ಭಾನುವಾರ, ಏಪ್ರಿಲ್ 11, 2021
27 °C
ಮೈಸೂರು ಮಹಾನಗರ ಪಾಲಿಕೆ ಸಾಮಾನ್ಯ ಸಭೆ; ಬಿಜೆಪಿ–ಜೆಡಿಎಸ್–ಕಾಂಗ್ರೆಸ್ ಸದಸ್ಯರ ನಡುವೆ ವಾಕ್ಸಮರ

ಸಿಂಹ ಹೇಳಿಕೆಗೆ ಆಕ್ಷೇಪ; ಮೂಲೆ ನಿವೇಶನಕ್ಕೆ ತಕರಾರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಸಂಸದ ಪ್ರತಾಪ್‌ ಸಿಂಹ ಪಾಲಿಕೆಯ ಹಿರಿಯ ಸದಸ್ಯರ ಬಗ್ಗೆ ನೀಡಿದ್ದ ಹೇಳಿಕೆ ಹಾಗೂ ಜೆಡಿಎಸ್‌ ಕಚೇರಿಗಾಗಿ ನಿವೇಶನ ಕೋರಿಕೆ ವಿಷಯ ಸೋಮವಾರ ನಡೆದ ಮೈಸೂರು ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಸದಸ್ಯರ ನಡುವೆ ವಾಕ್ಸಮರಕ್ಕೆ ಕಾರಣವಾಯ್ತು.

ಸಾಮಾನ್ಯ ಸಭೆಯ ಕಾರ್ಯಸೂಚಿಯಂತೆ ಮೇಯರ್ ಪುಷ್ಪಲತಾ ಜಗನ್ನಾಥ್ ಜೆಡಿಎಸ್‌ ಕಚೇರಿ ಉಪಯೋಗಕ್ಕಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿರುವ ಮೂಲೆ ನಿವೇಶನವನ್ನು (1245 ಚದರ ಮೀಟರ್) ಮಂಜೂರು ಮಾಡುವಂತೆ ಬಂದಿರುವ ಪ್ರಸ್ತಾವನೆಯನ್ನು ಸಭೆಯಲ್ಲಿ ಹೇಳುತ್ತಿದ್ದಂತೆ, ಬಿಜೆಪಿ ಸದಸ್ಯರು ಸಾಮೂಹಿಕವಾಗಿ ವಿರೋಧಿಸಿದರು. ಇದಕ್ಕೆ ಪ್ರತಿಯಾಗಿ ಜೆಡಿಎಸ್ ಸದಸ್ಯರು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿಕೊಡುವಂತೆ ಆಗ್ರಹಿಸಿದರು.

ಪ್ರಸ್ತಾವನೆಯನ್ನು ಮೇಯರ್ ಸಂಪೂರ್ಣವಾಗಿ ಓದಲು ಬಿಜೆಪಿ ಸದಸ್ಯರು ಅವಕಾಶ ನೀಡಲಿಲ್ಲ. ಜೆಡಿಎಸ್‌ ಕಚೇರಿ ನಿರ್ಮಾಣಕ್ಕೆ ಜಾಗ ಕೊಡಲು ನಮ್ಮ ತಕರಾರಿಲ್ಲ. ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಿ ಎಂದು ಒಕ್ಕೊರಲಿನಿಂದ ಆಗ್ರಹಿಸಿದರು. ಸಭೆಗೆ ಒದಗಿಸಿರುವ ಕಾರ್ಯಸೂಚಿಯಲ್ಲೇ ಎಲ್ಲವೂ ಅಡಕಗೊಂಡಿದೆ. ಅದರಂತೆ ಕ್ರಮ ತೆಗೆದುಕೊಳ್ಳಿ ಎಂದು ಒತ್ತಾಯಿಸಿದರು.

ಕಚೇರಿ ನಿವೇಶನ ಮಂಜೂರಿಗೆ ಬಿಜೆಪಿ ತೀವ್ರ ಪ್ರತಿರೋಧ ತೋರಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಜೆಡಿಎಸ್ ಸದಸ್ಯರು ಎಸ್‌ಬಿಎಂ ಮಂಜು, ಪ್ರೇಮಾ ಸಾರಥ್ಯದಲ್ಲಿ ಎದ್ದು ನಿಂತು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಎಸ್‌ಬಿಎಂ ಮಂಜು ನಾವು ಪುಗ್ಸಟ್ಟೆಯಾಗಿ ಭೂಮಿ ಕೇಳ್ತೀಲ್ಲ ಎಂದರೇ; ಪ್ರೇಮಾ ನೆಲ ಬಾಡಿಗೆ ಪಾವತಿಸುತ್ತೇವೆ ಎಂದು ಸಭೆಯಲ್ಲೇ ಬಿಜೆಪಿ ಸದಸ್ಯರ ವಿರುದ್ಧ ಹರಿಹಾಯ್ದರು.

ಪಾಲಿಕೆಯ ವಿರೋಧ ಪಕ್ಷದ ನಾಯಕ ಬಿ.ವಿ.ಮಂಜುನಾಥ್ ನೀವು ಸಿಎ ಸೈಟ್‌ ಪಡೆದುಕೊಳ್ಳಿ ಎಂದರೇ, ಬಿಜೆಪಿ ಸದಸ್ಯರಾದ ಶಿವಕುಮಾರ್ ನಿವೇಶನ ಮಂಜೂರು ಮಾಡಲು ನಮ್ಮದೇನು ಅಭ್ಯಂತರವಿಲ್ಲ. ಆದರೆ ಕಾನೂನಿನಲ್ಲಿ ಇದಕ್ಕೆ ಅವಕಾಶವಿಲ್ಲ ಎಂದರು. ಮತ್ತೊಬ್ಬ ಸದಸ್ಯ ಎಂ.ಸಿ.ರಮೇಶ್‌ ಮೊದಲು ಪಾಲಿಕೆ ಆಸ್ತಿಯಲ್ಲಿ ವಲಯ ಕಚೇರಿ ನಿರ್ಮಿಸಿ; ಬಾಡಿಗೆ ಹೊರೆ ತಪ್ಪಿಸಿಕೊಳ್ಳಲು ಮುಂದಾಗಿ ಎಂದು ಆಗ್ರಹಿಸಿದರು. ಅಶ್ವಿನಿ ಬೃಹತ್ ಕಟ್ಟಡ ನಿರ್ಮಿಸಿ, ಅದರಲ್ಲಿ ಎಲ್ಲ ಪಕ್ಷಗಳು ಚಟುವಟಿಕೆ ನಡೆಸಲು ಅವಕಾಶ ಕೊಡಿ ಎಂದು ಮೇಯರ್‌ಗೆ ಒತ್ತಾಯಿಸಿದರು.

ಬಿಜೆಪಿ–ಜೆಡಿಎಸ್‌ ಸದಸ್ಯರ ನಡುವೆ ನಿವೇಶನಕ್ಕಾಗಿ ಮಾತಿನ ಜಟಾಪಟಿ ನಡೆದಿದ್ದಾಗ ಮಧ್ಯ ಪ್ರವೇಶಿಸಿದ ಕಾಂಗ್ರೆಸ್‌ನ ಹಿರಿಯ ಸದಸ್ಯ ಅಯೂಬ್‌ ಖಾನ್‌ ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದು, ಅಭಿಪ್ರಾಯ ಪಡೆಯುವಂತೆ ಸಲಹೆ ನೀಡಿದರು. ಬೇಕಿದ್ದರೇ ಬಿಜೆಪಿಯವರು ಜಾಗ ಕೋರಲಿ ಎಂದು ಹೇಳಿದರು.

ಮತ್ತೊಬ್ಬ ಸದಸ್ಯ ಆರೀಫ್‌ ಹುಸೇನ್ ಮಾತನಾಡಿ ಈಗಾಗಲೇ ಜೆಡಿಎಸ್‌ ಪಾಲಿಕೆಯ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಮತ್ತೊಂದು ಜಾಗ ಕೊಡಬೇಕಾ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ; ಎಸ್‌ಬಿಎಂ ಮಂಜು ನಿವೇಶನ ಮಂಜೂರಾಗುತ್ತಿದ್ದಂತೆ, ಈಗ ಬಳಸುತ್ತಿರುವ ಕಟ್ಟಡ ಬಿಟ್ಟುಕೊಡುತ್ತೇವೆ. ನಮಗೆ ಎರಡು ಜಾಗ ಬೇಕಿಲ್ಲ ಎಂದು ಸಮಜಾಯಿಷಿ ನೀಡಿದರು.

ಬಿಜೆಪಿ ಸದಸ್ಯರ ತೀವ್ರ ವಿರೋಧದ ನಡುವೆಯೂ ಜೆಡಿಎಸ್‌ ಸದಸ್ಯರ ಒತ್ತಾಯಕ್ಕೆ ಮಣಿದ ಮೇಯರ್ ಸರ್ಕಾರಕ್ಕೆ ಪತ್ರ ಬರೆದು ಕೇಳಲಾಗುವುದು ಎಂದು ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು