ಮಾವು ನಾವು ಬೇವು ನಾವು...

ಮಂಗಳವಾರ, ಏಪ್ರಿಲ್ 23, 2019
31 °C

ಮಾವು ನಾವು ಬೇವು ನಾವು...

Published:
Updated:

ಯುಗಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ.
ಹೊಸವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ
ನಮ್ಮನಷ್ಟೆ ಮರೆತಿದೆ! – ಬೇಂದ್ರೆ

ಯುಗಾದಿ. ಆದಿಮ ಕೃಷಿ ಸಂಸ್ಕೃತಿಯ ಹಬ್ಬ. ಒಬ್ಬಟ್ಟು, ಬಣ್ಣ ಉಗ್ಗುವ ಹೋಳಿ, ಬೆವರಿಳಿಸುವ ಕುಸ್ತಿ. ಬೇಟೆ–ಜೂಜಾಟದ ಹಬ್ಬ, ಮನೆಯನ್ನೆಲ್ಲ ಒಮ್ಮೆ ಕೊಡವಿ, ಸುಣ್ಣ–ಬಣ್ಣ ಬಳಿದು ಮತ್ತೆ ಒಳಸೇರುವ ಹಬ್ಬ. ಇಡೀ ವರ್ಷದ ತೊಡಕೆಲ್ಲ ನೀಗಲಿ ಎಂಬ ಬಾಡೂಟದ ಸಂಭ್ರಮ. ಸಸ್ಯಾಹಾರ–ಮಾಂಸಾಹಾರ ಒಟ್ಟಿಗೇ ಉಸಿರಾಡುವುದಿಲ್ಲಿ. ಹೊಸದಾಗುವ ಪರಿಯೇ ಯುಗಾದಿ ಎಂಬ ಮಾತು ಸವೆಯುವುದಿಲ್ಲ. ಕವಿ, ಕಥೆಗಾರರಿಗೆ ಸದಾ ಹೊಚ್ಚ ಹೊಸ ಸರಕು. 

ಯುಗಾದಿ ಎಂದರೆ ಉಡುದಾರದಿಂದ ಎಲ್ಲವೂ ಹೊಸದೇ. ಆದರೆ, ಮರಗಳು ಎಲ್ಲವನ್ನೂ ಕಳಚಿಕೊಂಡು ಹೊಸದಾಗುವಂತೆ ಅಲ್ಲ. ಮನುಷ್ಯರ ಒಳಗಿರದಿದ್ದರೂ, ಹೊರಗೆ ಯುಗಾದಿ ಭರ್ಜರಿಯೇ. ಯುಗಾದಿ ಕೃಷಿ ಬದುಕಿನ ಹೊಸ ವರ್ಷದ ಸಾಮೂಹಿಕ ಆಟ–ಸಂಭ್ರಮದ ಸಂಕೇತ. ಗುಂಪಿಲ್ಲದೆ ಯುಗಾದಿಗೆ ಸಂಭ್ರಮವಿಲ್ಲ. ಹೊಸ ಬಟ್ಟೆ ತೊಟ್ಟು, ಒಬ್ಬಟ್ಟು ಸವಿದು, ಮನೆಮನೆಗೆ ತೆರಳಿ ಬೇವು–ಬೆಲ್ಲ ಹಂಚಿ, ಬಾಡೂಟಕ್ಕೆ ಬಾಯಿಚಪ್ಪರಿಸಿಬಿಟ್ಟರೆ ಮುಗಿಯಿತು.

ಬಿತ್ತನೆಬೀಜ ಪರೀಕ್ಷೆ: ಬೆಂಗಳೂರು ಗ್ರಾಮಾಂತರ, ತುಮಕೂರು ಕಡೆಗಳಲ್ಲಿ ಯುಗಾದಿಗೆ ಏಳು, ಒಂಬತ್ತು ದಿನ ಮುಂಚೆ ಅಥವಾ ಅಂದೇ ಮಣ್ಣಿನ ಪಾತ್ರೆಯೊಂದರಲ್ಲಿ ಗೊಬ್ಬರ, ಮಣ್ಣು, ಮರಳು ಮಿಶ್ರಣ ಮಾಡಿ ನವಧಾನ್ಯ ಹಾಕುತ್ತಾರೆ. ಹಬ್ಬದ ಬಳಿಕ ಬಿತ್ತನೆ ಮಾಡುವ ಬೀಜವನ್ನೇ ಹಾಕುತ್ತಾರೆ. ಒಂಬತ್ತನೇ ದಿನ ಯಾವ ಬೀಜ ಚೆನ್ನಾಗಿ ಮೊಳಕೆ ಒಡೆದಿರುತ್ತದೆಯೇ ಅದು ಒಳ್ಳೆಯ ಬೆಳೆಯಾಗುತ್ತದೆ ಎಂಬ ನಂಬಿಕೆ.

ಬಿತ್ತನೆ ಬೀಜದ ಪರೀಕ್ಷೆಗೆ ಹಬ್ಬವೊಂದು ನೆಪ. ಎಲ್ಲರ ಮನೆಯಲ್ಲೂ ಹೀಗೇ ಮಾಡಿ, ಒಂದೆಡೆ ತಂದಿಟ್ಟ ಬಳಿಕ ಹಿರಿಯರು ಪರೀಕ್ಷಿಸಿ, ಯಾವುದನ್ನು ಬಿತ್ತಿದರೆ ಒಳ್ಳೆಯದು ಎಂದು ಹೇಳುತ್ತಿದ್ದರು.

ಅವರೇಕಾಳು, ರಾಗಿ ಹುಟ್ಟಲಿಲ್ಲ ಎಂದರೆ, ಮನೆಯಲ್ಲಿರುವ ಬಿತ್ತನೆ ಬೀಜಗಳು ಸರಿಯಿಲ್ಲ ಎಂದರ್ಥ. ಯುಗಾದಿ ದಿನ ನೆನೆಹಾಕಿ, ಶ್ರೀರಾಮನವಮಿಯಂದು ಪರೀಕ್ಷೆ ಮಾಡುವ ಪದ್ಧತಿಯೂ ಉಂಟು. ಈಗ ಆಹಾರಧಾನ್ಯ ಬೆಳೆಯುವುದು ಕಡಿಮೆಯಾಗಿರುವುದರಿಂದ ಬೀಜತಪಾಸಣೆಯೂ ಕಡಿಮೆಯಾಗಿದೆ.

ಯುಗಾದಿಯಂದು ಹೊಸ ನೇಗಿಲು ತಂದು, ಮೊದಲ ಉಳುಮೆ ಮಾಡುವುದು ಉಂಟು. ಮಳೆ ಬರಲಿ, ಬರದಿರಲಿ ಅಂದು ಸಂಜೆ ಎರಡು ಸಾಲು ಉಳುಮೆ ಮಾಡಲೇಬೇಕು. ಹೊಸ ಎತ್ತುಗಳಿಗೆ ಉಳುಮೆ ಕಲಿಸುವ ಪ್ರಯತ್ನವೂ ಅಂದೇ ಆರಂಭ. ಟ್ರಾಕ್ಟರ್ ನೇಗಿಲು ಬಂದು ಇದೂ ಕಡಿಮೆಯಾಗಿದೆ.

ಮೂರು ದಿನದ ಹಬ್ಬ: ಯುಗಾದಿ ಮೂರು ದಿನದ ಹಬ್ಬ. ಮೊದಲನೆಯ ದಿನ ಮನೆ ತೊಳೆಯುವ ಮುಸುರೆ ಹಬ್ಬ. ಟ್ರಂಕು, ಪೆಟಾರಿ ಎಲ್ಲವನ್ನೂ ಹೊರಗಿಟ್ಟು, ತೊಳೆದು, ಸುಣ್ಣ–ಬಣ್ಣ ಬಳಿಯುವುದು ಮೊದಲು. ಗೋಡೆಗಳಿಗೆ ಸುಣ್ಣದ ಜೊತೆಗೆ ಕೆಂಪುಪಟ್ಟಿ ಬಳಿಯಲು, ಕೆಮ್ಮಣ್ಣಿಗಾಗಿ ಗುಂಪಾಗಿ ಕೆರೆಗಳತ್ತ ಹೋಗುತ್ತಿದ್ದರು ಮಂದಿ. ಈಗ ಪೇಂಟುಗಳಿವೆ. ಎರಡನೇ ದಿನ ಸಿಹಿ ಹಬ್ಬ. ಮೂರನೇ ದಿನ ಕರಿ–ವರ್ಷತೊಡಕು.

ಬೇಟೆಯ ನೆನಪು...
ಬಳ್ಳಾರಿ, ಚಿತ್ರದುರ್ಗ, ತುಮಕೂರು ಜಿಲ್ಲೆ, ದೊಡ್ಡಬಳ್ಳಾಪುರ ತಾಲ್ಲೂಕಿನ ಹಳ್ಳಿಗಳಲ್ಲಿ ಮ್ಯಾಸ ಬೇಡರು ಸೇರಿದಂತೆ ಕೆಲವು ಜನಾಂಗದವರು ಬೇಟೆಯಾಡಿ ನರಿ, ಮೊಲ, ಹಂದಿಯನ್ನೋ ಕೊಂದು ನೈವೇದ್ಯ ಮಾಡುತ್ತಿದ್ದರು. ಬೇಟೆ ನಿಷೇಧವಾಗಿರುವುದರಿಂದ, ಅಲ್ಲಲ್ಲಿ, ಚಿಕ್ಕ ಮೊಲವನ್ನಾದರೂ ಹೊಡೆದುಕೊಂಡು ಬರುತ್ತಾರೆ!

ಅದೆಷ್ಟು ಆಟಗಳು!: ಯುಗಾದಿಯಲ್ಲಿ ಆಟಗಳಿಗೆ ಲೆಕ್ಕವೇ ಇಲ್ಲ. ಹಿಂದೆ ಇಡೀ ಗ್ರಾಮವೇ ಮನೋರಂಜನೆಯ ಅಂಕಣ. ಹಗ್ಗಕ್ಕೆ ಕಟ್ಟಿದ ತೆಂಗಿನಕಾಯಿ ಒಡೆಯೋ ಆಟ, ಚೌಕಾಬಾರ, ಗೋಲಿ, ನಾಣ್ಯ ಎಸೆಯುವ ಆಟ, ಗಂಡು–ಹೆಣ್ಣುಗಳ ಉಯ್ಯಾಲೆ, ಹಬ್ಬ ಅಥವಾ ಚಂದ್ರನನ್ನು ನೋಡುವ ದಿನ ನೀರುಗ್ಗೋ ಆಟ.

ಕೋಳಿ ಪಂದ್ಯ, ಇಸ್ಪೀಟ್‌ ಜೂಜಾಟ ನಿಷಿದ್ಧವಾಗಿದ್ದರೂ, ಕದ್ದುಮುಚ್ಚಿ ಆಡುವವರು ಬಹಳ. ಬಳ್ಳಾರಿಯಲ್ಲಿ ದೀಪಾವಳಿ–ಯುಗಾದಿಯಲ್ಲಿ ಇಸ್ಪೀಟ್‌ ಅಡ್ಡೆಗಳಿಗೆ ಲೆಕ್ಕವಿಲ್ಲ. ಜೂಜೆಂಬುದು ಸಂಭ್ರಮದಾಚೆಗೆ ಕಾನೂನು ಸುವ್ಯವಸ್ಥೆಯ ಗಂಭೀರ ವಿಷಯವಾಗಿಬಿಟ್ಟಿದೆ. ಈ ಲೇಖನ ಸಿದ್ಧಪಡಿಸುವ ಹೊತ್ತಿಗೆ, ಕೋಲಾರ–ಶ್ರೀನಿವಾಸಪುರದ ದಾರಿಯಲ್ಲಿ ಸಿಗುವ ಮೂರಂಡಳ್ಳಿಯಲ್ಲಿ ಗುಟ್ಟಾಗಿ ಹುಂಜಗಳ ಪಂದ್ಯದ ತಾಲೀಮು ನಡೆಯುತ್ತಿತ್ತು!

ಹರಪನಹಳ್ಳಿಯ ಕಡೆ ಹೆಣ್ಣುದೈವಗಳು ಯುಗಾದಿಯಲ್ಲೇ ತವರಿಗೆ ಹೋಗಿ ಬರುತ್ತವೆ. ಹನುಮಂತದೇವರೂ ಹಾಗೆ ಮಾಡುತ್ತಾನೆ!

ಮೇಲು–ಕೀಳು
ಬಚ್ಚಿಟ್ಟ ಹಣವನ್ನು ಹುಡುಕಲು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಹೊರಡುವ ಮೇಲ್ಜಾತಿಯ ಜನರಿಗೆ ತಮಟೆ ಸದ್ದಿನ ಮೂಲಕವೇ ತಳಸಮುದಾಯದವರು ದಾರಿ ತೋರಿಸುವ ಆಟವೂ ಉಂಟು. ಹಿಂದೊಮ್ಮೆ, ಕೋಲಾರ ತಾಲ್ಲೂಕಿನ ಚಾಮರಹಳ್ಳಿಯಲ್ಲಿ ಮೇಲ್ಜಾತಿಯ ಜನರ ಮನೆಗಳಿಗೆ ತಮಟೆ ಬಡಿದುಕೊಂಡು ಹೋಗುತ್ತಿದ್ದ ತಳ ಸಮುದಾಯದವರು, ಅವರ ಮನೆ ಮುಂದಿನ ಚರಂಡಿ ನೀರನ್ನು ಮೈಮೇಲೆ ಎರಚಿಕೊಂಡು, ಕಾಸು, ಹೊಸಬಟ್ಟೆಗಾಗಿ ಮೊಂಡು ಹಿಡಿಯುತ್ತಿದ್ದ ಆಚರಣೆಯೂ ಇತ್ತು.

ದೊಡ್ಡಬಳ್ಳಾಪುರದಲ್ಲಿ ಹಬ್ಬದ ದಿನ ಕಾಮಣ್ಣನನ್ನು ತಣ್ಣಗೆ ಮಾಡುವುದೆಂದರೆ ಪಡ್ಡೆ ಹುಡುಗರಿಗೆ ಖುಷಿ. ಹೋಳಿಯ ರಾತ್ರಿ ಕಟ್ಟಿಗೆ ಕದ್ದು, ಕಾಮಣ್ಣನನ್ನು ಸುಟ್ಟು, ಯುಗಾದಿ ದಿನ ಅದೇ ಸ್ಥಳದಲ್ಲಿ ನೆಲದಲ್ಲಿ ಮಣ್ಣಿನಿಂದ ಕಾಮಣ್ಣನ ಬೃಹತ್ ಪ್ರತಿಕೃತಿಗಳನ್ನು ರಚಿಸಿ, ಚಪ್ಪರ ಹಾಕಿ, ದೀಪಾಲಂಕಾರ ಮಾಡಿ, ಬಣ್ಣ ಹಚ್ಚಿ, ಪೂಜೆ ಮಾಡುವ, ಅದನ್ನು ನೋಡುವ ಜನರ ಸಂಭ್ರಮ ಇಂದಿಗೂ ಕುಂದಿಲ್ಲ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !