ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗದ ನವಸಂಸ್ಕೃತಿಯ ‘ರೂಪಾಂತರ’

ಅಂಕದ ಪರದೆ
Last Updated 18 ಜೂನ್ 2014, 19:30 IST
ಅಕ್ಷರ ಗಾತ್ರ

ಸಾಂಪ್ರದಾಯಿಕ ರಂಗ ತರಬೇತಿ, ಶಿಕ್ಷಣದ ಹಂಗಿಲ್ಲದ ರಂಗಧ್ಯಾನಿಗಳು ಕಟ್ಟಿದ ತಂಡ ರೂಪಾಂತರ. ಕಾರ್ಮಿಕರು, ಅಧಿಕಾರಿಗಳು, ಎಂಜಿನಿಯರ್‌ಗಳು, ಹೋಟೆಲ್ ಮಾಲಿಗಳು ಸರ್ಕಾರಿ ಮತ್ತು ಖಾಸಗಿ ನೌಕರರು, ಗೃಹಿಣಿಯರು, ಇನ್ನೂ ಮದುವೆಯಾಗದ ಹೆಣ್ಣುಮಕ್ಕಳು ಹೀಗೆ ಎಲ್ಲಾ ಸ್ತರಗಳ ಮಂದಿ ರೂಪಾಂತರದ ಸೂರಿನಡಿ ಇದ್ದರು. ಆದರೆ ಎಲ್ಲರದೂ ಒಂದೇ ಧ್ಯಾನ... ನಾಟಕ.

೧೯೮೯ರಲ್ಲಿ ಯುವ ರಂಗ ನಿರ್ದೇಶಕರ ನಾಟಕೋತ್ಸವದಲ್ಲಿ ಸಿನಿಮಾ/ಕಿರುತೆರೆ ನಿರ್ದೇಶಕ ಅಮರದೇವ ನಿರ್ದೇಶಿಸಿದ ‘ರೊಟ್ಟಿ’ ನಾಟಕ (ಮೂಲ ಕತೆ: ಪಿ.ಲಂಕೇಶ್)ದಲ್ಲಿ ಪಾತ್ರ ವಹಿಸಿದ ಯುವಕರ ಗುಂಪೇ ಒಟ್ಟಾಗಿ ಕಟ್ಟಿಕೊಂಡ ತಂಡ ‘ರೂಪಾಂತರ’.

ಮಹತ್ವಾಕಾಂಕ್ಷೆಯೊಂದಿಗೆ ಇಟ್ಟ ಹೆಜ್ಜೆಗೆ ಈಗ ೨೫ರ ತುಂಬು ಸಂಭ್ರಮ. ಆಡಿದ ಪ್ರತಿ ನಾಟಕವೂ ಕನ್ನಡ ಸಾಹಿತ್ಯ ಲೋಕ ಸ್ಮರಿಸುವಂತಹ ಕೃತಿಯ ರೂಪಾಂತರವೇ! ತಂಡದ ಹೆಸರಿಗೆ ಅನ್ವರ್ಥಕ ಸಾಧನೆ. ಎರಡೂವರೆ ದಶಕಗಳ ರಂಗಯಾತ್ರೆಯಲ್ಲಿ ರೂಪಾಂತರ ಕತೆ, ಕಾವ್ಯ, ಕಾದಂಬರಿಗಳಿಗೆ ನಾಟಕದ ರೂಪ ಕೊಟ್ಟಿದೆ. ರೂಪಾಂತರದ ಗರಡಿಯಲ್ಲಿ ಪಳಗಿದ, ಬೆಳಗಿದ ಕಲಾವಿದರು, ನಿರ್ದೇಶಕರು ಇಂದು ಕಿರುತೆರೆ ಮತ್ತು ಚಿತ್ರರಂಗದಲ್ಲಿ ನಟನೆ, ನಿರ್ದೇಶನದಲ್ಲಿ ಹೆಸರು ಮಾಡಿರುವುದು ಗಮನಾರ್ಹ.
ಪ್ರಸ್ತುತ ತಂಡದ ಅಧ್ಯಕ್ಷರಾಗಿರುವುದು ಕೆಪಿಟಿಸಿಎಲ್‌ನಲ್ಲಿ ಎಂಜಿನಿಯರ್‌ ಆಗಿರುವ ಆರ್.ನರೇಂದ್ರಬಾಬು. ವಿಶಿಷ್ಟ ಕಂಠದ ಮೂಲಕ ನಿರೂಪಣೆ, ಸಾಕ್ಷ್ಯಚಿತ್ರ, ಕಂಠದಾನ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡವರು ಅವರು.

ಎಲ್ಲರೂ, ಎಲ್ಲೆಲ್ಲೂ ಸಲ್ಲುವ ವಿಶೇಷ
ಈ ತಂಡದ ಸದಸ್ಯರ ಬಗ್ಗೆ ಹೇಳಲೇಬೇಕಾದ ಮಾತೊಂದಿದೆ. ನಿರ್ದೇಶನ, ನಟನೆ, ರಂಗಸಜ್ಜಿಕೆ, ಪ್ರಸಾಧನ, ಪ್ರಚಾರ ಹೀಗೆ ನಾಟಕವಾಡುವ ಹಿಂದುಮುಂದಿನ ಪ್ರತಿ ಹಂತದಲ್ಲೂ ಪ್ರತಿಯೊಬ್ಬರೂ ಸಕ್ರಿಯರಾಗಿರುವುದು ಮತ್ತು ಅದು ತಂಡದ ನಿಯಮವೂ ಆಗಿರುವುದು.

‘ನಮ್ಮ ಯಾವುದೋ ಪ್ರದರ್ಶನದಲ್ಲಿ ಪ್ರಮುಖ ಭೂಮಿಕೆಯಲ್ಲಿರುವ ಕಲಾವಿದ ರಂಗಕ್ಕೆ ಬರಬೇಕಾದ ಅಂತಿಮ ಕ್ಷಣದವರೆಗೂ ನೇಪಥ್ಯದಲ್ಲಿ ಯಾವುದೋ ಕೆಲಸದಲ್ಲಿ ತಲ್ಲೀನನಾಗಿರುತ್ತಾನೆ. ಅವನ ಪಾತ್ರ ಪ್ರವೇಶವಾಗುವ ಹೊತ್ತಿಗೆ ತಯಾರಾಗಿ ಮುನ್ನೆಲೆಗೆ ಬರುತ್ತಾನೆ. ಅಂದರೆ ಪ್ರತಿಯೊಬ್ಬರಿಗೆ ಪ್ರತಿಯೊಂದು ಕೆಲಸವೂ ಬರುತ್ತದೆ. ಇದು ನಮ್ಮ ತಂಡದ ಶಿಸ್ತು ಅಥವಾ ನಿಯಮ’ ಎನ್ನುತ್ತಾರೆ ತಂಡದ ಸ್ಥಾಪಕ ಸದಸ್ಯ ಕೆ.ಎಸ್.ಡಿ.ಎಲ್. ಚಂದ್ರು.

ಅಪರೂಪದ ಸಾಹಿತ್ಯ ಕೃತಿಗಳನ್ನು ರಂಗಕ್ಕೆ ಪ್ರಯೋಗಿಸಿದ ಹೆಗ್ಗಳಿಕೆ ರೂಪಾಂತರದ್ದು. ಕನ್ನಡದ ಕಾವ್ಯ, ಕಥೆ, ಕಾದಂಬರಿಗಳನ್ನು ರಂಗದಲ್ಲಿ ಸಾಕ್ಷಾತ್ಕಾರಗೊಳಿಸಿದ ರೂಪಾಂತರ ಕುವೆಂಪು, ಪಿ.ಲಂಕೇಶ್‌, ಪೂರ್ಣಚಂದ್ರ ತೇಜಸ್ವಿ, ಕುಂ.ವೀರಭದ್ರಪ್ಪ, ಡಾ.ಕೆ.ಶಿವರಾಮ ಕಾರಂತ, ಡಾ.ಶಾಂತರಸ, ಸಂತ ಕವಿ ಕನಕದಾಸ, ಖುಷ್ವಂತ್‌ ಸಿಂಗ್‌, ಪ್ರಭಾಕರ ಶಿಶಿಲ ಮುಂತಾದವರ ಕಥಾನಕಗಳನ್ನು ರಂಗದ ಮೇಲೆ ಮರುಸೃಷ್ಟಿಸುವ ಮೂಲಕ ಕನ್ನಡದ ರಂಗಪ್ರೇಮಿಗಳಿಗೆ ನಾಟಕ ವೀಕ್ಷಣೆಯನ್ನು ಸಂಭ್ರಮವಾಗಿಸಿತು.

ಕೆಎಸ್‌ಡಿಎಲ್‌ ಚಂದ್ರು ಅವರು ಹಲವಾರು ಕೃತಿಗಳನ್ನು ನಾಟಕವಾಗಿಸಿ ನಿರ್ದೇಶಿಸಿ ಪ್ರದರ್ಶಿಸಿದ್ದು ಗಮನಾರ್ಹ. ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಂಪೆನಿ ಕೆಎಸ್‌ಡಿಎಲ್‌ನ ನೌಕರರಾಗಿರುವ ಚಂದ್ರು ಕಾಲೇಜು ರಂಗಭೂಮಿ, ಕಾರ್ಮಿಕ ರಂಗಭೂಮಿ ಮತ್ತು ಹವ್ಯಾಸಿ ರಂಗಭೂಮಿಯಲ್ಲಿ ಮಹತ್ವದ ನಿರ್ದೇಶಕ, ನಟ, ಸಂಘಟಕರಾಗಿ ಗುರುತಿಸಿಕೊಂಡವರು.  ಕೊಕ್ಕೆ (ಎಂ.ಬಿ.ನಟರಾಜ್), ಹೆಜ್ಜೆಗಳು (ಡಾ.ಎಚ್.ಎಸ್.ವೆಂಕಟೇಶಮೂರ್ತಿ), ಮಳೆಬೀಜ (ಬಸವರಾಜ ಸೂಳೇರಿಪಾಳ್ಯ), ಕರ್ವಾಲೊ (ಕೆ.ಪಿ.ಪೂರ್ಣಚಂದ್ರ ತೇಜಸ್ವಿ), ಮುಸ್ಸಂಜೆ ಕಥಾ ಪ್ರಸಂಗ (ಪಿ.ಲಂಕೇಶ್), ಮೈಮನಗಳ ಸುಳಿಯಲ್ಲಿ (ಡಾ.ಕೆ.ಶಿವರಾಮ ಕಾರಂತ), ಬಡೇಸಾಬು ಪುರಾಣ (ಡಾ.ಶಾಂತರಸ), ಗಲ್ಬಸ್ಕಿ (ಕಾಫಿ ರಾಘವೇಂದ್ರ), ಯಹೂದಿ ಹುಡುಗಿ (ಇಟಗಿ ಈರಣ್ಣ), ರಾಮಧಾನ್ಯ (ಕನಕದಾಸ), ಟ್ರೈನ್ ಟು ಪಾಕಿಸ್ತಾನ್ (ಖುಷ್ವಂತ್ ಸಿಂಗ್), ಕರಿಸಿದ್ಧ (ಕುವೆಂಪು), ಚಕ್ರರತ್ನ (ಡಾ.ಕೆ.ವೈ.ನಾರಾಯಣಸ್ವಾಮಿ) ಅವರ ನಿರ್ದೇಶನದ ನಾಟಕಗಳು.

ಕೌಟುಂಬಿಕ ವಾತಾವರಣ
ಇಪ್ಪತ್ತೈದು ವರ್ಷಗಳ ದೀರ್ಘಾವಧಿಯಲ್ಲಿ ದೊಡ್ಡ ತಂಡವೊಂದನ್ನು ಸಾಂಘಿಕವಾಗಿ ನಡೆಸುವುದು ಸವಾಲೇ ಸರಿ. ‘ರೂಪಾಂತರ’ ಅದರಲ್ಲಿ ಗೆದ್ದಿರುವುದಕ್ಕೆ ಅವರ ಕೆಲಸದಲ್ಲಿನ ಶಿಸ್ತು ಕಾರಣ. ‘ರೂಪಾಂತರ’ವೆಂಬುದು ಒಂದು ಕುಟುಂಬವಾಗಿ, ಪ್ರತಿ ಸದಸ್ಯನೂ ಕುಟುಂಬದ ಶಕ್ತಿ ಎಂಬ ಗೌರವಕ್ಕೆ ಪಾತ್ರನಾಗಿರುವುದು ಯಶಸ್ಸಿನ ಮತ್ತೊಂದು ಗುಟ್ಟು. ವಿಶೇಷವಾಗಿ ಹೆಣ್ಣುಮಕ್ಕಳಿಗೆ ಪುರುಷರ ಗುಂಪಿನಲ್ಲಿ ಸುರಕ್ಷಿತ ಭಾವನೆ ಬಂದರಷ್ಟೇ ಅವರು ಬಹುದಿನ ಅಲ್ಲಿ ಬಾಳುತ್ತಾರೆ. ಅವರ ಮನೆ ಮಂದಿಯಿಂದ ಪ್ರೋತ್ಸಾಹ ಸಿಗುವುದೂ ಆಗಲೇ.
‘ರೂಪಾಂತರದ ವೈಶಿಷ್ಟ್ಯವೇ ಅದು. ನಮ್ಮ ನಾಟಕ ಪ್ರದರ್ಶನ ಮುಗಿಯುತ್ತಲೇ ನಗರದೊಳಗೇ ಆಗಲಿ ಹೊರಭಾಗದಲ್ಲೇ ಆಗಲಿ ಹೆಣ್ಣುಮಕ್ಕಳನ್ನು ಮತ್ತು ಗಂಡುಮಕ್ಕಳನ್ನು ಅವರವರ ಮನೆಗಳಿಗೆ ಸುರಕ್ಷಿತವಾಗಿ ತಲುಪಿಸುವ ಜವಾಬ್ದಾರಿಯನ್ನು ನಾವು ಒಂದಿಷ್ಟು ಮಂದಿ ವಹಿಸಿಕೊಳ್ಳುತ್ತೇವೆ’ ಎಂದು ವಿವರಿಸುತ್ತಾರೆ ಚಂದ್ರು.

‘ಇಲ್ಲಿವರೆಗೂ ನಾವು ನಮ್ಮ ಯಾವುದೇ ನಾಟಕ ಪ್ರದರ್ಶನಕ್ಕೆ ಹೊರಗಿನಿಂದ ಹಣಕಾಸಿನ ನೆರವು, ವಂತಿಗೆ ಕೇಳಿದ್ದು ಕಡಿಮೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಾರ್ಷಿಕ ಅನುದಾನವನ್ನು ಹೊರತುಪಡಿಸಿದರೆ ಒಂದೋ ನಾವು ಮತ್ತು ನಮ್ಮ ಸ್ನೇಹಿತರ ಬಳಗ ಹಣ ಹೊಂದಿಸುತ್ತದೆ. ತಪ್ಪಿದರೆ ನಮ್ಮ ನಾಟಕ ಪ್ರದರ್ಶನಗಳನ್ನು ಮೆಚ್ಚಿ ನಮಗೆ ಬಹುಮಾನ ರೂಪವಾಗಿ ಬರುವ ಮೊತ್ತದಿಂದಲೇ ನಮ್ಮ ಯೋಜನೆಗಳನ್ನು, ಹೊಸ ನಾಟಕಗಳನ್ನು  ರೂಪಿಸುತ್ತೇವೆ’ ಎನ್ನುತ್ತಾರೆ ಅವರು.

ರಂಗ ಸಂಸ್ಕೃತಿಯಾಚೆಗೂ...

ರೂಪಾಂತರ ಬರಿಯ ರಂಗಪ್ರಯೋಗಗಳಿಗೆ ಸೀಮಿತವಾಗಿಲ್ಲ. ರಂಗ ದಿಗ್ಗಜರಿಗೆ ರಂಗ ಗೌರವ, ಸಂವಾದ, ಪರಿಸರ ಜಾಗೃತಿ, ರೂಪಾಂತರ ಪ್ರಕಾಶನದ ಮೂಲಕ ಪುಸ್ತಕ ಬಿಡುಗಡೆ ಮತ್ತಿತರ ಕಾರ್ಯಕ್ರಮಗಳನ್ನು ರೂಪಿಸಿದೆ, ಅಕ್ಕಮಹಾದೇವಿಯ ವಚನಗಳು ಮತ್ತು ರಾಜಾ ವಿಕ್ರಮ ಎಂಬ ಹರಿಕತೆಯ ಧ್ವನಿಸಾಂದ್ರಿಕೆಯನ್ನು ನಿರ್ಮಿಸಿ ಬಿಡುಗಡೆ ಮಾಡಿದೆ. ಇದೀಗ ರಂಗಸಂಸ್ಕೃತಿಯಿಂದ ಪುಸ್ತಕ ಸಂಸ್ಕೃತಿಯೆಡೆಗೆ ತಂಡ ಹೆಜ್ಜೆ ಇಡುತ್ತಿದೆ. ನಮ್ಮದೇ ಪ್ರಕಾಶನದ ಮೂಲಕ ಇಟಗಿ ಈರಣ್ಣ ಅವರ ಕನ್ನಡದ ಶಾಯಿರಿಗಳು ಮತ್ತು ‘ಕತ್ತಲನು ಯಶಸ್ಸಿನ ತ್ರಿಶೂಲ ಹಿಡಿದ ಕತೆ’ ಎಂಬ ಕರಿಬವಯಸಯ್ಯ ಅಭಿನಂದನಾ ಗ್ರಂಥವನ್ನು ಹೊರತರಲಿದೆ. ಆರಂಭದಿಂದ ಇಲ್ಲಿಯವರೆಗೂ ಪ್ರದರ್ಶಿಸಿದ ನಾಟಕಗಳ ಛಾಯಾಚಿತ್ರಗಳ ಸಂಗ್ರಹದಂತಹ ಡಾಕ್ಯುಮೆಂಟೇಶನ್ ಕೆಲಸ ಮಾಡಿರುವುದು ಗಮನಾರ್ಹ.
– ಆರ್‌.ನರೇಂದ್ರಬಾಬು, ಅಧ್ಯಕ್ಷರು, ರೂಪಾಂತರ

ಅದು ನನ್ನ ತವರು
‘ರೂಪಾಂತರ’ ನನ್ನ ಪಾಲಿಗೆ ತವರುಮನೆ ಇದ್ದಂತೆ. ಮದುವೆಯಾಗಿ ಎಷ್ಟೇ ವರ್ಷ ಕಳೆದರೂ ತವರಿಗೆ ಬರುವುದು ಹೆಣ್ಣುಮಕ್ಕಳ ಪಾಲಿಗೆ  ಸಂಭ್ರಮವೇ ಅಲ್ವೇ? ರೂಪಾಂತರ ನನ್ನ ಪಾಲಿಗೆ ಅಂತಹ ಅನುಭವವನ್ನು ಕಟ್ಟಿಕೊಟ್ಟಿದೆ. ಕಿರುತೆರೆ ಅಥವಾ ಸಿನಿಮಾ ರಂಗಕ್ಕೆ ಹೋಗಬೇಕೆಂದು ಬಯಸುವ ಕಲಾವಿದರಿಗೆ ರಂಗಭೂಮಿ ಪ್ರಾಥಮಿಕ ಶಾಲೆ ಇದ್ದಂತೆ. ಅಲ್ಲಿ ಪಳಗಿದವರು ಎಲ್ಲೇ ಆದರೂ ನಟನೆಯಲ್ಲಿ, ನಿರ್ದೇಶನದಲ್ಲಿ ಸೋಲುವುದಿಲ್ಲ.
–ರಂಜಿತಾ ಸೂರ್ಯವಂಶಿ, ರೂಪಾಂತರದ ಸ್ಥಾಪಕ ಸದಸ್ಯೆ, ಕಿರುತೆರೆ ನಟಿ.

ಅಸಾಮಾನ್ಯ ಪ್ರತಿಭೆ ಕರಿಬಸವಯ್ಯ

ಹಾಸ್ಯ, ಗಂಭೀರ ಮತ್ತು ಖಳನಾಯಕನ ಪಾತ್ರಗಳ ಮೂಲಕ ಕನ್ನಡ ನಾಡಿನಲ್ಲಿ ಮನೆ ಮಾತಾಗಿದ್ದ ಕರಿಬಸವಯ್ಯ ‘ರೂಪಾಂತರ’ದ ಹೆಮ್ಮೆಯ ಕೊಡುಗೆ.ಅವರು ಬಣ್ಣದ ಲೋಕ ಪ್ರವೇಶಿಸಿದ್ದು ಇದೇ ತಂಡದ ಯಶಸ್ವಿ ಪ್ರಯೋಗವಾದ ‘ಕತ್ತಲನು ತ್ರಿಶೂಲ ಹಿಡಿದ ಕತೆ’ ನಾಟಕದ ಮೂಲಕ. ಅದರಲ್ಲಿನ ಅಮೋಘ ನಟನೆ ಅವರನ್ನು ಬೆಳ್ಳಿತೆರೆ ಮತ್ತು ಕಿರುತೆರೆಯಲ್ಲಿ ದಂಡಿ ದಂಡಿ ಅವಕಾಶಗಳನ್ನು ಸೃಷ್ಟಿಸಿತ್ತು. ಕರಿಬಸವಯ್ಯ ಸ್ಮರಣಾರ್ಥ ಕಳೆದೆರಡು ವರ್ಷಗಳಿಂದ ರಂಗಭೂಮಿಯ ಸಾಧಕರಿಗೆ ೧೦ ಸಾವಿರ ರೂಪಾಯಿ ಮೊತ್ತದ ‘ಕೆಬಿ ರಂಗಪುರಸ್ಕಾರ’ವನ್ನು ರೂಪಾಂತರ ನೀಡುತ್ತಿದೆ.

ಪ್ರಮುಖ ನಾಟಕಗಳು
ರೊಟ್ಟಿ, ಅಬಚೂರಿನ ಪೋಸ್ಟಾಫೀಸ್, ಕತ್ತಲನು ತ್ರಿಶೂಲ ಹಿಡಿದ ಕತೆ, ತಲೆದಂಡ, ಗುಣಮುಖ, ಕೊಕ್ಕೆ, ಕಿರಗೂರಿನ ಗಯ್ಯಾಳಿಗಳು, ಕರ್ವಾಲೊ, ಮುಸ್ಸಂಜೆಯ ಕಥಾಪ್ರಸಂಗ, ಮಳೆಬೀಜ, ಮೈಮನಗಳ ಸುಳಿಯಲ್ಲಿ, ಗಾಂಧಿ ಜಯಂತಿ, ಬಡೇಸಾಬು ಪುರಾಣ, ಗಲ್ಬಸ್ಕಿ, ಯಹೂದಿ ಹುಡುಗಿ, ರಾಮಧಾನ್ಯ, ಟ್ರೈನ್ ಟು ಪಾಕಿಸ್ತಾನ್, ಬಡೇಸಾಬು ಪುರಾಣ, ಹುಲಿ ಹಿಡಿದ ಕಡಸು (೪೨ ಪ್ರದರ್ಶನ ಕಂಡ ನಾಟಕ ಹಾಗೂ ಮುಂಬೈ ನಾಟಕ ಸ್ಪರ್ಧೆಯಲ್ಲಿ ಸತತ ೩ ವರ್ಷ ಎಂಟು ಪ್ರಶಸ್ತಿ ಗಳಿಸಿದ ನಾಟಕ), ಕಾಡುಮಲ್ಲಿಗೆ, ಪುಂಸ್ತ್ರೀ, ಕರಿಸಿದ್ಧ ಮತ್ತು ಚಕ್ರರತ್ನ.

ಕಿರುತೆರೆ, ಚಿತ್ರರಂಗದಲ್ಲಿ...
ಅಮರದೇವ, ಕೆಎಸ್‌ಡಿಎಲ್ ಚಂದ್ರು, ರಂಜಿತಾ ಸೂರ್ಯವಂಶಿ, ಎನ್.ಟಿ.ರಾಮಸ್ವಾಮಿ, ಹರೀಶ್, ವಾದಿರಾಜ್, ದಿವಂಗತ ಕರಿಬಸವಯ್ಯ, ರಂಜನಿ ರಾಘವನ್, ರಶ್ಮಿ, ಸಿ.ವಿ.ಮಂಜುನಾಥ್, ಉಮಾ.

ರೂಪಾಂತರದ ಬೇರುಗಳು
ಅಮರದೇವ, ಕೆಎಸ್‌ಡಿಎಲ್ ಚಂದ್ರು, ಕನಕರಾಜ್, ವೆಂಕಟಾಚಲ, ಸಿ.ವಿ.ಮಂಜುನಾಥ್, ಗೋಪಿ, ಸಿ.ಗುರುಮೂರ್ತಿ, ಅ.ನಾ.ರಾವ್ ಜಾದವ್, ಸುದರ್ಶನ್, ಆನಂದ ರಾವ್, ಶಿವಕುಮಾರ್, ವಿ.ಎಸ್.ಗಜಾನನ, ಆರ್.ನರೇಂದ್ರಬಾಬು, ಅರುಣಾನಂದ, ಲಕ್ಷ್ಮೀನಾರಾಯಣಗೌಡ, ವಿ.ಗಂಗಾಧರ ಕಡಬೂರು, ಎನ್.ಟಿ.ಪ್ರಸನ್ನಕುಮಾರ್, ಎನ್.ಟಿ.ರಾಮಸ್ವಾಮಿ, ವೆಂಕಟೇಶರಾಜು, ಗೂಳಿಗೌಡ, ಸಿದ್ದೇಗೌಡ, ಜಗನ್ನಾಥ ಶೆಟ್ಟಿ, ಟಿ.ಶ್ರೀನಿವಾಸ್, ರಂಜಿತಾ ಸೂರ್ಯವಂಶಿ, ಉಮಾ ಮತ್ತಿತರರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT