ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿಗೆ ‘ಕೊರೊನಾ’ ಅರ್ಥ ಮಾಡಿಸಿ

Last Updated 20 ಮಾರ್ಚ್ 2020, 3:01 IST
ಅಕ್ಷರ ಗಾತ್ರ
ADVERTISEMENT
""

‘ಅಮ್ಮ ಕೊರೊನಾ ಅಂದ್ರೆ ಏನು? ಅದು ಬಂದ್ರೆ ಸತ್ತೇ ಹೋಗುತ್ತೀವಾ? ನನಗೂ ಕೊರೊನಾ ಬರುತ್ತಾ?...’ ಹೀಗೆ ಕೋವಿಡ್‌–19 ವೈರಸ್‌ ಮಕ್ಕಳಲ್ಲೂ ಆತಂಕ ಸೃಷ್ಟಿಸಿದೆ. ಮಕ್ಕಳ ಈ ಗಾಬರಿ ಪೋಷಕರಿಗೂ ಆತಂಕ ತಂದಿದೆ. ಹಾಗಾದರೆ, ಈ ವೈರಸ್ ಸೋಂಕಿನ ಬಗ್ಗೆ ಪೋಷಕರು ಏನೇನು ಮಾಡಬೇಕು. ಮಕ್ಕಳಿಗೆ ಯಾವ ರೀತಿ ಸಲಹೆ ನೀಡಬೇಕು. ಮಕ್ಕಳು ಎಂಥ ಪ್ರಶ್ನೆಗಳನ್ನು ಕೇಳುತ್ತಾರೆ.. ಅವರಿಗೆ ಉತ್ತರಿಸುವುದು ಹೇಗೆ? ಪೋಷಕರ ಇಂಥ ಹಲವು ಪ್ರಶ್ನೆಗಳಿಗೆ ನಗರದ ‘ಐಮನಸ್‌’ ಸಂಸ್ಥೆಯ ಮಕ್ಕಳ ಮನಃಶಾಸ್ತ್ರಜ್ಞೆ ಡಾ.ರಮ್ಯಾ ಮೋಹನ್‌ ನೀಡಿರುವ ಉತ್ತರ ಇಲ್ಲಿದೆ.

* ಮಕ್ಕಳಿಗೆ ಕೊರೊನಾ ಸೋಂಕಿನ ಬಗ್ಗೆ ಅರ್ಥಮಾಡಿಸುವುದು ಹೇಗೆ?
ಪರೀಕ್ಷೆಗಳು ಮುಂದೂಡಲಾಗಿದೆ. ಸಾಮಾಜಿಕ ಜಾಲತಾಣ ಹಾಗೂ ಸುದ್ದಿವಾಹಿನಿಗಳಲ್ಲಿ ಕೊರೊನಾ ಸೋಂಕಿನ ಬಗ್ಗೆ ಸಿಕ್ಕಾಪಟ್ಟೆ ಮಾಹಿತಿ ಪ್ರಸಾರವಾಗುತ್ತಿದೆ. ಇನ್ನೊಂದು ಕಡೆಯಲ್ಲಿ ಸೋಂಕಿತರು ಮತ್ತು ಸಾವಿನ ಸಂಖ್ಯೆಯೂ ಏರುತ್ತಿದೆ.. ಇವೆಲ್ಲ ಒಟ್ಟಿಗೆ ಮಕ್ಕಳನ್ನು ಭೀತಿಗೊಳಿಸಿವೆ. ಹಾಗಾಗಿ ಮೊದಲು ಮಕ್ಕಳಲ್ಲಿರುವ ಭೀತಿ ಹೋಗಲಾಡಿಸಿ. ಅದಕ್ಕೂ ಮುನ್ನ ಮಕ್ಕಳಿಗೆ ಈ ಸೋಂಕಿನ ಬಗ್ಗೆ ಏನೆಲ್ಲ ತಿಳಿವಳಿಕೆ ಇದೆ ಎಂಬುದನ್ನು ಅರಿತುಕೊಳ್ಳಿ.ಮಕ್ಕಳ ಮನಸ್ಸಿನಲ್ಲಿ ಈ ಕಾಯಿಲೆ ಯಾವ ಮಟ್ಟದ ಪ್ರಭಾವ ಬೀರಿದೆ ಹಾಗೂ ಅವರು ತಿಳಿದುಕೊಂಡಿರುವುದು ತಪ್ಪೋ, ಸರಿಯೋ ಎಂಬುದನ್ನು ವಿಶ್ಲೇಷಿಸಿ ಅವರಿಗೆ ತಿಳಿ ಹೇಳಿ.

*ಸದಾ ಕೊರೊನಾ ಚಿಂತೆಯಲ್ಲಿರುವ ಮಕ್ಕಳನ್ನು ನಿಭಾಯಿಸುವುದು ಹೇಗೆ?
ಮೊದಲು ಪೋಷಕರು ಕೊರೊನಾ ಬಗ್ಗೆ ಸಕಾರಾತ್ಮಕವಾಗಿ ಆಲೋಚನೆ ಮಾಡಿ. ಕೊರೊನಾ ಸೋಂಕು ವಿಚಾರದಿಂದ ಈಗ ಆರೋಗ್ಯ ಕಾಳಜಿ ಹೆಚ್ಚಿದೆ. ಈ ಸಮಯವನ್ನೇ ಸದುಪಯೋಗಪಡಿಸಿಕೊಂಡು ಮಕ್ಕಳಿಗೆ ಶುಚಿತ್ವ, ಸ್ವಚ್ಛತೆ, ಸಾಮಾಜಿಕ ಜವಾಬ್ದಾರಿಗಳ ಬಗ್ಗೆ ಅರಿವು ಮೂಡಿಸಬಹುದು. ಈ ಮೂಲಕ ಆರೋಗ್ಯಕರ ಜೀವನಶೈಲಿಗೆ ಅಡಿಪಾಯ ಹಾಕಬಹುದು.

ಮಕ್ಕಳಲ್ಲಿ ಈ ಸೋಂಕಿನ ಬಗ್ಗೆ ಮಾತನಾಡುವ ಮುಂಚೆ ನಾವೂ ಈ ಕಾಯಿಲೆ ಬಗ್ಗೆ ಗಾಬರಿಯಾಗಿದ್ದೇವೆಯೇ? ಭಯ ತುಂಬಿಕೊಂಡಿದ್ದೇವೆಯೇ ಎಂದು ಪೋಷಕರು ತಿಳಿದುಕೊಳ್ಳಬೇಕು. ಒಂದು ವೇಳೆ ನಿಮ್ಮ ಮನಸ್ಸಿನಲ್ಲೇ ಆತಂಕ ಅನುಮಾನಗಳಿದ್ದರೆ ವಿಶ್ವ ಆರೋಗ್ಯ ಸಂಸ್ಥೆ, ಸರ್ಕಾರ ಬಿಡುಗಡೆ ಮಾಡಿರುವ ಆರೋಗ್ಯ ಕುರಿತಾದ ಸಲಹೆ– ಸೂಚನೆಗಳನ್ನು ಓದಿಕೊಂಡು ಮಕ್ಕಳಿಗೆ ಬಿಡಿಸಿ ಹೇಳಬೇಕು. ಪೋಷಕರು ಭಾವನಾತ್ಮಕವಾಗಿ ತಟಸ್ಥವಾಗಿರಬೇಕು. ಊಟ, ತಿಂಡಿ ಮಾಡುವ ಸಂದರ್ಭದಲ್ಲಿ ಮಕ್ಕಳ ಜೊತೆ ಮಾತನಾಡುತ್ತಾ ಅವರು ಆ ದಿನ ಕೊರೊನಾ ಸೋಂಕಿನ ಬಗ್ಗೆ ತಿಳಿದುಕೊಂಡ ಸುದ್ದಿ, ಮಾಹಿತಿ ಬಗ್ಗೆ ಅರಿತು, ಅಲ್ಲಿಯೇ ಅವರ ಅನುಮಾನಗಳನ್ನು ದೂರ ಮಾಡಬೇಕು.

*ಈ ಸಮಯದಲ್ಲಿ ಮಕ್ಕಳನ್ನು ಸಂಭಾಳಿಸುವುದು ಹೇಗೆ?
ಶಾಲೆಗಳಿಗೆ ಅವಧಿಪೂರ್ವವಾಗಿ ರಜೆ ಘೋಷಿಸಿರುವುದರಿಂದ ಮಕ್ಕಳನ್ನು ಮನೆಯಲ್ಲಿ ಸೃಜನಾತ್ಮಕ ಕೆಲಸಗಳಲ್ಲಿ ತೊಡಗಿಸಿಕೊಳ್ಳು ವಂತೆ ಮಾಡಬೇಕು. ದೊಡ್ಡ ಮಕ್ಕಳಾದರೆ ಮನೆಯ ನಿತ್ಯದ ಕೆಲಸಗಳಲ್ಲಿ (ಶುಚಿತ್ವ, ಅಡುಗೆ, ಕೈತೋಟದ ಕೆಲಸ.. ಇತ್ಯಾದಿ) ತೊಡಗಿಸಿಕೊಂಡು, ಆ ಮಕ್ಕಳಿಗೆ ಕೆಲಸ ಕಲಿಸಬಹುದು. ಸಂಗೀತ, ನೃತ್ಯ ಅಭ್ಯಾಸ ಮಾಡಿಸಿ.ಒಂದಷ್ಟು ಹಾಸ್ಯ ಮಾಡಿಕೊಂಡು, ನಗು ನಗುತಾ ಕಾಲ ಕಳೆಯಬಹುದು. ಹೀಗೆ ಮಾಡುವುದರಿಂದ ತನ್ನಿಂದ ತಾನೇ ಮಕ್ಕಳು ಮನಸ್ಸನ್ನು ಆಟ- ಚಟುವಟಿಕೆ ಕಡೆಗೆ ತಿರುಗಿಸುತ್ತಾರೆ. ರೋಗದ ಬಗ್ಗೆ ಭಯವೂ ಹೋಗುತ್ತದೆ.

**

ಪ್ರಯಾಣ ಮಾಡುವಾಗ ವಹಿಸಬೇಕಾದ ಎಚ್ಚರಿಕೆ, ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಪ್ರಸ್ತುತ ಸನ್ನಿವೇಶವನ್ನು ಹೇಗೆ ನಿಭಾಯಿಸಬೇಕು? ಸಾರ್ವಜನಿಕ ಸ್ಥಳಗಳಲ್ಲಿ ಕೆಮ್ಮು, ಸೀನು ಬಂದಾಗ ಏನು ಮಾಡಬೇಕು? ಆರೋಗ್ಯಕರ ಆಹಾರ ಸೇವನೆ, ಸರಿಯಾದ ನಿದ್ದೆ ಮಹತ್ವವನ್ನು ಮಕ್ಕಳಿಗೆ ಹೇಳಿಕೊಡಲು ಪೋಷಕರಿಗೆ ಇದು ಸರಿಯಾದ ಸಮಯ. ಮಕ್ಕಳ ಮನಸ್ಸಿಗೆ ಭಯ ಮೂಡದಂತೆ ಸಮಾಧಾನವಾಗಿ ಮಾತನಾಡಬೇಕು
–ಡಾ. ರಮ್ಯಾ ಮೋಹನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT