ಮೆಟ್ರೊಗೆ ಸಾವಿರ ಮಹಿಳೆಯರು ಸೆಕ್ಯೂರಿಟಿ!

ಮಂಗಳವಾರ, ಜೂನ್ 18, 2019
26 °C

ಮೆಟ್ರೊಗೆ ಸಾವಿರ ಮಹಿಳೆಯರು ಸೆಕ್ಯೂರಿಟಿ!

Published:
Updated:

ಮೆಟ್ರೊ ನಿಲ್ದಾಣಗಳಲ್ಲಿ ರೈಲು ಬರುತ್ತಿದೆಯಾ? ಎಂದು ಸ್ವಲ್ಪ ಮುಂದೆ ಹೋಗಿ ಇಣುಕಿ ನೋಡಿದರೆ ‘ಓಯ್‌, ಯಾರಲ್ಲಿ ಹಿಂದೆ ಸರಿಯಿರಿ’ ಎಂದು ಮಹಿಳೆಯರ ಕೂಗು ನಿಲ್ದಾಣದ ಒಳಗೆ ಪ್ರತಿಧ್ವನಿಸುತ್ತದೆ. ಈ ಧ್ವನಿ ಗಡಿಬಿಡಿಯಲ್ಲಿರುವ ಪ್ರಯಾಣಿಕರನ್ನು ಎಚ್ಚರಿಸಿ ಸಾಲಾಗಿ ನಿಲ್ಲುವಂತೆ ಮಾಡುತ್ತದೆ.  

ಎಲ್ಲಿ ನೋಡಿದರೂ ಭದ್ರತೆಗಾಗಿ ಪುರುಷರು ಕಾವಲಾಗಿರುತ್ತಾರೆ. ಆದರೆ ಮೆಟ್ರೊ ನಿಲ್ದಾಣಗಳಲ್ಲಿ ಭದ್ರತೆಗಾಗಿ ಗತ್ತಿನಿಂದಿರುವ ಶಿಸ್ತಿನ ಮಹಿಳೆಯರು ಕಾಣುತ್ತಾರೆ ಎಂದರೆ ಮೆಚ್ಚುವಂತದ್ದು. ಹೌದು. ಸೆಕ್ಯೂರಿಟಿ ಕೆಲಸ ಯಾರು ಮಾಡುತ್ತಾರೆ ಹೋಗಪ್ಪ, ಎಂದು ಹೇಳುವ ಪುರುಷರಿಗೆ ಈ ಮಹಿಳೆಯರು ಮಾದರಿಯಾಗಿದ್ದಾರೆ.  

ಮೆಟ್ರೊ ನಿಲ್ದಾಣಗಳಲ್ಲಿ ಒಟ್ಟು 1091 ಮಹಿಳಾ ಸೆಕ್ಯೂರಿಟಿ ಗಾರ್ಡ್‌ಗಳಿದ್ದು ಅದರಲ್ಲಿ 419 ಹೋಮ್‌ ಗಾರ್ಡ್ಸ್, 44 ಕೆಎಸ್‌ಐಎಸ್‌‌ಎಫ್‌ ಹಾಗೂ 628 ಹೊರಗುತ್ತಿಗೆ ಸೆಕ್ಯೂರಿಟಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಬೆಳಿಗ್ಗೆ ಕೆಲಸಕ್ಕೆ ಕಾಲಿಟ್ಟರೆ ಮುಗಿಯುವವರೆಗೂ ನಿಂತುಕೊಂಡು ಕಾರ್ಯ ನಿರ್ವಹಿಸುವ ಮಹಿಳೆಯರಿಗೆ ನಿಜಕ್ಕೂ ಸಲಾಂ ಹೊಡೆಯಬೇಕು. ಮೊದಲ ಬಾರಿಗೆ ಮೆಟ್ರೊದಲ್ಲಿ ಪ್ರಯಾಣಿಸುವವರು ಮಹಿಳಾ ಸಿಬ್ಬಂದಿ ಹಾಗೂ ಮಹಿಳಾ ಲೋಕೊ ಪೈಲಟ್‌, ಟಾಮ್ ಆಪ್‌‌ರೇಟರ್‌ಗಳನ್ನು (ಟಿಕೆಟ್‌ ನೀಡುವವರು) ನೋಡಿದಾಗ ಅಚ್ಚರಿಯಿಂದ ‘ಮೆಟ್ರೊದ ಎಲ್ಲಾ ವಿಭಾಗಗಳಲ್ಲಿ ಮಹಿಳೆಯರು ಕೆಲಸ ಮಾಡುತ್ತಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. 

ಲೋಕೊ ಪೈಲಟ್‌ಗಳಾಗಿ (ರೈಲು ಚಾಲಕರು) 79 ಮಹಿಳೆಯರು ಕಾರ್ಯ ನಿರ್ವಹಿಸುತ್ತಿದ್ದು, ನಿಲ್ದಾಣ ನಿರ್ವಹಣೆಯಲ್ಲಿ 124 ಮಹಿಳೆಯರು ಇದ್ದಾರೆ. 274 ಟಾಮ್ ಆಪ್‌ರೇಟರ್ಸ್‌ಗಳು ಹೊರಗುತ್ತಿಗೆಯ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ. ‌ನಮ್ಮಲ್ಲಿರುವ ಕೆಲವು ಕೊಳಕು ನಿಯಮಗಳಿಗೆ ಮಹಿಳೆಯರು ಕೂಡ ಅಂಟಿಕೊಂಡಿದ್ದಾರೆ. ಕೆಲಸಗಳಲ್ಲಿ ಇದು ಗಂಡಸು ಮಾಡುವ ಕೆಲಸ, ಇದು ಹೆಂಗಸು ಮಾಡುವ ಕೆಲಸ ಎಂದು ಸಮಾಜದಲ್ಲಿ ಕಟ್ಟಿಕೊಟ್ಟ ನಿಯಮಗಳನ್ನು ಅನುಸರಿಸುವವರು ಇಂದು ನಮ್ಮನ್ನು ನೋಡಿ ಕಲಿಯಬೇಕು. ಮನೆಗಳಲ್ಲಿ ಸೆಕ್ಯೂರಿಟಿ ಕೆಲಸ ಬೇಡ ಎನ್ನುವ ಪುರುಷರು ಕೂಡ ಕೆಲಸದ ವಿಚಾರಗಳ ಬಗ್ಗೆ ತಿಳಿಯಬೇಕಾಗಿದೆ. ಸೆಕ್ಯೂರಿಟಿ ಕೆಲಸ ಎಂದಾಗ ನಾನು ಯಾಕೆ ಆ ಕೆಲಸ ಮಾಡಬೇಕು ಎಂಬುವವರು ಇಂದು ಕೆಲಸ ಕೇಳಿಕೊಂಡು ಬರುತ್ತಿದ್ದಾರೆ ಎನ್ನುತ್ತಾರೆ ಮಹಿಳಾ ಸಿಬ್ಬಂದಿಗಳು.

ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರು ಕೆಲಸ ಮಾಡುತ್ತಾರೆ. ಪುರುಷರ ಸಮಾನವಾಗಿ ನಾವು ಸಹ ಕೆಲಸ ಮಾಡುತ್ತೇವೆ. ಮಹಿಳೆಯರಿಗೆ ಇದು ಆಗದು ಅನ್ನುವ ಮಾತು ಹಳೆಯದು ಈಗೇನಿದ್ದು ಪುರುಷರ ಸಮಾನವಾಗಿ ಮಹಿಳೆ ಕೆಲಸ ಮಾಡುತ್ತಾಳೆ. ಮಾಡಬೇಕು ಅದು ಅರ್ನಿವಾರ್ಯ ಎಂಬುದು ಈ ಗಟ್ಟಿಗಿತ್ತಿಯರ ಮಾತು.

ನಿಯಮ ಉಲ್ಲಂಘಿಸಿದರೆ ಧ್ವನಿ ಕೇಳುತ್ತೆ
ಮೆಟ್ರೊ ನಿಲ್ದಾಣಗಳಲ್ಲಿ ಪುರುಷ ಸಿಬ್ಬಂದಿಗಳು ಹಾಗೂ ಮಹಿಳಾ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಾರೆ. ನಮಗೆ ಪುರುಷ ಸಿಬ್ಬಂದಿಗಳು ಮೆಟ್ರೊ ನಿಯಮಗಳ ಬಗ್ಗೆ ಎಚ್ಚರಿಸಿದಾಗ ನಾವು ಗಮನಿಸುವುದಿಲ್ಲ. ಆದರೆ ಮಹಿಳೆಯರು ಜೋರು ಧ್ವನಿಯಲ್ಲಿ ಕೂಗಿ ಹೇಳಿದಾಗ ಹೆಚ್ಚು ಜಾಗೃತರಾಗುತ್ತೇವೆ. ಅದಕ್ಕೆ ಕಾರಣ ಅವರ ಧ್ವನಿ ಹಾಗೂ ಕೆಲಸದ ಮೇಲಿರುವ ಕಾಳಜಿ. ಒಬ್ಬ ಪುರುಷ ಸಿಬ್ಬಂದಿ ಪುರುಷ ಪ್ರಯಾಣಿಕರಿಕೆ ನಿಯಮ ಉಲ್ಲಂಘಿಸುವಾಗ ಧ್ವನಿ ಮಾಡಿ ಹೇಳಿದಾಗ ಅದು ನಮಗೆ ಪರಿಣಾಮಕಾರಿ ಎನಿಸುವುದಿಲ್ಲ. ಆದರೆ ಮಹಿಳಾ ಸಿಬ್ಬಂದಿಗಳು ಕೂಗಿದಾಗ ಅದು ಮುಜುಗರ ಉಂಟು ಮಾಡುವ ಮೂಲಕ ಎಚ್ಚರಿಕೆ ನೀಡುತ್ತದೆ ಎನ್ನುತ್ತಾರೆ ಮೆಟ್ರೊದಲ್ಲಿ ಪ್ರಯಾಣಿಸುವ ಪುರುಷರು.

**

ಮಹಿಳೆಯರು ಇಂಥದ್ದೇ ಕೆಲಸ ಮಾಡಬೇಕು ಅನ್ನುವ ಯಾವ ನಿಯಮಗಳು ಇಲ್ಲ, ಎಲ್ಲ ಕೆಲಸ ಮಾಡಬಹುದು 
-ಮಹಿಳಾ ಸಿಬ್ಬಂದಿ

*

ಸೆಕ್ಯೂರಿಟಿ ಕೆಲಸ ನಮಗೆ ಮಾಡಲು ಆಗುವುದಿಲ್ಲ ಎಂದ ಹಿಂದೆ ಸರಿಯುವುದಿಲ್ಲ, ಸವಾಲಗಿ ಸ್ವೀಕರಿಸಿ ಕೆಲಸ ಮಾಡುತ್ತೇವೆ
-ಮಹಿಳಾ ಸಿಬ್ಬಂದಿ

*

ಮಹಿಳೆಯರು ಸೆಕ್ಯೂರಿಟಿಯಾಗಿ ಕೆಲಸ ಮಾಡಲು ಮುಂದೆ ಬರುತ್ತಾರೆ ಎಂದರೆ ನಿಜಕ್ಕೂ ಅವರ ದೈರ್ಯಕ್ಕೆ ಮೆಚ್ಚಬೇಕು
-ಮಂಜುನಾಥ್‌ ಡಿ.ವಿ, ಪ್ರಯಾಣಿಕ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !