ಸೋಮವಾರ, ಜುಲೈ 4, 2022
21 °C
1999ರಲ್ಲಿ ಮಹಿಳೆಗೆ ಮಣೆ ಹಾಕಿದ್ದ ಕಾಂಗ್ರೆಸ್‌; ಎರಡು ದಶಕದ ಬಳಿಕ ಮೈತ್ರಿಯಿಂದ ಮಹಿಳೆ ಕಣಕ್ಕೆ

ಮಹಿಳೆಗೆ ಒಲಿಯದ ವಿಜಯಪುರ ಲೋಕಸಭಾ ಕ್ಷೇತ್ರ..!

ಡಿ.ಬಿ.ನಾಗರಾಜ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಆರೂವರೆ ದಶಕದ ಸ್ವತಂತ್ರ ಭಾರತದ ಚುನಾವಣಾ ಐತಿಹ್ಯದಲ್ಲಿ ವಿಜಯಪುರ ಲೋಕಸಭಾ ಕ್ಷೇತ್ರದಿಂದ ಯಾರೊಬ್ಬರು ಮಹಿಳಾ ಸಂಸದರು ಆಯ್ಕೆಯಾಗಿಲ್ಲ.

ಬಸವನಬಾಗೇವಾಡಿ, ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದಿಂದ ಶಾಸಕಿಯರು ಆಯ್ಕೆಯಾಗುವ ಮೂಲಕ ಜಿಲ್ಲಾ ರಾಜಕಾರಣದಲ್ಲಿ ಮಹಿಳೆಯರ ಛಾಪು ಮೂಡಿಸಿದ್ದರೂ; ಯಾರೊಬ್ಬರು ಸಂಸದೆಯಾಗಿ ಲೋಕಸಭೆ ಪ್ರವೇಶಿಸಿಲ್ಲ.

ಬಸವ ನಾಡಿನ ಮತದಾರ 1957, 1962ರಲ್ಲಿ ಸುಶೀಲಾಬಾಯಿ ಹೀರಾಚಂದ ಶಾಹ ಅವರಿಗೆ ಆಶೀರ್ವದಿಸಿದ್ದಾರೆ. ನಾಲತವಾಡದ ದೇಶಮುಖ ಮನೆತನದ ಜಗದೇವರಾವ ಸಂಗನಬಸಪ್ಪ ದೇಶಮುಖ ಪತ್ನಿ ವಿಮಲಾಬಾಯಿ ದೇಶಮುಖ 1994ರಲ್ಲಿ ನಡೆದ ಚುನಾವಣೆಯಲ್ಲಿ ಆಗ ಸಚಿವರಾಗಿದ್ದ ಸಿ.ಎಸ್‌.ನಾಡಗೌಡರನ್ನು ಸೋಲಿಸಿ ವಿಜಯ ಪತಾಕೆ ಹಾರಿಸಿದ್ದರು. ಆಗಿನ ಜನತಾದಳ ಸರ್ಕಾರದಲ್ಲಿ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು.

ಸಂಸದೆಯಾಗುವ ಬಯಕೆಯಿಂದ ಒಂದಿಬ್ಬರು ಮಹಿಳಾ ಅಭ್ಯರ್ಥಿಗಳು ಪಕ್ಷೇತರರಾಗಿ ಕಣಕ್ಕಿಳಿದಿದ್ದರೂ; ಛಾಪು ಮೂಡಿಸುವ ಸಾಧನೆಗೈದಿಲ್ಲ.

ಮಹಿಳಾ ಪ್ರಬಲ ಅಭ್ಯರ್ಥಿ ಲಕ್ಷ್ಮೀಬಾಯಿ:

ವಿಜಯಪುರ ಲೋಕಸಭಾ ಕ್ಷೇತ್ರದಿಂದ 1968, 1989, 1991ರಲ್ಲಿ ಸಂಸದರಾಗಿ ಆಯ್ಕೆಯಾಗಿದ್ದ ಬಿ.ಕೆ.ಗುಡದಿನ್ನಿ ಪತ್ನಿ ಲಕ್ಷ್ಮೀಬಾಯಿ ಗುಡದಿನ್ನಿ 1999ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿಯಾಗಿ, ಲೋಕಸಭಾ ಅಖಾಡಕ್ಕಿಳಿದ ಮಹಿಳಾ ಪ್ರಬಲ ಅಭ್ಯರ್ಥಿ.

ಸಾಮಾನ್ಯ ಕ್ಷೇತ್ರವಿದ್ದ ಸಂದರ್ಭ ಇವರೊಬ್ಬರೇ ರಾಷ್ಟ್ರೀಯ, ಪ್ರಾದೇಶಿಕ ಪಕ್ಷದಿಂದ ಲೋಕಸಭಾ ಅಖಾಡಕ್ಕಿಳಿದು ಪರಾಭವಗೊಂಡವರು. ಉಳಿದಂತೆ ಪ್ರಬಲ ಸ್ಪರ್ಧಿಯೇ ಚುನಾವಣಾ ಇತಿಹಾಸದಲ್ಲಿ ಅಖಾಡಕ್ಕಿಳಿದಿಲ್ಲ.

1999ರಲ್ಲಿ ಲೋಕಸಭೆ, ವಿಧಾನಸಭೆಗೆ ಒಟ್ಟಿಗೆ ಚುನಾವಣೆ ಘೋಷಣೆಯಾಯ್ತು. ಕಾಂಗ್ರೆಸ್‌ನಿಂದ ಸಂಸದರಿದ್ದ ಎಂ.ಬಿ.ಪಾಟೀಲ ತಿಕೋಟಾ ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿದರು. ವಿಜಯಪುರ ಶಾಸಕರಾಗಿದ್ದ ಬಸನಗೌಡ ಪಾಟೀಲ ಯತ್ನಾಳ ಬಿಜೆಪಿಯಿಂದ ಲೋಕಸಭಾ ಹುರಿಯಾಳಾಗಿ ಸ್ಪರ್ಧಿಸಿದರು.

ತನ್ನ ಭದ್ರಕೋಟೆ ಉಳಿಸಿಕೊಳ್ಳಲಿಕ್ಕಾಗಿ, ಪ್ರಬಲ ಅಭ್ಯರ್ಥಿಯ ಹುಡುಕಾಟದಲ್ಲಿದ್ದ ಕಾಂಗ್ರೆಸ್‌ ಮುಖಂಡರು ಮಾಜಿ ಸಂಸದರ ಪತ್ನಿ ಲಕ್ಷ್ಮೀಬಾಯಿ ಗುಡದಿನ್ನಿ ಅವರಿಗೆ ಟಿಕೆಟ್ ನೀಡಿ ಕಣಕ್ಕಿಳಿಸಿದರು. ಜಿಲ್ಲೆಯ ಪ್ರಬಲ ಪಂಚಮಸಾಲಿ ಸಮುದಾಯದ ಇಬ್ಬರ ನಡುವೆ ಚುನಾವಣಾ ಹಣಾಹಣಿ ನಡೆಯಿತು.

ಈ ಚುನಾವಣೆಯಲ್ಲಿ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಐದರಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸುವ ಮೂಲಕ ಮೇಲುಗೈ ಸಾಧಿಸಿದರೂ; ಲೋಕಸಭೆಯಲ್ಲಿ ಪಕ್ಷದ ಅಭ್ಯರ್ಥಿ ಲಕ್ಷ್ಮೀಬಾಯಿ ಗುಡದಿನ್ನಿ ಬಿಜೆಪಿಯ ಯುವಕ ಬಸನಗೌಡ ಪಾಟೀಲ ಯತ್ನಾಳ ಎದುರು 36,639 ಮತಗಳಿಂದ ಪರಾಭವಗೊಂಡರು.

ಬಿಜೆಪಿ ಎರಡು ವಿಧಾನಸಭಾ ಕ್ಷೇತ್ರ ಗೆಲ್ಲುವ ಜತೆ, ಲೋಕಸಭಾ ಕ್ಷೇತ್ರದಲ್ಲಿ ಮೊದಲ ಬಾರಿಗೆ ಕಮಲ ಅರಳಿತು. ಅಲ್ಲಿಂದ ಇಲ್ಲಿಯ ತನಕ ಕ್ಷೇತ್ರ ‘ಕಮಲ’ ಪಾಳೆಯದ ಭದ್ರಕೋಟೆಯಾಗಿದೆ.

ಮೈತ್ರಿಯಿಂದ ಮಹಿಳೆ ಅಖಾಡಕ್ಕೆ

ಎರಡು ದಶಕದ ಬಳಿಕ ಮತ್ತೊಮ್ಮೆ ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿಯಿಂದ ಮಹಿಳೆಯೊಬ್ಬರು ಅಖಾಡಕ್ಕಿಳಿದು ಪ್ರಬಲ ಸ್ಪರ್ಧೆಗೆ ಸಜ್ಜಾಗಿದ್ದಾರೆ.

ಸಾಮಾನ್ಯ ಕ್ಷೇತ್ರವಿದ್ದ ಸಂದರ್ಭವೇ ಪ್ರಬಲ ಮಹಿಳಾ ಅಭ್ಯರ್ಥಿಗೆ ಒಮ್ಮೆ ಮಾತ್ರ ಅವಕಾಶವಿತ್ತು. ಇದೀಗ
ವಿಜಯಪುರ ಪರಿಶಿಷ್ಟ ಜಾತಿಯ ಮೀಸಲು ಲೋಕಸಭಾ ಕ್ಷೇತ್ರ ಅಸ್ತಿತ್ವಕ್ಕೆ ಬಂದ ದಶಕದ ಬಳಿಕ ಮಹಿಳೆಗೆ ಮೈತ್ರಿಯಿಂದ ಅವಕಾಶ ದೊರೆತಿದೆ.

ನಾಗಠಾಣ ಶಾಸಕ ದೇವಾನಂದ ಚವ್ಹಾಣ ಪತ್ನಿ ಸುನೀತಾ ಚವ್ಹಾಣ ಜೆಡಿಎಸ್‌ ಅಭ್ಯರ್ಥಿಯಾಗಿ ಈಗಾಗಲೇ ಘೋಷಣೆಯಾಗಿದ್ದು, ಕಾಂಗ್ರೆಸ್‌ ಸಹ ಸಹಮತ ವ್ಯಕ್ತಪಡಿಸಿದೆ. ಇದೇ ಏ.2ರ ಮಂಗಳವಾರ ತಮ್ಮ ಮನೆಯ ಆರಾಧ್ಯ ದೈವ ತಾಂಬಾದ ಜಗದಾಂಬ ದೇವಿ ವಾರವಾಗಿದ್ದರಿಂದ, ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಲು ಸಿದ್ಧತೆ ನಡೆಸಿಕೊಂಡಿದ್ದಾರೆ.

ಪತಿ ದೇವಾನಂದ ಜತೆ ಚುನಾವಣಾ ರಣತಂತ್ರ ರೂಪಿಸಿಕೊಂಡಿದ್ದು, ಪ್ರಬಲ ಹಣಾಹಣಿಗೆ ಸಜ್ಜಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು