ತರಕಾರಿ, ಹಣ್ಣುಗಳ ಧಾರಣೆ ಏರುವ ಸಾಧ್ಯತೆ

7
ಸೊಪ್ಪು, ಹೂ ಯಥಾಸ್ಥಿತಿ ಮುಂದುವರಿಕೆ: ಟೊಮೆಟೊ ದರ ಮತ್ತೆ ಕುಸಿತ

ತರಕಾರಿ, ಹಣ್ಣುಗಳ ಧಾರಣೆ ಏರುವ ಸಾಧ್ಯತೆ

Published:
Updated:
Deccan Herald

ಚಾಮರಾಜನಗರ: ಶ್ರಾವಣ ಮಾಸ ಆರಂಭಕ್ಕೆ ಕೆಲವು ದಿನಗಳು ಬಾಕಿ ಇರುವಂತೆಯೇ, ತರಕಾರಿ ಮತ್ತು ಹಣ್ಣುಗಳ ಬೆಲೆ ಏರುಮುಖವಾಗುವ ಲಕ್ಷಣಗಳು ಕಾಣುತ್ತಿವೆ. ಮಾರುಕಟ್ಟೆಯಲ್ಲಿ ಹೂವುಗಳಿಗೆ ಗುರುವಾರ ಹಾಗೂ ಶುಕ್ರವಾರ ಮಾತ್ರ ಬೇಡಿಕೆ ಇರುವುದರಿಂದ ಅವುಗಳ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸ ಆಗಿಲ್ಲ.

ಆಷಾಢ ಮಾಸದಲ್ಲಿ ಶುಭ ಸಮಾರಂಭಗಳು ನಡೆಯದೇ ಇರುವುದರಿಂದ ತರಕಾರಿ, ಹೂವು, ಹಣ್ಣುಗಳ ಬೇಡಿಕೆ ಇಳಿಮುಖವಾಗಿತ್ತು. ಈ ವಾರಾಂತ್ಯದಲ್ಲಿ ಭೀಮನ ಅಮಾವಾಸ್ಯೆ ಇದೆ. ಮುಂದಿನ ದಿನಗಳಲ್ಲಿ ಸಾಲು ಸಾಲು ಹಬ್ಬಗಳು ಬರಲಿವೆ. ಜೊತೆಗೆ ಶುಭ ಸಮಾರಂಭಗಳೂ ಆರಂಭವಾಗಲಿವೆ. ಹಾಗಾಗಿ ತರಕಾರಿ, ಹಣ್ಣು ಮತ್ತು ಹೂವುಗಳ ಬೆಲೆ ಹೆಚ್ಚಳವಾಗಲಿದೆ ಎಂಬ ನಿರೀಕ್ಷೆಯಲ್ಲಿ ವ್ಯಾಪಾರಿಗಳು ಇದ್ದಾರೆ.

ಟೊಮೆಟೊ ಧಾರಣೆ ಮತ್ತೆ ಕುಸಿತ: ಟೊಮೆಟೊ ಬೆಲೆ ಕುಸಿತದ ಹಾದಿಯಿಂದ ಚೇತರಿಸಿಕೊಂಡಿಲ್ಲ. ಕಳೆದ ವಾರ ಚಿಲ್ಲರೆ ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ₹10 ಇತ್ತು ಈಗ ₹5 ಕುಸಿದಿದೆ. ಕ್ಯಾರೆಟ್‌ ₹10 ತುಟ್ಟಿ ಆಗಿದೆ. ಹೋದ ವಾರ ಕ್ಯಾರೆಟ್‌ನ ಬೆಲೆ ₹20 ಇತ್ತು. ಸೋಮವಾರ ₹30 ಆಗಿದೆ. 

ದ್ರಾಕ್ಷಿ ಸೀಸನ್‌ ಮುಕ್ತಾಯ: ದಾಳಿಂಬೆ ಬಿಟ್ಟು ಉಳಿದ ಹಣ್ಣುಗಳ ಬೆಲೆ ಯಥಾಸ್ಥಿತಿ ಮುಂದುವರಿದಿದೆ. ದಾಳಿಂಬೆ ಬೆಲೆ ಕೆಜಿಗೆ (ಚಿಲ್ಲರೆ ಮಾರುಕಟ್ಟೆಯಲ್ಲಿ) 4 60ರಿಂದ ₹ 80, ಸೀತಾಫಲ, ಸೀಬೆಕಾಯಿ, ಅನನಾಸು ಹಾಗೂ ಬೇರಿಕಾಯಿಗಳ ದರ ಕೆಜಿಗೆ ₹40 ಇದೆ.

‘ಶಿಮ್ಲಾ ಸೇಬು ಇನ್ನೆರಡು ದಿನಗಳಲ್ಲಿ ಪಟ್ಟಣದ ಮಾರುಕಟ್ಟೆ ಪ್ರವೇಶಿಸಲಿದೆ. ಈಗಾಗಲೇ ಬೇರೆ ಕಡೆಗಳಲ್ಲಿ ಲಭ್ಯವಿದೆ. ಆರಂಭದಲ್ಲಿ ಸ್ವಲ್ಪ ಕಾಯಿ ಸೇಬು ಬರುತ್ತದೆ. ಹಾಗಾಗಿ ಮುಂದಿನ ವಾರ ಪಕ್ವವಾದ ಶಿಮ್ಲಾ ಸೇಬು ಖರೀದಿ ಮಾಡುತ್ತೇವೆ’ ಎನ್ನುತ್ತಾರೆ ಹಣ್ಣುಗಳ ವ್ಯಾಪಾರಿ ಮುರುಗೇಶ್.

ಹೂವು ಯಥಾಸ್ಥಿತಿ: ಗುರುವಾರ ಮತ್ತು ಶುಕ್ರವಾರ ಮಾತ್ರ ಹೂವಿಗೆ ಬೇಡಿಕೆ ಇರುವುದರಿಂದ ಹೂವಿನ ದರದಲ್ಲಿ ಹೆಚ್ಚಳವಾಗಲಿದೆ ಎನ್ನುತ್ತಾರೆ ಹೂವಿನ ವ್ಯಾಪಾರಿಗಳು.

‘ಶ್ರಾವಣ ಮಾಸದಲ್ಲಿ ಶುಭ ಸಮಾರಂಭಗಳು ನಡೆಯಲಿವೆ. ಇದರಿಂದ ಹೂವಿಗೂ ಬೇಡಿಕೆ ಬರಲಿದೆ. ಪ್ರಸ್ತುತ ಗುರುವಾರ, ಶುಕ್ರವಾರ ಹೂವಿನ ಧಾರಣೆಯಲ್ಲಿ ಹೆಚ್ಚಳವಾಗುತ್ತದೆ. ಉಳಿದಂತೆ ಬೆಲೆ ಏರಿಳಿತವಾಗುತ್ತದೆ’ ಎಂದು ಹೂವಿನ ವ್ಯಾಪಾರಿ ಗೋವಿಂದ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !