ಶುಕ್ರವಾರ, ಡಿಸೆಂಬರ್ 13, 2019
26 °C

ಖುಷಿಯಾಗಿದ್ದರೆ ಬದುಕೇ ಸಿಹಿ!

ಸುಮನಾ ಕೆ. Updated:

ಅಕ್ಷರ ಗಾತ್ರ : | |

ಮಧುಮೇಹ ರೋಗಿಗಳಿಗೆ ಪೌಷ್ಟಿಕ ಆಹಾರ ಸೇವನೆ ಮತ್ತು ದೈಹಿಕ ಚಟುವಟಿಕೆಗಳು ಬಹುಮುಖ್ಯ. ಸರಿಯಾದ ಆಹಾರ ಸೇವನೆ ಹಾಗೂ ಹೆಚ್ಚು ವ್ಯಾಯಾಮಗಳು ರಕ್ತದ ಗ್ಲುಕೋಸ್ ಮಟ್ಟವನ್ನು ನಿರ್ವಹಣೆ ಮಾಡುವಲ್ಲಿ ನೆರವಾಗುತ್ತವೆ. ಡಯಾಬಿಟಿಸ್ ರೋಗಿಗಳು ಆಹಾರದ ಪ್ರಮಾಣ, ಸೇವನೆ ಸಮಯ ಹಾಗೂ ಎಷ್ಟು ಚಟುವಟಿಕೆಯಿಂದ ಇರುತ್ತೀರಿ ಎಂಬುದರ ಬಗ್ಗೆ ಸದಾ ಎಚ್ಚರಿಕೆ ವಹಿಸಬೇಕು ಎಂದು ಹೇಳುತ್ತಾರೆ ಜಯನಗರದ ಪ್ರಮೇಯಾ ಹೆಲ್ತ್‌ ಕನ್ಸಲ್ಟೆಂಟ್‌ನ ಆಹಾರ ತಜ್ಞೆ ಡಾ. ಲಲಿತಾ ಪ್ರಿಯಾ.

ಮಧುಮೇಹಿಗಳು ನೀರು, ನಾರಿನಾಂಶ ಹೆಚ್ಚು ಇರುವ ಆಹಾರ ಹೆಚ್ಚು ಸೇವಿಸಬೇಕು. ಹಾಗೇ ಹಣ್ಣುಗಳ ಜ್ಯೂಸ್‌ ಬದಲಾಗಿ ಅವುಗಳನ್ನು ಅಗಿದು ನುಂಗಬೇಕು.ನಾರಿನಾಂಶ ರಕ್ತದ ಗ್ಲೂಕೋಸ್‌ ಮಟ್ಟ ನಿಯಂತ್ರಣದಲ್ಲಿಡಲು ಸಹಕಾರಿ ಎಂದು ಅವರು ಸಲಹೆ ನೀಡುತ್ತಾರೆ. ವ್ಯಾಪಕವಾಗಿರುವ ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸುವ ಬಗ್ಗೆ ವೈದ್ಯರು ಏನು ಹೇಳುತ್ತಾರೆ ಅವರ ಮಾತಲ್ಲೇ ಕೇಳಿ.

ಕಾರ್ಬೋಹೈಡ್ರೇಟ್‌ ಆಹಾರ ಬೇಡ

ಅನುವಂಶಿಯವಾಗಿ ಮಧುಮೇಹ ಬಂದಿದ್ದಾಗ ಅದನ್ನು ಪೂರ್ಣ ಗುಣಪಡಿಸಲಾಗುವುದಿಲ್ಲ. ಆಗ ಡಯಟ್, ಪೌಷ್ಟಿಕತೆ, ವ್ಯಾಯಾಮ ಮತ್ತು ದೈಹಿಕ ಚಟುವಟಿಕೆಗಳ ಮೂಲಕ ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ದೇಹದಲ್ಲಿನ ಕೊಬ್ಬು ಕೂಡ ಕಾಯಿಲೆ ಉಲ್ಬಣಿಸಲು ಕಾರಣ.  ಅಲ್ಲದೇ ಹೃದಯ ಸಂಬಂಧಿ ಕಾಯಿಲೆಯನ್ನೂ ತರಬಹುದು. ಹಾಗಾಗಿ ದೇಹದ ತೂಕ ಹೆಚ್ಚಾಗದಂತೆ ಜಾಗ್ರತೆ ವಹಿಸಬೇಕು.

ಇದನ್ನೂ ಓದಿ: ಮೂಕ ಹಂತಕ ಮಧುಮೇಹ

ಭಾರತೀಯ ಆಹಾರ ಪದ್ಧತಿಯಲ್ಲಿ ಕಾರ್ಬೋಹೈಡ್ರೇಟ್‌ ಆಹಾರ ಹೆಚ್ಚು. ಅಕ್ಕಿ, ರಾಗಿ, ಗೋಧಿ ಕಾರ್ಬೋಹೈಡ್ರೇಟ್‌ ಆಹಾರಗಳು. ಇವು ಮಧುಮೇಹವನ್ನು ಜಾಸ್ತಿ ಮಾಡುತ್ತದೆ. ಹಾಗಾಗಿ ಆಹಾರದಲ್ಲಿ ಸಲಾಡ್‌, ಪಲ್ಯ, ಕಾಳುಗಳು ಹೆಚ್ಚು ಇರುವಂತೆ ನೋಡಿಕೊಳ್ಳಬೇಕು. ಆಲಿವ್ ಆಯಿಲ್ ಮತ್ತು ಮೀನಿನ ಎಣ್ಣೆ ಸೇವನೆಯಿಂದ ಗ್ಲೂಕೋಸ್ ಜೀರ್ಣಶಕ್ತಿ ಸುಧಾರಿಸುತ್ತದೆ ಮತ್ತು ಟೈಪ್ 2 ಡಯಾಬಿಟಿಸ್ ಅಪಾಯವನ್ನು ಕಡಿಮೆ ಮಾಡುತ್ತವೆ. ಸೋಡಿಯಂ, ಪೊಟ್ಯಾಷಿಯಂ, ಮ್ಯಾಗ್ನೇಷಿಯಂ,ಜಿಂಕ್‌, ಅಯೋಡಿನ್ ಮತ್ತು ಕಬ್ಬಿಣದ ಅಂಶ ಹೆಚ್ಚು ಇರುವ ಆಹಾರ ಸೇವನೆಯು ಟೈಪ್ 2 ಡಯಾಬಿಟಿಸ್‌ ತಡೆಯುವ ಶಕ್ತಿಯನ್ನು ಹೊಂದಿರುತ್ತವೆ.

ಧಾನ್ಯಗಳು, ತಾಜಾ ಹಣ್ಣು, ಬೇಳೆಕಾಳುಗಳಲ್ಲಿ ಫೈಬರ್ ಅಂಶ ಯಥೇಚ್ಛವಾಗಿರುತ್ತದೆ. ಕಡಿಮೆ ಪ್ರಮಾಣದ ಅಡುಗೆ ತೈಲ ಬಳಸಬೇಕು. ಸಂಸ್ಕರಿಸಿದ ಆಹಾರ ತ್ಯಜಿಸಬೇಕು. ಮಾಂಸ, ಮೀನು, ವಿವಿಧ ಬಗೆಯ ಬೇಳೆಕಾಳು, ಬೀನ್ಸ್ ಸೇವನೆ ಉತ್ತಮ. 

ಅವಸರವಸರವಾಗಿ ಗಬಗಬನೇ ಆಹಾರ ಸೇವಿಸುವ ಬದಲು ಸ್ವಲ್ಪ, ಸ್ವಲ್ಪ ಚೆನ್ನಾಗಿ ಅಗೆದು ತಿನ್ನುವ ವಿಧಾನ ರೂಢಿಸಿಕೊಳ್ಳಬೇಕು. ಆಹಾರದ ಪ್ರಮಾಣದ ಮೇಲೆ ನಿಗಾ ಇಡಬೇಕು. ಕೊನೆಯದಾಗಿ ಪೌಷ್ಟಿಕ ಆಹಾರ, ವ್ಯಾಯಾಮ ಮತ್ತು ಭಾವನಾತ್ಮಕವಾಗಿ ಗಟ್ಟಿಯಾಗಿರುವುದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. 

ನಿರ್ಲಕ್ಷ್ಯ ಬೇಡ

ರಕ್ತದಲ್ಲಿಯ ಸಕ್ಕರೆ ಪ್ರಮಾಣ 100-140 mg/dl ಇರಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಹಿಂದಿನ ಮೂರು ತಿಂಗಳ ರಕ್ತದಲ್ಲಿಯ ಸಕ್ಕರೆಯ ಸರಾಸರಿ ಪ್ರಮಾಣ (ಎಚ್‌ಬಿಎ1ಸಿ) ಭಾರತೀಯರಲ್ಲಿ 6.5 ಇರಬೇಕು. ವಿದೇಶಿಗರಿಗೆ ಹೋಲಿಸಿದರೆ ಭಾರತೀಯರಿಗೆ ಅನವಂಶೀಕವಾಗಿ ಮಧುಮೇಹ ಬರುವುದು ಜಾಸ್ತಿ. ಹಾಗಾಗಿ ಮುಂದೊಂದು ದಿನ ವಿಶ್ವ ಆರೋಗ್ಯ ಸಂಸ್ಥೆ ಎಚ್‌ಬಿಎ1ಸಿ ಸರಾಸರಿಯನ್ನು 6.5 ಬದಲಾಗಿ 8 ಎಂದು ನಿಗದಿಪಡಿಸಬಹುದು. ಹಾಗಂತ ಭಾರತೀಯರು ಮಧುಮೇಹ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು. ಕಾಯಿಲೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು ಎಂದು ಎಚ್ಚರಿಕೆ ನೀಡುತ್ತಾರೆ ಡಾ. ಲಲಿತಾ ಪ್ರಿಯಾ.

 ಚಿಕಿತ್ಸೆ ಬೇರೆ ಬೇರೆಯೇ

ಆಲೋಪಥಿ ಹಾಗೂ ಆಯುರ್ವೇದ ಚಿಕಿತ್ಸೆಗಳು ಬೇರೆ ಬೇರೆಯೇ. ಕೆಲವರು ಆಲೋಪಥಿ ಚಿಕಿತ್ಸೆ ಪಡೆಯುತ್ತಿರುವಾಗ, ಆಯುರ್ವೇದ ವೈದ್ಯರ ಮಾತು ಕೇಳಿ ಜೇನುತುಪ್ಪ, ತುಪ್ಪ, ಬೆಲ್ಲ ಸೇವನೆ ಮಾಡುತ್ತಾರೆ. ಜೇನುತುಪ್ಪ ಸೇವನೆಯಿಂದ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗುತ್ತದೆ. ಆಯುರ್ವೇದ ಔಷಧಿಯಲ್ಲಿ ಬೇವಿನ ಸೊಪ್ಪು ಅಥವಾ ಬೇರೆ ಕಹಿ ಪದಾರ್ಥಗಳಿಂದ ಔಷಧ ತಯಾರಿಸುತ್ತಾರೆ.
ಅಂತಹ ಮಾತ್ರೆ, ಕಷಾಯವನ್ನು ಜೇನುತುಪ್ಪ ಜೊತೆ ಸೇವಿಸಬಹುದು. 

ಕೆಲವರು ಮಧುಮೇಹಿಗಳು ಬೆಲ್ಲ ತಿನ್ನಬಹುದು ಎಂದು ಹೇಳುತ್ತಾರೆ. ಸಕ್ಕರೆ, ಬೆಲ್ಲ ಎರಡೂ ಒಳ್ಳೆಯದಲ್ಲ. ರಾಗಿ ಮಧುಮೇಹದವರಿಗೆ ಉತ್ತಮ ಎಂದು ರಾಗಿ ಅಂಬಲಿ, ಗಂಜಿ ಕುಡಿಯಬಾರದು. ಇದು ರಕ್ತಕ್ಕೆ ಬೇಗ ಸೇರಿ ಸಕ್ಕರೆ ಮಟ್ಟವನ್ನು ಹೆಚ್ಚು ಮಾಡುತ್ತದೆ. ಆಹಾರ ಸೇವನೆ ಬಗ್ಗೆ ವೈದ್ಯರ ಸಲಹೆ ಪಡೆದುಕೊಳ್ಳುವುದು ಉತ್ತಮ ಎನ್ನುತ್ತಾರೆ.

ಪ್ರತಿಕ್ರಿಯಿಸಿ (+)