ರಾಜಾಜಿನಗರ– ಕುವೆಂಪು ರಸ್ತೆ ನಿಲ್ದಾಣದ ನಡುವೆ ನಿಂತ ಮೆಟ್ರೊ: 10 ನಿಮಿಷ ವಿಳಂಬ

7

ರಾಜಾಜಿನಗರ– ಕುವೆಂಪು ರಸ್ತೆ ನಿಲ್ದಾಣದ ನಡುವೆ ನಿಂತ ಮೆಟ್ರೊ: 10 ನಿಮಿಷ ವಿಳಂಬ

Published:
Updated:

ಬೆಂಗಳೂರು: ‘ನಮ್ಮ ಮೆಟ್ರೊ’ ಉತ್ತರ–ದಕ್ಷಿಣ ಕಾರಿಡಾರ್‌ನ ರಾಜಾಜಿನಗರ ನಿಲ್ದಾಣ ಹಾಗೂ ಮಹಾಕವಿ ಕುವೆಂಪು ರಸ್ತೆ ನಿಲ್ದಾಣಗಳ ನಡುವೆ ರೈಲು ದಿಢೀರ್‌ ನಿಂತಿದ್ದರಿಂದ ಪ್ರಯಾಣಿಕರು ಸುಮಾರು 10 ನಿಮಿಷ ತೊಂದರೆ ಅನುಭವಿಸಿದರು.

‘ರಾಜಾಜಿನಗರ ನಿಲ್ದಾಣದಿಂದ ಸೋಮವಾರ ಬೆಳಿಗ್ಗೆ 11 ಗಂಟೆ 11 ನಿಮಿಷಕ್ಕೆ ಹೊರಟ ರೈಲು ಸುಮಾರು 100 ಮೀ ಚಲಿಸಿತ್ತು. ತಿರುವಿನ ಬಳಿ ಏಕಾಏಕಿ ನಿಂತಿತು. ಚಾಲಕ ರೈಲಿನಿಂದ ಇಳಿದು ಸಮೀಪದ ನಿಲ್ದಾಣದ ನಿಯಂತ್ರಕರಿಗೆ ಮಾಹಿತಿ ನೀಡಿದರು. ರೈಲಿನ ತಪಾಸಣೆ ನಡೆಸಿದ ಅವರು ಯಾವುದೇ ತಾಂತ್ರಿಕ ದೋಷವಿಲ್ಲ ಎಂದು ಖಚಿತ ಪಡಿಸಿದರು. ಬಳಿಕವಷ್ಟೇ ಚಾಲಕ ಮತ್ತೆ ರೈಲನ್ನು ಚಲಾಯಿಸಿಕೊಂಡು ಹೋದರು’ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ವಸಂತ ರಾವ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ನೌಕರರು ಮುಷ್ಕರಕ್ಕೆ ಮುಂದಾದರೆ ಮೆಟ್ರೊ ರೈಲು ಸೇವೆ ಸ್ಥಗಿತಗೊಳ್ಳಬಾರದು ಎಂಬ ಉದ್ದೇಶದಿಂದ ನಿಗಮವು ಕ್ಷಿಪ್ರ ಕಾರ್ಯ ಪಡೆಯೊಂದನ್ನು ರಚಿಸಿಕೊಂಡಿದೆ. ತಾಂತ್ರಿಕ ಪರಿಣತಿ ಇಲ್ಲದವರನ್ನೂ ಈ ತಂಡದ ಸದಸ್ಯರನ್ನಾಗಿ ನೇಮಿಸಿದೆ. ಅನುಭವ ಸಿಗಲಿ ಎಂಬ ಕಾರಣಕ್ಕೆ ಅಂತಹವರಿಗೂ ರೈಲು ಚಾಲನೆ ಅವಕಾಶ ನೀಡಲಾಗುತ್ತಿದೆ. ಇದರಿಂದಾಗಿಯೇ ಇಂದು ರೈಲು ಅರ್ಧದಲ್ಲೇ ಸ್ಥಗಿತಗೊಂಡು ಪ್ರಯಾಣಿಕರು ಸಮಸ್ಯೆ ಎದುರಿಸುವಂತಾಯಿತು’ ಎಂದು ಬಿಎಂಆರ್‌ಸಿಎಲ್‌ ನೌಕರರ ಯೂನಿಯನ್‌ನ ಉಪಾಧ್ಯಕ್ಷ ಸೂರ್ಯನಾರಾಯಣ ರಾವ್‌ ಆರೋಪಿಸಿದರು.

‘ತಾಂತ್ರಿಕ ಪರಿಣತಿ ಇಲ್ಲದ ಸಿಬ್ಬಂದಿ ರೈಲು ಚಲಾಯಿಸಿದ್ದರು. ತಿರುವಿನ ಬಳಿ ನಿಗದಿತ ಮಿತಿಗಿಂತ ಹೆಚ್ಚು ವೇಗದಲ್ಲಿ ಸಾಗಿದ್ದರಿಂದ ರೈಲು ದಿಢೀರ್‌ ನಿಂತುಬಿಟ್ಟಿದೆ. ನಿಗಮವು ರೈಲ್ವೆ ಸುರಕ್ಷತಾ ಮಾನದಂಡಗಳನ್ನು ಗಾಳಿಗೆ ತೂರುತ್ತಿದೆ’ ಎಂದರು.

‘ಇಂದು ಎತ್ತರಿಸಿದ ಮಾರ್ಗದಲ್ಲಿ ರೈಲು ನಿಂತಿದ್ದರಿಂದ ಅಂತಹ ಅಪಾಯವೇನೂ ಸಂಭವಿಸಿಲ್ಲ. ಸುರಂಗದೊಳಗೆ ಇಂತಹ ಪರಿಸ್ಥಿತಿ ನಿರ್ಮಾಣವಾದರೆ ಪ್ರಯಾಣಿಕರ ಗತಿ ಏನು’ ಎಂದು ಅವರು ಪ್ರಶ್ನಿಸಿದರು.

 

 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !