ತಾಂತ್ರಿಕ ಶಿಕ್ಷಣ ಇಲಾಖೆಯಿಂದ ಅನ್ಯಾಯ: ದೂರು ಸಲ್ಲಿಕೆ

7

ತಾಂತ್ರಿಕ ಶಿಕ್ಷಣ ಇಲಾಖೆಯಿಂದ ಅನ್ಯಾಯ: ದೂರು ಸಲ್ಲಿಕೆ

Published:
Updated:

ಬೆಂಗಳೂರು: ‘ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಅಧಿಕಾರಿಗಳ ತಪ್ಪಿನಿಂದಾಗಿ ನಾನು ಉದ್ಯೋಗ ವಂಚಿತನಾಗಿದ್ದು, ನ್ಯಾಯ ಒದಗಿಸಿ’ ಎಂದು ಒತ್ತಾಯಿಸಿ ಕೆ.ಸಿ.ಕೇಶವ್‌ ಎಂಬುವರು ವಿಧಾನಸಭೆಯ ಅರ್ಜಿಗಳ ಸಮಿತಿಗೆ ದೂರು ನೀಡಿದ್ದಾರೆ.

‘ತಾಂತ್ರಿಕ ಶಿಕ್ಷಣ ಇಲಾಖೆಯು ಭದ್ರಾವತಿಯ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ 1984ರಲ್ಲಿ ಕಾಗದ ತಂತ್ರಜ್ಞಾನ (ಪೇಪರ್‌ ಟೆಕ್ನಾಲಜಿ) ವಿಷಯದಲ್ಲಿ ಡಿಪ್ಲೊಮಾ ಆರಂಭಿಸಿತ್ತು. ಆ ಕಾಲೇಜಿನಲ್ಲಿ ಡಿಪ್ಲೊಮಾ ಪಡೆದ ರ‍್ಯಾಂಕ್ ವಿದ್ಯಾರ್ಥಿಗಳಿಗೆ ಎಂಜಿನಿಯರಿಂಗ್‌ ಮಾಡಲು ಅವಕಾಶ ಇತ್ತು. ಆದರೆ, ಆ ಅವಕಾಶವನ್ನು ಉನ್ನತ ಶಿಕ್ಷಣ ಇಲಾಖೆಯು 1989ರಲ್ಲಿ ರದ್ದುಪಡಿಸಿತ್ತು. ಅದೇ ವೇಳೆ ಡಿಪ್ಲೋಮಾ ಮುಗಿಸಿದ್ದ ನಾನು ಸೇರಿದಂತೆ ಹಲವು ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದೆವು’ ಎಂದು ಕೇಶವ್ ದೂರಿನಲ್ಲಿ ತಿಳಿಸಿದ್ದಾರೆ.

‘ಉನ್ನತ ಶಿಕ್ಷಣ ಇಲಾಖೆಯ ಕ್ರಮಕ್ಕೆ ಆಕ್ರೋಶ ವ್ಯಕ್ತವಾಗಿತ್ತು. ಆ ಬಳಿಕ, ಪೇಪರ್‌ ಟೆಕ್ನಾಲಜಿ ವಿಷಯದಲ್ಲಿ ಆ ಕೋರ್ಸ್‌ ಓದಿದವರಿಗೆ ಎಂಜಿನಿ­ಯರಿಂಗ್‌ ಪ್ರವೇಶ ಪಡೆಯಲು 2001ರಲ್ಲಿ ಅವಕಾಶ ನೀಡಿತು. ಬಳಿಕ ನಾನು ಕೆಮಿಕಲ್‌ ಎಂಜಿನಿಯರಿಂಗ್‌ ವಿಷಯದಲ್ಲಿ ಬಿ.ಇ ಪದವಿ ಪಡೆದೆ. ಆದರೆ, ಆ ವೇಳೆಗಾಗಲೇ ನನಗೆ 35 ವರ್ಷವಾಗಿದ್ದರಿಂದ ಸರ್ಕಾರಿ ಕೆಲಸಕ್ಕೆ ಸೇರುವ ವಯೋಮಿತಿಯೂ ಮೀರಿತ್ತು’.

‘2012ರಲ್ಲಿ ವಿಧಾನಪರಿಷತ್‌ ಸದಸ್ಯೆಯಾಗಿದ್ದ ವಿಮಲಾಗೌಡ ಅವರ ನೇತೃತ್ವದ ಅರ್ಜಿಗಳ ಸಮಿತಿಗೆ ದೂರು ನೀಡಿದ್ದೆ. ತಾಂತ್ರಿಕ ಶಿಕ್ಷಣ ಇಲಾಖೆಯಿಂದ ವರದಿ ತರಿಸಿ­ಕೊಂಡಿದ್ದ ಸಮಿತಿ, ನನಗೆ ಉದ್ಯೋಗ ಕೊಡಿಸುವಂತೆ ಮುಖ್ಯಮಂತ್ರಿ­ಗೆ ಶಿಫಾ­ರಸು ಮಾಡಿತ್ತು. ಅಷ್ಟಾದರೂ ನನಗೆ ಕೆಲಸ ಸಿಕ್ಕಿಲ್ಲ. ಸ್ವಯಂ ಉದ್ಯೋಗ ಕೈಗೊಳ್ಳಲು ಸಹ ಇಲಾಖೆ ಅಧಿಕಾರಿಗಳು ಸಹಕಾರ ನೀಡುತ್ತಿಲ್ಲ’ ಎಂದು ಕೇಶವ್‌ ದೂರಿನಲ್ಲಿ ತಿಳಿಸಿದ್ದಾರೆ.

‘ಇಲಾಖೆ ಮಾಡಿರುವ ಅನ್ಯಾಯದ ವಿರುದ್ಧ ಸ್ವಾತಂತ್ರ್ಯ ಉದ್ಯಾನದಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಿದ್ದೆ. ಅಧಿಕಾರಿಗಳು ಯಾರೂ ಸ್ಪಂದಿಸಿರಲಿಲ್ಲ’ ಎಂದಿದ್ದಾರೆ. 

ಕೇಶವ್‌ ಅವರ ದೂರಿನ ವಿಚಾರಣೆಯನ್ನು ಅರ್ಜಿಗಳ ಸಮಿತಿಯು ಸದ್ಯದಲ್ಲೇ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !