ನು ಬಳಸಿಕೊಂಡು ಹೇಗೆಲ್ಲ ಮತಬೇಟೆ ಆಡಬೇಕು ಎಂದು ಮಿತ್ರ ಪಕ್ಷಗಳು ಚಿಂತಿಸುತ್ತಿದ್ದರೆ, ಬಿಜೆಪಿ ಇದಕ್ಕೆ ಪ್ರತಿತಂತ್ರದ ಬಗ್ಗೆ ಯೋಚಿಸುತ್ತಿದೆ.

ಈ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳಿವೆ. ಇದರಲ್ಲಿ ನಾಲ್ಕರಲ್ಲಿ ಕಾಂಗ್ರೆಸ್ ಹಾಗೂ ಮೂರರಲ್ಲಿ ಜೆಡಿಎಸ್‌ನ ಶಾಸಕರು ಇದ್ದಾರೆ. ಕೇವಲ ಒಂದು ಕ್ಷೇತ್ರದಲ್ಲಿ ಬಿಜೆಪಿಯ ಶಾಸಕರು ಇದ್ದಾರೆ. ಹೀಗಾಗಿ ಮೈತ್ರಿಕೂಟಕ್ಕೆ ಆನೆ ಬಲವಿದೆ ಎನ್ನುವುದು ಕಾಂಗ್ರೆಸ್ ಪಾಳಯದ ಲೆಕ್ಕಾಚಾರವಾಗಿದೆ. ಆದರೆ ಬಿಜೆಪಿ ಇದನ್ನು ಒಪ್ಪಿಕೊಳ್ಳಲು ತಯಾರಿಲ್ಲ. ಪ್ರಬಲ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದರೆ ಪೈಪೋಟಿ ಖಂಡಿತ ಎನ್ನುವುದು ಕಮಲ ಪಾಳಯ ನಾಯಕರ ಅಭಿಮತ.

ದೇಶದ ಎರಡನೇ ಅತಿದೊಡ್ಡ ಲೋಕಸಭಾ ಕ್ಷೇತ್ರ ಎನ್ನುವುದು ಇದರ ಹೆಗ್ಗಳಿಕೆ. ಕ್ಷೇತ್ರದ ವ್ಯಾಪ್ತಿಯಲ್ಲಿ ಸದ್ಯ 24.56 ಲಕ್ಷ ಮತದಾರರು ಇದ್ದಾರೆ. ಇವರಲ್ಲಿ 1.5 ಲಕ್ಷದಷ್ಟು ಹೊಸ ಮತದಾರರು ಸೇರಿದ್ದಾರೆ. ಕಳೆದ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಇಲ್ಲಿ 14.55 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. ಇದರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಶೇ 44.85 ಹಾಗೂ ಜೆಡಿಎಸ್ ಅಭ್ಯರ್ಥಿ ಪರವಾಗಿ ಶೇ 21.84 ಮತಗಳು ಚಲಾವಣೆ ಆಗಿದ್ದವು. ಎರಡನ್ನೂ ಕೂಡಿದರೆ ಶೇ 66.69 ರಷ್ಟು ಮತಗಳು ಈ ಎರಡೂ ಪಕ್ಷಗಳ ಪರ ಬಂದಿದ್ದವು. ಈಗ ಎರಡೂ ಪಕ್ಷ ಸೇರಿ ಒಬ್ಬರೇ ಅಭ್ಯರ್ಥಿ ಆಗಿರುವುದರಿಂದ ದಾಖಲೆಯ ಗೆಲುವು ಕಾಣಬಹುದು ಎಂದು ಮೈತ್ರಿಕೂಟದ ಲೆಕ್ಕಾಚಾರ. 

ಬಿಜೆಪಿ ಎಣಿಕೆ ಏನು?: ಕ್ಷೇತ್ರದಲ್ಲಿ ಬೆಂಗಳೂರು ನಗರ ವ್ಯಾಪ್ತಿಯ ಆನೇಕಲ್, ರಾಜರಾಜೇಶ್ವರಿ ನಗರ ಹಾಗೂ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಈ ಮೂರು ಕ್ಷೇತ್ರಗಳಿಂದ ಒಟ್ಟು 14 ಲಕ್ಷ ಮತದಾರರು ಇದ್ದಾರೆ.

‘ನಗರ ಪ್ರದೇಶದ ವ್ಯಾಪ್ತಿಯಲ್ಲಿ ಬಿಜೆಪಿ ಪರವಾದ ಅಲೆ ಇದೆ. ಆದರೆ ಇಲ್ಲಿ ಮತದಾನದ ಪ್ರಮಾಣ ಕಡಿಮೆ ಆಗುತ್ತಿರುವ ಕಾರಣ ಪಕ್ಷಕ್ಕೆ ಹಿನ್ನಡೆ ಆಗುತ್ತಿದೆ. ಈ ಬಾರಿ ಎಲ್ಲೆಡೆ ಮತದಾನ ಜಾಗೃತಿ ಹೆಚ್ಚುತ್ತಿದ್ದು, ಈ ಕ್ಷೇತ್ರಗಳಲ್ಲಿ ಮತ ಚಲಾವಣೆ ಹೆಚ್ಚಾದಷ್ಟೂ ಪಕ್ಷದ ಅಭ್ಯರ್ಥಿಗೆ ಅನುಕೂಲ’ ಎನ್ನುವುದು ಕಮಲ ಪಾಳಯದ ಎಣಿಕೆಯಾಗಿದೆ.

ರಾಮನಗರ ಜಿಲ್ಲೆಯ ನಾಲ್ಕೂ ಕ್ಷೇತ್ರಗಳಲ್ಲಿ ಪಕ್ಷಕ್ಕೆ ಇರುವ ಸಾಂಪ್ರದಾಯಿಕ ಮತಗಳನ್ನು ಸೆಳೆಯುವ ಜೊತೆಗೆ ಸ್ಥಳೀಯ ಅಭ್ಯರ್ಥಿಯನ್ನು ಹಾಕಿದಲ್ಲಿ ಇನ್ನಷ್ಟು ಮತ ಗಳಿಸಬಹುದು ಎನ್ನುವ ಲೆಕ್ಕಾಚಾರ ಬಿಜೆಪಿಯದ್ದು. ಹೀಗಾಗಿಯೇ ಸ್ಥಳೀಯವಾಗಿ ಜನಪ್ರಿಯತೆ ಗಳಿಸಿರುವ ನಾಯಕರನ್ನೇ ಅಭ್ಯರ್ಥಿಯಾಗಿಸಲು ಹೊರಟಿದೆ. ರಾಮನಗರ ಜಿಲ್ಲೆಯಾ
ದ್ಯಂತ ಕಾಂಗ್ರೆಸ್‌–ಜೆಡಿಎಸ್ ಕಾರ್ಯಕರ್ತರು ಮೊದಲಿನಿಂದಲೂ ತಿಕ್ಕಾಟ ನಡೆಸುತ್ತಲೇ ಬಂದಿದ್ದಾರೆ. ನಾಯಕರು ಮೈತ್ರಿ ಮಾಡಿಕೊಂಡಿದ್ದರೂ ತಳಮಟ್ಟದಲ್ಲಿ ಅಷ್ಟು ಹೊಂದಾಣಿಕೆ ಆಗಿಲ್ಲ. ಹೀಗಾಗಿ ಜೆಡಿಎಸ್‌ ಕಾರ್ಯಕರ್ತರಿಂದ ‘ಅಡ್ಡ ಮತದಾನ’ ನಡೆಯಬಹುದು ಎನ್ನುವ ಆಸೆ ಬಿಜೆಪಿ ಮುಖಂಡರದ್ದು.

ಒಂದೇ ಕ್ಷೇತ್ರ ಮೂರಕ್ಕೆ ಸಮ!

ಬೆಂಗಳೂರು ದಕ್ಷಿಣ ಕ್ಷೇತ್ರವು ಈ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿಯೇ ಅತಿದೊಡ್ಡ ವಿಧಾನಸಭಾ ಕ್ಷೇತ್ರವಾಗಿದೆ. ಇಲ್ಲಿ ಬಿಜೆಪಿಯ ಶಾಸಕರು ಇದ್ದಾರೆ.

ಬೆಂಗಳೂರು ದಕ್ಷಿಣದಲ್ಲಿ 5.98 ಲಕ್ಷ ಮತದಾರರು ಈ ಚುನಾವಣೆಯಲ್ಲಿ ಮತ ಚಲಾವಣೆಯ ಹಕ್ಕು ಹೊಂದಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಪ್ರಾಬಲ್ಯ ಇರುವ ರಾಮನಗರ, ಕನಕಪುರ ಹಾಗೂ ಮಾಗಡಿ ಕ್ಷೇತ್ರಗಳನ್ನೂ ಕೂಡಿಸಿದರೆ 6.5 ಲಕ್ಷ ಮತದಾರರು ಸಿಗುತ್ತಾರೆ. ಹೀಗಾಗಿ ಒಂದು ಕ್ಷೇತ್ರದ ಉತ್ತಮ ಮುನ್ನಡೆ ಮೂರು ಕ್ಷೇತ್ರಗಳಿಗೆ ಸಮ ಎನ್ನುವುದು ಬಿಜೆಪಿ ಲೆಕ್ಕಾಚಾರ.

ಆದರೆ ಈ ಬಾರಿ ಕಾಂಗ್ರೆಸ್ ಕೂಡ ಇಲ್ಲಿ ಹೆಚ್ಚು ಮತ ಸೆಳೆಯಲು ತಂತ್ರ ರೂಪಿಸುತ್ತಿದೆ. ಹೀಗಾಗಿ ಈ ಕ್ಷೇತ್ರದತ್ತಲೇ ಎರಡೂ ಪಕ್ಷಗಳ ಮುಖಂಡರು ಕಣ್ಣು ನೆಟ್ಟಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು