ಶನಿವಾರ, ಸೆಪ್ಟೆಂಬರ್ 25, 2021
22 °C
ಅಂಧರ ಬಾಳಿಗೆ ಬೆಳಕಾದ ಪೊಲಿಯೋ ಪೀಡಿತ

ಬೀದಿ ಬದಿ ಅಂಧರ ಬಿಂದಾಸ್ ಆರ್ಕೆಸ್ಟ್ರಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದಿ ಬದಿಯ ವ್ಯಾಪಾರಿಗಳಂತೆ ನಗರದಲ್ಲಿ ಇತ್ತೀಚೆಗೆ ಬೀದಿ ಬದಿಯ ವಾದ್ಯಗೋಷ್ಠಿಯೊಂದು ಜನಪ್ರಿಯವಾಗುತ್ತಿದೆ. ಸಂಪೂರ್ಣ ಅಂಧ ಕಲಾವಿದರ ಆರ್ಕೆಸ್ಟ್ರಾ ಎನ್ನುವುದು ಇದರ ವೈಶಿಷ್ಟ್ಯ.

ಯಲಂಹಂಕದ ಚಿಕ್ಕಜಾಲ ಬಳಿಯ ಉತ್ನಳ್ಳಿಯ ಜೀವನಮಾರ್ಗ ವಾದ್ಯಗೋಷ್ಠಿಯ ಸಂಜೆಯಾದರೆ ನಗರದ ಪ್ರಮುಖ ಬಡಾವಣೆ, ರಸ್ತೆ, ಬೀದಿ ಬದಿಯಲ್ಲಿ ಅಂಧರ ಆರ್ಕೆಸ್ಟ್ರಾ ಠಿಕಾಣಿ ಹೂಡಿದರೆ ಸಾಕು ನಾಲ್ಕು ತಾಸು ಹಾಡುಗಳ ರಸಗವಳ. ಜನರು ಇರಲಿ, ಇಲ್ಲದಿರಲಿ. ಆ ಬಗ್ಗೆ ಕಲಾವಿದರು ತಲೆ ಕೆಡಿಸಿಕೊಳ್ಳುವುದಿಲ್ಲ. ತಮ್ಮಷ್ಟಕ್ಕೆ ತಾವು ಹಾಡು ಆರಂಭಿಸುತ್ತಾರೆ.   ಯಲಂಹಂಕದ ಚಿಕ್ಕಜಾಲ ಬಳಿಯ ಉತ್ನಳ್ಳಿಯ ಆಟೊ ಚಾಲಕ ಮಲ್ಲಿಕಾರ್ಜುನ ಕೆ. ಎಂಟು ಜನ ಅಂಧ ಕಲಾವಿದರನ್ನು ಒಂದೆಡೆ ಸೇರಿಸಿ ಜೀವನಮಾರ್ಗ ಎಂಬ ವಾದ್ಯಗೋಷ್ಠಿ ಹುಟ್ಟು ಹಾಕಿದ್ದಾರೆ. ಕೊಪ್ಪಳ, ಚಿತ್ರದುರ್ಗ, ಮೈಸೂರಿನಿಂದ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದ ಗಾಯಕರು ಜೀವನಮಾರ್ಗ ವಾದ್ಯಗೋಷ್ಠಿಗೆ ತಲಾ ₹5 ಸಾವಿರ ಬಂಡವಾಳ ತೊಡಗಿಸಿದ್ದಾರೆ. ಈ ಹಣದಲ್ಲಿ ವಾದ್ಯಗೋಷ್ಠಿಗೆ ಬೇಕಾದ ಎರಡು ಮೈಕ್‌, ಸೌಂಡ್‌ಬಾಕ್ಸ್‌, ಬ್ಯಾಟರಿ, ಯುಪಿಎಸ್‌, ಡಿ.ಜಿ. ಪ್ಲೇಯರ್‌ ಮತ್ತು ವಿದ್ಯುತ್‌ ದೀಪ ಖರೀದಿಸಿದ್ದಾರೆ.

ಇದು ಕೇವಲ ಆರ್ಕೆಸ್ಟ್ರಾ ಅಲ್ಲ, ಎಂಟು ಅಂಧ ಕಲಾವಿದರ ಅನ್ನದ ಮಾರ್ಗ. ಎಲ್ಲರಂತೆ ಸಮಾಜದಲ್ಲಿ ತಲೆ ಎತ್ತಿ ನಿಲ್ಲುವ ಸ್ವಾವಲಂಬಿ ಬದುಕಿನ ಮೊದಲ ಹೆಜ್ಜೆ. ಒಂದೂವರೆ ವರ್ಷದಿಂದ ನಗರದ ವಿವಿಧ ಬಡಾವಣೆಗಳಲ್ಲಿ ಈ ಆರ್ಕೆಸ್ಟ್ರಾ ಜನರಿಗೆ ಭರಪೂರ ಮನರಂಜನೆ ನೀಡುತ್ತಿದೆ.   

ಪೊಲಿಯೋ ಪೀಡಿತರಾದ ಮಲ್ಲಿಕಾರ್ಜುನ ಕಾಲಿನಲ್ಲಿ ಶಕ್ತಿ ಇಲ್ಲದಿದ್ದರೂ ಜೀವನಕ್ಕಾಗಿ ಆಟೊ ಓಡಿಸುತ್ತಾರೆ. ಅವರೇ ಈ ಕಲಾವಿದರ ತಂಡದ ಸಾರಥಿ. ಎಲ್ಲರನ್ನೂ ಆಟೊದಲ್ಲಿ ನಿಗದಿತ ಸ್ಥಳಕ್ಕೆ ಕರೆದೊಯ್ಯುವುದು, ಸುರಕ್ಷಿತವಾಗಿ ಕರೆ ತರುವುದು ಅವರ ಜವಾಬ್ದಾರಿ. ಒಂದು ತಿಂಗಳ ಹಿಂದೆ ಜೀವನಮಾರ್ಗ ಚಾರಿಟೆಬಲ್‌ ಟ್ರಸ್ಟ್‌ ಕೂಡ ಹುಟ್ಟು ಹಾಕಿದ್ದಾರೆ. 

ಯಾರೂ ಸಂಗೀತ ಕಲಿತಿಲ್ಲ

ಈ ಗಾಯಕರಾರೂ ಶಾಸ್ತ್ರೀಯವಾಗಿ ಸಂಗೀತ ಕಲಿತಿಲ್ಲ. ಆಸಕ್ತಿಯಿಂದ ಸ್ವಂತ  ಪರಿಶ್ರಮದ ಮೇಲೆ ಸುಶ್ರಾವ್ಯವಾಗಿ ಹಾಡುವುದನ್ನು ಕಲಿತಿದ್ದಾರೆ. ಬೆಳಿಗ್ಗೆ ಎಲ್ಲರೂ ಪ್ರಾಕ್ಟೀಸ್‌ ಮಾಡಿ, ಸಂಜೆ ಹಾಡಲು ತಯಾರಾಗುತ್ತಾರೆ. ಸ್ವಲ್ಪ ಅನುಭವಿಯಾಗಿರುವ ಮೈಸೂರಿನ ಶ್ರೀಧರ ಈ ತಂಡದ ಸಂಗೀತ ಮೇಸ್ಟ್ರು. ಸಂಜೆ ಆರು ಗಂಟೆಗೆ ನಗರದ ಯಾವುದಾದರೂ ಒಂದು ಕಡೆ ವಾದ್ಯಗೋಷ್ಠಿ ಆರಂಭವಾದರೆ ರಾತ್ರಿ ಹತ್ತು ಗಂಟೆಯವರೆಗೂ ಮುಂದುವರೆಯುತ್ತದೆ. 

ಒಬ್ಬೊಬ್ಬರು ತಲಾ ಏಳರಿಂದ ಎಂಟು ಹಾಡು ಹಾಡಿದರೂ, ನಾಲ್ಕು ತಾಸಿನಲ್ಲಿ 30–40 ಹಾಡು ಕೇಳಬಹುದು. ಹಳೆಯ ಮತ್ತು ಹೊಸ ಯಾವೂದಾದರೂ ಸರಿ ಕೇವಲ ಕನ್ನಡ ಹಾಡುಗಳನ್ನು ಹಾಡುವುದು ಈ ವಾದ್ಯಗೋಷ್ಠಿಯ ವಿಶೇಷ. ಹಿಂದಿ, ತೆಲುಗು, ತಮಿಳು ಹಾಡುಗಳಿಗೆ ಬೇಡಿಕೆ ಬಂದರೂ ಇವರು ಮಾತ್ರ ಕನ್ನಡಕ್ಕಷ್ಟೇ ತಮ್ಮ ವಾದ್ಯಗೋಷ್ಠಿ ಮೀಸಲು ಎಂದು ಕಡ್ಡಿಮುರಿದಂತೆ ಹೇಳುತ್ತಾರೆ.

‘ಅನಾಥ ಮಗುವಾದೆ ನಾನು, ಅಪ್ಪನೂ, ಅಮ್ಮನೂ ಇಲ್ಲ...’ ‘ಒಳಿತು ಮಾಡು ಮನುಜ, ನೀನಿರೋದೇ ಮೂರು ದಿವಸ’ ಹಾಡುಗಳಿಗೆ ಅಪಾರ ಬೇಡಿಕೆ ಇದೆಯಂತೆ. ‘ಕುಲದಲ್ಲಿ ಮೇಲಾವುದೋ ಹುಚ್ಚಪ್ಪ’ ಮತ್ತು `ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು..’ ಈ ಹಾಡುಗಳನ್ನು ಹಾಡದೆ ಸಂಗೀತ ಸಂಜೆ ಕೊನೆಗೊಳಿಸುವಂತೆಯೇ ಇಲ್ಲ. ಕೆಲವೊಮ್ಮೆ ಎರಡು ಬಾರಿ ಈ ಹಾಡುಗಳನ್ನು ಹಾಡಬೇಕಾಗುತ್ತದೆ ಎನ್ನುತ್ತಾರೆ ಮಲ್ಲಿಕಾರ್ಜುನ.

ಕಿಡ್ನಿ ರೋಗಿಗಳಿಗೆ ಸಹಾಯ

ಜನರು ದಾನ ಮಾಡುವ ಹಣವೇ ಇವರ ಜೀವನಕ್ಕೆ ಆಧಾರ. ಪ್ರತಿ ತಿಂಗಳು 15 ತಾರೀಕಿನೊಳಗೆ ₹8–10 ಸಾವಿರ ಸಂಗ್ರಹವಾಗುತ್ತದೆ. ನಂತರ ಎರಡು ಸಾವಿರಕ್ಕೆ ಇಳಿಯುತ್ತದೆಯಂತೆ. 

ಆಯಾ ದಿನದ ಹಣವನ್ನು ಅಂದೇ ಸಮನಾಗಿ ಹಂಚಿಕೊಳ್ಳುತ್ತೇವೆ. ಟ್ರಸ್ಟ್‌ಗೆ ಒಂದು ಭಾಗ ತೆಗೆದಿಡುತ್ತೇವೆ. ಟ್ರಸ್ಟ್‌ಗೆ ತೆಗೆದಿಟ್ಟ ಹಣದಲ್ಲಿ ಪ್ರತಿ ತಿಂಗಳು ಒಂದು ಸಾವಿರದಂತೆ ಇಬ್ಬರು ಕಿಡ್ನಿ ರೋಗಿಗಳಿಗೆ ಸಹಾಯ ನೀಡುತ್ತೇವೆ. ಉಳಿದ ಹಣವನ್ನು ಅಂಧ ಕಲಾವಿದರ ಮನೆ ಬಾಡಿಗೆ ಮುಂಗಡ, ವೈದ್ಯಕೀಯ ವೆಚ್ಚಗಳಿಗೆ ಭರಿಸಲಾಗುತ್ತದೆ ಎನ್ನುತ್ತಾರೆ ಮಲ್ಲಿಕಾರ್ಜುನ.

ಮದುವೆ, ಜನ್ಮದಿನ ಸಮಾರಂಭಗಳಲ್ಲಿ ಮೂರ‍್ನಾಲ್ಕು ಸಂಗೀತ ಕಾರ್ಯಕ್ರಮ ನೀಡಿದ್ದೇವೆ. ನಾಲ್ಕು ಗಂಟೆ ಕಾರ್ಯಕ್ರಮಕ್ಕೆ ₹10 ಸಾವಿರ ಶುಲ್ಕ ಪಡೆಯುತ್ತೇವೆ. ಎರಡು ಆಟೊದಲ್ಲಿ ಎಲ್ಲ ವಾದ್ಯ ಪರಿಕರಗಳ ಜತೆ ಎಂಟು ಜನರನ್ನು ಆಟೊದಲ್ಲಿ ಕರೆದೊಯ್ಯುವುದು ತೊಂದರೆಯಾಗುತ್ತಿದೆ. ಆದ್ದರಿಂದ ಮಾರುತಿ ಓಮ್ನಿ ವಾಹನ ಖರೀದಿಸುವ ಇಚ್ಛೆ ಇದೆ. ಆದರೆ, ಬ್ಯಾಂಕ್‌ನವರು ಸಾಲ ನೀಡುತ್ತಿಲ್ಲ ಎನ್ನುವುದು ಅವರು ಅಳಲು.  ಪ್ಲಾಸ್ಟಿಕ್‌ ಸ್ಟೂಲ್‌ಗಳ ಮೇಲೆ ಕುಳಿತ ಕೊಪ್ಪಳದ ಶರಣಪ್ಪ, ಮಂಜುಶ್ರೀ ದಂಪತಿ, ಶಿವಕುಮಾರ, ಶ್ಯಾಮ್‌, ಮಲ್ಲಿಕಾರ್ಜುನ ಮತ್ತು ಚಿತ್ರದುರ್ಗದ ಅಂಜನಮೂರ್ತಿ, ಅಮುದಶ್ರೀ ಹಾಡಿನ ಲೋಕದಲ್ಲಿ ಮುಳುಗಿದ್ದರು. ಹುಂಡಿಗೆ ಹಣ ಹಾಕಿ ಜನರ ಗುಂಪು ಕರಗಿದರೂ ಹಾಡುಗಳ ಜಡಿಮಳೆ ಇನ್ನೂ ನಿಂತಿರಲಿಲ್ಲ. 

ಸಂಪರ್ಕ ಸಂಖ್ಯೆ: 7019046560

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು