ಬುಧವಾರ, ಅಕ್ಟೋಬರ್ 23, 2019
21 °C
ಗೂಡಂಗಡಿ ಎತ್ತಂಗಡಿ ಎಂಬ ಪ್ರಹಸನ

ನಗೆಪಾಟಲಿಗೀಡಾದ ಕಾರ್ಯಾಚರಣೆ!

Published:
Updated:
Prajavani

ಬಿಬಿಎಂಪಿ ಸಿಬ್ಬಂದಿ ನಗರದಲ್ಲಿ ಈಚೆಗೆ ನಡೆಸಿದ ತೆರವು ಕಾರ್ಯಾಚರಣೆ ವೇಳೆ ಬೀದಿ ಬದಿಯ ನಾಲ್ಕಾರು ಗೂಡಂಗಡಿಗಳನ್ನು ಎತ್ತಿಕೊಂಡು ಹೋಗಿದ್ದರು. ಆಶ್ಚರ್ಯವೆಂದರೆ ಮರುದಿನವೇ ಆ ಸ್ಥಳದಲ್ಲಿ ನಾಲ್ಕು ಗೂಡಂಗಡಿಗಳ ಜತೆ ಹೊಸದಾಗಿ ಮತ್ತೊಂದಿಷ್ಟು ಅಂಗಡಿ ತಲೆ ಎತ್ತಿದ್ದವು!

ವಸಂತ ನಗರದಲ್ಲಿ ಬಿಬಿಎಂಪಿ ಪೂರ್ವ ವಿಭಾಗದ ನಿರ್ವಹಣಾ ಮುಖ್ಯ ಎಂಜಿನಿಯರ್‌ ಪ್ರಸಾದ್ ಮತ್ತು ಅಧಿಕಾರಿಗಳು ಖುದ್ದು ಮುಂದೆ ನಿಂತು ನಡೆಸಿದ ಗೂಡಂಗಡಿ ತೆರವು ಕಾರ್ಯಾಚರಣೆ ಈ ರೀತಿ ನಗೆಪಾಟೀಲಿಗೀಡಾಗಿದೆ.    

ಮುನ್ಸೂಚನೆ ನೀಡದೆ ಏಕಾಏಕಿ ಬೃಹತ್‌ ಯಂತ್ರ, ಲಾರಿ, ಹಾರೆ, ಗುದ್ದಲಿ, ಪಿಕಾಸಿ ಮತ್ತು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಬಂದ ಬಿಬಿಎಂಪಿ ಸಿಬ್ಬಂದಿ ರಸ್ತೆ ಬದಿಯ ಗೂಡಂಗಡಿಗಳನ್ನು ಲಾರಿಯಲ್ಲಿ ಎತ್ತಿ ಹಾಕಿಕೊಂಡು ಹೊರಟು ಹೋಗಿದ್ದರು. 

ಅಂಗಡಿ ಮಾಲೀಕರ ಮನವಿಗೆ ಕಿವಿಗೊಡದ ಅಧಿಕಾರಿಗಳು,‘ಇದು ಬಿಬಿಎಂಪಿಗೆ ಸೇರಿದ ಜಾಗ. ಜಾಗ ಖಾಲಿ ಮಾಡಿಸಲು ಮುಂಚಿತವಾಗಿ ನೋಟಿಸ್‌ ನೀಡುವ ಅಗತ್ಯವಿಲ್ಲ’ ಎಂದು ಗುಡುಗಿದ್ದರು. 

‘ಗುಟ್ಟಳ್ಳಿ ಪ್ಯಾಲೇಸ್‌ ಸರ್ಕಲ್‌ನಿಂದ ವಸಂತ ನಗರಕ್ಕೆ ಹೋಗುವ ರಸ್ತೆಯಲ್ಲಿ ಅರಮನೆ ಆವರಣ ಗೋಡೆಗೆ ಹತ್ತಿಕೊಂಡಿರುವ ಜಾಗದಲ್ಲಿ ಡಬ್ಬಿ ಅಂಗಡಿಗಳು ಮಾತ್ರವಲ್ಲ, ನಗರದ ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿರುವ ಗೂಡಂಗಡಿಗಳನ್ನು ಹಂತ, ಹಂತವಾಗಿ ತೆರವುಗೊಳಿಸಲಾಗುವುದು‘ ಎಂದು ಬಿಬಿಎಂಪಿ ಪೂರ್ವ ವಿಭಾಗದ ನಿರ್ವಹಣಾ ಮುಖ್ಯ ಎಂಜಿನಿಯರ್‌ ಪ್ರಸಾದ್ ‘ಮೆಟ್ರೊ’ಗೆ ತಿಳಿಸಿದ್ದರು.

ನಗೆಗೆ ನೂರಾರು ಅರ್ಥ

ಆಶ್ಚರ್ಯ ಎಂದರೆ, ಬಿಬಿಎಂಪಿ ಸಿಬ್ಬಂದಿ ಲಾರಿಯಲ್ಲಿ ಎತ್ತಿಹಾಕಿಕೊಂಡು ಹೋಗಿದ್ದ ಎಲ್ಲ ಗೂಡಂಗಡಿಗಳು ಮರುದಿನ ಬೆಳಿಗ್ಗೆ ಮೊದಲಿದ್ದ ಜಾಗದಲ್ಲೇ ಯಥಾಸ್ಥಿತಿಯಲ್ಲಿದ್ದವು!

ಬಿಬಿಎಂಪಿ ಅಧಿಕಾರಿಗಳಿಗೆ ಸವಾಲು ಹಾಕುವಂತೆ ಅಂಗಡಿಗಳ ಮಾಲೀಕರು, ತಾತ್ಕಾಲಿಕ ಡಬ್ಬಿ ಅಂಗಡಿಗಳಿಗೆ ಗಾರೆ, ನೆಲಹಾಸು ಹಾಕಿ ಮತ್ತಷ್ಟು ಗಟ್ಟಿ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ, ಜತೆಗೆ ಮತ್ತೊಂದಿಷ್ಟು ಹೊಸ ಅಂಗಡಿಗಳು ತಲೆ ಎತ್ತುತ್ತಿವೆ. 

ಅಧಿಕಾರಿಗಳು ಖುದ್ದು ಮುಂದೆ ನಿಂತು ನಡೆಸಿದ್ದ ತೆರವು ಕಾರ್ಯಾಚರಣೆ ಪ್ರಹಸನವಾಗಿತ್ತೇ? ನೆಪ ಮಾತ್ರಕ್ಕೆ ಕಾರ್ಯಾಚರಣೆ ನಡೆಸಲಾಗಿತ್ತೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. 

ಯಂತ್ರಗಳ ಸದ್ದು, ಅಧಿಕಾರಿಗಳ ಅಬ್ಬರದಲ್ಲಿ ಧ್ವನಿ ಕಳೆದುಕೊಂಡವರಂತೆ ಕಂಡ ಗೂಡಂಗಡಿ ಮಾಲೀಕರು ಈಗ ವಿಜಯದ ನಗೆ ಬೀರುತ್ತಿದ್ದಾರೆ. ಇದರ ರಹಸ್ಯವೇನು ಎಂದು ಪ್ರಶ್ನಿಸಿದರೆ, ‘ಬಿಬಿಎಂಪಿ ಕಚೇರಿಗೆ ತೆರಳಿ ಎಲ್ಲ ಸೆಟಲ್‌ ಮಾಡಿಕೊಂಡು ಬಂದಿದ್ದೇವೆ’ ಕಣ್ಣು ಮಿಟುಕಿಸಿ, ಮುಗಳ್ನಗುತ್ತಾರೆ! ಆ ನಗೆಗೆ ನೂರಾರು ಅರ್ಥಗಳಿವೆ!

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)