ಶುಕ್ರವಾರ, ಏಪ್ರಿಲ್ 10, 2020
19 °C

ಮಕ್ಕಳ ಚಿತ್ರ ಓದೋಣ ಬನ್ನಿ...

ಎಂ.ಎಸ್. ಮೂರ್ತಿ Updated:

ಅಕ್ಷರ ಗಾತ್ರ : | |

Deccan Herald

ಎಷ್ಟೋ ದಿನಗಳಿಂದ ನಮ್ಮ ಮಕ್ಕಳು ನಮಗೆ ಏನನ್ನೋ ಹೇಳಿಕೊಳ್ಳಲು ತವಕಿಸುತ್ತಲೇ ಇವೆ. ಮಕ್ಕಳ ನಿಶ್ಯಬ್ದದ ಚಿತ್ರಗಳನ್ನು ನಾವು ಗಮನಿಸಲಿಲ್ಲ. ಗಮನಿಸದಿದ್ದ ಮೇಲೆ ಓದುವುದಂತೂ ದೂರದ ಮಾತು. ಈ ಸಮಾಜದ ಎಲ್ಲ ವರ್ಗ, ಜಾತಿ, ಧರ್ಮದ ಮಕ್ಕಳೆಲ್ಲವೂ ಶೈಶವಾವಸ್ಥೆಯಲ್ಲಿ ಒಂದೇ. ತಮ್ಮ ಬಾಲ್ಯದಲ್ಲಿ ಕಂಡ, ಅನುಭವಿಸಿದ ಎಲ್ಲ ಸಂವೇದನೆಗಳನ್ನೂ ಪ್ರಜ್ಞೆಯ ಕೋಶಗಳಲ್ಲಿ ಸಂಗ್ರಹವಾಗಿರಿಸಿ, ಅಭಿವ್ಯಕ್ತಿಯ ಅವಕಾಶದಲ್ಲಿ ಯಥಾವತ್ತು ‘ಚಿತ್ರ ರೂಪಕಗಳು’ ಬಾಹ್ಯ ಜಗತ್ತಿಗೆ ತೋರುತ್ತವೆ.

ಇಂತಹ ಸರಳ ‘ಸಹಜ ಚಿತ್ರಗಳನ್ನು’ ಅಕ್ಷರಗಳಂತೆ ನಾವು ಓದಲಿಲ್ಲ. ಯಾಕೆಂದರೆ ನಮಗೆ ‘ದೃಶ್ಯ ಭಾಷೆ’ ನೋಟ, ಕಾಣುವಿಕೆಗಳ ಸಂವಹನ ಭಾಷೆ ಬಗ್ಗೆ ಅರಿವಿಲ್ಲ! ನಮ್ಮ ಜ್ಞಾನ ಸಂಪತ್ತು, ನಮ್ಮೊಳಗೆ ಹರಿಯುವುದು ಅಕ್ಷರಗಳಿಂದ ಮಾತ್ರ. ಅಕ್ಷರವನ್ನು ಸಂಪೂರ್ಣ ನಂಬಿದ ನಮಗೆ ಅಕ್ಷರ ರಹಿತ ಮಕ್ಕಳ ‘ಗೀಚು’ಗಳು ಹೇಗೆ ತಾನೆ ಇಷ್ಟವಾದೀತು? ಇಂತಹ ‘ಸಹಜ ಚಿತ್ರ’ಗಳು ನಮ್ಮ ಮಕ್ಕಳ ಮನಸ್ಸಿನ ಪ್ರತಿಬಿಂಬ. ನಮ್ಮ ಶಿಕ್ಷಣ ನಮಗೆ ಯಥೇಚ್ಛವಾದ ಅಕ್ಷರಜ್ಞಾನದ ಮೂಲಕ ತಂತ್ರಜ್ಞಾನವನ್ನು ಕಲಿಸಲು ಉತ್ಸಾಹ ತೋರಿದಂತೆ ‘ನೋಟ’ವನ್ನು ನಮ್ಮ ಪ್ರಶ್ನೆಯ ಅರಿವಿನ ಬೆಳವಣಿಗೆಗೆ ಅಗತ್ಯವಾದ ‘ದೃಶ್ಯಭಾಷೆ’ಯನ್ನು ಶೈಕ್ಷಣಿಕವಾಗಿ ಬೆಳೆಸಲು ಪ್ರಯತ್ನಿಸಲಿಲ್ಲ.

ಈ ಎಲ್ಲ ಪರಿಣಾಮಗಳಿಂದ ನಮ್ಮ ನೋಟ, ಪಲ್ಲಟವಾಗಿ ನಮ್ಮ ಹಂಬಲಗಳಿಗೆ ಹತ್ತಿರವಾದ, ನಮಗೆ ಬೇಕಾದುದನ್ನು ಮಾತ್ರ ಗ್ರಹಿಸುವ, ಅರ್ಥೈಸಿಕೊಳ್ಳುವ ಅಭ್ಯಾಸ ನಮಗಾಯಿತು. ನಮ್ಮೊಂದಿಗೇ ಇರುವ ನಮ್ಮ ಮಕ್ಕಳ ಮನಸ್ಸಿನ ಚಿತ್ರಗಳನ್ನು ಕಾಣದಷ್ಟು ನಮ್ಮ ದೃಷ್ಟಿ ಮಂದವಾಯಿತು. ನಮ್ಮ ಮಕ್ಕಳ ‘ಗೀಚು’ಗಳನ್ನು ಬಿಡಿಸಿ ನೋಡುವ ಬದಲು ನಮಗೆ ಬೇಕಾದ ಚಿತ್ರಗಳನ್ನು ನಮ್ಮ ಮಕ್ಕಳಿಂದ ಬರೆಸಲು ಬೇಕಾದ ತಾಲೀಮು ಮೂಡಿಸುವ ಸಿದ್ಧ ಮಾದರಿಯ ಬೇಸಿಗೆ ಕಲಾ ಶಿಬಿರ, ಕಲಾ ಸ್ಪರ್ಧೆಗಳು, ಬಹುಮಾನ, ಪ್ರಶಸ್ತಿಗಳ ಮೂಲಕ ಮಕ್ಕಳ ಮನಸ್ಸಿನ ಸಹಜ ಚಿತ್ರಗಳನ್ನು ಸಂಪೂರ್ಣ ಅಳಿಸಿ ಹಾಕುತ್ತಿದ್ದೇವೆ.

ನಮ್ಮ ಸಮಾಜದ ಶೇಕಡ 80ರಷ್ಟು ಮಕ್ಕಳು ಆಟಕ್ಕಿಂತಲೂ ಹೆಚ್ಚು ಸಮಯವನ್ನು ಚಿತ್ರಕಲೆಯಲ್ಲಿ ತೊಡಗಿಸಿಕೊಳ್ಳಲು ಹಾತೊರೆಯುತ್ತಾರೆ. ಅದಕ್ಕೆ ಮುಖ್ಯ ಕಾರಣ ಸರಿ, ತಪ್ಪುಗಳ ನಡುವೆ ಇರುವ ಚಿತ್ರಕಲೆ, ಅಕ್ಷರದಂತೆ ವ್ಯಾಕರಣವನ್ನು ಅವಲಂಬಿಸಿಲ್ಲ. ಸರಳವಾಗಿ ಅಭಿವ್ಯಕ್ತಿಗೊಳಿಸಲು ಚಿತ್ರಕಲೆಯು ಬೇಕು– ಬೇಡ, ಇಷ್ಟ– ಅನಿಷ್ಟಗಳ ವೈರುಧ್ಯಗಳಿಂದ ಮುಕ್ತವಾಗಿದೆ.

ಮಕ್ಕಳ ಬಾಲ್ಯದ ಚಿತ್ರಗಳನ್ನು ಅದರ ಪರಿಭಾಷೆಯ ಮೂಲಕ ನಾವು ಓದಲು ಸಾಧ್ಯವಾದರೆ, ನಮ್ಮ ಸಮಾಜದ ಇಂದಿನ ಸಮಸ್ಯೆಗಳನ್ನು ಅರ್ಧದಷ್ಟು ಮೂಲದಲ್ಲೇ ನಿವಾರಿಸಬಹುದಿತ್ತು. ಅಧುನಿಕ ಸಮಾಜದಲ್ಲಿ ಎದುರಿಸುತ್ತಿರುವ ಲೈಂಗಿಕ ಸಂಘರ್ಷ, ಕ್ಲೀಷೆಗಳು, ಮಕ್ಕಳ ಮೇಲೆ ಸ್ವಂತ ಕುಟುಂಬದೊಳಗೆ ನಡೆಯುತ್ತಿರುವ ಲೈಂಗಿಕ ಶೋಷಣೆ, ದೈಹಿಕ, ಮಾನಸಿಕ ಹಿಂಸೆಗಳು, ವಿಕೃತಿಯ ನಡೆಗಳು ಎಲ್ಲ ಪರಿಣಾಮಗಳನ್ನು ಮಕ್ಕಳ ಸೂಕ್ಷ್ಮ ಮನಸ್ಸು ಆಯಾ ಕಾಲಘಟ್ಟದಲ್ಲಿ ತಮ್ಮ ಚಿತ್ರಗಳ ಮೂಲಕ ಸಮಾಜಕ್ಕೆ ತೋರುತ್ತಲೇ ಇದೆ. ನಾವು ಪೋಷಕರು, ಶಿಕ್ಷಕರು, ಸಮಾಜ ವಿಜ್ಞಾನಿಗಳು ಇಂತಹ ನೂರಾರು ಜ್ಞಾನ ಸಂಪತ್ತನ್ನು ಗ್ರಹಿಸಲಾರದೆ ಕಸದ ಬುಟ್ಟಿಗೆ ಎಸೆದಿದ್ದೇವೆ.

ಮಕ್ಕಳ ಚಿತ್ರಗಳು ಕೇವಲ ಚಿತ್ರಗಳಲ್ಲ. ವಂಶ ಪರಂಪರೆಯಿಂದ ಬಂದ ಪ್ರತಿಭೆಯಲ್ಲ. ಅದೊಂದು ‘ಅನನ್ಯ ಸಂವಹನ ಭಾಷೆ’– ಅದನ್ನು ನಾವೆಲ್ಲರೂ ಆಸ್ಥೆಯಿಂದ, ಕಾಳಜಿಯಿಂದ ಪ್ರಾಥಮಿಕವಾಗಿ ಕಲಿಯಬೇಕಿದೆ.

ಈ ಚಿತ್ರಗಳಲ್ಲಿ ಸಾವಿರಾರು ವರ್ಷಗಳ ಮಾನವನ ವಿಕಾಸದ ಅರಿವಿನ ಪ್ರಜ್ಞೆಯ ಚಿತ್ರಗಳ ಸಂದೇಶಗಳಿವೆ. ಅವುಗಳ ಮೂಲಕ ನಮ್ಮ ಹಿಂದಿನ ತಲೆಮಾರಿನ ಸ್ವಸ್ಥ ಬದುಕಿಗೆ ಬೇಕಾದ ಅನೇಕ ಸೂಚನೆಗಳಿವೆ. ಅವುಗಳನ್ನು ಇನ್ನಾದರೂ ಓದುವ ಆಸಕ್ತಿ ತೋರೋಣ. ಮಕ್ಕಳನ್ನು ಪ್ರೀತಿಸುವ ಎಲ್ಲ ತಂದೆ– ತಾಯಂದಿರ, ಶಿಕ್ಷಕರ ನೈತಿಕ ಜವಾಬ್ದಾರಿಯಿದು.
ಮಕ್ಕಳ ಚಿತ್ರಗಳನ್ನು ಓದೋಣ ಬನ್ನಿ– ಅಭಿಯಾನ ಎರಡು ದಶಕಗಳಿಗೂ ಹೆಚ್ಚು ಕಾಲ ನಿಶ್ಯಬ್ದವಾಗಿ ನಡೆಯುತ್ತಿದೆ. ನೂರಾರು ಪೋಷಕರು ಈ ಮೂಲಕ ತಮ್ಮ ಮಕ್ಕಳ ಮನಸ್ಸನ್ನು ಅರಿತಿದ್ದಾರೆ. ಅವರೊಂದಿಗೆ ಹಂಚಿಕೊಂಡ ಸೂಚನೆಗಳು ಇಲ್ಲಿಯೂ ಪ್ರಸ್ತುತವೆಂದು ತಿಳಿದಿದ್ದೇನೆ.

l ಚಿತ್ರ ರಚಿಸುವ ನಿಮ್ಮ ಮಕ್ಕಳು ಸಹಜ ಮಕ್ಕಳು, ಇದು ಎಲ್ಲ ಮಕ್ಕಳ ಸಹಜ ಆಸಕ್ತಿ.

l ಮಕ್ಕಳಿಗೆ ಆಸಕ್ತಿ ಇದ್ದಲ್ಲಿ ಮಾತ್ರ ಸಾಮಾನ್ಯ ಕಲಾ ಪರಿಕರಗಳನ್ನು ಒದಗಿಸಿ, ಚಿತ್ರ ರಚಿಸಲು ಏಕಾಂತ ಸ್ಥಳ ನೀಡಿ. ನೀವು ದೂರವಿರಿ.

l ರಚಿಸಿದ ಚಿತ್ರಗಳನ್ನು ದಿನಾಂಕ, ಸಂದರ್ಭ ನಮೂದಿಸಿ ಸಂಗ್ರಹ ಮಾಡಿ.

l ಕನಿಷ್ಠ ಒಂದೆರಡು ತಿಂಗಳ ಅವಧಿಯಲ್ಲಿ ಮಗುವಿನ ಚಿತ್ರಗಳನ್ನು ತಂದೆ– ತಾಯಿಗಳಿಬ್ಬರೂ ಖಾಸಗಿಯಾಗಿ ಅವಲೋಕಿಸಿ.

l ಮಗುವಿಗೆ 18 ತಿಂಗಳಿಂದ ಚಿತ್ರ ಬರೆಯುವ ಪ್ರವೃತ್ತಿ ಸಹಜವಾಗಿರುತ್ತೆ. ಸುಮಾರು 14 ವರ್ಷಗಳವರೆಗೂ ಯಾವ ಕಲಾ ಶಾಲೆ, ಕಲಾವಿದರ ಬಳಿಗೂ ಕಲಾಭ್ಯಾಸಕ್ಕೆ ಕಳಿಸಿ ಮಗುವಿನ ಸಹಜ ಚಿತ್ರಗಳನ್ನು ಅಳಿಸದಿರಿ.

l ಯಾವುದೇ ಕಲಾಸ್ಪರ್ಧೆಗಳಿಗೆ ಮಗುವನ್ನು ಕಳಿಸಲು ಪ್ರಯತ್ನಿಸಬೇಡಿ, ಮಗುವಿನ ಚಿತ್ರಗಳನ್ನು ಹೊಗಳುವ, ತೆಗಳುವ, ತಿದ್ದುವ, ಅಳಿಸುವ ಪ್ರಯತ್ನ ಮಾಡಬೇಡಿ.

l ಮಗುವಿನ 10 ವರ್ಷಗಳ ಒಟ್ಟಾರೆ ಚಿತ್ರಗಳನ್ನು ಸಂಗ್ರಹಿಸಿ ಮಗು ಬೆಳೆದಂತೆ ವಿಶೇಷ ಸಂದರ್ಭದಲ್ಲಿ ಕೊಡುಗೆಯಾಗಿ ನೀಡಿ. ಅದು ಮಗುವಿಗೆ ನೀಡುವ ಅಮೂಲ್ಯ ಕೊಡುಗೆ. ದೇಶದ ಚರಿತ್ರೆ, ಜೀವ ವಿಕಾಸದ ಚರಿತ್ರೆ. ಮಗುವಿನ ಭಾವಕೋಶದ ಚರಿತ್ರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)